ರಾಜ್ಯದ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ: ಸಂಸದ ಕ್ಯಾ. ಚೌಟ ಕಳವಳ

Upayuktha
0

ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲೇ ಮುಂಬೈ ಪೊಲೀಸರಿಂದ ಅತಿದೊಡ್ಡ ಡ್ರಗ್ಸ್‌ ಜಾಲ ಪತ್ತೆ




ದೆಹಲಿ:  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ಕರ್ನಾಟಕವು ಭಯೋತ್ಪಾದಕರು ಮತ್ತು ಸಮಾಜಘಾತುಕ ಶಕ್ತಿಗಳ ಸುರಕ್ಷಿತ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.


ಮೈಸೂರು ಸಮೀಪ ಬೃಹತ್ ಡ್ರಗ್ಸ್ ಕಾರ್ಖಾನೆ ಪತ್ತೆ ಮತ್ತು ಬೆಂಗಳೂರಿನಲ್ಲಿ ಅಲ್-ಖೈದಾ  ನಂಟು ಹೊಂದಿರುವ  ಭಯೋತ್ಪಾದಕ ಮಾಡ್ಯೂಲ್‌ನ ಪ್ರಮುಖ ಸಂಚುಕೋರ ಮಹಿಳೆಯ ಬಂಧನವಾಗಿರುವ ಕುರಿತು ಹೇಳಿಕೆ ನೀಡಿರುವ ಸಂಸದರು, ಇಂತಹ ಘಟನೆಗಳು ರಾಜ್ಯದ ಆಂತರಿಕ ಭದ್ರತೆಯ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ. 


ಸಿಎಂ ತವರು ಜಿಲ್ಲೆ ಮೈಸೂರಿನಲ್ಲೇ ಮೆಫೆಡ್ರೋನ್ (MD) ತಯಾರಿಸಿ ಸರಬರಾಜು ಮಾಡುತ್ತಿರುವ ಬೃಹತ್ ಡ್ರಗ್ಸ್ ಕಾರ್ಖಾನೆ ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದರೆ, ರಾಜ್ಯದ ಗೃಹ ಹಾಗೂ ಗುಪ್ತಚರ ಇಲಾಖೆ ಎಷ್ಟರ ಮಟ್ಟಿಗೆ ನಿಷ್ಕ್ರಿಯವಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಸುಮಾರು 381 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಮುಂಬೈನ ಸಕಿನಾಕಾ ಪೊಲೀಸ್ ಠಾಣೆಯ ಆಂಟಿ-ನಾರ್ಕೋಟಿಕ್ಸ್ ಸೆಲ್(ANC), ಇದು ಕರ್ನಾಟಕದ ಇತಿಹಾಸದಲ್ಲಿಯೇ ಅತಿದೊಡ್ಡ ಮಾದಕ ವಸ್ತು ವಶ ಪ್ರಕರಣ ಎನ್ನಲಾಗುತ್ತಿದೆ. 


ಹೀಗಿರುವಾಗ ಕರ್ನಾಟಕದ ಗುಪ್ತಚರ ಇಲಾಖೆಗೆ ಇದರ ಬಗ್ಗೆ ಸುಳಿವೇ ಇರಲಿಲ್ಲ ಎಂಬುದು ನಿಜಕ್ಕೂ ಆತಂಕಕಾರಿ ವಿಚಾರ. ಅಲ್ಲದೆ ಬೆಂಗಳೂರಿನಲ್ಲಿ ಅಲ್-ಖೈದಾ ನಂಟು ಹೊಂದಿರುವ ಮಹಿಳೆಯನ್ನು ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಇದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)  ಮತ್ತು ಗುಪ್ತಚರ ವಿಭಾಗಗಳು ಸಂಪೂರ್ಣವಾಗಿ ಹಳಿ ತಪ್ಪಿರುವುದಕ್ಕೆ ಮತ್ತೊಂದು ಉದಾಹರಣೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.


ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣ ಮತ್ತು ದುರ್ಬಲ ಆಡಳಿತದಿಂದ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವೆ ಅಧಿಕಾರಕ್ಕಾಗಿನ ಮೇಲಾಟ ನಡೆಯುತ್ತಿರಬೇಕಾದರೆ, ಗೃಹ ಸಚಿವ ಡಾ. ಪರಮೇಶ್ವರ್ ಅಸಹಾಯಕರಾಗಿ ರಾಜ್ಯವು ಅರಾಜಕತೆಯತ್ತ ಜಾರುವುದನ್ನು ನೋಡುತ್ತಾ ಕುಳಿತಿದ್ದಾರೆ. ಇದರ ಪರಿಣಾಮವಾಗಿ, ರಾಜ್ಯದ ಜನರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ಎದುರಾಗುತ್ತಿದೆ. ಸರ್ಕಾರದ ಈ ಅಸಮರ್ಥತೆ ಆಡಳಿತದಿಂದಾಗಿ ರಾಜ್ಯದ ಆಂತರಿಕ ಭದ್ರತೆ ಗಂಭೀರ ಅಪಾಯದಲ್ಲಿದೆ ಎಂದು ಕ್ಯಾ. ಚೌಟ ಆರೋಪಿಸಿದರು.


ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕಸಿದ ಕಾಂಗ್ರೆಸ್ ಸರ್ಕಾರ

ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಾಲ್ತುಳಿತವಾದಾಗ, ಕಾಂಗ್ರೆಸ್ ಸರ್ಕಾರ  ಇಡೀ ಪೊಲೀಸ್ ಇಲಾಖೆಯ ಮೇಲೆ ತಪ್ಪು ಹೊರಿಸಿ, ಪೊಲೀಸ್‌ ಅಧಿಕಾರಿಗಳನ್ನು  ಬಲಿಪಶು ಮಾಡಲಾಯಿತು. ತನಿಖೆ ಪೂರ್ಣಗೊಳ್ಳುವ ಮೊದಲೇ ಪೊಲೀಸ್ ಆಯುಕ್ತರು ಸೇರಿದಂತೆ ಐದು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಯಿತು. 


ಇಂತಹ ಘಟನೆಗಳು ಮತ್ತು ರಾಜಕೀಯ ಹಸ್ತಕ್ಷೇಪಗಳು ಪೊಲೀಸರ ನೈತಿಕ ಸ್ಥೈರ್ಯವನ್ನು ಸಂಪೂರ್ಣ ವಾಗಿ ಕುಸಿಯುವಂತೆ ಮಾಡಿವೆ ಎಂದು ಇದೇ ವೇಳೆ ಕ್ಯಾ. ಚೌಟ ಅವರು ರಾಜ್ಯದ ಕಾನೂನು-ಸುವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top