ಟಿ ಎಸ್ ಆರ್ ಎಂದು ಪ್ರಸಿದ್ಧರಾಗಿದ್ದ ಟಿ ಎಸ್ ರಾಮಚಂದ್ರ ರಾವ್ ಕನ್ನಡ ಪತ್ರಿಕೋದ್ಯಮದಲ್ಲಿ ಬಹು ಪ್ರಖ್ಯಾತರಾದ ಪತ್ರಕರ್ತರು. ಟಿ ಎಸ್ ಆರ್ ಅವರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ 1922 ರಲ್ಲಿ ಸೂರ್ಯನಾರಾಯಣ ರಾಮಚಂದ್ರರಾವ್ ಮತ್ತು ಬನಶಂಕರಮ್ಮ ನವರ ಪುತ್ರನಾಗಿ ಜನಿಸಿದರು. ಟಿ ಎಸ್ ಆರ್ ಪತ್ನಿ ಲಲಿತಾ ಸಂಸ್ಕೃತ ಪ್ರಾಧ್ಯಾಪಕಿ ಹಾಗೂ ಜನಪ್ರಿಯ ಕಾದಂಬರಿಕಾರ ರಾಗಿದ್ದ ಎಂ ಕೆ ಇಂದಿರಾ ಅವರ ಸೋದರಿ. ಟಿ ಎಸ್ ರಾಮಚಂದ್ರ ರಾವ್ ಅವರು ಶಿವಮೊಗ್ಗದಲ್ಲಿ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಹೇಗೊ ಪೂರೈಸಿದರು. ಆದರೆ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಟಿ ಎಸ್ ಆರ್ ಸೀನಿಯರ್ ಇಂಟರ್ ಮೀಡಿಯಟ್ ಗೆ ನಿಲ್ಲಿಸುವ ಪ್ರಸಂಗ ಬಂದಿತು.
ರಾ.ಶಿವರಾಮ್ ಅವರು ಪ್ರೀತಿ ಮತ್ತು ಪ್ರೋತ್ಸಾಹದಿಂದ ಕೊರವಂಜಿ ಮಾಸಪತ್ರಿಕೆಯಲ್ಲಿ ಬರೆಯಲು ಟಿ ಎಸ್ ಆರ್ ಗೆ ಅವಕಾಶ ದೊರೆಯಿತು. ಇವರು ಮಧುವನ ಮತ್ತು ಮೂನ್ ಲೈಟ್ ಪತ್ರಿಕೆಗಳನ್ನು ಸಹ ನಡೆಸುತ್ತಿದ್ದರು. 1948 ರಲ್ಲಿ ಪ್ರಜಾವಾಣಿ ಪತ್ರಿಕೆ ಪ್ರಾರಂಭಗೊಂಡಾಗ ಅದರಲ್ಲಿ ಉಪ ಸಂಪಾದಕರಾಗಿ ಸೇವೆ ಪ್ರಾರಂಭಿಸಿ ಪ್ರಖ್ಯಾತರಾದರು. 1949ರಲ್ಲಿ ಪ್ರಜಾವಾಣಿ ಸಂಪಾದಕರಾದರು. ಸಂಪಾದಕರಾಗಿ ಪತ್ರಿಕೆಯನ್ನು ಉತ್ಕೃಷ್ಟ ಸ್ಥಾನಕ್ಕೆ ತಂದರು. ಅತ್ಯುತ್ತಮ ಜನಪ್ರಿಯ ಪತ್ರಿಕೆ ಇವರ ಸಂಪಾದಕತ್ವದಲ್ಲಿ ನಾಡು ಕಂಡ ಸಮರ್ಥ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇವರು ಪ್ರತಿನಿತ್ಯ ಬರೆಯುತ್ತಿದ್ದ ಛೂಬಾಣ ಅಂಕಣ ಹಾಸ್ಯ ಲೇಪನದಿಂದ ಚುಚ್ಚು ಬಾಣವಾಗಿ ಅತ್ಯಂತ ಜನಪ್ರಿಯ ಅಂಕಣ ಎಂದು ಓದುಗರು ಮೆಚ್ಚಿದರು. ನಾಡಿನ ರಾಜಕೀಯ, ಸಾಮಾಜಿಕ ಘಟನೆಗಳಿಗೆ ಟೀಕೆ ಟಿಪ್ಪಣಿಗಳ ಮೂಲಕ ಛೂಬಾಣ ಬಿಂಬಿಸುತ್ತಿತ್ತು. ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನವಾಣಿಯಾಗಿ ಮೆರೆಯಿತು.
ಜನರ ಕಷ್ಟ ಕಾರ್ಪಣ್ಯಗಳನ್ನು, ಆಳರಸರ, ಅಧಿಕಾರಿಗಳ, ಕೊನೆಗೆ ಚಿಂದಿ ಆಯುವ ಪೋರನೂ ಸುದ್ದಿಗೆ ವಸ್ತುವಾದರು. ಜನತೆಯ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ದನಿಯಿಲ್ಲದವರ ದನಿಯಾಗಿ ಪತ್ರಿಕೆ ನಾಡಿನಾದ್ಯಂತ ಪ್ರಖ್ಯಾತವಾಯಿತು. ಲೋಕ ವಿಚಾರವನ್ನು ಸರಳವಾಗಿ ತಿಳಿಸಿ ಅದರ ಹಿನ್ನಲೆಯನ್ನು ಮತ್ತು ಪರಿಣಾಮಗಳ ಮಾಹಿತಿ ನೀಡಿ ಅವರು ವಿಚಾರ ಶಕ್ತಿ ಬೆಳೆಸಲುಆದ್ಯತೆ ನೀಡಿತು. ಅದಕ್ಕೆ ಪೂರಕವಾಗಿ ಹಲವಾರು ಅಂಕಣಗಳು ವಾಚಕರವಾಣಿ ಅತ್ಯಂತ ಪ್ರಭಾವಶಾಲಿಯಾಗಿ ಪತ್ರಿಕೆ ಮೆರೆಯಿತು ಮತ್ತು ಇಂದಿಗೂ ಆಕರ್ಷಣೆ ಉಳಿಸಿಕೊಂಡಿದೆ. ಟಿ ಎಸ್ ಆರ್ ಅವರು ನಿಷ್ಠಾವಂತ ಪತ್ರಕರ್ತರಾಗಿ ಅಪರೂಪದ ಲೇಖಕರಾಗಿ ಬಹುತೇಕ ಮುಖ್ಯಮಂತ್ರಿಗಳ ಆಪ್ತರಾಗಿದ್ದುದು ವಿಶೇಷ.
ಆದರೆ ತಮ್ಮ ಖಾಸಗಿ ಗೆಳೆತನವನ್ನು ಅವರು ಪತ್ರಿಕೋದ್ಯಮಕ್ಕೆ ಬಳಸಲಿಲ್ಲ. ಎಲ್ಲಾ ಮುಖ್ಯಮಂತ್ರಿಗಳ ಲೋಪ ದೋಷಗಳನ್ನು ಪತ್ರಿಕೆಯ ಮೂಲಕ ಮುಲಾಜಿಲ್ಲದೆ ಬಯಲು ಮಾಡುತ್ತಿದ್ದರು. ಇವರು ಬರೆದ ಛೂಬಾಣದ ವ್ಯಂಗೋಕ್ತಿ ಈಗಲೂ ಓದುಗರು ಮರೆತಿಲ್ಲ. ಬಹುತೇಕ ಶ್ರೇಷ್ಠ ಸಾಹಿತಿಗಳ ಸಾಹಿತ್ಯಕ್ಕೆ ನೆಲೆ ಒದಗಿಸುವುದರ ಜೊತೆಗೆ ನವ್ಯ ಲೇಖಕರ ಪ್ರತಿಭೆ ಬೆಳಕಿಗೆ ಬರಲು ಈ ಪತ್ರಿಕೆ ಒಂದು ವೇದಿಕೆ ತಯಾರು ಮಾಡಿತು. ಶ್ರೇಷ್ಠ ಪತ್ರಕರ್ತರು, ಕಲಾವಿದರು ಸಾಹಿತಿಗಳ ಪಡೆಯನ್ನೇ ನಾಡಿಗೆ ಕೀರ್ತಿ ತರಲು ಸಹಾಯ ಮಾಡಿದರು.
ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ಹತ್ತಿರ ಪತ್ರಕರ್ತರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಾರಂಭಿಸಲು ಟಿ ಎಸ್ ಆರ್ ಕಾರಣೀಭೂತರಾದರು. ಈಗ ಬೆಂಗಳೂರಿನ ಸುದ್ಧಿ ಮಾಧ್ಯಮದ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಟಿ ಎಸ್ ಆರ್ ಅವರು ಬರೆದ ಪ್ರಹಸನ ಲೇಡಿ ಡಾಕ್ಟರ್ ಜನಪ್ರಿಯ ಕೃತಿಯಾಗಿದೆ. ಪತ್ರಿಕೋದ್ಯಮದಲ್ಲಿ ಹೆಸರುವಾಸಿಯಾದ ಟಿ ಎಸ್ ಆರ್ ಕೆಲಕಾಲ ಅಸ್ವಸ್ಥರಾಗಿ 11-3-1977 ರಂದು ಕನ್ನಡ ನಾಡನ್ನು ಅಗಲಿ ನಿಧನರಾದರು. ಇವರ ಹೆಸರಿನಲ್ಲಿ ಪ್ರತಿ ವರ್ಷ ನಾಡಿನ ಪತ್ರಕರ್ತರಿಗೆ ಟಿ ಎಸ್ ಆರ್ ಪ್ರಶಸ್ತಿ ನೀಡಿ ಸನ್ಮಾನಿಸುವರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ