ಲೇಖಾ ಲೋಕ-50: ಬಹುಶ್ರುತ ವಿದ್ವಾಂಸರು ಎಂ.ವಿ. ಸೀತಾರಾಮಯ್ಯ

Upayuktha
0


ಮೈಸೂರು ವೆಂಕಟದಾಸಪ್ಪ ಸೀತಾರಾಮಯ್ಯನವರು ಅನೇಕ ಗ್ರಂಥಗಳನ್ನು, ರಚಿಸಿ ಪ್ರಸಿದ್ದಿಯಾದ ಪ್ರಮುಖ ಸಾಹಿತಿಗಳಲ್ಲಿ ಅಪರೂಪದ ವ್ಯಕ್ತಿ. ವಿಶೇಷವೇನೆಂದರೆ ವ್ಯಾಕರಣ ಮತ್ತು ಹಸ್ತಲಿಪಿ ಶಾಸ್ತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ಪಂಡಿತರು. ಅಧ್ಭುತ ಚಿತ್ರಕಾರರಾಗಿ, ಸ್ವಲ್ಪ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಹಾನ್ ವಿದ್ವಾಂಸರು. ವೆಂಕಟದಾಸಪ್ಪ ಮತ್ತು ಸಾವಿತ್ರಮ್ಮರವರ ಪುತ್ರನಾಗಿ ಇವರು ಮೈಸೂರಿನಲ್ಲಿ ತಾ॥ 9-9-1910 ರಂದು ಜನಿಸಿದರು. ಬನುಮಯ್ಯ ಪ್ರೌಢ ಶಾಲೆಯಲ್ಲಿ ಮೊದಲ ಶಿಕ್ಷಣ, ನಂತರ ಇಂಟರ್ ಮೀಡಿಯಟ್ ಪರೀಕ್ಷೆಯನ್ನು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪಾಸು ಮಾಡಿ, ನಂತರ ಮುಂದಿನ ವಿದ್ಯಾಭ್ಯಾಸ ಎಂ ಎ ಪರೀಕ್ಷೆ ಮುಗಿಸಿ, ಪದವಿ ಪಡೆದು ಕನ್ನಡ ಅಧ್ಯಾಪಕ ವೃತ್ತಿ ಆರಂಭಿಸಿ 1967ರಲ್ಲಿ ನಿವೃತ್ತಿಯಾದರು.


ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದರು. ತಮ್ಮ ನಿವೃತ್ತಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 5 ವರ್ಷ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಎಂ ವಿ ಸೀ ಅವರು ಬರವಣಿಗೆಯ ಜೊತೆಗೆ ಸಂಗೀತ ಸಹ ಅಭ್ಯಾಸ ಮಾಡಿಕೊಂಡು, ಮೃದಂಗ ನುಡಿಸುವ ಕಲೆ ಹಾಗೂ ಅನೇಕ ಲಲಿತಕಲೆಗಳಲ್ಲಿ, ಚಿತ್ರ ಬಿಡಿಸುವುದರಲ್ಲಿ ಪರಿಣಿತರಾಗಿದ್ದರು.


ಎಂ ವಿ ಸೀತಾರಾಮಯ್ಯನವರು "ರಾಘವ" ಎಂಬ ಕಾವ್ಯನಾಮದಿಂದ 15 ಕವನ ಸಂಕಲನಗಳು, 10 ಕಥಾ ಸಂಕಲನಗಳು, 10 ಕಾದಂಬರಿಗಳು 9 ನಾಟಕಗಳೂ ಸೇರಿದಂತೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕವನ ಸಂಕಲನಗಳಲ್ಲಿ ಹಕ್ಕಿ ಹಾಡು, ಅಶೋಕ ಚಕ್ರ, ವಿಶ್ವಜ್ಯೋತಿ ಬಾಪು, ಗೀತ ಭಾರತಿ, ಹಂಸಪಥ ಮುಂತಾದವು ಪ್ರಸಿದ್ಧ ಕೃತಿಗಳು. ಕರುಣಾ ಲಹರಿ, ಶಿಲಾಮುಖ, ಯೌವನಸುಧೆ, ಬಿಸಿಲು ಬೆಳದಿಂಗಳು, ಮಾರ್ಗದರ್ಶಕ ಹೀಗೆ ಮುಂತಾದ ಕಥಾಸಂಕಲನಗಳು ಇವರಿಂದ ರಚಿತವಾಗಿದೆ. ಸ್ವಯಂವರ,  ತೊಟ್ಟಿಲು ತೂಗದ ಕೈ, ಜೀವನ ನಾಟಕ, ತೆರೆ  ಮರೆಯ ಚಿತ್ರಗಳು, ಎಂಬ ನಾಟಕಗಳನ್ನು ರಚಿಸಿದ್ದಾರೆ. ಭಾಗ್ಯ ಲಕ್ಷ್ಮೀ, ನಂಜಿನ ಸವಿ, ಜೀವನದ ಜೊತೆಗಾರ, ಸ್ನೇಹದ ಕಾಣಿಕೆ, ತಾಯ ಬಯಕೆ ಮುಂತಾದ ಕಾದಂಬರಿಗಳನ್ನು ರಚಿಸಿ, ನಾಡಿಗೆ ನೀಡಿದ ಮಹಾನುಭಾವರು. ಧೂಮಲೀಲೆ, ಮುಗಿಲುಗಳು, ಹಿಡಿಹೂವು, ಬಾಳಿನಬುತ್ತಿ, ಹಿತಚಿಂತನ, ಮುಂತಾದ ಪ್ರಬಂಧಗಳನ್ನು ಸಹ ರಚಿಸಿ ಪ್ರಸಿದ್ಧರಾದರು.

ಮೂರು ಸಂಪಾದನಾ ಗ್ರಂಥ, ನಾಲ್ಕು ವಿಮರ್ಶಾ ಗ್ರಂಥ, ಮೂರು ಬಾಲಸಾಹಿತ್ಯ, ಒಂದು ಇತರೆ ಕೃತಿಗಳನ್ನು ಬರೆದ ಮಹಾನ್ ವಿದ್ವಾಂಸರು. ಇವರು ಸಾಹಿತಿ ಮತ್ತು ಕಲಾವಿದರ ಬಳಗದ ರೂವಾರಿಯಾಗಿ ಅನೇಕ ಸಾಮಾಜಿಕ ಸೇವೆ ಮಾಡಿದ ಲೇಖಕರು. ನವೋದಯ ಕನ್ನಡ ಸಾಹಿತ್ಯ ಚಳುವಳಿಗಾರರಾಗಿ, ಕೃತಿಗಳನ್ನು ರಚಿಸಿದ್ದಾರೆ. ಇವರ ಗಮನಾರ್ಹ ಕೃತಿಗಳು ಶ್ರೀ ವಿಜಯ ಕೃತ ಕವಿರಾಜಮಾರ್ಗ, ಉದಯಾದಿತ್ಯಲಂಕಾರ.


ಎಂ ವಿ ಸೀತಾರಾಮಯ್ಯನವರಿಗೆ ಬಿಎಂಶ್ರೀ ಸ್ವರ್ಣಪದಕ, ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ, ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸರಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನ, ಕರ್ನಾಟಕ ರಾಜ್ಯದ ಸಾಹಿತ್ಯ ಅಕಾಡೆಮಿ ಬಹುಮಾನ, ಜ.ಚ.ನಿ. ಅವರಿಂದ ವಿಚಾರ ರತ್ನಾಕರ ಬಿರುದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಲಭಿಸಿವೆ. ಇವರಿಗೆ "ಆಸ್ವಾದ" ಎಂಬ ಅಭಿನಂದನಾ ಗ್ರಂಥವನ್ನು ಇವರ ಅಭಿಮಾನಿಗಳು ನೀಡಿ ಸನ್ಮಾನ ಮಾಡಿ ಗೌರವಿಸಿದರು. ಬೆಂಗಳೂರಿನಲ್ಲಿ ಸೀತಾರಾಮಯ್ಯನವರು ತಾ॥12-3-1990 ರಂದು ಕನ್ನಡ ನಾಡನ್ನು ಅಗಲಿ ನಿಧನರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top