ಮಂಗಳೂರು: ಕೆನರಾ ಕಾಲೇಜಿನ ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲದ ವತಿಯಿಂದ ಕೊಂಕಣಿ ಮಾನ್ಯತಾ ದಿವಸವನ್ನು ಇಂದು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಿವೃತ್ತ ಶಿಕ್ಷಕಿ ಹಾಗೂ ವಿಶ್ವ ಕೊಂಕಣಿ ಯುಟ್ಯೂಬ್ ಚಾನೆಲ್ ನ ನಿರೂಪಕಿ ಶ್ರೀಮತಿ ಚಂದ್ರಿಕಾ ಮಲ್ಯ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಂಕಣಿ ಭಾಷೆಯು ಒಂದು ಸ್ವತಂತ್ರ ಭಾಷೆಯಾದ ಕಾರಣ ಸಂವಿಧಾನದ 8ನೇ ಪರಿಚ್ಛೇದದಲ್ಲಿ ರಾಷ್ಟ್ರೀಯ ಮಾನ್ಯತೆ ದೊರೆತಿದೆ. ನಮ್ಮ ಭಾಷೆಗೆ ಮಾನ್ಯತೆ ದೊರೆತು ಅದರ ಅಭಿವೃದ್ಧಿ ಆಗಬೇಕಾದರೆ ನಾವು ಅದರ ಸಾಹಿತ್ಯ ರಚನೆಯ ಕಡೆಗೆ ಗಮನಹರಿಸಬೇಕಾದ ಅಗತ್ಯತೆ ಇದ್ದು ಆಗಲೇ ಆ ಭಾಷೆಯು ಸಮೃದ್ಧಿ ಆಗುವುದು. ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇರುವುದು. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅನೇಕ ಮಹಾನ್ ಸಾಹಿತಿಗಳು ಬರೆದ ಪುಸ್ತಕಗಳನ್ನು ಓದಿ ಸಾಹಿತ್ಯ ರಚನೆಯ ಆಸಕ್ತಿಯ ಕಡೆಗೆ ಗಮನಹರಿಸಿ ಭಾಷೆಯನ್ನು ಅಭಿವೃದ್ಧಿ ಪಡಿಸುವ ಅನಿವಾರ್ಯತೆ ಇದೆ ಎಂದರು.
ಭಾಷೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದಿ ಭಾಷೆಯನ್ನು ಉಳಿಸಿ ಬೆಳೆಸಿದಾಗ ನಿಜವಾಗಿಯೂ ರಾಷ್ಟ್ರೀಯ ಮಾನ್ಯತೆ ಆಚರಣೆ ಮಾಡಿದ ಖುಶಿ ದೊರಕುವುದು. ಭಾಷೆಯನ್ನು ಬೆಳೆಸುವಲ್ಲಿ ಸಮಾಜದ ಪ್ರತಿಯೊಬ್ಬರ ಕೊಡುಗೆಯ ಅಗತ್ಯ ಇರುವುದು ಎಂದು ಅವರು ನುಡಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ದೇಜಮ್ಮ ಅವರು ಭಾಷೆಯು ಒಂದು ಸಂಸ್ಕೃತಿಯ ಪ್ರತೀಕವಾಗಿದೆ. ಯಾವುದೇ ಒಂದು ಭಾಷೆಯು ನಶಿಸಿದರೆ ಇಡೀ ಸಂಸ್ಕೃತಿ ನಶಿಸಿದ ಹಾಗೆ. ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಕಾರಣಕರ್ತರಾದವರಿಗೆ ನಾವು ಚಿರಋಣಿಗಳಾಗಿರಬೇಕು. ಬಹಳ ವೈಶಿಷ್ಟ್ಯತೆಯನ್ನು ಇಟ್ಟುಕೊಂಡ ಈ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಯ ತನಕ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಯುವಕ ಯುವತಿಯರ ಹೆಗಲ ಮೇಲಿದೆ ಎಂದು ನುಡಿದರು.
ಕುಮಾರಿ ನಿಧಿ ಶೆಣೈ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಹನಿ ಶೆಣೈ ಅವರು ವಂದಿಸಿ, ಶ್ರೇಯಸ್ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಅಕ್ಷಯ ಶೆಣೈ, ಸಂಜನಾ ಶೆಣೈ, ವಿನುತಾ ಕಾಮತ್, ಪ್ರಾರ್ಥನಾ ಭಟ್, ಸಮೃದ್ಧಿ ಕಾಮತ್ ಇವರಿಂದ ಭಜನೆ, ವರುಣ್ ಕಾಮತ್ ಅವರಿಂದ ತಬಲ ವಾದನ ಹಾಗೂ ಕುಮಾರಿ ಪ್ರತಿಕ್ಷ ಪಿ.ಕಾಮತ್ ಸಮೃದ್ಧಿ ಕಾಮತ್ ಅವರ ಸ್ವರಚಿತ ಕೊಂಕಣಿ ಕವನ ವಾಚನ ನಡೆಯಿತು.
ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲದ ಸಂಯೋಜಕಿ ಶ್ರೀಮತಿ ಸುಜಾತ ಜಿ. ನಾಯಕ್ ಹಾಗೂ ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲದ ಕಾರ್ಯದರ್ಶಿ ಕುಮಾರಿ ಅನನ್ಯ ಭಟ್ ಮತ್ತು ಸಹ ಕಾರ್ಯದರ್ಶಿ ಕುಮಾರಿ ಹನಿ ಕಾಮತ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

