ಗೆಳೆತನದ ದಿನದ ರುಚಿಯನ್ನು ಸವಿಯೋಣ

Upayuktha
0


ವಿಶ್ವ ಸ್ನೇಹಿತರ ದಿನವನ್ನು ಒಟ್ಟಾಗಿ ಗೆಳೆಯರೆಲ್ಲ ಸೇರಿ ಆಚರಿಸಿ ಸಂಭ್ರಮಿಸುವ ಆ ಸಂತೋಷವನ್ನು ಪದಗಳಲ್ಲಿ ವರ್ಣಸಲು ಸಾಧ್ಯವಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಬಾಂಧವ್ಯ, ಸ್ನೇಹ, ಪ್ರೀತಿ, ನಂಬಿಕೆ, ನೋವು-ನಲಿವಿನ ವಿನಿಮಯ, ಪರಸ್ಪರ ಮಾತುಕತೆ ಇವೆಲ್ಲವೂ ಗೆಳೆಯರ ನಡುವೆ ನಡೆಯುವಷ್ಟು ಬೇರೆಲ್ಲೂ ಕಾಣಸಿಗದು.


ಒಂದಷ್ಟು ಹಿಂದಕ್ಕೆ ನೋಡಿದರೆ 1919ರಲ್ಲಿ ಉ. ಅಮೇರಿಕಾದಲ್ಲಿ ಆಚರಣೆ ಮೊದಲಿಗೆ ಕಂಡುಬರುತ್ತದೆ. ವಿಶ್ವಸಂಸ್ಥೆ, ದ. ಏಷ್ಯಾ ರಾಷ್ಟ್ರಗಳಲ್ಲಿ 1958 ಜುಲೈ 30ರಲ್ಲಿ ಆಚರಿಸಿದ ಮಾಹಿತಿಯಿದೆ. ಅದೇನೇ ಇರಲಿ ಈ ಆಚರಣೆಗೆ ವಯಸ್ಸಿನ ಮಿತಿಯಿಲ್ಲ. ನಮ್ಮ ದೇಶದಲ್ಲಿ ಪ್ರತೀ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರ (ಈ ವರ್ಷ 3ನೇ ತಾರೀಕು) ಗೆಳೆಯರ ದಿನ' ಎಂದು ಆಚರಿಸಲಾಗುವುದು.


ವೃದ್ಧರು, ಎಳೆಯ ವಯಸ್ಸಿನವರು, ಶಾಲಾ ಕಾಲೇಜು ಗೆಳೆಯರು, ವೃತ್ತಿ ಕ್ಷೇತ್ರ, ಪಾರ್ಕ್ ಸ್ನೇಹಿತರು, ಪ್ರಯಾಣದಲ್ಲಿ ಒಟ್ಟಾಗುವ ಗೆಳೆಯರು, ಮನೆ ಪರಿಸರದ ಸ್ನೇಹಿತರು, ಹೆಂಗಳೆಯರ ಗುಂಪಿನ ನಡುವಿನ ಗಾಢವಾದ ಸ್ನೇಹ ಹೀಗೆ ತಾರತಮ್ಯವಿಲ್ಲದೆ ಸ್ನೇಹವು ಏರ್ಪಡುವುದು. ಇಬ್ಬರು ಸ್ನೇಹಿತರು ಸೇರಿದರೆ, ಅವರ ಮಧ್ಯೆ ನಡೆಯುವ ಮಾತುಕತೆ ಬಣ್ಣಿಸಲಸದಳ. ಎಲ್ಲಿಂದ ಎಲ್ಲಿಗೋ ಹೋಗಿ ಮಾತುಕತೆ ನಿಲ್ಲಬಹುದು. ಅತ್ಯಂತ ಗುಟ್ಟಿನ ವಿಷಯಗಳು, ಗೌಪ್ಯತೆ ಸಮಾಚಾರಗಳು, ನೋವು ನಲಿವು ಕಾರಣಗಳು, ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವರು. ಇದೇ ಅಲ್ಲವೇ ಗೆಳೆತನ ಅಂದರೆ? ಮನಬಿಚ್ಚಿ ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ಸಹ ಆಲೋಚಿಸುವರು. ಎದೆಗೆ ಎದೆ, ಜೀವಕ್ಕೆ ಜೀವ ಕೊಡುವ ಗೆಳೆಯರನ್ನು ಪರಿಸರದಲ್ಲಿ ಕಾಣಬಹುದು.


ಯಾವುದೋ ದುಃಖದಿಂದ ಮನಸ್ಸು ಮುದುಡಿದಾಗ, ಮನೆಯ ಸದಸ್ಯರ ಹತ್ತಿರ, ಪತಿ ಪತ್ನಿ ಪರಸ್ಪರ ಹೇಳಿಕೊಳ್ಳದೆ, ಆತ್ಮೀಯ ಸ್ನೇಹಿತರ ಹತ್ತಿರ ಹೇಳಿ ಮನಸ್ಸು ಹಗುರ ಮಾಡಿಕೊಳ್ಳುವವರೂ ಇದ್ದಾರೆ. ಎಷ್ಟೋ ಸಲ ಹೇಳ್ತಾರಲ್ಲ? ಅವನು ನನ್ನ ಚಡ್ಡಿ ದೋಸ್ತ್. ಎಷ್ಟೊಂದು ಖುಷಿಯ ದಿನಗಳಲ್ಲವೇ?

ಗೆಳೆತನ ಎನ್ನುವುದು ವಜ್ರದಷ್ಟು ಕಠಿಣ, ಮಲ್ಲಿಗೆಯ ದಳದ ಮೃದುತ್ವ, ಕಲ್ಲುಬಂಡೆಯಷ್ಟು ಸ್ಥಿರ. ಗೆಳೆತನಕ್ಕೆ ದೇಶ ಕಾಲ, ಲಿಂಗ ಭೇದವಿಲ್ಲ. ಪರಸ್ಪರ ಜೊತೆ ನಿಲ್ಲುವುದೇ ಗೆಳೆತನ. ಗೆಳೆತನವೆಂಬುದು ದಿವ್ಯಾನುಭೂತಿ. ತುಂಟಾಟ, ಕಚ್ಚಾಟ ಮಾಮೂಲು.


ಗೆಳೆತನವನ್ನು ಬೃಹತ್ ಆಲದಮರ ಕ್ಕೆ ಹೋಲಿಸಬಹುದು. ಪರಸ್ಪರ ಆಲದ ಮರದ ಬಿಳಲಿನ ಹಾಗಿರುವರು. ಎಲ್ಲಿಯಾದರೂ ಗೆಳೆಯರ ನಡುವೆ ಸಿಟ್ಟು, ಅಪನಂಬಿಕೆ ಹುಟ್ಟಿತೋ ಮನಸ್ಸಿಗಾಗುವ ಗಾಯವನ್ನು ಹೇಳಲು ಸಾಧ್ಯವಿಲ್ಲ. ಅದು ಬಾರದ ಹಾಗೆ ನೋಡಿಕೊಳ್ಳಬೇಕು. ಸ್ವಲ್ಪ ಹಿಂದಿನ ಮಹಾಗ್ರಂಥಗಳತ್ತ, ಪುರಾಣದತ್ತ ನೋಡಿದರೆ ನಾವು ಓದಿದ ವಿಷಯ ಬಹಳಷ್ಟಿದೆ. ಕರ್ಣ ಕೌರವನ ಗೆಳೆತನ ಸಾಮಾನ್ಯವಲ್ಲ. "ನೀನು ಹಿರಿಯ ಪಾಂಡುಪುತ್ರ, ಪಾಂಡವ ಪಕ್ಷಕ್ಕೆ ಬಾ ಎಂದು ಶ್ರೀ ಕೃಷ್ಣ ಭಗವಾನ್ ತಿಳಿಸಿದರೂ, ಗೆಳೆತನಕ್ಕೆ ಕಟ್ಟುಬಿದ್ದು ವೀರಾಧಿವೀರ ಕರ್ಣ ಬರಲೊಪ್ಪಲಿಲ್ಲ. ಇದು ಪ್ರಿಯ ಸಖನಿಗಾಗಿ ಮಾಡಿದ ತ್ಯಾಗವಲ್ಲವೇ?


ಕೃಷ್ಣ ಸುಧಾಮರ ಬಾಲ್ಯದ ಗೆಳೆತನ, ಮುಂದೆ ಹಿಡಿ ಅವಲಕ್ಕಿ ಮೆಲ್ಲುವುದರ ಮೂಲಕವಾಗಿ ವಿಸ್ತರಿಸಿ, ತನ್ನ ಸಖ ಸುಧಾಮನಿಗೆ ಎಲ್ಲವನ್ನೂ ಒದಗಿಸಿದ ನಿದರ್ಶನ, ಇಲ್ಲಿ ಭಗವಂತ ಎಂಬುದಾಗಿ ಶ್ರೀಕೃಷ್ಣ ನೋಡಲಿಲ್ಲ. ಹೃದಯ ಶ್ರೀಮಂತಿಕೆಯ ಕೈ ಮೇಲಾಯಿತು.

ಕಪಿನಾಯಕ ಸುಗ್ರೀವ ಶ್ರೀ ರಾಮನ ಸಖ್ಯ ಮರೆಯಲಾರದ್ದು. ಹೀಗಿರುವ ಹಲವಾರು ಉದಾಹರಣೆಗಳನ್ನು ನಾವು ಕಾಣಬಹುದು. ಇಂಥ ಗೆಳೆತನದ ದಿನವನ್ನು ಅರ್ಥ ಪೂರ್ಣವಾಗಿ ಅರ್ಥೈಸಿಕೊಂಡು ಅದಕ್ಕೊಂದು ನೆಲೆಬೆಲೆ ಒದಗಿಸುವುದು ಮಾನವಧರ್ಮ. ಸ್ನೇಹಿತ ಬಾಂಧವರೇ, ಮಿತ್ರ ದ್ರೋಹವೆಸಗದೆ ಜೊತೆಜೊತೆಯಾಗಿ ಸಾಗಿ ಸ್ನೇಹಿತರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ.


- ರತ್ನಾ ಕೆ.ಭಟ್, ತಲಂಜೇರಿ, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top