ಕಲಾ ಸಂಘಟನೆಯಲ್ಲಿ ಸಂತೃಪ್ತಿ ಕಂಡ ಉದ್ಯಮಿ ಶೇಖರಣ್ಣ: ಡಾ. ಸತ್ಯ ಪ್ರಕಾಶ್ ಶೆಟ್ಟಿ
ಮುಂಬಯಿ: 'ಉದ್ಯಮಶೀಲತೆಯೊಂದಿಗೆ ಸಂಸ್ಕೃತಿ ಪ್ರೀತಿಯನ್ನು ಉಳಿಸಿಕೊಂಡು ಸಮಾಜಮುಖಿಯಾಗಿ ಬದುಕಿದವರು ಇನ್ನ ಕಾಚೂರು ಶೇಖರ ಶೆಟ್ಟರು. ತಮ್ಮ ಹೋಟೆಲ್ ಉದ್ಯಮದೊಂದಿಗೆ ಸಮಾಜದ ವಿವಿಧ ಸಂಘಟನೆಗಳ ಜೊತೆಗೆ ಅವರು ಸಕ್ರಿಯರಾಗಿದ್ದರು. ಯಕ್ಷಗಾನ ಮತ್ತು ಸಾಹಿತ್ಯದಲ್ಲಿ ಅವರಿಗೆ ವಿಶೇಷ ಅಭಿರುಚಿ. ಮುಲುಂಡ್ ಪರಿಸರದಲ್ಲಿ ಕಲಾ ಸಂಘಟನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಂತೃಪ್ತಿ ಕಾಣುತ್ತಿದ್ದ ಶ್ರೇಷ್ಠ ಉದ್ಯಮಿ ಶೇಖರಣ್ಣ' ಎಂದು ಮುಲುಂಡ್ ಬಂಟ್ಸ್ ಮಾಜಿ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಮುಲುಂಡ್ ಪಶ್ಚಿಮ ಗಿರಿರಾಜ್ ಹೋಟೆಲ್ ಮಾಲಕ ದಿ| ಶೇಖರ್ ಆರ್.ಶೆಟ್ಟಿ ಇನ್ನ ಕಾಚೂರು ಅವರ ಸಂಸ್ಮರಣಾರ್ಥ ಅಜೆಕಾರ್ ಕಲಾಭಿಮಾನಿ ಬಳಗದ ವತಿಯಿಂದ ಊರಿನ ಪ್ರಸಿದ್ಧ ಕಲಾವಿದರಿಂದ ಆಗಸ್ಟ್ 16ರಂದು ಮುಂಬೈ ಪೂರ್ವದ ಮರಾಠ ಮಂಡಲ ಸಂಸ್ಕೃತ ಹಾಲ್‌ನಲ್ಲಿ ನಡೆದ 'ಶ್ರೀರಾಮ ಕೃಷ್ಣ ದರ್ಶನ' ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಸಂಸ್ಮರಣಾ ಜ್ಯೋತಿ ಬೆಳಗಿ ಅವರು ಮಾತನಾಡಿದರು.
'ಇನ್ನದ ಚಿನ್ನ': ಭಾಸ್ಕರ ರೈ ಕುಕ್ಕುವಳ್ಳಿ:
ಸಂಸ್ಮರಣ ಭಾಷಣ ಮಾಡಿದ ಹಿರಿಯ ಅರ್ಥಧಾರಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ 'ಯಕ್ಷಮಾನಸದ ಸಂಸ್ಥಾಪಕರಾದ ಶೇಖರ ಶೆಟ್ಟರು ಮುಂಬೈಯಲ್ಲಿ ಪ್ರತಿ ವರ್ಷ ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಸಾಧಕ ಕಲಾವಿದರಿಗೆ ನಿರ್ದಿಷ್ಟ ನಿಧಿಸಹಿತ ಯಕ್ಷಮಾನಸ ಪ್ರಶಸ್ತಿ ಪ್ರದಾನ ಮಾಡುತ್ತಿದ್ದರು. ಸ್ವತಹ ಕವಿ, ಸಾಹಿತಿ ಹಾಗೂ ಸಂಗೀತ ಪ್ರೇಮಿಯಾಗಿದ್ದ ಅವರು ಅಂತಹ ಚಟುವಟಿಕೆಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದರು. ಅಗಲಿದ ತಮ್ಮ ಸಹೋದರ ಪ್ರಾ. ಸೀತಾರಾಮ ಆರ್. ಶೆಟ್ಟರೊಂದಿಗೆ ಹಲವು ಸಾಹಿತ್ಯಿಕ ಸಂಘಟನೆಗಳಲ್ಲೂ ಮುಂಚೂಣಿಯಲ್ಲಿ ದ್ದರು. ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ಆಟ ಮತ್ತು ತಾಳಮದ್ದಳೆ ಕೂಟಗಳನ್ನು ಪ್ರಾಯೋಜಿಸುತ್ತಿದ್ದರು' ಎಂದು ನುಡಿದರು.
'ಶೇಖರ ಶೆಟ್ಟರು ತಮ್ಮ ಊರಿನ ಶಾಲೆ ಹಾಗೂ ಸಂಘ- ಸಂಸ್ಥೆಗಳಿಗೆ ಹಲವು ಬಗೆಯ ನೆರವು ನೀಡಿದ್ದಾರೆ. ಅವರು ಇನ್ನ ಗ್ರಾಮದ ಚಿನ್ನ' ಎಂದು ಕುಕ್ಕುವಳ್ಳಿ ಮೃತರ ಗುಣಗಾನ ಮಾಡಿದರು.
ಉದ್ಯಮಿಗಳಾದ ರತ್ನಾಕರ ಶೆಟ್ಟಿ ಬಾನ್ಸುರಿ, ಯೋಗೀಶ್ ಶೆಟ್ಟಿ ಹಿಲ್ ಬ್ರಿಜ್, ಥಾಣೆ ಬಂಟ್ಸ್ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಇನ್ನ, ವಾಮಂಜೂರು ಅಮೃತೇಶ್ವರ ಶಾಲೆಯ ಸಂಸ್ಥಾಪಕ ಸೀತಾರಾಮ ಜಾಣು ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ, ಕವಿ - ಸಂಘಟಕ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಮುಲುಂಡ್ ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆರತಿ ಯೋಗೀಶ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆ ವಿನೋದಾ ಚೌಟ ವೇದಿಕೆಯಲ್ಲಿದ್ದರು. ದಿ.ಶೇಖರ ಶೆಟ್ಟರ ಪತ್ನಿ ಜಯಂತಿ ಶೇಖರ ಶೆಟ್ಟಿ, ಮಕ್ಕಳಾದ ಧೀರಜ್ ಶೆಟ್ಟಿ, ಸೂರಜ್ ಶೆಟ್ಟಿ , ಸುಪ್ರೀತಾ ಶೆಟ್ಟಿ ಮತ್ತು ಕುಟುಂಬಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಸಭೆಯಲ್ಲಿ ಶೇಖರ ಶೆಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
'ಶ್ರೀರಾಮ-ಕೃಷ್ಣ ದರ್ಶನ' ಯಕ್ಷಗಾನ ತಾಳಮದ್ದಳೆ:
ಸಂಸ್ಮರಣ ಕಾರ್ಯಕ್ರಮದ ಬಳಿಕ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ 24ನೇ ವರ್ಷದ ಸರಣಿಯ ಎಂಟನೇ ಕಾರ್ಯಕ್ರಮ 'ಶ್ರೀ ರಾಮ - ಕೃಷ್ಣ ದರ್ಶನ' ಯಕ್ಷಗಾನ ತಾಳಮದ್ದಳೆ ಜರಗಿತು.ಶ್ರೀ ದೇವಿಪ್ರಸಾದ ಆಳ್ವ ಅವರ ಭಾಗವತಿಕೆಗೆ ಹಿಮ್ಮೇಳದಲ್ಲಿ ದೇಲಂತ ಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಚೆಂಡೆ ಮದ್ದಳೆ ನುಡಿಸಿದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀ ಕೃಷ್ಣ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಶ್ರೀರಾಮ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಜಾಂಬವಂತ), ಸದಾಶಿವ ಆಳ್ವ ತಲಪಾಡಿ (ಬಲರಾಮ) ಅರ್ಥಧಾರಿಗಳಾಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

