ಉಡುಪಿ: ಉಡುಪಿಯ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ.) (KCSC)ಯು ಪ್ರತಿ ವರ್ಷದಂತೆ ತನ್ನ 31ನೇ ವಾರ್ಷಿಕೋತ್ಸವ ಹಾಗೂ ಓಣಂ ಸಂಭ್ರಮ – 2025 ನ್ನು ಆಗಸ್ಟ್ 31, ಭಾನುವಾರ, ಅಂಬಲಪಾಡಿಯಲ್ಲಿನ ಶಾಮಿಲಿ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಿದೆ.
ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 317ಸಿ ಯು ಈ ಬಾರಿಯ ಓಣಂ ಹಬ್ಬದ ಆಚರಣೆಯಲ್ಲಿ ಜೊತೆಗೂಡುತ್ತಿರುವುದು ಕಾರ್ಯಕ್ರಮದ ಗೌರವವನ್ನು ಎತ್ತರಕ್ಕೆ ಏರಿಸಲಿದೆ.
ಕಾರ್ಯಕ್ರಮಕ್ಕೆ ಖ್ಯಾತ ಮಲಯಾಳಂ ಚಲನಚಿತ್ರ ನಟ ಹಾಗೂ ಕೊಲ್ಲಂ ವಿಧಾನಸಭಾ ಸದಸ್ಯ ಮುಕೇಶ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅನೇಕ ಗಣ್ಯರು, ಸಮುದಾಯ ನಾಯಕರು, ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು ಮತ್ತು ಆಹ್ವಾನಿತ ಅತಿಥಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸದಸ್ಯರ ಮಕ್ಕಳಲ್ಲಿ ಈ ಬಾರಿಯ 10ನೇ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಕಾರ್ಯಕ್ರಮವೂ ನಡೆಯಲಿದೆ.
ಉಡುಪಿ KCSC ಯು ಕಳೆದ 31 ವರ್ಷಗಳಿಂದ ಹಲವಾರು ಸಾಂಸ್ಕೃತಿಕ, ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಉಡುಪಿ ಜಿಲ್ಲೆಯಲ್ಲಿನ ಮಲಯಾಳಿಗಳನ್ನು ಒಗ್ಗೂಡಿಸುವುದರ ಜೊತೆಗೆ, ಸ್ಥಳೀಯ ಮಾತೃಭಾಷಿಕರಿಗೆ 15% ಸದಸ್ಯತ್ವವನ್ನು ನೀಡುತ್ತಿರುವುದು ಇದರ ವೈಶಿಷ್ಟ್ಯ. ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯವಿರುವ ಮಲಯಾಳಿ ಮಾತೃಭಾಷಿಕರಿಗೆ ಕನ್ನಡ ಕಲಿಸಲು ಕಸಾಪ ಉಡುಪಿಯ ಜೊತೆ ಸೇರಿ ಕನ್ನಡ ತರಗತಿಗಳನ್ನು ಆಯೋಜಿಸುತ್ತಿರುವುದು ಮಾತ್ರವಲ್ಲದೆ ಹಲವಾರು ಸ್ಥಳೀಯ ಸಂಘ-ಸಂಸ್ಥೆಗಳ ಜೊತೆ ಸೇರಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಇತಿಹಾಸವೂ ಸಂಘಟನೆಗಿದೆ.
ಅನಿವಾಸಿ ಮಲಯಾಳಿಗಳಿಗಾಗಿ ಕೇರಳ ಸರಕಾರದ ಪ್ರಮುಖ ಚಟುವಟಿಕೆಯಾದ ನೋರ್ಕಾ ರೂಟ್ಸ್ ನ ಉಡುಪಿ ಜಿಲ್ಲೆಯ ನೋಂದಾಯಿತ ಸಂಸ್ಥೆಯಾಗಿಯೂ ಕೆಸಿಎಸ್‌ಸಿ ಕಾರ್ಯಾಚರಿಸುತ್ತಿದ್ದು, ಈಗಾಗಲೇ ಈ ಮೂಲಕ ಹಲವಾರು ಸಹಕಾರಗಳನ್ನು ಜಿಲ್ಲೆಯಲ್ಲಿರುವ ಮಲಯಾಳಿಗಳಿಗೆ ಒದಗಿಸಿಕೊಟ್ಟಿದೆ. ಜೊತೆಗೆ ಕೇರಳ ಸರಕಾರವು ಅನಿವಾಸಿ ಮಲಯಾಳಿಗಳಿಗಾಗಿ ಆಯೋಜಿಸುತ್ತಿರುವ ಮಾತೃಭಾಷೆ ಮಲಯಾಳಂ ತರಗತಿಗಳನ್ನೂ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿದೆ.
ಉಡುಪಿಯ ಪರ್ಯಾಯೋತ್ಸವವೂ ಸೇರಿದಂತೆ ಎಲ್ಲಾ ಸ್ಥಳೀಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಸಂಸ್ಥೆಯು ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ ಕೇರಳದ ನಾಡಹಬ್ಬವಾದ ಓಣಂ ಹಬ್ಬವನ್ನು ವೈಭವೋಪೇತವಾಗಿ ಪ್ರತಿವರ್ಷ ಉಡುಪಿಯಲ್ಲಿ ಆಚರಿಸುತ್ತಿರುವುದು ನಮ್ಮ ಸಂಸ್ಥೆಯ ಪ್ರಮುಖ ವಾರ್ಷಿಕ ಪರಂಪರೆಯೂ ಆಗಿರುತ್ತದೆ.
ಹಿಂದಿನ ವರ್ಷ, ಕೇರಳದ ವೈನಾಡಿನ ಭೀಕರ ಭೂಕುಸಿತದ ಬಾಧಿತರೊಂದಿಗೆ ಏಕತೆಯನ್ನು ತೋರಿಸಲು ಓಣಂ ಹಬ್ಬವನ್ನು ಆಚರಿಸದೆ, ಸಂಗ್ರಹಿಸಿದ ದೇಣಿಗೆಗಳನ್ನು ಪರಿಹಾರ ಕಾರ್ಯಗಳಿಗೆ ನೀಡಲಾಗಿತ್ತು. ಈ ವರ್ಷ, ಸಾಂಸ್ಕೃತಿಕ ಉತ್ಸವವು ಮತ್ತೆ ಹೊಸ ಚೈತನ್ಯದಿಂದ ಜನ ಮನ ತುಂಬಲು ತುದಿಗಾಲಲ್ಲಿ ನಿಂತಿದೆ.
ಈ ಬಾರಿಯ ವಿಶೇಷ ಆಕರ್ಷಣೆ:
ಕೇರಳೀಯ ವೈಭವಂ – ತ್ರಿಶೂರ್‌ನ ಖ್ಯಾತ ಜನ ನಯನ ತಂಡದಿಂದ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ
ಉಡುಪಿ ಶಾಸಕ ಯಶಪಾಲ್ ಸುವರ್ಣ, ಕೇರಳ ವಿಧಾನಸಭೆಯ ಕೊಲ್ಲಂ ಶಾಸಕ- ಮಲಯಾಳಂ ಸಿನಿಮಾ ನಟ ಮುಕೇಶ್ ಹಾಗೂ
ಪ್ರಸನ್ನ ಪಬ್ಲಿಕ್ ಹೆಲ್ತ್ ಸ್ಕೂಲ್, MAHE, ಮಣಿಪಾಲ ನಿರ್ದೇಶಕ ಡಾ. ಚೆರಿಯನ್ ವರ್ಗೀಸ್, ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪಾ ಟಿ. ಕೆ.,
ಉಡುಪಿ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಐ.ಪಿ.ಎಸ್., ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಅಭಿಲಾಷ್ ಪಿ. ವಿ., ಲಯನ್ ರಂಜನ್ ಕಲ್ಕೂರ, ಸಾಂಸ್ಕೃತಿಕ ಚಟುವಟಿಕೆ ಸಂಯೋಜಕರು, ಲಯನ್ಸ್ ಡಿಸ್ಟ್ರಿಕ್ಟ್ 317 C; MAHE ಯ ಮಣಿಪಾಲ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ ನಿರ್ದೇಶಕ ಡಾ. ಶ್ರೀಕುಮಾರ್, ಕೇರಳ ಸಮಾಜಂ ಮಂಗಳೂರು ಅಧ್ಯಕ್ಷ ಟಿ. ಕೆ. ರಾಜನ್ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ವೇಳಾಪಟ್ಟಿ
ಬೆಳಿಗ್ಗೆ 8.00 – 9.00: ಹೂವಿನ ರಂಗೋಲಿ ಸ್ಪರ್ಧೆ
ಬೆಳಿಗ್ಗೆ 9.00 – 11.00: ಸಾಂಸ್ಕೃತಿಕ ಸ್ಪರ್ಧೆಗಳು
ಬೆಳಿಗ್ಗೆ 11.00 – ಮಧ್ಯಾಹ್ನ 12.30 : ಉದ್ಘಾಟನಾ ಸಮಾರಂಭ ಮತ್ತು ಪ್ರಶಸ್ತಿ ವಿತರಣೆ
ಮಧ್ಯಾಹ್ನ 12.30 – 2.30 : KCSC ಕಲ್ಚರಲ್ ಬ್ಲಾಸ್ಟ್
ಮಧ್ಯಾಹ್ನ 2.30 – 4.30: ಕೇರಳೀಯ ವೈಭವಂ – ಜನ ನಯನ (ತ್ರಿಶೂರ್) ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 4.30 – 5.00: ಸಮಾರೋಪ ಹಾಗೂ ಬಹುಮಾನ ವಿತರಣೆ
ಪತ್ರಿಕಾಗೋಷ್ಠಿಯಲ್ಲಿ ಶಿನೋದ್ ಟಿ. ಆರ್., ಓಣಂ ಸಂಭ್ರಮ ಸಮಿತಿ ಅಧ್ಯಕ್ಷರು; ಲಯನ್ ಸುಗುಣ ಕುಮಾರ್, ಅಧ್ಯಕ್ಷರು, KCSC (ರಿ.), ಉಡುಪಿ; ಲಯನ್ ಬಿನೇಶ್ ವಿ. ಸಿ., ಕಾರ್ಯದರ್ಶಿ, KCSC (ರಿ.), ಉಡುಪಿ; ಸಂತೋಷ್ ಕುಮಾರ್, ಉಪಾಧ್ಯಕ್ಷರು, KCSC (ರಿ.), ಉಡುಪಿ; ಗಣೇಶ್ ವಕೇರಿ, ಉಪಾಧ್ಯಕ್ಷರು, KCSC (ರಿ.), ಉಡುಪಿ; ಲಯನ್ ಶೈನಿ ಸತ್ಯಭಾಮ, ಅಧ್ಯಕ್ಷರು, ತೇಜಸ್ವಿನಿ ಮಹಿಳಾ ವಿಭಾಗ, KCSC (ರಿ.), ಉಡುಪಿ; ಮನೋಜ್ ಕಡಬ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ