ಸ್ವಭಾಷಾ ಅಭಿಮಾನ ಸ್ವದೇಶಿ ಚಿಂತನೆಗೆ ಪೂರಕ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಸ್ವಭಾಷಾ ಅಭಿಮಾನ ದೇಶದ ಸಂಸ್ಕೃತಿ- ಸಂಸ್ಕಾರ, ಸಂಪ್ರದಾಯ- ಪರಂಪರೆ, ಉಡುಗೆ-ತೊಡುಗೆ, ಆಹಾರ- ವಿಹಾರ ಹೀಗೆ ಒಟ್ಟಿನಲ್ಲಿ ಸ್ವದೇಶಿ ಚಿಂತನೆಗೆ ಪೂರಕ ಎಂದು ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 29ನೇ ದಿನವಾದ ಗುರುವಾರ ಕುಮಟಾ ಮಂಡಲದ ಹೆಗಡೆ, ಗುಡೇಅಂಗಡಿ, ಮುರೂರು-ಕಲ್ಲಬ್ಬೆ, ಉಪ್ಪಿನಪಟ್ಟಣ, ಗೋವಾ ಮತ್ತು ಅಚವೆ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.


ನಮ್ಮ ಭಾಷೆಯಲ್ಲಿ ಕಲಬೆರಕೆಯಾಗಿರುವ ಒಂದೊಂದು ಪದಗಳ ಬರುವಾಗ ಆ ನೆಲದ ಸಂಸ್ಕøತಿಯನ್ನೂ ಹೊತ್ತು ಬಂದಿವೆ. ಆದ್ದರಿಂದ ಒಂದೊಂದು ಆಂಗ್ಲಪದ ಬಿಟ್ಟರೆ ಅಷ್ಟರ ಮಟ್ಟಿಗೆ ನಾವು ಅನ್ಯ ಸಂಸ್ಕøತಿಯಿಂದ ದೂರವಾಗಿ ನಮ್ಮ ಸಂಸ್ಕøತಿ-ಸಂಸ್ಕಾರಕ್ಕೆ ಹತ್ತಿರವಾಗುತ್ತೇವೆ ಎಂದರು.

 

ದಿನಕ್ಕೊಂದು ಇಂಗ್ಲಿಷ್ ಪದ ಬಿಡುವ ಅಭಿಯಾನದಲ್ಲಿ ಮೊಬೈಲ್ ಫೋನ್ ಬದಲಾಗಿ ಚರವಾಣಿ, ಚಲವಾಣಿ, ಜಂಗಮ ವಾಣಿ, ಸಂಚಾರ ದೂರವಾಣಿ, ಕರವಾಣಿ (ಹ್ಯಾಂಡ್‍ಫೋನ್) ಎಂಬ ಪದ ಬಳಸಬಹುದು ಎಂದು ಸಲಹೆ ಮಾಡಿದರು. 



ಮೊಬೈಲ್ ನಮ್ಮ ನಡುವಿನ ಸಂಬಂಧ- ಸಂವಹನವನ್ನು ಹಾಳು ಮಾಡುತ್ತದೆ. ಪರಸ್ಪರ ಸಂಬಂಧಗಳು, ಭೇಟಿಗಳು ಮೊಬೈಲ್‍ನಿಂದ ನಾಶವಾಗುತ್ತಿವೆ. ಪತ್ರ ಬರೆಯುವ ಸಂಪ್ರದಾಯ ನಾಶಕ್ಕೂ ಇದೇ ಕಾರಣ. ಅನೇಕ ಒಳ್ಳೆಯ ಸಂಗತಿಗಳು ಮೊಬೈಲ್‍ನಿಂದ ನಾಶವಾಗಿವೆ. ಮೊಬೈಲ್ ಗೀಳು ಸರ್ವವ್ಯಾಪಿಯಾಗಿದೆ. ಮೊಬೈಲ್ ಬಿಡಲು ಸಾಧ್ಯವಾಗದಿದ್ದರೂ, ಆ ಶಬ್ದವನ್ನಾದರೂ ಬಿಡೋಣ ಎಂದು ಮಾರ್ಮಿಕವಾಗಿ ನುಡಿದರು.


ದೇಶಕ್ಕಾಗಿ, ಭಾಷೆ-ಸಂಸ್ಕೃತಿಯ ಉಳಿವಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಆದರ್ಶ ಇಡೀ ಸಮಾಜಕ್ಕೇ ಮಾದರಿ ಎಂದು ಬಣ್ಣಿಸಿದರು.



ಒಳಿತು ಒಳಿತನ್ನು ಆಕರ್ಷಿಸಿದರೆ, ಕೆಡುಕು ಕೆಡುಕನ್ನೇ ಆಕರ್ಷಿಸುತ್ತದೆ. ರಾವಣದ ಆಡಳಿತದಲ್ಲಿ ಇಡೀ ರಾಕ್ಷಸ ಸಮೂಹ ಲಂಕೆಯಲ್ಲಿ ಮನೆ ಮಾಡಿತ್ತು. ಅಂತೆಯೇ ರಾಮ ಅವತಾರ ಎತ್ತಿದಾಗ ಹನುಮಂತ, ಸುಗ್ರೀವನಂಥವರು ರಾಮನ ಸುತ್ತ ಸಂಘಟನೆಯಾದರು. ಇಡೀ ವಿಶ್ವದ ಕಪಿ ಸಮೂಹ ರಾಮನ ಕಾಲದಲ್ಲಿ ಸಂಘಟನೆಗೊಂಡಿತು. ವಿಭೀಷಣ ಕೂಡಾ ಲಂಕೆಯಲ್ಲಿದ್ದರೂ ರಾಮನಿಂದ ಆಕರ್ಷಿತನಾದ ಎಂದು ಬಣ್ಣಿಸಿದರು.


ಅಶೋಕವನದಲ್ಲಿದ್ದ ಸೀತೆಗೆ ವಿಭೀಷಣ ತನ್ನ ಮಗಳ ಮೂಲಕ ನೆರವಾಗಿದ್ದುದು, ಹನುಮನ ವಧೆಗೆ ರಾವಣ ಮುಂದಾದಾಗ ಧೂತನ ವಧೆ ನಿಷಿದ್ಧ ಎಂದು ವಿಭೀಷಣ ಪ್ರತಿಭಟಿಸಿದ್ದು, ಇದಕ್ಕೆ ನಿದರ್ಶನ. ಶಂಕರಾಚಾರ್ಯರು ಸ್ಥಾಪಿಸಿದ ರಾಮಚಂದ್ರಾಪುರ ಮಠ ನಾಡಿನ ಒಳಿತಿಗೆ ಕೆಲಸ ಮಾಡುತ್ತಿದೆ. ಎಲ್ಲ ಒಳ್ಳೆ ಮನಸ್ಸುಗಳು ಇದಕ್ಕೆ ನೆರವಾಗುತ್ತಿವೆ ಎಂದು ವಿವರಿಸಿದರು.


ಇಡೀ ಜೀವನದ ಪಾಪಗಳನ್ನು ಪರಿಹರಿಸುವ ಶಕ್ತಿ ತುಳಸಿಗಿದೆ. ಸಾಯುವ ಸಂದರ್ಭದಲ್ಲಿ ತುಳಸಿಕಟ್ಟೆ ಪರಿಸರದಲ್ಲಿ ಪ್ರಾಣ ಹೋದರೆ ಆತನಿಗೆ ಸದ್ಗತಿ ಪ್ರಾಪ್ತವಾಗುತ್ತದೆ. ತುಳಸಿ ಅತ್ಯಂತ ಶುಭಕರ ಹಾಗೂ ಪವಿತ್ರವಾದದ್ದು. ಅಂಥ ತುಳಸಿಯಿಂದ ವಿಷ್ಣುಸಹಸ್ರನಾಮದ ಮೂಲಕ ಲಕ್ಷ ತುಳಸಿ ಅರ್ಚನೆ ಮಾಡಲಾಗಿದೆ ಎಂದರು.


ಗೋವುಗಳನ್ನು ನಾವು ಉಳಿಸಿಕೊಳ್ಳಬೇಕು. ನಮ್ಮನ್ನು ನಾವು ಸಮರ್ಪಿಸಿಕೊಂಡಾದರೂ ಗೋವುಗಳನ್ನು ಉಳಿಸಬೇಕು. ಗೋಸಂರಕ್ಷಣೆಯಲ್ಲಿ ಹೊಸಾಡ ಗೋಬ್ಯಾಂಕ್ ಅನನ್ಯ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು.


ಮಕ್ಕಳು ದೇಶದ ಸಂಪತ್ತು. ದೇಶ ಸೇವೆ ಮಾಡುವ ಜತೆಗೆ ದೇಶಕ್ಕಾಗಿ ತ್ಯಾಗಕ್ಕೂ ಸಜ್ಜಾಗಬೇಕು ಎಂದು ಕರೆ ನೀಡಿದರು. ಉನ್ನತ ಪದವಿಗಳನ್ನು ಪಡೆದು ವಿದೇಶಕ್ಕೆ ಹೋಗಿ ನೆಲೆಸುವ ಬದಲು ಒಂದಷ್ಟು ವರ್ಷ ಉದ್ಯೋಗ ಮಾಡಿ ದೇಶಕ್ಕೆ ಮರಳಿ ತಾಯ್ನಾಡಿನ ಸೇವೆ ಮಾಡಬೇಕು. ಭಾರತೀಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳನ್ನು ಸಂಸ್ಕಾರಯುತ ಜನಾಂಗವಾಗಿ ಬೆಳೆಸುವ ನಿಟ್ಟಿನಲ್ಲಿ ಪ್ರಗತಿ ವಿದ್ಯಾಲಯ ಒಳ್ಳೆಯ ಕಾರ್ಯ ನಿರ್ವಹಿಸುತ್ತಿದೆ ಎಂದರು.


ಹಿರಿಯ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್, ಕಮಲಾ ಪ್ರಭಾಕರ ಭಟ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಸಿಂಹ ನಾಯಕ್, ಕುಮಟಾ ಪುರಸಭಾ ಅಧ್ಯಕ್ಷೆ ಸುಮತಿ ಮೂರ್ತಿ ಭಟ್, ವಿವಿವಿ ಸಮಿತಿ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್, ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್ ಗಾಂವ್ಕರ್, ಉದ್ಯಮಿ ಮುರಳೀಧರ ಪ್ರಭು, ಶ್ರೀಕಾಂತ ಪಂಡಿತ್, ಸುಬ್ರಾಯ ಭಟ್ ಮುರೂರು, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪಿಆರ್‍ಓ ಎಂ.ಎನ್.ಮಹೇಶ ಭಟ್ ಮತ್ತಿತರರು ಉಪಸ್ಥಿತರಿದ್ದರು.


ರಾಘವೇಂದ್ರ ಮಧ್ಯಸ್ಥ ನಿರೂಪಿಸಿದರು. ಹೊಸಾಡ ಅಮೃತಧಾರಾ ಗೋಬ್ಯಾಂಕ್ ಮತ್ತು ಪ್ರಗತಿ ವಿದ್ಯಾಲಯ ವತಿಯಿಂದ ಪಾದುಕಾಪೂಜೆ ನೆರವೇರಿತು. ಗುರು ಪರಂಪರೆ ಪ್ರೀತ್ಯರ್ಥವಾಗಿ ಲಕ್ಷ ತುಳಸಿ ಅರ್ಚನೆ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top