ಕಾರ್ಮಾರಿನಲ್ಲಿ ಮಂದಾರ ರಾಮಾಯಣ ವಾಚನ- ವ್ಯಾಖ್ಯಾನ
ಕಾಸರಗೋಡು: ತುಳುವ ಮಹಾಸಭೆ ಕಾಸರಗೋಡು ನೇತೃತ್ವದಲ್ಲಿ, ತುಳು ವರ್ಲ್ಡ್ ಕಟೀಲು ಸಂಯೋಜಿಸಿದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ 'ಮಂದಾರ ರಾಮಾಯಣ' ಸುಗಿಪು- ದುನಿಪು ಕಾರ್ಯಕ್ರಮ ಕಾಸರಗೋಡು ಉಳ್ಳೋಡಿಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಆಗಸ್ಟ್ 1, ಶನಿವಾರ ಜರಗಿತು.
ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಪೂರ್ಣ ಮಂದಾರ ರಾಮಾಯಣದ ವ್ಯಾಖ್ಯಾನವವನ್ನು ನಡೆಸಿಕೊಟ್ಟರು. ಭಾಗವತ ಪ್ರಶಾಂತ್ ರೈ ಪುತ್ತೂರು ಮತ್ತು ರಚನಾ ಚಿತ್ಕಲ್ ಆಯ್ದ ಪದ್ಯಗಳನ್ನು ವಾಚಿಸಿದರು. ಹಿಮ್ಮೇಳದಲ್ಲಿ ಲವ ಕುಮಾರ್ ಐಲ ಮದ್ದಳೆ ನುಡಿಸಿದರು. ದೊಡ್ಡ ಸಂಖ್ಯೆಯಲ್ಲಿ ನೆರೆದ ಪ್ರೇಕ್ಷಕರು ಭಕ್ತಿ ಭಾವದೊಂದಿಗೆ ಕಥಾ ಶ್ರವಣ ಮಾಡಿ ಸಂತುಷ್ಟರಾದರು.
ಆಟಿ ತಿಂಗಳ ಸಂಕಷ್ಟ ದೂರ:
ಪ್ರವಚನಕಾರ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ 'ತುಳುವರಿಗೆ ಸಂಕಷ್ಟ ಕಾಲವಾದ ಆಟಿ ತಿಂಗಳಲ್ಲಿ ರಾಮಾಯಣ ಪಾರಾಯಣ, ವಾಚನ- ಪ್ರವಚನಗಳ ಮೂಲಕ ಪರಿಹಾರ ಕಂಡುಕೊಳ್ಳ ಬಹುದೆಂಬ ನಂಬಿಕೆಯಿದೆ. ಮಂದಾರ ಕೇಶವ ಭಟ್ಟರ ತುಳು ರಾಮಾಯಣದಲ್ಲಿ ಪುರಾಣದ ಪುಣ್ಯ ಕಥೆಯೊಂದಿಗೆ ತುಳು ಬದುಕಿನ ನೈಜ ಚಿತ್ರಣವೂ ಇರುವುದರಿಂದ ಅದು ಜನರಿಗೆ ಹತ್ತಿರವಾಗಿದೆ' ಎಂದು ನುಡಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮಂದಾರ ಪ್ರತಿಷ್ಠಾನದ ಅಧ್ಯಕ್ಷ, ಪತ್ರಕರ್ತ ಮಂದಾರ ರಾಜೇಶ್ ಭಟ್ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲರನ್ನೂ ಮಂದಾರ ಪ್ರತಿಷ್ಠಾನದ ಪರವಾಗಿ ಹಾಗೂ ಮಂದಾರರ ಕುಟುಂಬದ ಪರವಾಗಿ ಅಭಿನಂದಿಸಿ, ಮುಂದೆಯೂ ತಮ್ಮ ಸಹಕಾರದ ಭರವಸೆ ನೀಡಿದರು.
ತುಳುವ ಮಹಾಸಭೆ ಕಾರ್ಯಾಧ್ಯಕ್ಷ ಡಾ. ರಾಜೇಶ್ ಕೃಷ್ಣ ಆಳ್ವ ಮಾತನಾಡಿ, 'ಮಂದಾರ ರಾಮಾಯಣ ಪ್ರಸರಣ ಕಾರ್ಯಕ್ರಮವನ್ನು ತುಳು ನಾಡಿನಾದ್ಯಂತ ಏರ್ಪಡಿಸುವ ಉದ್ದೇಶ ಹೊಂದಿದ್ದು,
ಜೊತೆಗೆ ತುಳು ಭಾಷೆಯ ಬೆಳವಣಿಗೆ ಮತ್ತು ತುಳುವರ ಪ್ರಾಚೀನ ಜೀವನ ಶೈಲಿಯನ್ನು ನಾಡಿಗೆ ಪರಿಚಯಿಸುವ ಉದ್ದೇಶವೂ ಇದೆ; ಅಲ್ಲದೆ ತುಳುವರ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದೆ' ಎಂದರು.
ತುಳು ನಾಡಿನಾದ್ಯಂತ ತುಳುವ ಮಹಾಸಭೆ ಕಾರ್ಯ ವ್ಯಾಪ್ತಿ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ನೋಂದಾವಣೆಯಾಗುವುದರ ಮೂಲಕ ಸಹಕರಿಸುವಂತೆ ಅವರು ತುಳುವ ಮಹಾಸಭೆ ಪರವಾಗಿ ವಿನಂತಿಸಿದರು.
ಶ್ರೀ ಕ್ಷೇತ್ರ ಕಾರ್ಮಾರು ಆಡಳಿತ ಮುಖ್ಯಸ್ಥ ರಾಧಾಕೃಷ್ಣ ರೈ ಮಾತನಾಡಿ, ತುಳುವ ಮಹಾಸಭೆ ಹಾಗೂ ಮಂದಾರ ರಾಮಾಯಣ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ಘೋಷಿಸಿದರು.
ಬಲಿವಾಡು ಕೂಟ:
ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಬಲಿವಾಡು ಕೂಟದ ಪ್ರಯುಕ್ತ ಬೆಳಿಗ್ಗೆ ಮಹಾವಿಷ್ಣು ದೇವಸ್ಥಾನದಲ್ಲಿ ಪೂಜೆ, ಗಣ ಹೋಮ, ನಂತರದಲ್ಲಿ ಮಂದಾರ ರಾಮಾಯಣ ಕಾರ್ಯಕ್ರಮ, ಮಹಾಪೂಜೆ, ಅನ್ನಪ್ರಸಾದ ವಿತರಣೆ ಹಾಗೂ ಸಂಜೆ ದುರ್ಗಾಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವರದಿ: ಮಂದಾರ ರಾಜೇಶ್ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


