ಲೇಖಕರು: ಆರ್ ಜೆ ನಯನ ಶೆಟ್ಟಿ, ಪುಟಗಳು:120, ಬೆಲೆ: 150, ಪ್ರಕಾಶಕರು: ವಿನಯ ಪ್ರಕಾಶನ ಮಂಗಳೂರು, ಮೊಬೈಲ್ - 9008497572
ಆರ್. ಜೆ. ನಯನ ಶೆಟ್ಟಿ ಈ ಹೆಸರು ಮಂಗಳೂರಿನ ಬಿಗ್ ಎಫ್ಎಂ ಜಗತ್ತಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಕೇಳುಗರ ಮನಸ್ಸಿಗೆ ಪ್ರತಿನಿತ್ಯವೂ ತನ್ನ ಹಿತವಾದ ಮಾತುಗಳ ಮೂಲಕ ಅದೆಷ್ಟೋ ಮನಸ್ಸುಗಳ ಬದುಕಲ್ಲಿ ಪ್ರಭಾವ ಬೀರಿದವರು. ಈಗ ಮೊಟ್ಟಮೊದಲ ಬಾರಿಗೆ ತನ್ನ ಬದುಕಿನ ಅನುಭವದ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಈ ಪಯಣ ನೂತನ ಎನ್ನುವ ಪುಸ್ತಕವನ್ನು ಹೊರತಂದಿದ್ದಾರೆ.
ಈ ಪುಸ್ತಕದಲ್ಲಿ ಹಲವಾರು ವಿಷಯಗಳ ಬಗ್ಗೆ ಲೇಖನಗಳಿದ್ದು ಒಂದು ಮತ್ತೊಂದಕ್ಕಿಂತ ಭಿನ್ನವಾಗಿದೆ ಹಾಗೆಯೇ ಓದುಗರಿಗೆ ಬದುಕಿನ ಬಗೆಗೆ ಹೊಸ ದೃಷ್ಟಿಕೋನ ತಂದುಕೊಡುತ್ತದೆ. ಫಿನ್ ಲ್ಯಾಂಡ್ ದೇಶದ ಜನರು ಜಗತ್ತಿನಲ್ಲಿ ಅತಿಹೆಚ್ಚು ಖುಷಿಯಿಂದ ಏಕಿದ್ದಾರೆ ಎಂದು ಹೇಳುವುದರಿಂದ ಆರಂಭವಾಗಿ, ಮುಂದುವರಿದ ದೇಶಗಳಲ್ಲಿ ಒಂದಾದ ಜಪಾನನಲ್ಲಿ ಇಂದಿಗೂ ಮಕ್ಕಳಿಗೆ ಹೆತ್ತವರು ಹೇಗೆ ಬದುಕಿನ ಬಗೆಗೆ ಪಾಠವನ್ನು ನಮ್ಮ ದೇಶದವರಿಗಿಂತ ವಿಭಿನ್ನವಾಗಿ ಮಾಡುತ್ತಿದ್ದಾರೆ ಮತ್ತು ನಮ್ಮ ಇಂದಿನ ಹೆತ್ತವರ ಮನಸ್ಸಿತಿಯನ್ನು ತುಂಬಾ ಚೆನ್ನಾಗಿ ಓದುಗರೆದರು ತೆರೆದಿಟ್ಟಿದ್ದಾರೆ.
ಪ್ರಕೃತಿಯೇ ಮಾಡಿಕೊಟ್ಟ ನೈಸರ್ಗಿಕ ಪ್ರವಾಸಿ ತಾಣವಾದ ಬೆಟ್ಟಗುಡ್ಡಗಳ ಚಾರಣದ ಅನುಭವ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಾವು ಪ್ರಕೃತಿಗೆ ಮಾಡುತ್ತಿರುವ ವಿನಾಶದ ಬಗ್ಗೆಯು ಅರಿವು ಮೂಡಿಸುವ ಕೆಲಸ ಲೇಖಕರಿಂದಾಗಿದೆ. ಸಾವಿರಾರು ಜನರ ಬದುಕಿಗೆ ದಾರಿದೀಪವಾದ ಶಿಕ್ಷಕಿಗೆ ತನ್ನ ಮನೆಯಲ್ಲೆ ಸೊಸೆಯಿಂದ ಆಗುವ ಅವಮಾನ ಹಿಂಸೆಗಳ ಕುರಿತಾಗಿ ಇರುವ ಲೇಖನ ಇಂದಿನ ವಿದ್ಯಾವಂತ ಯುವಪೀಳಿಗೆಯ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.
ಯಶಸ್ಸು ಎಂದರೆ ಏನು ಎಂಬುದನ್ನು ಸರಳವಾಗಿ ವಿವರಿಸಿ ಓದುಗರಿಗೆ ಪ್ರತಿಯೊಬ್ಬರು ಅವರದೇ ಆದ ರೀತಿಯಲ್ಲಿ ಯಶಸ್ವಿಗಳು ಎಂಬುದನ್ನು ತಿಳಿಸಲು ಪ್ರಯತ್ನಿಸಿದ್ದಾರೆ. ಶಿಸ್ತು ವಿಶ್ವವಿದ್ಯಾಲಯದ ತರಗತಿಯಲ್ಲಿ ಹೇಳಿಕೊಡುವ ಪಾಠವಲ್ಲ, ಮನೆಯ ಅಂಗಳದಲ್ಲಿ ಹಿರಿಯರು ಕಿರಿಯರಿಗೆ ಕಲಿಸಬೇಕಾದ ಕರ್ತವ್ಯವು ಎಂಬುದನ್ನು ಮನದಟ್ಟು ಮಾಡುವಲ್ಲಿ ಲೇಖಕರ ಪ್ರಾಮಾಣಿಕ ಪ್ರಯತ್ನ ನಾವಿಲ್ಲಿ ಕಾಣಬಹುದಾಗಿದೆ. ಹೀಗೆ ಇನ್ನೂ ಹಲವಾರು ವಿಷಯಗಳ ಕುರಿತ ಈ ಪುಸ್ತಕದಲ್ಲಿ ಬೆಳಕು ಚೆಲ್ಲಿದ್ದಾರೆ.
ಇಂದಿನ ಓಡುವ ಜಗತ್ತಿನಲ್ಲಿ ಸಮಯವಿಲ್ಲದ ಬದುಕಿನಲ್ಲಿ ನಾವು ಪಡೆದುಕೊಳ್ಳುವುದಕ್ಕಿಂತ ಜಾಸ್ತಿ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆ ಮೂಡಿ ಬದುಕಿನ ಬಗ್ಗೆ ಹೊಸ ಚಿಂತನೆ ಈ ಪುಸ್ತಕ ಮುಗಿಸಿದಾಗ ಓದುಗರಿಗೆ ಮೂಡುವುದು.
- ಪ್ರದೀಪ ಶೆಟ್ಟಿ ಬೇಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ