ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕಾಯದ ಕನ್ನಡ ವಿಭಾಗದವರು ಪದವಿಪೂರ್ವ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ “ಕನ್ನಡ ಸಾಂಸ್ಕೃತಿಕ ಲೋಕದೊಂದಿಗೆ ಯಾಂತ್ರಿಕ ಬುದ್ಧಿಮತ್ತೆಯ ಬೆಸುಗೆ: ಸಾಮಾಜಿಕತೆ ಮತ್ತು ಸೃಜನಶೀಲತೆಗಳ ಜಾಗತಿಕ ವಾಗ್ವಾದ” ಎಂಬ ಆಶಯದ ವಿಶೇಷ ಅಂತರ್ ರಾಜ್ಯ ಸಾಂಸ್ಕೃತಿಕ ಸಮಾವೇಶ ಮತ್ತು ಅಂತರಾಷ್ಟ್ರೀಯ ವಿಚಾರಸಂಕಿರಣ ‘ಪೊಸ ಒಸರ್ 2025’ ನ್ನು ದಿನಾಂಕ 19ನೇ ಆಗಸ್ಟ್ 2025ರಂದು ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಆಯೋಜಿಸಿದ್ದರು.
‘ಸು ಫ್ರಂ ಸೋ’ ಕನ್ನಡ ಚಲನಚಿತ್ರದ ’ಭಾವ’ ಖ್ಯಾತಿಯ ಶ್ರೀ ಪ್ರಕಾಶ್ ಬೋಳಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು “ವಿದ್ಯಾರ್ಥಿಗಳು ಸಾಧಿಸುವ ಛಲವನ್ನು ಬೆಳೆಸಿಕೊಳ್ಳಿ, ಅದು ಯಶಸ್ಸಿನ ದಾರಿಯತ್ತ ಕೊಂಡೊಯ್ಯುತ್ತದೆ. ಈಗಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿದಿದ್ದು, ಶಿಕ್ಷಣದೊಂದಿಗೆ ಸಂಗೀತ, ನೃತ್ಯ, ನಾಟಕದಂತಹ ಕಲೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠ ಹಾಗೂ ಸಹಕುಲಾಧಿಪತಿಗಳಾದ ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೋರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಭಾಷೆಗಳನ್ನು ಕಲಿಯುತ್ತಲೇ ನಮ್ಮ ಮೂಲಭಾಷೆಯನ್ನು ಮರೆಯದೆ ಉಳಿಸಿಕೊಳ್ಳಲು ಕರೆಯಿತ್ತರು. ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ, ವಿವಿಯ ಕುಲಸಚಿವ ಡಾ. ರೊನಾಲ್ಡ್ ನಜರೆತ್, ಅಡ್ಮಿನ್ ಬ್ಲಾಕಿನ ನಿರ್ದೇಶಕ ಡಾ. ಚಾರ್ಲ್ಸ್ ಫುರ್ಟಾಡೊ, ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಹಾಲಿಂಗ ಭಟ್ ಮತ್ತು ಸಮಾವೇಶ ಸಂಯೋಜಕ ಕ್ರಿಸ್ಟೋಫರ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಂ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ.ಯವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅವಕಾಶಗಳನ್ನು ಬಾಚಿಕೊಳ್ಳಬೇಕು ಎಂದು ಹೇಳಿದರು.
ಜಪಾನಿನ ಟೋಕಿಯೋದ ಸೋಫಿಯಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಕರು, ಚಿಂತಕರು ಹಾಗೂ ಕಲಾವಿದರಾಗಿರುವ ವಂ.ಡಾ. ಅರುಣ್ ಪ್ರಕಾಶ್ ಎಸ್.ಜೆ.ರವರು ಗೌರವಾನ್ವಿತ ಅತಿಥಿಯಾಗಿ ಆಗಮಿಸಿ ದಿಕ್ಸೂಚಿ ಭಾಷಣಗೈದು ವಿದ್ಯಾರ್ಥಿಗಳೊಡನೆ ಆಪ್ತಸಂವಾದ ನಡೆಸಿದರು.
ಬೆಂಗಳೂರಿನ ಕ್ರೈಸ್ಟ್ ಪರಿಗಣಿತ ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗ ಮತ್ತು ದತ್ತಸಂಚಯ ವಿಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ವಿನಯ್ ಎಂ.ರವರು “ಶಿಕ್ಷಣ ಮತ್ತು ತಂತ್ರಜ್ಞಾನ: ಯಾಂತ್ರಿಕ ಬುದ್ಧಿಮತ್ತೆಯೊಂದಿಗೆ ಕನ್ನಡದ ಬೆಸುಗೆ” ಎಂಬ ವಿಷಯದ ಬಗ್ಗೆ ವಿಶೇಷ ಭಾಷಣ ನೀಡಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಅಂತರ್ ರಾಜ್ಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿ ಗಳಿಸಿತು. ಉಳ್ಳಾಲದ ಭಾರತ್ ಪದವಿಪೂರ್ವ ಕಾಲೇಜು ರನ್ನರ್ ಅಪ್ ಪ್ರಶಸ್ತಿ ಗಳಿಸಿತು.
ಈ ಸಂದರ್ಭದಲ್ಲಿ ‘ಸು ಫ್ರಂ ಸೋ’ ನ ಪ್ರಕಾಶ್ ಬೋಳಾರ್ ಹಾಗೂ ನಟಿ ಪ್ರಕೃತಿ ಅಮೀನ್‍ರವರನ್ನು ಸನ್ಮಾನಿಸಲಾಯಿತು. ‘ಕರಾವಳಿಯ ಗೋಲ್ಡನ್ ಗರ್ಲ್’ ಖ್ಯಾತಿಯ ರೆಮೋನಾ ಇವೆಟ್ ಪಿರೇರಾರವರಿಂದ ವಿನೂತನ ನೃತ್ಯಪ್ರದರ್ಶನ ಆಯೋಜಿಸಲಾಗಿತ್ತು. ಡಾ. ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಡಾ. ಮಹಾಲಿಂಗ ಭಟ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ