ಕಥೆ: ಆತಂಕ (ಭಾಗ-2)

Upayuktha
0


ಆನೆ ಬಂತೊಂದಾನೆ ಬಂತಮ್ಮಮ್ಮಾ....


ಆ ನಂತರ ರಾಯರ ಅಕ್ಕನ ಮನೆಯ ವರು ಒಂದಷ್ಟು ಸಹಾಯ ಮಾಡಿ ರಾಯರ ಕುಟುಂಬವನ್ನು ಆರ್ಥಿಕ ಚೇತರಿಕೆ ಉಂಟು ಮಾಡಿದ್ದರು.‌ ಅವರದ್ದೂ ರೈತ ಕುಟುಂಬ ಆದ್ದರಿಂದ ಅವರು ರಾಯರಿಗೆ ಸಮಯೋಚಿತ ಸಹಾಯ ಮಾಡಿದ್ದರು.


ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಕಾಡನ್ನ‌ ರಾಯರಿಗೆ ಇನ್ಸೂರೆನ್ಸ್ ಹಣ ಬಂದಾಗ ತಾವೂ ಒಂದಷ್ಟು ತನು ಮನ ಧನ ಸೇರಿಸಿ ತೋಟ ಮಾಡಲು ಸಹಕಾರ ನೀಡಿದ್ದರು. ಕಾಡನ್ನ ಸವರಿ  ಮರಗಸಿ ಮಾಡಿ ಕಾಫಿ ಕಾಳುಮೆಣಸು ನೆಡೆಸಲು ಸಹಾಯ ಮಾಡಿದ್ದರು. ಗದ್ದೆಯಲ್ಲಿ ಹುಲ್ಲು ಬೆಳಸಿ ಒಂದು ನಾಕು ಹೆಚ್ ಎಫ್ ಹಸುಗಳನ್ನು ಕೊಡಿಸಿದ್ದರು. ಈ ಹಸುಗಳಿಂದ ದಿನದ ಖರ್ಚಿಗೆ ಹಣ ಮತ್ತು ತೋಟಕ್ಕೆ ಉತ್ತಮ ಗೊಬ್ಬರ ಲಭ್ಯವಾಗಿತ್ತು. ಕಾಳುಮೆಣಸು ಫಸಲು ಕಾಫಿ ಫಸಲು ಬಂದ ಕೆಲವೇ ವರ್ಷಗಳಲ್ಲಿ ರಾಯರು ಆರ್ಥಿಕವಾಗಿ ಚಿಗಿತುಕೊಂಡಿದ್ದರು.


ಆದರೆ ಪಾರ್ವತಮ್ಮನ ತಿರುಗಾಟದ ಖಾಯಿಲೆ ವಾಸಿಯಾಗಿರಲಿಲ್ಲ..!! ಈ ವಿಪರೀತ ತಿರುಗಾಟದ ಕಾರಣಕ್ಕೆ ಪಾರ್ವತಮ್ಮನ ಬೆನ್ನು ನೋವು ತೀವ್ರವಾಗಿ ಮನೆಯಲ್ಲೇ ಉಳಿದು ಗಂಡನ ಕೈಗೆ ಬೀಳುವಂತಾದರು. ಅತ್ತಿಗೆ ಹೇಳಿದ ಮಾತು ನಿಜವಾಗಿತ್ತು. ಆದರೆ ರಾಯರು ಒಂದೇ ಒಂದು ಸರ್ತಿಯೂ ಹೆಂಡತಿಯನ್ನು ತಾತ್ಸಾರ ಮಾಡದೆ ಪ್ರೀತಿಯಿಂದಲೇ ನೋಡುತ್ತಿದ್ದರು.


ಪಾರ್ವತಮ್ಮ ಈಗ ಗಂಡ ರಾಯರಿಗೆ ಸಂಪೂರ್ಣ ಡಿಪೆಂಡ್ ಆಗಿದ್ದರು. ರಾಯರು ಆಗಲೂ ಈಗಲೂ ಒಂದು ಬಗೆಯ ನಿರ್ಲಿಪ್ತರು. ಯಾವುದಕ್ಕೂ ಹಿಗ್ಗದ ಕುಗ್ಗದ ಸ್ಥಿತಪ್ರಜ್ಞರಾಗಿದ್ದರು. ರಾಯರು ಪಾರ್ವತಮ್ಮ ಬೆನ್ನಿಗೆ ಔಷಧ ಹಾಕಿ ಮಸಾಜು ಮಾಡುವಾಗ ಪಾರ್ವತಮ್ಮ ಕ್ಷಣ ಕ್ಷಣಕ್ಕೂ ಕುಗ್ಗಿ ಹೋಗು ತ್ತಿದ್ದರು. ಗಂಡನಿಗೆ ನಾನೇ ಸಸಾರ ಮಾಡಿ ಗಂಡನ ಬಳಿಯೇ ಸೇವೆ ಮಾಡಿಸಿ ಕೊಳ್ಳುವಂತಾಯಿತಲ್ಲ...!! ಅಂತ ಪಶ್ಚಾತ್ತಾಪ ಮೂಡುವಂತಾಗಿತ್ತು. 


ಆಗ ಗಂಟೆ ಮೂರು. ಗಂಟೆ ಮೂರಾದರೂ ಗಂಡನ ಸುಳಿವಿಲ್ಲ. ಕ್ಷಣ ಕ್ಷಣಕ್ಕೂಮಳೆಯ ತೀವ್ರತೆ ಏರುತ್ತಿದೆ. ಒಂದು ಮಳೆ ನಿತ್ತು ಕೆಲ ಕ್ಷಣದಲ್ಲೇ ಮತ್ತೆ  ಭಾರೀ ಗಾಳಿ  ಮಳೆ...!! ಪಾರ್ವತಮ್ಮ ನಿಗೆ ಬಾಯಿ ಚಪ್ಪೆ ಚಪ್ಪೆ. ಇದಾಗದಲ್ಲ ಇವರನ್ನು ಹುಡುಕಿಕೊಂಡು ಹೋಗದೇ ಸೈ ಅಂದುಕೊಂಡರು. 

ಆದರೆ ಈ ಬಿರು ಮಳೆಗಾಳಿಯಲ್ಲಿ ತಾನು ಒಂದೂವರೆ ಕಿಲೋಮೀಟರ್ ನ ದೂರದ ಗದ್ದೆ ತೋಟದ ತನಕ ನೆಡೆದು ಹೋಗೋದು ಹೌದಾ...?

ಹೌದು ಪಾರ್ವತಮ್ಮ ನಿಗೇನೂ ಎಂಬತ್ತು ವರ್ಷ ಅಲ್ಲ. ಬರೀ ಐವತ್ತನಾಲ್ಕು ವರ್ಷ. ಆದರೂ ಅಕಾಲ ವೃದ್ಯಾಪ್ಯ. ಆದರೆ ಸಮಯ ಸಂದರ್ಭದಲ್ಲಿ ಕುಂಟನೂ ಓಡುವ ಅನಿವಾರ್ಯ ಉಂಟಾಗುತ್ತದೆ. ಇಲ್ಲೂ ಹಾಗೆಯೇ ಆಯಿತು.


ಪಾರ್ವತಮ್ಮನಿಗೆ ಈ ಮೂವತ್ತನಾಲ್ಕು ವರ್ಷಗಳಲ್ಲಿ ಇದೊಂದು ಹೊತ್ತು ಬಿಟ್ಟರೆ ಇನ್ಯಾವತ್ತೂ ಗಂಡ ರಾಯರಿಲ್ಲದಿದ್ದರೆ ತನ್ನ ಭವಿಷ್ಯ ಏನೆಂಬ ಭಯ ಆತಂಕ ಮೂಡಿರಲಿಲ್ಲ. ಜಗತ್ತಿನಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳೋದೋ. ಅದೆಂಥದೇ ತರದ ಸೇವೆ ಮಾಡೋದೋ ಗಂಡ ಹೆಂಡತಿಗಿಂತ ಇನ್ಯಾರೂ ಅಲ್ಲ. ಗಟ್ಟಿ ಯಿದ್ದಾಗ ಯಾರಿಗೆ ಯಾರೂ ಬೇಡ. ಪಾರ್ವತಮ್ಮನಿಗೂ ಕಾಲು ಸೋತ ಮೇಲೆಯೇ ಬಂಧು ಬಳಗದವರಿಗೆ ತಮ್ಮ ಮೇಲಿನ ಅಭಿಮಾನ ಪ್ರೀತಿ ಏನೆಂದು ಅರ್ಥವಾಗಿದ್ದು. ತಮ್ಮ ಜೀವನದಲ್ಲಿ "ಗಂಡ"ನಿಗಿಂತ ನಿಜವಾದ ಗಟ್ಟಿ ಸಂಬಂಧ ಬೇರಾವುದೂ ಇಲ್ಲ ಎಂಬ ಮಹತ್ವದ ವಿಚಾರ ಅರ್ಥವಾಗಿದ್ದು. ಅಕಸ್ಮಾತ್ತಾಗಿ "ಇವರಿಗೇನಾದರೂ ಆದರೆ...."".... ನನ್ನ ಯಾರು ನೋಡ್ತಾರೆ?


ಇವರಿಗೇನಾಯಿತು? ಇವರು ಯಾಕೆ ಇಷ್ಟೊತ್ತಾದರೂ ಮನೆಗೆ ಬರಲಿಲ್ಲ? ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ತಾಲ್ಲೂಕಿನಲ್ಲಿ ದಿನಕ್ಕೊಂದು ಕಾಡು ಪ್ರಾಣಿಗಳಿಂದ ಮಾನವ ಹತ್ಯೆ ಸುದ್ದಿಯಾಗುತ್ತಿದೆ. ಒಂದು ಕಡೆ ಆಕಾಶ ಸೋರಿಹೋದಂತೆ ಬೀಳುತ್ತಿರುವ ಮಳೆ. 

ಇನ್ನೊಂದು ಕಡೆಯಲ್ಲಿ ಅಲ್ಲಲ್ಲಿ ಕಾಡು ಪ್ರಾಣಿಗಳ ಓಡಾಟ ಎಂಬ ಗುಲ್ಲು...!! ಈ ತರಹದ ಸಮಯದಲ್ಲಿ ಎಂಥಹ ಗಟ್ಟಿ ಮನಸ್ಥಿತಿ ಯವರಿಗಾದರೂ "ನಕಾರಾತ್ಮಕ ವಿಚಾರವೇ" ಮನಸಿಗೆ ಮೂಡುವುದು.


ಪಾರ್ವತಮ್ಮನಿಗೆ ಮಳೆಲಿ ಗಂಡನಿಗೆ ಏನಾದರೂ ಆಯಿತಾ..? ಎಂಬ ಭಯಕ್ಕಿಂತ ಕಾಡು ಪ್ರಾಣಿಗಳ ದಾಳಿ ಏನಾದರೂ "ಇವರ" ಮೇಲಾಯಿತಾ? ಏನಾದರೂ ಆದರೆ ನನ್ನ ಗತಿ ಏನು? ಹಾಗೇನಾದರೂ ಆನೆ ಕಾಡುಕೋಣಗಳು ತಳಿದೋ ಹಾದೋ ಕೊಲ್ಲುವುದಾದಲ್ಲಿ "ಇವರ" ಜೊತೆಗೆ "ನನ್ನೂ" ಕೊಲ್ಲಲಿ ಎಂಬ ನಿರ್ಧಾರಕ್ಕೆ ಪಾರ್ವತಮ್ಮ ಬಂದರು.


ಕಾಡು ಪ್ರಾಣಿಗಳು ಗಂಡನ ಕೊಂದು ಹೆಂಡತಿನೂ ನಮ್ಮ ಹತ್ತಿರ ಬರಲಿ ಅವಳನ್ನೂ ಕೊಂದು ಬಿಡೋಣ ಅಂತ ಕಾಯ್ತಾವೆಯೇ...? ಆದರೆ ಪಾರ್ವತಮ್ಮ ಅತೀವ ಭಾವೋದ್ರೇಕ ಭಯೋದ್ರಿಕ್ತರಾಗಿದ್ದರು. ಮನೆಯಲ್ಲಿ ನಿಂತೋ ಕೂತೋ ಗಂಡನ ಕಾಯುವ ಪರಿಸ್ಥಿತಿಯಲ್ಲಿರಲಿಲ್ಲ..!!


ಪಾರ್ವತಮ್ಮ ನಿಧಾನವಾಗಿ ಎದ್ದು ಮುಂಚೆಕಡೆ ಬಂದು ಹೂ ಕೊಯ್ಯಲು ಹಾಕಿಕೊಂಡು ಹೋಗ್ತಿದ್ದ ನೂರು ರೂಪಾಯಿ ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಛತ್ರಿ ಹಿಡಿದುಕೊಂಡು ಅಂಗಳಕ್ಕೆ ಕಾಲಿಟ್ಟೇ ಬಿಟ್ಟರು...


ಇದು ಬಹಳ ಸಮಯದ ನಂತರ ಆಕಸ್ಮಿಕ ನಡಿಗೆ... ಬೆನ್ನು ನೋವಿನ ಕಾರಣ ಮನೆ ಯೊಳಗೇ ವಾಕಿಂಗ್ ಅಷ್ಟೇ. ಹೊರಗೆ ಹೋಗುವುದಾದರೆ ಕಾರಿನಲ್ಲಿ ಹೋಗು ತ್ತಿದ್ದರು. ಇತ್ತೀಚಿನ ದಿನಗಳಲ್ಲಿ ದೂರ ನೆಡದದ್ದೇ ಪಾರ್ವತಮ್ಮ ನಿಗೆ ಮರೆತು ಹೋಗಿದೆ.


ಗಂಡನ ಹುಡುಕಿಕೊಂಡು ಹೊಸ ಗದ್ದೆ ತೋಟಕ್ಕೆ ಹೊರಟೇ ಬಿಟ್ಟರು...


ಮನೆ ಗೇಟಿಗೆ ಹೋಗುವ ಅಪ್‌ನಲ್ಲಿ ನಿರಂತರವಾಗಿ ಬಂದ ಮಳೆಗೆ ಹಾಸುಂಬೆ ಗಟ್ಟಿಹೋಗಿ ಅದರಲ್ಲೂ ಅಪರೂಪಕ್ಕೆ ನೆಡೆಯಲು ಹೋಗಿ ಪಾರ್ವತಮ್ಮ ಜಾರಿ‌ ಉರಡಿಬಿದ್ದು ಕೈಲಿ ಹಿಡಿದುಕೊಂಡಿದ್ದ ಛತ್ರಿ ನೆಲಕ್ಕೆ ಊರಿ ಛತ್ರಿ ಪೀಸು ಪೀಸಾತು..!! ಸದ್ಯ ಪಾರ್ವತಮ್ಮನಿಗೆ ಹೆಚ್ಚಿನ ಪೆಟ್ಟು ಆಗಲಿಲ್ಲ.

ಆದರೆ ಪಾರ್ವತಮ್ಮ ಜಾರಿ ಬಿದ್ದೆ ಎಂದು ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ.


ಪಾರ್ವತಮ್ಮ ಬಿದ್ದಲ್ಲಿಂದ ಎದ್ದು ಅಪ್ ಹತ್ತಿ ಮನೆ ಗೇಟ್ ದಾಟಿ ರಸ್ತೆಗಿಳಿದು ಮುಂದೆ ಮುಂದೆ ಸಾಗತೊಡಗಿದರು. ಅರ್ಧ ಕಿಲೋಮೀಟರ್ ದೂರ ಹೋದ ಮೇಲೆ ಒಂದು ಟಾರ್ ರಸ್ತೆ ಸಿಗುತ್ತದೆ. ಆ ಟಾರು ರಸ್ತೆ ದಾಟಿ ಒಂದು ಕಿಲೋಮೀಟರ್ ಕಾನು ಹಾದಿಯಲ್ಲಿ "ಹೊಸ ಗದ್ದೆ" ತೋಟಕ್ಕೆ ಹೋಗಬೇಕು. ಪಾರ್ವತಮ್ಮ ರಸ್ತೆಗೆ ಬರುತ್ತಿದ್ದಂತೆ ಒಂದು ಪಾಚಿ ಕಲರ್ ನ ಜೀಪು ಪಾರ್ವತಮ್ಮನ ನೋಡಿ ನಿಲ್ಲಿಸಿ "ಅಮ್ಮ, ಈ ಘೋರ ಮಳೆಯಲ್ಲಿ ಯಾವ ಕಡೆ  ಹೊರಟಿದ್ದೀರಿ..? ಬೆಳಿಗ್ಗೆ ಈ ಕಾನಿನೊಳಗೆ ಕಾಡಾನೆ ಗುಂಪೊಂದು ಹೋಗಿದೆ ಎಂಬ ಮಾಹಿತಿಯಿದೆ. ದಯವಿಟ್ಟು ಮನೆಗೆ ಹಿಂದುರಿಗಿ " ಎಂದರು.‌ ಅವರು ಫಾರೆಸ್ಟ್‌ನವರು.


ಪಾರ್ವತಮ್ಮ- ಸರ್ ನನ್ನ ಗಂಡ ಈಗ ಬಂದೆ ಎಂದು ಮದ್ಯಾನ ಹನ್ನೊಂದು ಗಂಟೆಯ ಹೊತ್ತಿಗೆ ತೋಟಕ್ಕೆ ಹೋದವರು ಮೂರು ಗಂಟೆಯಾದರೂ ಮನೆಗೆ ಹಿಂದಿರುಗಿಲ್ಲ...!! ನನಗೆ ಭಯವಾಗುತ್ತಿದೆ ಸಾರ್" ಎಂದು ನಡುಗುತ್ತಾ ಹೇಳಿದರು.‌


ಅದಕ್ಕೆ ಫಾರೆಸ್ಟ್ ನವರು- ಅಮ್ಮ ಈ‌ ಬಿರು ಮಳೆಯಲ್ಲಿ ನಿಮ್ಮ ಯಜಮಾನರನ್ನ‌ ಯಾಕೆ ತೋಟಕ್ಕೆ ಕಳಿಸಿದಿರಿ...? ಮೊನ್ನೆಯಿಂದ ಇದೇ ಭಾಗದಲ್ಲಿ ಹನ್ನೆರಡು ಕಾಡು ಕೋಣ ಎಮ್ಮೆಗಳ ಗುಂಪಿದೆ. ಮೊನ್ನೆ ಕೊಪ್ಪದ ಹತ್ತಿರ ಕಾಡುಕೋಣದ ದಾಳಿಯಿಂದ ರೈತರು ತೀರಿಕೊಂಡಿದ್ದಾರೆ, ಬಾಳೆ ಹೊನ್ನೂರಿನ ಸಮೀಪ ಕಾಡಾನೆಗಳ ದಾಳಿಗೊಳಗಾಗಿ ರೈತ ಸತ್ತಿದ್ದಾರೆ. ಅದರಲ್ಲೂ ಇಂತಹ ಕಾಡಿನ ಜಾಗ ತುಂಬಾ ಅಪಾಯ." ಎಂದು ಪಾರ್ವತಮ್ಮ ನ ಮತ್ತಷ್ಟು ಎದೆಗುಂದಿಸಿದರು. 

ಫಾರೆಸ್ಟ್ ನವರು ಪಾರ್ವತಮ್ಮ ನಿಗೆ "ನೀವು ಮನೆಗೆ ಹಿಂದಿರುಗಿ.. ನಿಮ್ಮ ಗಂಡ ಸುರಕ್ಷಿತವಾಗಿ ಮಳೆ ಕಡಿಮೆ ಆದ ಮೇಲೆ ಮನೆಗೆ ಬರುತ್ತಾರೆ.. ನೀವು ಮನೆ ಕಡೆ ಹೊರಡಿ ... ಹೊರಡಿ ... ಎಂದು ಒತ್ತಾಯ ಪೂರ್ವಕವಾಗಿ 

 ಪಾರ್ವತಮ್ಮ ನನ್ನು ಮರಳಿ ಮನೆ ಕಡೆ ತಿರುಗಿಸಿ ಮುಂದೆ ಹೊರಟರು..

ಪಾಚಿ ಜೀಪು ಮರೆ ಆಗುತ್ತಿದ್ದಂತೆ ಪಾರ್ವತಮ್ಮ ಮತ್ತೆ ರಸ್ತೆ ಕಡೆ ಬಂದು ಹೊಸ ತೋಟದ ದಿಕ್ಕಿನಲ್ಲಿ ಹೋಗಲು ಕಾನು ದಾರಿಗೆ ನುಗ್ಗಿದರು.


ಮಳೆ ಇನ್ನಷ್ಟು ಮತ್ತಷ್ಟು ಹೆಚ್ಚಾಗುತ್ತಲೇ ಇತ್ತು.  ಕೊಪ್ಪೆ ಪ್ಲಾಸ್ಟಿಕ್ ಇದ್ದರೂ ಪಾರ್ವತಮ್ಮ ಸುಮಾರು ಒದ್ದೆ ಆಗಿದ್ದರು. ಅ ಕಾನಿನಲ್ಲಿ ಸ್ವಲ್ಪ ದೂರ ಸಾಗುವಷ್ಟರಲ್ಲಿ ಚಟೀರ್ ಎಂಬ ಸದ್ದಿನೊಂದಿಗೆ ದೊಡ್ಡ ನೇರಲ ಮರದ ಹೆರೆ ಮುರಿದು ಧರೆ ಗುರಳುವಾಗ ಅದರ ಕೊಂಬೆಯ ಸೊಪ್ಪೊಂದು ರಪ್ ಎಂದು ಪಾರ್ವತಮ್ಮ ನ ಬೆನ್ನಿಗೆ ಛಾಟಿ ಏಟಿನಂತೆ ಬೀಸಿ ನೆಲಕ್ಕೆ ಬಿತ್ತು.  ಒಂದೆರಡು ಅಡಿ ಪಾರ್ವತಮ್ಮ ಹಿಂದಿದ್ದರೆ ಆ ಮರದ ಬಲವಾದ ಹೆರೆ ಪಾರ್ವತಮ್ಮ ಮೈಮೇಲೆ ಬಿದ್ದು ಪಾರ್ವತಮ್ಮ ನ ಕಥೆ ಮುಗೀತಿತ್ತು.

ಪಾರ್ವತಮ್ಮ ಜೋರಾಗಿ ಕೂಗಿದರು... ಆ ಕಾನು ನಿರ್ಜನ ಪ್ರದೇಶವಾಗಿತ್ತು.. ‌ಜೊತೆಗೆ ಭಾರೀ ಮಳೆ ಗಾಳಿ ಬೇರೆ. ಆ ಸಂಧರ್ಭದಲ್ಲಿ ಯಾರೂ ತೋಟ ಕಾನಿನೊಳಗೆ ಓಡಾಡುವ ಸಾಹಸ ಮಾಡೋಲ್ಲ..!!

ಆದರೂ ಪಾರ್ವತಮ್ಮ ಹಿಂದೆ ಹೋಗಲು ಮನಸು ಮಾಡಲಿಲ್ಲ..!!

ಪಾರ್ವತಮ್ಮ ಮುಂದೆ ಮುಂದೆ ಸಾಗತೊಡಗಿದರು....


ಇದು ಇಪ್ಪತ್ತಾರು ವರ್ಷಗಳಿಂದ ಪಾರ್ವತಮ್ಮ ತಮ್ಮ ಗಂಡನನ್ನು ತಾತ್ಸಾರ ಮಾಡಿದ ತಪ್ಪಿಗೆ ತಾವೇ ಮಾಡಿಕೊಳ್ಳುವ ಶಿಕ್ಷೆಯಾ..?


ಸುಮಾರು ಇಪ್ಪತ್ತೆಂಟು ವರ್ಷಗಳ ಹಿಂದೆ ಗಂಡನ ಜೊತೆಗೆ ಗದ್ದೆ ಕೆಲಸ ಮಾಡುವ ಆಳುಗಳಿಗೆ ತಿಂಡಿ ಊಟ ತಂದು ಕೊಡಲು ಬರುತ್ತಿದ್ದರು. ಪಾರ್ವತಮ್ಮನಿಗೆ ತಮ್ಮ ತೋಟ ಗದ್ದೆ ಇಲ್ಲಿದೆ ಎಂದು ಮಾತ್ರ ಗೊತ್ತು ಹೊರತುಪಡಿಸಿ ಇತ್ತಿಚಿನ ವರ್ಷಗಳಲ್ಲಿ ಈ ತೋಟಕ್ಕೆ ಬಂದಿಲ್ಲ. ಅಂತೂ ಬೀಳುತ್ತಾ ಏಳುತ್ತಾ ತಮ್ಮ ತೋಟದ ಗೇಟಿನ ಬುಡಕ್ಕೆ ಪಾರ್ವತಮ್ಮ ಬಂದೇ ಬಿಟ್ಟರು.


ಅದು ಇಪ್ಪತ್ತೈದು ವರ್ಷಗಳ ಹಿಂದಿನ ಗದ್ದೆ ಜಾಗ ಅಲ್ಲ‌‌.‌ ರಾಯರ ಕೃಷಿ ತಪೋವನ. ಕಾಡನ್ನು ಸಂಸ್ಕರಿಸಿ ಕಾಫಿ ಕಾಳುಮೆಣಸು ಹಾಕಲಾಗಿದೆ. ಗದ್ದೆಯಲ್ಲಿ‌ ಎದೆಎತ್ತರ ಹೈಬ್ರೀಡ್ ಹುಲ್ಲು ಬೆಳೆದಿದೆ. ಆನೆ ಕಾಡುಕೋಣಗಳು ಈ ಹಸಿ‌ ಹುಲ್ಲಿನ‌ ಅಸೆಗೆ ನುಗ್ಗಿರಬಹುದೇ...? 


ಪಾರ್ವತಮ್ಮ ತಮ್ಮಲ್ಲಿ ಅಳಿದುಳಿದ ಶಕ್ತಿ ಬಳಸಿ ಜೋರಾಗಿ "ರೀ ರೀ...‌" ಅಂತ ಕೂಗತೊಡಗಿದರು. ಆದರೆ ಅದಕ್ಕೆ ರಾಯರ "ಆಂ...." ಎನ್ನುವ ಪ್ರತಿಧ್ವನಿ ಬರಲಿಲ್ಲ. ಪಾರ್ವತಮ್ಮ ಈಗ ಕುಸಿದೇ ಹೋದರು. ತಮ್ಮ ಪತಿಯನ್ನು ಆನೆ ಹೊಸಕಿ‌ ಹಾಕಿದೆ ಎಂದು ಭಾವಿಸಿದರು. ಮಳೆ ಬಿಟ್ಟು ಬಿಟ್ಟು ಬರುತ್ತಲೇ ಇತ್ತು.


ಪಾರ್ವತಮ್ಮನ ಹರಿದ ಪ್ಲಾಸ್ಟಿಕ್ ಕೊಪ್ಪೆ. ಪಾರ್ವತಮ್ಮನ ಕಾಲಿನಲ್ಲಿ ನೂರಾರು ಸಂಖ್ಯೆಯಲ್ಲಿ ಮುತ್ತಿಕೊಂಡ ಇಂಬುಳಗಳು ದಾರಾಕಾರವಾಗಿ ಗಂಗಾಧಾರೆಯಂತೆ ರಕ್ತ ಪಾತ ಮಾಡುವಂತೆ ಹರಿಸಿದ್ದವು. ರಕ್ತ ಮಳೆ ನೀರಿನ ಜೊತೆಗೆ ತೊಳೆದು ಹೋಗುತ್ತಿತ್ತು. ಮಳೆ ಬಿಟ್ಟಾಗ ಪಾರ್ವತಮ್ಮ ಕಾಲು ಕೆಂಪು ಬಣ್ಣದ ಶೂ ಹಾಕಿದಂತೆ ಕಾಣಿಸುತ್ತಿತ್ತು.


ಪಾರ್ವತಮ್ಮ ultimate ಆಗಿ ಭಾವೋದ್ರಿಕ್ತರಾಗಿದ್ದರು. ಗಂಡ ರಾಯರಿಲ್ಲದೇ ಬದುಕೇ ಇಲ್ಲ ಎಂಬ ಭಾವ ಗಟ್ಟಿಯಾಗಿತ್ತು. ಒಂದು ಕಾಲದಲ್ಲಿ ದಡ್ಡ ಜೋಬದ್ರ ಅಯೋಗ್ಯ. ನನ್ನ ಪ್ರಾರಬ್ಧ ಕರ್ಮಕ್ಕೆ ಈ ಗಣಸಿನ ಮದುವೆ ಮಾಡಿಕೊಂಡೇ ಎಂದು ಸದಾ ಅನ್ನಿಸುತ್ತಿದ್ದ ಭಾವ ಇದೀಗ ಸಂಪೂರ್ಣ ಬದಲಾವಣೆ ಆಗಿದೆ.


ಖಾಯಿಲೆ ಹೆಂಗಸು ಮನೆಯಿಂದ ಒಂದೂವರೆ ಕಿಲೋಮೀಟರ್ ನ ದುರ್ಗಮ ಹಾದಿಯ ಈ ತೋಟಕ್ಕೆ ಬಂದಿದೆ. ಅಕಸ್ಮಾತ್ತಾಗಿ ಇಲ್ಲಿ ಗಂಡ ಸಿಗದಿದ್ದರೆ ಖಂಡಿತವಾಗಿಯೂ ಪಾರ್ವತಮ್ಮ ಮರಳಿ ಮನೆಗೆ ಸುರಕ್ಷಿತವಾಗಿ ಹೋಗಲಾರರು...!


ಪಾರ್ವತಮ್ಮನವರಿಗೆ ಕಳೆದ ಒಂದು ವರ್ಷದಿಂದ ಶೃಂಗೇರಿ ಕೊಪ್ಪ ಭಾಗದಲ್ಲಿ ತೋಟ ಗದ್ದೆಗಳಿಗೆ ಹೋದ ಕಾಡುಕೋಣಗಳ ದಾಳಿಗೆ, ಆನೆ ತುಳಿತಕ್ಕೆ ಒಳಗಾಗಿ ದುರ್ಮರಣಕ್ಕೆ ಒಳಗಾದ ದುರ್ದೈವಿ ರೈತರು ಜ್ಞಾಪಕವಾದರು. ಆ ಮನೆಗಳಲ್ಲೂ ಅಷ್ಟೇ ಅಲ್ವಾ...? ಹೆಂಡತಿಯ ಬಳಿ "ಒಂಚೂ ತೋಟಕ್ಕೆ ಹೋಗಿ ಬರ್ತೀನಿ ಕಣೆ" ಎಂದು ಹೇಳಿ ಹೋದ ಗಂಡ ಮನೆಗೆ ಬಂದದ್ದು ಕಾಡು ಪ್ರಾಣಿಗಳ ದಾಳಿಯಿಂದ ಹೆಣವಾಗಿ...! ದುರ್ಘಟನೆಗಳು ಮನದಲ್ಲಿ ಹರಿದಾಡಿ ಪಾರ್ವತಮ್ಮ ತನ್ನ ಗಂಡನ ಕಥೆ ಮುಗದೇ ಹೋತು... ಅಂದುಕೊಂಡರು.


ಪಾರ್ವತಮ್ಮ ಅಲ್ಲಿಂದ ಮುಂದೆ ಮುಂದೆ ತೋಟದ ರಸ್ತೆ ಕೊನೆಯಾಗುವ ಜಾಗಕ್ಕೆ ಬಂದು ನಿಂತು ಮತ್ತೆ ಜೋರಾಗಿ "ರ್ರೀ ರ್ರೀ... " ಅಂತ ಕೂಗತೊಡಗಿದರು. ಉತ್ತರ ಬರಲಿಲ್ಲ. ಪಾರ್ವತಮ್ಮ ಜೋರಾಗಿ ಅಳತೊಡಗಿದರು. ಅತ್ತು ಅತ್ತು ಸುಸ್ತಾಯಿತು..

ಅಳು ನಿಲ್ಲುವಾಗ ಮಳೆಯೂ ನಿತ್ತು ಒಂದು ಕ್ಷಣಕ್ಕೆ ಜಗತ್ತು ನಿಶ್ಯಬ್ದವಾಯಿತು. ಆಗ ಒಂದು ಸದ್ದು ಕಟ್ ಕಟ್... ಎಂದು ಕತ್ತಿಯಲ್ಲಿ ಕಡಿಯುವ ಸದ್ದು ಕೇಳತೊಡಗಿತು. ಪಾರ್ವತಮ್ಮನಿಗೆ ಜೀವ ಕಳೆ ಮೂಡಿತು. ಆ ಸದ್ದು ಬಂದ ಜಾಗದತ್ತ ಸಾಗತೊಡಗಿದರು.


ರಾಯರಿಗೆ ಈ ಇಪ್ಪತ್ತೈದು ವರ್ಷಗಳ ಈಚೆ ಗೆ ಇದೊಂದು ಸಮಸ್ಯೆ ಕಾಡುತ್ತಿತ್ತು. ಕೆಲವೊಮ್ಮೆ ಯಾವುದಾದರೂ ಕೆಲಸ ಮಾಡುತ್ತಿದ್ದರೆ ಆ ಕೆಲಸ ಮಾಡುತ್ತಲೇ ಇರುವುದು. ಎಷ್ಟೋ ಹೊತ್ತಿನ ಮೇಲೆ ಸಮಯ ಮೀರಿದ ಜ್ಞಾಪಕ ಆಗೋದು. ಮನೋವೈಜ್ಞಾನಿಕವಾಗಿ ಇದೊಂದು ಖಾಯಿಲೆ.


ತೋಟದ ಅಗಳ ದಂಡೆಯಲ್ಲಿ ಒಂದು ಮರವೊಂದು ಐಬೆಕ್ಸ್ ಬೇಲಿಯ ಮೇಲೆ ಬಿದ್ದು ಐಬೆಕ್ಸ್ ತಂತಿ ಹಾನಿಗೊಳಗಾಗಿತ್ತು. ಮರ ತೆರವು ಮಾಡಿ ತಂತಿಯನ್ನು ಮೊದಲ ಸ್ಥಿತಿ ಗೆ ತಂದು ಐಬೆಕ್ಸ್ ಮರು ಕನೆಕ್ಷನ್ ಮಾಡಬೇಕಿತ್ತು. ಇದನ್ನು ಸರಿಪಡಿಸಲು ಈ ಮಳೆಗಾಳಿ ಯ ಸಂಧರ್ಭದಲ್ಲಿ ಕೂಲಿ ಕಾರ್ಮಿಕರು ಸಿಗೋಲ್ಲ.  ಐಬೆಕ್ಸ್ ಬೇಲಿ‌ ಸರಿಪಡಿಸದಿದ್ದರೆ ಕಾಡುಕೋಣ ಗಳು ಜಮೀನೊಳಗೆ ನುಗ್ಗಿ ಬಿಡಬಹುದು. ಈ ಆತಂಕದಲ್ಲಿ ರಾಯರು ಮೈಮರೆತು ಕೆಲಸ ಮಾಡುತ್ತಲೇ ಇದ್ದರು.


ಅವರಿಗೆ ಸಮಯ ಮೀರಿದ ಪರಿವೇ ಇಲ್ಲ..!! ಇಷ್ಟು ವರ್ಷಗಳಲ್ಲಿ ಅನೇಕ ಬಾರಿ ಹೀಗಾಗಿದೆ. ಹೆಂಡತಿ ಪಾರ್ವತಮ್ಮ ಈ ಬಗ್ಗೆ ಅಥವಾ ಈ ಹಿಂದೆ ಗಂಡನ ಬಗ್ಗೆ ಏನೂ ಕಾಳಜಿ ವಹಿಸುತ್ತಿರಲಿಲ್ಲ.  ಮಕ್ಕಳೂ ಅಪ್ಪ ನ ಬಗ್ಗೆ ಆಸಕ್ತಿ ವಹಿಸಿತ್ತಿರಲಿಲ್ಲ. ಸ್ವತಃ ರಾಯರಿಗೂ ಊಟ ತಿಂಡಿ ಯ ಬಗ್ಗೆ  ಹೆಚ್ಚು ಜಾಗೃತಿ ಆಸಕ್ತಿ ಇರಲಿಲ್ಲ..!!


ಪಾರ್ವತಮ್ಮ ಗಂಡ ಕೆಲಸ ಮಾಡುವಲ್ಲಿಗೇ ಬಂದು ಜೋರಾಗಿ‌ "ರೀ ..." ಅಂತ ಕೂಗಿದರು. ರಾಯರು ಹಿಂತಿರುಗಿ ನೋಡಿದಾಗ ಈ ಘೋರ ಮಳೆಯಲ್ಲಿ ಊಹಿಸಲೂ ಸಾದ್ಯವಾಗದ ಘಟನೆ ಅವರ ಕಣ್ಣೆದುರು ಇತ್ತು...! ಪಾರ್ವತಮ್ಮನ ನೋಡಿ‌ ರಾಯರಿಗೆ ಜೀವ ಮಾನದ ಅಚ್ಚರಿ ಉಂಟಾಯಿತು.

ರಾಯರು ಕತ್ತಿ ಅಲ್ಲೇ ಬಿಸಾಡಿ ಹೆಂಡತಿ ಇದ್ದಲ್ಲಿಗೆ ಬಂದು ಹೆಂಡತಿಯ ರಟ್ಟೆ ಹಿಡಿಯುವಷ್ಟರಲ್ಲಿ ಪಾರ್ವತಮ್ಮ ಕುಸಿದು ಕೂತಿದ್ದರು. ಪಾರ್ವತಮ್ಮ ನನ್ನು ಒಂದು ಬಗೆಯಲ್ಲಿ ಎತ್ತಿಕೊಂಡೇ ತೋಟದ ಅಂಚಿನಲ್ಲಿದ್ದ ಚಿಕ್ಕ ಷೆಡ್ ಗೆ ಕರೆದುಕೊಂಡು ಬಂದು ಕೂರಿಸಿದರು. ಹರಿದ ಕೊಪ್ಪೆ ತೆಗೆದು‌ ಅಲ್ಲಿದ್ದ ಟವೆಲ್ ನಲ್ಲಿ ಪಾರ್ವತಮ್ಮ ತಲೆ ಮೈ ಒರೆಸಿ ಅಲ್ಲಿನ ಚಿಕ್ಕ ಮಂಚದ ಮೇಲೆ ಮಲಗಿಸಿದರು. 


ಸಾಮಾನ್ಯವಾಗಿ ಮನೆಯಿಂದ ದೂರ ಇರುವ ಜಮೀನಿನಲ್ಲಿ ಜಮೀನ್ದಾರರು ಈ ತರಹ ಷೆಡ್ ನಿರ್ಮಾಣ ಮಾಡಿಕೊಂಡಿ‌ರುತ್ತಾರೆ. ತೋಟದ ಕೆಲಸ ಕಾರ್ಯ ನಡೆಯುವಾಗ ಕಾರ್ಮಿಕರಿಗೆ ಊಟ ತಿಂಡಿ ತಯಾರಿಸಿ ಕೊಡಲು, ರೆಸ್ಟ್ ಮಾಡಲು‌ ಉಪಯೋಗ ಆಗುತ್ತದೆ.


ರಾಯರ ಪ್ರಾಥಮಿಕ ಆರೈಕೆಗೆ ಪಾರ್ವತಮ್ಮ ನಿಧಾನವಾಗಿ ಎದ್ದು ಕೂತಿದ್ದರು. ರೂಮಿನ ಮೂಲೆಯಲ್ಲಿದ್ದ ಕಟ್ಟಿಗೆ ಒಲೆಯೊಳಗೆ ಕಟ್ಟಿಗೆ ಹಾಕಿ ಅದರ ಮೇಲೆ  ಡಿಸಲ್ ಸುರಿದು ಬೆಂಕಿ ಹಾಕಿ ಪಾರ್ವತಮ್ಮ ನ ಅಲ್ಲಿ ಕರೆದುಕೊಂಡು ಹೋಗಿ ಕುರ್ಚಿ ಹಾಕಿ ಕೂರಿಸಿ ಮೈ ಬಿಸಿ ಮಾಡಿದರು. ಪಾರ್ವತಮ್ಮ ನ  ಮೈ ತುಂಬಾ ಹತ್ತಿದ್ದ ಇಂಬುಳ ಗಳನ್ನು ಕಿತ್ತು ಬೆಂಕಿಗೆ ಹಾಕಿ‌ ಔಷಧ ಹಚ್ಚಿದರು. ಅಲ್ಲೇ ಗ್ಯಾಸ್ ಸ್ಟೌವ್‌ನಲ್ಲಿ ಬಿಸಿ ಬಿಸಿ ಒಂದು ಲೋಟ ಕಾಫಿ ಮಾಡಿ ಕುಡಿಸಿ ಬಿಸ್ಕತ್ತು ತಿನ್ನಿಸಿದರು.


ಆನೆ ಬಂತೊಂದಾನೆ ಅಮ್ಮಮ್ಮ. ಒಂದು ಕಾಡಾನೆ ಮುರಿದ ದಾಂಪತ್ಯವನ್ನು ಕೂಡಿಸಿ ಒಂದು ಮಾಡಿತ್ತು.


ರಾಯರೂ ಒಂದು ಲೋಟ ಕಾಫಿ ಕುಡಿದು ಹೆಂಡತಿಯನ್ನು ಓಮಿನಿ ಕಾರಿನಲ್ಲಿ ಕೂರಿಸಿ ಮನೆ ಕಡೆ ವಾಹನ ತಿರುಗಿಸಿದರು. ಕಥೆ ಸುಖಾಂತವಾಯಿತು.

ಮಳೆ ಮುಂದುವರೆಯುತ್ತಲೇ ಇತ್ತು. ಆನೆ ಗಳಿ ತುಂಗೆ ದಾಟಿ ಮುಂದೆ ಮುಂದೆ ಸಾಗುತಲಿತ್ತು.


- ಪ್ರಬಂಧ ಅಂಬುತೀರ್ಥ

9481801869


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top