- ಶೃಂಗೇರಿ ಪೀಠಾಧೀಶ ವಿಧುಶೇಖರ ಭಾರತಿ ಸ್ವಾಮೀಜಿ
- ಗಣೇಶ ಉತ್ಸವವನ್ನು ಮಾಡುವವರಿಗೆ ಜಗದ್ಗುರುಗಳ ಹಿತವಚನ.
ಬೆಂಗಳೂರಿನ ಚಿಕ್ಕಪೇಟೆ ಎ.ಎಮ್.ಲೇನ್‌ನಲ್ಲಿ ಒಂದು ಗಣಪತಿ ಉತ್ಸವ. ಸಹಜವಾಗಿ ಗಟ್ಟಿ ಧ್ವನಿಯಲ್ಲಿ ಮೈಕ್‌ನ್ನು ಹಾಕಿದ್ರು. ಇದು 1998, 99 ಇರಬೇಕು. ಜನುಮದ ಜೋಡಿ ಅನ್ನುವ ಪ್ರಸಿದ್ದ ಸಿನಿಮಾ ಬಿಡುಗಡೆ ಕಂಡ ಸಮಯ ಅದು.
ಗಣೇಶ ಉತ್ಸವದಲ್ಲಿ ಉತ್ಸವದ ಅಷ್ಟೂ ದಿನ ಬೆಳಗ್ಗೆ ಅರ್ಚಕರು ಬಂದು ಆ ಗಣಪತಿಗೆ ಮಂತ್ರ ಹೇಳಿ, ಪೂಜೆ ಮಾಡಿ, ಆ ಕಡೆ ಹೋದ ಮೇಲೆ 'ಗಣಪತಿ ಗೆಳೆಯರ ಬಳಗ' ದವರು ಮೈಕ್ ಆನ್ ಮಾಡಿದರೆ ದಿನಕ್ಕೆ ಒಂದೈದಾರು ಬಾರಿ ಜನುಮದ ಜೋಡಿ ಹಾಡುಗಳು!!!
ಆವಾಗ ಹಿಟ್ ಸಿನಿಮಾ 'ಜನುಮದ ಜೋಡಿ' ಗೀತೆಗಳು ಗಲ್ಲಿ ಗೀತೆಗಳು ಆಗಿದ್ದ ಕಾಲ!!
ಆ ಸಿಮಾದಲ್ಲಿ ಒಂದು ಹಾಡು 'ಓ ಊರ್ ದ್ಯಾವರೇ, ಓ ಬೀರೆ ದ್ಯಾವರೇ, ಇದು ನ್ಯಾಯಾನಾ? ಇದು ನೀತೀನಾ? ನೀ ಎಕ್ಕುಟ್ ಹೋಗ, ನಿನ್ನ ಮನೆ ಕಾಯ್ವಾಗ..."
ನಾಲ್ಕೈದು ಬಾರಿ ಈ ಹಾಡು ಕೇಳಿದ ಮೇಲೆ ಕನ್ನಡ ಕಲಿತಿದ್ದ ಉತ್ತರ ಭಾರತದ ಮಾರ್ವಾಡಿ ಒಬ್ರು "ನಮ್ಮತ್ರೆಲ್ಲ ಗಣಪತಿಗೆ ಅಂತ ಪೈಸಾ ತೊಗೊಂಡು ಹೋಗಿ ಈ ರೀತಿ ದೇವರಿಗೆ ಬಯ್ಯೋ ಹಾಡಾಕಿದ್ರೆ ಒಳ್ಳೇದಾಗುತ್ತಾ?" ಅಂತ ಕೇಳಿದ ಮೇಲೆ ಆ ಹಾಡು ನಿಲ್ಲಿಸಿದ್ರು.
ಮರುದಿನ ಜನುಮದ ಜೋಡಿ ಕ್ಯಾಸೆಟ್ ಇಲ್ಲ. ಬೇರೆ ಹೊಸ ಕ್ಯಾಸೆಟ್ ಬಂತು. ಹೊಸ ಹಾಡು. ಹಿಂದಿ ಸಿನಿಮಾ 'ಗುಲಾಮ್'ನ "ಆತೀ ಕ್ಯಾ ಖಂಡಾಲ?" ಹಾಡು!!
**
ಪ್ರತೀ ವರ್ಷವೂ ಟ್ರೆಂಡ್‌ಲ್ಲಿರುವ, ದೇವರ ಸಮ್ಮುಖಕ್ಕೆ ಅಸಭ್ಯ ಎನಿಸುವ ಹಾಡುಗಳನ್ನು 'ಕೂಗಿಸುವುದು' ಗಣಪತಿ ಫಂಕ್ಷನ್‌ನ ಒಂದು ಭಕ್ತಿ ಪ್ರಕ್ರಿಯೆ ಈಗಲೂ ಇದೆ.
ಸಿನಿಮಾದಲ್ಲಿನ ಅಸಭ್ಯ ಐಟಂ ಸಾಂಗ್, ಅಶ್ಲೀಲ ಹಾಡುಗಳನ್ನು 'ಕೂಗಿಸುವುದು' ಬೆಂಗಳೂರಿನ ಚಿಕ್ಕಪೇಟೆ ಗಣೇಶ ಕುಂಡ್ರಿಸಿದಲ್ಲಿಗೆ (ಬೆಂಗಳೂರಿನಲ್ಲಿ ಗಣಪತಿಯನ್ನು ಕುಂಡ್ರಿಸುವುದು) ಸೀಮಿತ ಅಲ್ಲ, ಮತ್ತು 1998-99 ಕ್ಕೆ ಅದು ಮುಗಿದು ಹೋಗಲೂ ಇಲ್ಲ. ದೇವರ ಮುಂದೆ ಅಸಭ್ಯ ಹಾಡುಗಳನ್ನು ಪ್ರಸಾರಿಸುವ, ಹಾಡುವ ಹೊಲಸು ಸಂಸ್ಕೃತಿ ಎಲ್ಲಾ ಕಡೆ ಮುಂದುವರೆದಿದೆ, ಈಗಲೂ ಇದೆ.
ಇದೇ ತರಹ! ಗಣಪತಿ ಕೂರಿಸಿ, ಪಕ್ಕದಲ್ಲಿ 'ಗುಂಡಿನ ಹಾಡುಗಳ ಆರ್ಕೇಷ್ಟ್ರಾ ಜೊತೆಗೆ ಅಶ್ಲೀಲ ಭಂಗಿಯ ನೃತ್ಯ ನಡೆಯುತ್ತಲ್ಲ ಅದು ಇನ್ನೂ ಭಯಂಕರ!. ಅದೂ ಕೂಡ ಆಯಾಯ ವರ್ಷದ ಟ್ರೆಂಡಿ ಹಾಡುಗಳೊಂದಿಗೆ. "ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು", "ಎಕ್ಕ ರಾಜ ರಾಣಿ ನನ್ನ ಕೈಯೊಳಗೆ", "ನಿಜವಾಗ್ಲೂssss ನಿಜವಾಗ್ಲೂssss ಬಾರು ಗಂಡ್ಮಕ್ಳ ತವರು ಗಂಡ್ಮಕ್ಳ ತವರು",
ಮೊದಲ ಒಂದು ಹಾಡು ಗಣಪತಿಯದು!! ಆಮೇಲೆಲ್ಲ ಎಣ್ಣೆ, ನಶೆ, ಬಾರು, ಇಸ್ಪೀಟು, ಕ್ಲಬ್, ಐಟಂ ಸಾಂಗ್ಸ್‌ಗಳು. "ಸೊಂಟದ ವಿಸ್ಯ......." ಹಾಡುಗಳು!!
ಗಣಪತಿ ಬಿಡೋ ದಿವಸ ಇಡೀ ಊರೇ "ಘಂ" ಅಂತಿರುತ್ತೆ!! ತೈಲದ ವಾಸನೆ!!! "ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ" ಎನ್ನುವುದರ ಬದಲಾಗಿ, 'ತೈಲ' ಧಾರೆಯೊಳಗೆ ಮನಸು, ದೇಹವನ್ನು ಇಟ್ಟವರ' ಅಬ್ಬರ!! ವಿಜಯ ದಾಸರ ಕೃತಿಯಲ್ಲಿನ ತೈಲಧಾರೆ ಬೇರೆ, ವಿಜಯ ಮಲ್ಯರ ತೈಲಧಾರೆ ಬೇರೆ. ಒಂದು ಭಕ್ತಿ, ಇನ್ನೊಂದು ನಶೆ! ಗಣಪತಿ ದೇವರ ಉತ್ಸವದ ಮುಂದೆ ಇವತ್ತು ವಿಜ್ರಂಭಿಸುವುದು ವಿಜಯ ಮಲ್ಯರ ತೈಲಧಾರೆ!!!
ಜೊತೆಗೆ, ಎದೆ ಬಡಿತ ಹೆಚ್ಚಿಸುವ, ಮನುಷ್ಯರು, ಪ್ರಾಣಿ ಪಕ್ಷಿಗಳ ಅನಾರೋಗ್ಯಕ್ಕೆ ಮಾರಕವಾಗಿರುವ ಶಬ್ದ ಮಾಲಿನ್ಯದ DJ ಸೌಂಡು!!! ಬ್ಯಾನ್ ಆಗಿದ್ದರೂ, DJ ಸೌಂಡು ಬಹುತೇಕ ಕಡೆ ಗಣಪತಿ ಮೂರ್ತಿ ವಿಸರ್ಜನೆಯಲ್ಲಿ ಚಾಲ್ತಿಯಲ್ಲಿದೆ. DJ ಸೌಂಡ್ ನಿಷೇಧ ಇರುವುದು ಆದೇಶ ಕಾಪಿಗಳಲ್ಲಿ ಮಾತ್ರ!!
**
"ದೇವರು ಎದುರಿನಲ್ಲಿದ್ದಾಗ ಕೆಟ್ಟದಾದ, ಅಸಭ್ಯವಾದ ಸಿನಿನಿಮಾ ಹಾಡುಗಳು, ಅಸಭ್ಯ ನೃತ್ಯಗಳು ಬೇಡ" ಎಂದು ಶೃಂಗೇರಿ ಪೀಠಾಧೀಶರಾದ ವಿಧುಶೇಖರ ಭಾರತಿ ಸ್ವಾಮೀಜಿಯವರು ಹಿತವಚನದ ಕರೆ ಕೊಟ್ಟಿದ್ದಾರೆ.
ಗಣೇಶ ಉತ್ಸವವನ್ನು ಮಾಡುವವರಿಗೆ ಜಗದ್ಗುರುಗಳ ಕೊಟ್ಟ ಈ ಹಿತವಚನದ ಗುರುವಾಕ್ಯಕ್ಕೆ ಮನ್ನಣೆ ನೀಡಿ ಅನುಸರಿಸೋಣ. ಹಿತವಚನ ಮೀರಿ, ಗಣೇಶೋತ್ಸವದಲ್ಲಿ ಅಶ್ಲೀಲ, ಅಸಭ್ಯ ಹಾಡುಗಳನ್ನು ಪ್ರಸಾರಿಸುವ, ಆ ಹಾಡುಗಳ ಜೊತೆ ಆರ್ಕೆಸ್ಟ್ರಾ ಮಾಡುವ, ಆಯೋಜಕರಿಗೆ ನಮ್ಮ ತನು-ಮನ-ಧನ ಸಹಾಯವನ್ನು ನಿಲ್ಲಿಸಿ ಗಣೇಶ ಕೃಪೆಗೆ ಪಾತ್ರರಾಗೋಣ.
ಗಣೇಶೋತ್ಸವದ ಚಂದಾ ಸಂಗ್ರಹಕ್ಕೆ ಬಂದವರಿಗೆ ಚಂದಾ ಕೊಡುವಾಗ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದ ಮೇಲೆ ಚಂದಾ ಕೊಡುವುದು ಒಳ್ಳೆಯದು. ಗಣೇಶೋತ್ಸವದ ಆಹ್ವಾನ ಪತ್ರಿಕೆಯಲ್ಲಿ 'ಗಣೇಶೋತ್ಸವದಲ್ಲಿ ಎಣ್ಣೆ, ನಶೆ, ಬಾರು, ಇಸ್ಪೀಟು, ಕ್ಲಬ್, ಐಟಂ ಸಾಂಗ್ಸ್‌ಗಳು, DJ ಸೌಂಡ್‌ಗಳು ಇರುವುದಿಲ್ಲ' ಎಂದು ಮುದ್ರಿಸಿದಲ್ಲಿ ಮತ್ತೂ ಒಂದು ರುಪಾಯಿ ಹೆಚ್ಚು ಕೊಡೋಣ.
ಗಣೇಶ ಉತ್ಸವದಲ್ಲಿನ ಅಶ್ಲೀಲ, ಅಸಭ್ಯ ಹಾಡುಗಳ ಉತ್ಸವಕ್ಕೆ ತನು-ಮನ-ಧನ ಸಹಾಯ ಮಾಡಿ ನಾವು ಪಾಪ ಕಟ್ಟಿಕೊಳ್ಳುವುದು ಬೇಡ.
ಶೃಂಗೇರಿ ಜಗದ್ಗುರುಗಳ ಮಾತು ನಮ್ಮ ಪುಣ್ಯ ಸಂಚಯಕ್ಕೆ ದಾರಿ ದೀಪವಾಗಲಿ
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ