ದಿನವೂ ರಾತ್ರಿ ನಿದ್ರೆ ಮಾಡುವ ಮೊದಲು ಹಾಸಿಗೆಯಲ್ಲಿ ಮಲಗಿ ಕಥೆ ಹೇಳಿ ಮಲಗುವುದು ನನ್ನದೂ ಮತ್ತು ನಮ್ಮ ನಾಲ್ಕು ವರ್ಷದ ಮಗಳ ದಿನನಿತ್ಯದ ಕೆಲವು ರೂಢಿಗಳಲ್ಲಿ ಒಂದು.
"ಅಮ್ಮಾ, ಕಥೆ ಹೇಳಮ್ಮಾ. ಕಥೆ ಕಥೆ ಕಥೆ" ಅಬ್ಬಾ ಕತೆಗುಬ್ಬಿಯ ಕೋರಿಕೆ ಶುರುವಾಯಿತು.
ಕೆಲವೊಮ್ಮೆ ನನ್ನ ಆಲಸ್ಯದಿಂದ ಈ ಕಥೆ ಹೇಳುವ ಕೆಲಸದಿಂದ ಜಾರಿಕೊಳ್ಳುವ ಉಪಾಯ ಮಾಡಿದ್ದೂ ಇದೆ. ಇದೊಂದು ಅದೇ ಉದಾಸೀನದ ದಿನ. "ಚಿನ್ನಿ, ಇಂದು ನನಗೆ ಹೊಸ ಐಡಿಯಾ ಬರುತ್ತಾ ಇದೆ. ಇಂದು ಸಣ್ಣ ಟ್ವಿಸ್ಟ್, ಇಂದು ಚಿನ್ನಿ ಕಥೆ ಹೇಳುತ್ತಾಳೆ" ಎಂದು ಸಣ್ಣ ಬಾಣ ಬಿಟ್ಟೆ. "ಸರಿ ಅಮ್ಮಾ, ನಾನು ಕಥೆ ಹೇಳುತ್ತೇನೆ" ಎಂದು ಹೇಳಿ ಮುದ್ದು ಮಾತಿನಿಂದ ಕಥೆ ಶುರು ಮಾಡಿಯೇ ಬಿಟ್ಟಳು.
"ಒಂದು ದೊಡ್ಡ ಕಾಡು. ಆ ಕಾಡಿನ ರಾಜ ಹುಲಿ. ಆ ಹುಲಿ ತುಂಬಾ ಒಳ್ಳೆಯ ಒಳ್ಳೆಯ ಹುಲಿ. ಒಂದು ದಿನ ಗುಹೆಯ ಹತ್ತಿರ ನಿದ್ದೆ ಮಾಡುತ್ತಾ ಇತ್ತು. ಆಗ ಅಲ್ಲಿಗೆ ಒಂದು ಇಲಿ ಬಂದು ಹುಲಿಯ ಮೇಲೆ ಕುಣಿದಾಡಿತು. ಬಾಲಕ್ಕೆ ಜೋತು ಬಿದ್ದು ಆಟ ಆಡಿತು. ಆದರೆ ಹುಲಿಗೆ ಕೋಪವೇ ಬರಲಿಲ್ಲ. "ಓ ಗೆಳೆಯ, ನಿದ್ದೆ ಮಾಡುತ್ತಾ ಇದ್ದೇನೆ ತೊಂದರೆ ಕೊಡಬೇಡ" ಎಂದು ಹೇಳಿ ಪುನಃ ನಿದ್ದೆಗೆ ಜಾರಿತು. ಅಮ್ಮಾ, ನನ್ನ ಕಥೆಯಲ್ಲಿರುವುದು ತುಂಬಾ ಒಳ್ಳೆಯ ಹುಲಿ. ಅದು ಇಲಿಯ ಮೇಲೆ ಕೋಪ ಮಾಡಿಕೊಳ್ಳಲಿಲ್ಲ. ಇಲಿಯೂ ಅದನ್ನು ಅರ್ಥ ಮಾಡಿ ಕೊಂಡಿತು" ಎಂದು ಹೇಳಿ ಕಥೆ ಮುಗಿಸಿದಳು.
ಅವಳ ಸರಳವಾದ ಕಥೆ ನನಗೆ ಹಲವಾರು ವಿಷಯಗಳನ್ನು ತಿಳಿಸಿತು. ಅವರ ಮನಸ್ಸಿನ ಸುಂದರ ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರೇ. ನಾನು ಹೇಳುತ್ತಿದ್ದ ಹೆಚ್ಚಿನ ಕಥೆಗಳಲ್ಲಿ ಮೊದಲು ಕೆಟ್ಟ ಕೆಲಸ ಮಾಡಿ ಮತ್ತೆ ಪಾಠ ಕಲಿಯುವ ವಿಷಯ ಇರುತ್ತಿತ್ತು. ಆದರೆ ಮಕ್ಕಳು ದೇವರಲ್ಲವೇ, ಅವರ ಮನಸ್ಸಿನಲ್ಲಿ ಎಂದೂ ಕೆಟ್ಟ ಯೋಚನೆ ಇರುವುದಿಲ್ಲ. ಅವಳ ಕಥೆಯನ್ನು ಕೇಳಿದ ನಂತರ ಅವಳಿಗೆ ಇನ್ನಷ್ಟು ವಾಸ್ತವದ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವಿದೆಯೇನೋ ಎಂದು ನನಗೆ ಅನ್ನಿಸಿತು. ಆ ದಿನದ ನಂತರ ಪುರಾಣದ ಕಥೆಗಳು, ಪಂಚತಂತ್ರದ ಕಥೆಗಳನ್ನು ಹೇಳುವುದರ ಜೊತೆಗೆ ನನ್ನ ಬಾಲ್ಯದ ಕಥೆಗಳು, ಆಫೀಸಿನಲ್ಲಿ ಕೆಲಸ ಮಾಡುತ್ತಾ ಇದ್ದಾಗಿನ ಅನುಭವಗಳು, ನಮ್ಮ ಸ್ವಸ್ಥ ಆರೋಗ್ಯಕ್ಕೆ ಬೇಕಾದ ಅವಶ್ಯಕ ಪೋಷಕಾಂಶದ ಕುರಿತಾದ ವಿಷಯಗಳು, ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ ಎಲೆಕ್ಟ್ರಾನಿಕ್ ವಸ್ತುಗಳ ಉಪಯೋಗಗಳನ್ನು ತಿಳಿಸಲು ಶುರು ಮಾಡಿದೆ.
ಆಗಾಗ ನಾವು ದಿನದಲ್ಲಿ ನೋಡುವ ಓದುವ ಅಥವಾ ಖುಷಿ ಕೊಟ್ಟ ವಿಷಯಗಳನ್ನು ಆ ಎಳೆಯ ಮಕ್ಕಳಲ್ಲಿ ಹಂಚಿಕೊಂಡರೆ ಅವರ ಬೆಳವಣಿಗೆಗೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ದಿನನಿತ್ಯದ ವಿಷಯವನ್ನು ಚೆಂದದ ಕಥೆಯನ್ನಾಗಿ ಮಾಡಿ ಹೇಳುತ್ತಾ ಹೋದರೆ ಅವರೂ ಅವರ ದಿನದ ಭಾವನೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಅವರು ಹೇಳುವ ವಿಷಯಗಳಲ್ಲಿ ಲಾಜಿಕ್ ಇಲ್ಲದ್ದೇ ಇರಬಹುದು, ಒಂದು ವಾಕ್ಯಕ್ಕೂ ಇನ್ನೊಂದಕ್ಕೂ ಸಂಬಂಧವೇ ಇಲ್ಲದೇ ಇರಬಹುದು. ಆದರೂ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಅವರ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನ ನಮ್ಮದಾಗಲಿ. ಆಗ ಅವರೂ ಅವರಿಗೆ ಅರ್ಥವಾಗದ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಕುತೂಹಲವನ್ನು ನಮ್ಮನ್ನು ನೋಡಿ ಕಲಿಯುತ್ತಾರೆ.
- ವಾರಿಜ ಹೆಬ್ಬಾರ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ