ಮೊಸರು ಕುಡಿಕೆಯೊಂದಿಗೆ ಕೃಷ್ಣಾಷ್ಟಮಿಯ ಸಂಭ್ರಮ

Upayuktha
0


ಭಾರತದಲ್ಲಿ ಆಚರಿಸುವ ಹಲವಾರು ಹಬ್ಬಗಳಲ್ಲಿ 'ಕೃಷ್ಣ ಜನ್ಮಾಷ್ಟಮಿ' ಪ್ರಮುಖವಾದುದು.ಶ್ರಾವಣ ಮಾಸದ ಕೊನೆಯಲ್ಲಿ ಭಾದ್ರಪದ ಮಾಸದ ಆರಂಭದಲ್ಲಿ  ಅಷ್ಟಮಿಯ ರಾತ್ರಿ ಶ್ರೀ ಕೃಷ್ಣ ಹುಟ್ಟಿದ ಎಂದೂ ಪುರಾಣಗಳು ಹೇಳುತ್ತವೆ. ಈ ದಿನವನ್ನು ಕೃಷ್ಣ ಜನ್ಮಾಷ್ಟಮಿ, ಗೋಕುಲಾಷ್ಟಮಿ  ಎಂದೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ಗೋಪಿಲೋಲನಾದ ಮುರಾರಿಗೆ ವಿವಿಧ ಬಗೆಯ ನೈವೇದ್ಯಗಳನ್ನು, ಸಿಹಿತಿನಿಸುಗಳನ್ನು ಅರ್ಪಿಸಿ ಪೂಜಿಸುತ್ತಾರೆ.ಕೆಲವರು  ಉಪವಾಸ ಮಾಡುವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ.ಇನ್ನೂ ಕೆಲವೆಡೆ 'ಕೊಟ್ಟಿಗೆ' ಕಟ್ಟುವುದು ವಾಡಿಕೆಯಾಗಿದೆ. ಆದರೆ ಈ ಹಬ್ಬದ ಪ್ರಮುಖ ಆಕರ್ಷಣೆ ಎಂದರೆ 'ಮೊಸರು ಕುಡಿಕೆ' ಉತ್ಸವ ವಾಗಿದೆ.


ಒಂದು ಪ್ರದೇಶದ ಜನರೆಲ್ಲ ಒಂದುಗೂಡಿ ಸಂಭ್ರಮಿಸುವ ಈ ಉತ್ಸವದಲ್ಲಿ ಹಲವಾರು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಮೊಸರು ಕುಡಿಕೆಯನ್ನು ಬಾಲಕೃಷ್ಣನ ತುಂಟಾಟಗಳ ಸವಿನೆನಪಿನ ಹಿನ್ನೆಲೆಯಲ್ಲಿ ಏರ್ಪಡಿಸಲಾಗುತ್ತದೆ. ಒಂದು ಮಣ್ಣಿನ ಕುಡಿಕೆಯಲ್ಲಿ ಮೊಸರು,ಹಾಲು ಅಥವಾ ಬೆಣ್ಣೆ ಯನ್ನು ತುಂಬಿಸಿ ಕಡಿಮೆ ಎಂದರು  ಹತ್ತು ಅಡಿಯಷ್ಟು ಎತ್ತರದಲ್ಲಿ ನೇತು ಹಾಕಲಾಗಿರುತ್ತದೆ. ಇದನ್ನು ಕಣ್ಣಿಗೆ ಬಟ್ಟೆ ಕಟ್ಟಿ ಉದ್ದನೆಯ ಒಂದು ಕೋಲಿನ ಸಹಾಯದಿಂದ ಒಡೆಯುವುದೇ ಸ್ಪರ್ಧೆಯಾಗಿರುತ್ತದೆ. ಇನ್ನು ಹೆಚ್ಚಿನ ಕಡೆಯಲ್ಲಿ ಯುವಕರೆಲ್ಲ ಸೇರಿ ಮಾನವ ಪಿರಮಿಡ್ ಮಾಡುವ ಮೂಲಕ ಇದನ್ನು ಒಡೆದು ಸಂಭ್ರಮಿಸುತ್ತಾರೆ. ಯಾರು ಈ ಮಡಿಕೆಯನ್ನು ಒಡೆಯುವಲ್ಲಿ ಯಶಸ್ವಿಯಾಗುತ್ತಾರೋ ಅವರೇ ವಿಜೇತರೆಂದು ಘೋಷಣೆಯಾಗುತ್ತದೆ. ಇದೊಂದು ಮನೋರಂಜನೆಯನ್ನು ನೀಡುವಂತಹ ಆಟವಾಗಿದೆ. ಈ ಪರ್ವದಲ್ಲಿ ಬೇರೆ ಆಟಗಳು ಇದ್ದರೂ ಕುಡಿಕೆಯನ್ನು ಓಡೆಯುವ ಆಟವೇ ಮುಖ್ಯ ಪಾತ್ರಧಾರಿಯಾಗಿದೆ. ಇದನ್ನು ಆಡಲು ಬರುವವರು ಒಂದಷ್ಟು ಮಂದಿಯಾದರೆ ಬರೀ ನೋಡಿ ಮನೋರಂಜನೆ ಪಡೆದುಕೊಳ್ಳಲೆಂದು ಬರುವವರು ಸಾವಿರಾರು ಮಂದಿ. ಇದು ಸ್ಪರ್ಧಿಗಳಿಗೆ ಅದೆಷ್ಟು ಆನಂದ ನೀಡುತ್ತದೆ ಎಂಬುದು  ಅವರಿಗೆ ಮಾತ್ರ ಗೊತ್ತು ಆದರೆ ಸ್ಪರ್ಧಿಗಳು ಆಡುವ ಆಟವನ್ನು ನೋಡಿ ಸಿಗುವ ಆನಂದ ಮಾತ್ರ ಅಪರಿಮಿತವಾದದ್ದು.


ಮೊಸರು ಕುಡಿಕೆ ಉತ್ಸವವನ್ನು ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಾಣಬಹುದು. ಪ್ರತಿ ಗ್ರಾಮಕ್ಕೆ ಒಂದರಂತೆಯಾದರೂ ಆಯೋಜನೆ ಆಗಿರುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ಯುವಕರು ಮುದುಕರವರೆಗೂ ಈ ಉತ್ಸವದ ಪ್ರೇಮಿಗಳೇ ಆಗಿದ್ದಾರೆ. ಇದರಲ್ಲಿರುವ ಇನ್ನೊಂದು ಆಕರ್ಷಣೆ ಎಂದರೆ ಬಾಲಕೃಷ್ಣರು. ಹೌದು..! ಗ್ರಾಮದ ಚಿನ್ನರಿಗೆ ಮುದ್ದಾಗಿ ಬಾಲಕೃಷ್ಣನ ವೇಷವನ್ನು ಧರಿಸಿ ಬೆಣ್ಣೆ ಮೊಸರು ಸವಿಯುವಂತಹ, ಮಕ್ಕಳೊಂದಿಗೆ ದೊಡ್ಡವರು ನೋಡಿ ಖುಷಿ ಪಡುವಂತಹ ಮುದ್ದಾದ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಇದೇ ರೀತಿಯಲ್ಲಿ ಎಲ್ಲರೂ ವರ್ಷಪೂರ್ತಿ ನೆನಪಿಡುವಂತಹ ಹಲವಾರು ಆಟೋಟಗಳ ಆಯೋಜನೆಯಾಗಿರುತ್ತದೆ. ಒಟ್ಟಿನಲ್ಲಿ ಮುಂದಿನ ಅಷ್ಟಮಿ ಬರುವವರೆಗೂ, ನೆನೆದಾಗ ಮನದಲ್ಲಿ ನಗುತರಿಸುವಂತೆ ಹೃದಯದ ತುಂಬಾ ಸೊಗಸಾದ ನೆನಪುಗಳನ್ನು ತುಂಬಿರುತ್ತದೆ ಈ ಮೊಸರುಕುಡಿಕೆ ಉತ್ಸವ.


- ಪ್ರಿಯಾ ಶ್ರೀವಿಧಿ 

ದ್ವಿತೀಯ ಪತ್ರಿಕೋದ್ಯಮ ವಿಭಾಗ 

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top