ಲೇಖಕಿ ವಿಜಯಾ ಸುಬ್ರಹ್ಮಣ್ಯ ಅವರಿಗೆ ಕಾಸರಗೋಡು ಕಸಾಪ ಸನ್ಮಾನ

Upayuktha
0
ವಿಜಯಾ ಸುಬ್ರಹ್ಮಣ್ಯ ಅಪರೂಪದ ಮಹಿಳಾ ಸಾಧಕಿ: ವಿ.ಬಿ ಕುಳಮರ್ವ



ಕುಂಬಳೆ: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 'ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ'ಎಂಬ ಕಾರ್ಯಕ್ರಮದ ಅಂಗವಾಗಿ  ಸಾಹಿತಿ ಶ್ರೀಮತಿ  ವಿಜಯಾ ಸುಬ್ರಹ್ಮಣ್ಯ, ಕುಂಬಳೆ ಅವರನ್ನು ನಾರಾಯಣ ಮಂಗಲದಲ್ಲಿರುವ ಅವರ ನಿವಾಸ 'ಕಾರ್ತಿಕೇಯ'ದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ವಿಜಯಾ ಸುಬ್ರಹ್ಮಣ್ಯ ಅವರನ್ನು ಶಾಲು ಹೊದೆಸಿ ಅಭಿನಂದಿಸಿದರು.


ಹಿರಿಯ ಸಾಹಿತಿ ವಿ.ಬಿ ಕುಳಮರ್ವ ಅಭಿನಂದನಾ ಭಾಷಣ ಮಾಡಿದರು. ವಿಜಯಾ ಸುಬ್ರಹ್ಮಣ್ಯ ಅವರು ಲೇಖಕಿ, ಕಥೆಗಾರ್ತಿ ಮಾತ್ರವಲ್ಲ ಉತ್ತಮ ಸಂಘಟಕರೂ ಆಗಿದ್ದಾರೆ. ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ ಸಂಚಾಲಕಿಯಾಗಿ, ಮುಜುಂಗಾವಿನ ಭಾರತೀ ವಿದ್ಯಾಲಯದ ಗ್ರಂಥ ಪಾಲಕಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾದುದು. 'ಹೊಂಗಿರಣ' ಕಥಾ ಸಂಕಲನ, 'ವಿಜಯ ವಿಕಾಸ'- ಆತ್ಮಕಥೆ  ಸೇರಿದಂತೆ ವೈವಿಧ್ಯ ಪೂರ್ಣವಾದ 11 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಪುರಾಣ ಪುನೀತೆಯರು, ಪುರಾಣ ಪುರುಷರತ್ನಗಳು ಮೊದಲಾದ ಅಂಕಣಗಳು ವಿದ್ಯಾರ್ಥಿಗಳಲ್ಲಿ ಪುರಾಣಗಳ ಕುರಿತು ಆಸಕ್ತಿ ಮೂಡಿಸಿ ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸಿದೆ ಎಂದು ಕುಳಮರ್ವ ಹೇಳಿದರು.


ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್ ಮೂಡಿತ್ತಾಯ, ಖ್ಯಾತ ಕಥೆಗಾರ್ತಿ ಸ್ನೇಹಲತಾ ದಿವಾಕರ್, ನ್ಯಾಯವಾದಿ ಥೋಮಸ್ ಡಿ'ಸೋಜ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾ ಲಕ್ಷ್ಮಿ ವಿಜಯಾ ಸುಬ್ರಹ್ಮಣ್ಯ ಅವರ ವ್ಯಕ್ತಿತ್ವ, ಬದುಕು, ಬರಹಗಳ ಬಗ್ಗೆ ಮಾತನಾಡಿದರು. ವೆಂಕಟ ಕೃಷ್ಣ ಶಂಕರ ಮೂಲೆ, ಸುನೀತಿ ಮುಜುಂಗಾವು ಉಪಸ್ಥಿತರಿದ್ದರು.  


ವಿಜಯಾ ಸುಬ್ರಹ್ಮಣ್ಯ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಧನ್ಯವಾದ ಸಮರ್ಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top