ಪೆರ್ಲದಲ್ಲಿ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಪ್ರಾರಂಭ

Upayuktha
0


ಪೆರ್ಲ: ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ, ಮುಜುಂಗಾವು ಇದರ ನೂತನ ಶಾಖೆಯನ್ನು ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಪೆರ್ಲದ ಕೆ.ಕೆ. ಮಾರ್ಗದಲ್ಲಿರುವ ಸ್ನೇಹಾ ಕಾಂಪ್ಲೆಕ್ಸಿನಲ್ಲಿ ಸೋಮವಾರ (ಆ.18) ಉದ್ಘಾಟಿಸಲಾಯಿತು. 


ವೇದಮೂರ್ತಿ ಕೂಟೇಲು ಕೇಶವ ಭಟ್ಟರು ಗಣಪತಿ ಹವನಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗುರುವಂದನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಮುಜುಂಗಾವು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ಯಾಮ್ ಭಟ್ ದರ್ಭೆ ಮಾರ್ಗ ನಡೆಸಿಕೊಟ್ಟರು. ಚಿಕಿತ್ಸಾಲಯದ ಆಡಳಿತಾ ಮಂಡಳಿಯ ಕಾರ್ಯದರ್ಶಿ ಎಡನಾಡು ಕೃಷ್ಣ ಮೋಹನ ಭಟ್ಟರು ಪ್ರಾಸ್ತಾವಿಕ ಭಾಷಣ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು.


ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ದೀಪ ಬೆಳಗಿಸಿ ಕಾರ್ಯಕ್ರಮ ಹಾಗೂ ಚಿಕಿತ್ಸಾಲಯವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಸೇವಾ ಮನೋಭಾವದಲ್ಲಿ ಕೆಲಸ ಮಾಡುತ್ತಿರುವ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯವು ಹೇಗೆ ಇತರ ಚಿಕಿತ್ಸಾಲಯಗಳಿಂದ ಹೇಗೆ ಭಿನ್ನವಾಗಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.‌


ಅಧ್ಯಕ್ಷತೆ ವಹಿಸಿದ ಪೆರ್ಲ ಸೇವಾ ಸಹಕಾರೀ ಬ್ಯಾಂಕಿನ ಅಧ್ಯಕ್ಷೆ ಶ್ಯಾಮಲ ಆರ್. ಭಟ್ ಪತ್ತಡ್ಕ ಅವರು ಮುಜುಂಗಾವಿನ ಚಿಕಿತ್ಸಾಲಯದೊಂದಿಗೆ ಅವರು ಹೊಂದಿದ್ದ ಸಂಪರ್ಕ, ಹಾಗೆಯೇ ಶ್ರೀ ಗುರುಗಳು ಅತೀ ಬಡವರಿಗೂ ನೇತ್ರ ಚಿಕಿತ್ಸೆ ಲಭಿಸಬೇಕೆಂಬ ಉದ್ದೇಶದಿಂದ ಈ ಚಿಕಿತ್ಸಾಲಯದ ಸ್ಥಾಪನೆಗೆ ಪ್ರೇರಣೆ ನೀಡಿರುವುದನ್ನು ವಿವರಿಸಿದರು. ಇದು ಹೇಗೆ ಸಮಾಜಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಸಿದರು.


ಮುಳ್ಳೇರಿಯ ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಶುಭಾಶಂಸನೆ ಮಾಡಿದರು. ಮುಜುಂಗಾವಿನಲ್ಲಿ  ಚಿಕಿತ್ಸಾಲಯದ ಉದ್ಘಾಟನೆಯ ಹಿಂದಿನ ಎರಡು ವರ್ಷದ ಪರಿಶ್ರಮವನ್ನು ಅಂಕಿ ಅಂಶಗಳ ಸಹಿತ ವಿವರಿಸಿದರು. ಎಣ್ಮಕಜೆ ವಲಯದ ಅಧ್ಯಕ್ಷ ಕುಂಚಿನಡ್ಕ ಶಂಕರ ಪ್ರಸಾದ್ ಶುಭ ಹಾರೈಸುತ್ತಾ ಎಣ್ಮಕಜೆ ವಲಯದ ಸಂಪೂರ್ಣ ಸಹಕಾರದ ಆಶ್ವಾಸನೆಯನ್ನಿತ್ತರು.


ಉಪಸ್ಥಿತರಿದ್ದ ನೇತ್ರತಜ್ಞ ಡಾ| ಆನಂದ್ ಎಸ್.ಎಚ್. ಅವರು, ನೇತ್ರಕ್ಕೆ ಯಾವ ರೀತಿಯೆಲ್ಲಾ ರೋಗ ಬಾಧಿಸಬಹುದು, ಯಾವ ಯಾವ ಸಮಯದಲ್ಲಿ ಯಾವ ಯಾವ ರೀತಿ ತಪಾಸಣೆ ನಡೆಸಬೇಕು ಎಂಬಿತ್ಯಾದಿ ವೈದ್ಯಕೀಯ ಸಲಹೆಯನ್ನು ಇತ್ತರು. ಚಿಕಿತ್ಸಾಲಯದ ನೇತ್ರತಜ್ಞ ಡಾ| ನಿತ್ಯಾನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


 ಶ್ರೀಧರ ಭಟ್ಟರು ಧನ್ಯವಾದಗಳನ್ನು ಸಮರ್ಪಿಸಿದರು. ಬಂದ ವಿಶೇಷ ಅತಿಥಿಗಳಿಗೆ ನೆನಪಿನ ಕಾಣಿಕೆಯೊಂದಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.

ಲಘೂಪಹಾರ ಮುಗಿಸುವುದರೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಪ್ರಾರಂಭವಾಯಿತು. ಉಚಿತ ನೇತ್ರ ತಪಾಸಣಾ ಶಿಬಿರವನ್ನು ಡಾ| ನಿತ್ಯಾನಂದ ಶೆಟ್ಟಿಯವರು ನಿರ್ವಹಿಸಿದರು. 


ಶಿಬಿರದ ಹಾಗೂ ಉದ್ಘಾಟನಾ ಸಮಾರಂಭದ ಹಿಂದಿನ ಹಾಗೂ ಮುಂದಿನ ನಿರ್ವಹಣೆಯನ್ನು ಚಿಕಿತ್ಸಾಲಯದ ನಿರ್ವಹಣಾಧಿಕಾರಿ ಗಣೇಶ್ ಪ್ರಸಾದ್,  ಚಿಕಿತ್ಸಾ ನಂತರದ ವೈದ್ಯಕೀಯ ಸಲಹೆಗಾರ ಮಚ್ಚೀಂದ್ರನಾಥ, ಹಾಗೂ ಚಿಕಿತ್ಸಾಲಯದ ಲೆಕ್ಕ ಪರಿಶೋಧಕ ಅನೀಶ ನಡೆಸಿದರು.


ನೇತ್ರ ತಪಾಸಣಾ ಶಿಬಿರದಲ್ಲಿ ದಾದಿಯರಾದ ಸುನೀತಾ ಯಸ್, ರಮಣಿ ಸಹಾಯಕರಾಗಿ ದುಡಿದವರು. ಶಿಬಿರದಲ್ಲಿ ಒಟ್ಟು 74 ರೋಗಿಗಳ ಕಣ್ಣುಗಳ ತಪಾಸಣೆ ನಡೆಸಲಾಯಿತು.


ಮಂಗಳವಾರದಿಂದ ಪ್ರತೀ ಮಂಗಳವಾರ ಮಧ್ಯಾಹ್ನ ಮೇಲೆ 2:30ರಿಂದ 5 ಗಂಟೆಯವರೆಗೆ ಕಾರ್ಯಾಚರಿಸುವ ನೇತ್ರ ಚಿಕಿತ್ಸಾಲಯದ ಸಂಪೂರ್ಣ ಪ್ರಯೋಜನವನ್ನು ಅವಶ್ಯ ಇರುವ ನಾಗರೀಕರು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.

ಸಂಪರ್ಕ ಸಂಖ್ಯೆ : 04998 - 214466; 9495246474


Post a Comment

0 Comments
Post a Comment (0)
To Top