ಆನೆ ಬಂತೊಂದಾನೆ ಬಂತಮ್ಮಮ್ಮಾ....
ಅದು ಶೃಂಗೇರಿ ಸಮೀಪದ ಕಾನುಕೆರೆ ಎಂಬೂರಿನ ಕೃಷಿಕ ಭೂಷಣ ರಾಯರ ಮನೆ. ಭೂಷಣ ರಾಯರಿಗೆ ಅರವತ್ತು ವರ್ಷ ಅವರ ಪತ್ನಿ ಪಾರ್ವತಮ್ಮನಿಗೆ ಐವತ್ತನಾಲ್ಕು ವರ್ಷ. ಮಲೆನಾಡಿನ ಎಲ್ಲಾ ಮನೆಗಳಂತೆ ಐವತ್ತು ವರ್ಷಗಳ ಮೇಲಿನವರ ಮನೆ. ಮಕ್ಕಳು ಎಲ್ಲ ಕಡೆಯಂತೆ ಬೆಂಗಳೂರು.
ಅದು ಬರೀ ಮಳೆಗಾಲವಲ್ಲ ಘೋರ ಮಳೆಗಾಲದ ಒಂದಿನ. ಆಗ ಮದ್ಯಾನ ಎರಡು ಗಂಟೆ. ಒಂದು ದೊಡ್ಡ ಮಳೆ ಬಂದು ಸೂರಂಕಲಲ್ಲಿ ನೀರು ಜಲಪಾತದಂತೆ ಒದಗೆಯ ಮೂಲಕ ನೆಲಕ್ಕೆ ಧುಮುಕುವಾಗ ಶಿವ ತನ್ನ ಜಟೆಯ ಅಡ್ಡ ಹಿಡಿದು ಗಂಗಾವತರಣ ಆಗುವಾಗ ಭೂಮಿ ಅಲ್ಲೋಲ ಕಲ್ಲೋಲ ಆಗದಂತೆ ತಡೆದು ನಿಲ್ಲಿಸಿದಂತೆ ನೀಲಿ ಡ್ರಂ ಒದಗೆಯ ಬಾಯಿಗೆ ತನ್ನ ಒಡಲು ತೆರದು ನಿಂತಿ ಜಲಧಾರೆಯ ದುಷ್ಪ್ರಭಾವವ ತಡೆದು ನಿಂತಿದೆ. ಡ್ರಂ ತುಂಬಿ ತುಂಬಿ ಹೊರಕ್ಕೆ ಅಂಗಳಕ್ಕೆ ನೆಗೆದು ಅಂಗಳದ ಮೂಲಕ ತ್ವಾಟದ ಹಳ್ಳಕ್ಕೆ ಸೇರಿ ತುಂಗೆಯತ್ತ ಸಾಗುತ್ತಿದೆ.
ಭೂಷಣ್ ರಾಯರು ಹನ್ನೆರೆಡು ಗಂಟೆಗೆ ಒಂಚೂ ತ್ವಾಟಕ್ಕೆ ಹೋಗಿದಾರೆ. ಹೋದವರು ಇಷ್ಟು ಹೊತ್ತಾದರೂ ತಮ್ಮ ಪತಿ ಬಂದಿಲ್ಲ ಎಂಬ ಆತಂಕ ಶುರುವಾಗಿದೆ. ಮನೆಯಿಂದ ತೋಟ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಒಂದು ಓಮಿನಿ ಕಾರನ್ನು ತ್ವಾಟಕ್ಕೆ ಹೋಗಿ ಬರೋಕೆ ಇಟ್ಟುಕೊಂಡಿದ್ದಾರೆ. ಸುಮ್ಮನೆ ತ್ವಾಟಕ್ಕೆ ಹೋಗಿ ಬರಕೆ ಒಂದು ಗಂಟೆ ಸಾಕು. ಆದರೆ ಈ ಘೋರ ಮಳೆಯಲ್ಲಿ ಎರಡು ಗಂಟೆ ಆದರೂ ಮನೆಗೆ ವಾಪಸು ಬರಲಿಲ್ಲ...!!
ಶೃಂಗೇರಿ ಕೊಪ್ಪ ಕಳಸ ಬಾಳೆಹೊನ್ನೂರಿನ ಕಡೆ ಈ ಆನೆ ಕಾಡುಕೋಣಗಳ ಹಾವಳಿಯಲ್ಲಿ ತೋಟ ಗದ್ದೆಗೆ ಹೋದವರು ನಿಗದಿತ ಸಮಯಕ್ಕೆ ಮನೆಗೆ ಮರಳಲಿಲ್ಲ ಅಂತಾದರೆ ಮನೆಯವರು ದಿಗಿಲಾಗೋದು ಸಹಜ. ಪಾರ್ವತಮ್ಮನಿಗೂ ಹಾಗೆ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚುಯಿತು. ಈ ಎರಡು ಗಂಟೆ ಸಮಯದ ಕಾಯುವಿಕೆ ಯಲ್ಲಿ ಅದೆಷ್ಟು ಸರ್ತಿ ಬಚ್ಚಲಿಗೆ ಹೋಗಿ ಬಂದರೋ ಆ ಭಗವಂತನೇ ಬಲ್ಲ...!!
ಶೃಂಗೇರಿ ಭಾಗದ ಅಡಿಕೆ ಬೆಳೆಗಾರ ಎಂದಾಕ್ಷಣ ನತದೃಷ್ಟ ಹಳದಿಎಲೆ ಅಡಿಕೆ ಬೆಳೆಗಾರರು ಜ್ಞಾಪಕವಾಗ್ತಾರೆ. ಮಲೆನಾಡಿನ ಈ ಹಳದಿ ಎಲೆ ರೋಗಿಷ್ಟ ತೋಟದ ಅಡಿಕೆ ಬೆಳೆಗಾರರು ಬಯಲು ಸೀಮೆಯ ಬರ ಪೀಡಿತ ರೈತರು ಗುಳೆ ಹೋದಂತೆ, ಬಹಳಷ್ಟು ರೈತರು ಊರು ಬಿಟ್ಟು ಹೋಗಿ ದೇಶಾಂತರ ಆಗಿದ್ದಾರೆ.
ಅನೇಕ ರೈತರು ಹೇಗೋ ಸಾಹಸ ಮಾಡಿ ಈ ರೋಗ ಪೀಡಿತ ತೋಟವನ್ನು ಕಾಫಿ ಕಾಳುಮೆಣಸು ಬೆಳೆಗೆ ಕನ್ವರ್ಟ್ ಮಾಡಿ ಪರ್ಯಾಯ ಬದುಕು ಕಂಡು ಕೊಳ್ಳುತ್ತಿದ್ದಾರೆ. ಹಾಗೆಯೇ ನಮ್ಮ ಭೂಷಣ ರಾಯರೂ ಕೂಡ. ಹದಿನೈದು ಇಪ್ಪತ್ತು ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದ ಭೂಷಣ ರಾಯರ ಅಡಿಕೆ ಉತ್ಪತ್ತಿ ಎರಡು ಕ್ವಿಂಟಾಲು. ಅಡಿಕೆ ಉತ್ಪತ್ತಿ ಕುಸಿಯುವ ತನಕವೂ ಭೂಷಣ ರಾಯರು ಅತ್ಯಂತ ಚಟುವಟಿಕೆಯಿಂದಿದ್ದರು...!! ಆ ನಂತರದ ದಿನಗಳಲ್ಲಿ ರಾಯರು ಒಳಗಿಂದೊಳಗೇ ಕುಸಿದು ಹೋಗಿದ್ದರು. ಬಹಳ ಮಂಕಾಗಿ ಬಿಟ್ಟರು.
ಆ ಮೊದಲು ಊರು ಮನೆ ನೆಂಟರಿಷ್ಟರ ಯಾವುದೇ ಕಾರ್ಯಕ್ರಮಕ್ಕೂ ಸ್ಕೂಟರ್ ನಲ್ಲಿ ಹೆಂಡತಿನ ಕರೆದುಕೊಂಡು ಹೋಗ್ತಿದ್ದರು. ಗಂಡಸು ಕೈ ಕಾಲಿಯಾದ ಮೇಲೆ ದೃತಿಗೆಡ್ತಾನೆ. ಅಂತಹ ಸಂಧರ್ಭದಲ್ಲಿ ಹೆಂಡತಿ ಮಕ್ಕಳು ಗಂಡನ ಜೊತೆಗೆ ಕೈ ಜೋಡಿಸಬೇಕು. ಆದರೆ ಈ ಕುಟುಂಬದಲ್ಲಿ ಹಾಗಾಗಲಿಲ್ಲ. ಭೂಷಣ ರಾಯರು ಮಂಕಾದ ಮೇಲೆ ಗಂಡ ಹೆಂಡತಿ ಹಂತ ಹಂತವಾಗಿ ದೂರಾಗತೊಡಗಿದರು.
ಪಾರ್ವತಮ್ಮ ಗಂಡನ್ನ ಒಬ್ಬನ್ನೇ ಮನೇಲಿ ಬಿಟ್ಟು ಊರು ಸುತ್ತೋಕೆ ಶುರು ಮಾಡಿದರು. ಉತ್ಪತ್ತಿ ಇರಲಿ ಬಿಡಲಿ ಕೃಷಿಲಿ ಕೆಲಸ ಕಮ್ಮಿ ಇರೋಲ್ಲ.
ಭೂಷಣ ರಾಯರು ಬೆಳೆಗೆದ್ದು ಇದ್ದದ್ದು ತಿಂದು ತ್ವಾಟಕ್ಕೆ ಹೋಗ್ತಿದ್ದರು.
ಒಂದೂವರೆ ಕಿಲೋಮೀಟರ್ ದೂರದ ತೋಟಕ್ಕೆ ಮನೆಯಿಂದ ಒಂದು ಫರ್ಲಾಂಗ್ ದೂರದಲ್ಲಿ ಒಂದು ಟಾರು ರೋಡು ದಾಟಿ ಕಾಡು ಕಾಲು ಹಾದಿಯಲ್ಲಿ ಒಂದು ಕಿಲೋಮೀಟರ್ ದೂರ ಹೋದರೆ ಅಲ್ಲಿ ಭೂಷಣ ರಾಯರ ಹೊಸ ತೋಟವಿದೆ. ಅದು ಮೊದಲು ಗದ್ದೆಯಾಗಿತ್ತು. ನಂತರ ಅದನ್ನು ಕಾಫಿ ಸಿಲ್ವರ್ ಕಾಳುಮೆಣಸು ತೋಟವಾಗಿ ಪರಿಶ್ರಮಿ ಭೂಷಣ ರಾಯರು ಬದಲಾವಣೆ ಮಾಡಿ ಯಶಸ್ವಿಯಾಗಿದ್ದಾರೆ. ಮನೆ ಎದುರಿನ ಹದಿನೈದು ಕ್ವಿಂಟಾಲ್ ಅಡಿಕೆ ಆಗುತ್ತಿದ್ದ ತೋಟಕ್ಕೆ ಹಳದಿ ಎಲೆ ರೋಗ ಬಂದ ಮೇಲೆ ಅದನ್ನು ಇನ್ನಿಲ್ಲದ ಪ್ರಯತ್ನ ಮಾಡಿ ಊರ್ಜಿತ ಗೊಳಿಸುವಲ್ಲಿ ವಿಫಲವಾದ ನಂತರ ಅದನ್ನು ಹಾಳು ಬಿಟ್ಟು ಈ ಹೊಸ ತೋಟದ ಕಡೆಗೆ ಗಮನ ಕೊಟ್ಟರು ಭೂಷಣ ರಾಯರು.
ಹೌದು... ರಾಯರು ಹಾಗೆ ಕೃಷಿ ಮಾಡದಿದ್ದರೆ ಹುಚ್ಚು ಹಿಡಿದು ಸಾಯಬೇಕಿತ್ತು. ಹಳದಿ ಎಲೆ ರೋಗ ಬಂದಾಗ ಅಡಿಕೆ ಉತ್ಪತ್ತಿಯ ಉಳಿತಾಯ ಎಲ್ಲಾ ಬ್ಯಾಂಕ್ ಸಾಲ ತೀರಿಸಲೇ ಆಗಿ ಹೋಗಿ ಕೈ ಕಾಲಿಯಾಗಿತ್ತು. ಕೃಷಿ ಬಿಟ್ಟು ಬೇರೇನು ದುಡಿಮೆ ಗೊತ್ತಿಲ್ಲದ ರಾಯರು ಮನೆ ಹೆಂಡತಿ ಮಕ್ಕಳನ್ನು ಹೇಗೆ ನಿರ್ವಹಣೆ ಮಾಡೋದೆಂದು ಹಗಲು ರಾತ್ರಿ ಚಿಂತಿಸಿ ಖಿನ್ನರಾದರು.
ಅತ್ಯಂತ ಲವಲವಿಕೆಯಿಂದ ಹೆಂಡತಿ ಕರೆದುಕೊಂಡು ಸ್ಕೂಟರ್ ಮೇಲೆ ನೆಂಟರಿಷ್ಟರ ಮನೆಗೆ ಸುತ್ತುತ್ತಿದ್ದದ್ದು ಈಗ ಕನಸೇ ಎನ್ನಿಸುವಂತಾಗಿತ್ತು.
ಕೈಲಿ ದುಡ್ಡು ಇಲ್ಲದ ಗಂಡ ಭೂಷಣ ರಾಯರು ಹೆಂಡತಿ ಪಾಲಿಗೆ ಯಾತಕ್ಕೂ ಬಾರದ ಜೋಬದ್ರ ಎನಿಸತೊಡಗಿದರು.
ಪಾರ್ವತಮ್ಮನ ತವರು ಮನೆಯವರು ಈ ಕಷ್ಟ ಕಾಲದಲ್ಲಿ ಪಾರ್ವತಮ್ಮನ ಸಹಾಯಕ್ಕೆ ನಿಂತರು. ಮಗಳು ಮಗನ ಓದಿಗೆ ಮನೆ ಖರ್ಚಿಗೆ ಸಹಾಯ ಮಾಡಿದರು.
ಈ ನಡುವೆ ಅದ್ಯಾವ ಕಾಲದಲ್ಲೋ ಮಾಡಿಸಿದ್ದ ಎಲ್ಲೈಸಿ ಹಣ ಮೆಚ್ಯೂರ್ ಆಗಿ ರಾಯರ ಕೈಗೆ ಬಂದು ಆ ಹಣದಲ್ಲಿ ದೂರದ ಗದ್ದೆಲೆ ಮತ್ತು ಗದ್ದೆ ಪಕ್ಕದ ಹಾಡ್ಯ ಯಾನೆ ಕಾಡಿನಲ್ಲಿ ಕಾಳುಮೆಣಸು ಕಾಪಿ ಹಾಕಿದರು. ಆಗಿನ್ನೂ ಈಗಿನ ತರ ಮಂಗ ಕಾಡು ಕೋಣ ಕಾಡಾನೆಗಳ ಹಾವಳಿ ಇರಲಿಲ್ಲ.
ರಾಯರು ಬೆಳಗೆದ್ದು ಈ ತೋಟಕ್ಕೆ ಬಂದರೆ ಒಂದು ನಾಕೋ ಐದೋ ಗಂಟೆಗೆ ಮನೆಗೆ ಬಂದು ಹೆಂಡತಿ ಅಡಿಗೆ ಮಾಡಿದ್ದರೆ ಉಂಡು ಮಲಗ್ತಿದ್ದರು ಇಲ್ಲ ದಿದ್ದರೆ ತಾವೇ ಅನ್ನ ಗಂಜಿ ಮಾಡಿ ಉಣ್ಣುತಿದ್ದರು.
ಪಾರ್ವತಮ್ಮನಿಗೆ ಅಡಿಕೆ ಹಳದಿ ಎಲೆ ರೋಗ ಬಂದ ಕೂಡಲೇ ಯಾರಿಗೋ ಅಗ್ಗ ಸುಗ್ಗಿಗೆ ಈ ತ್ವಾಟ ಮನೆ ಮಾರಾಟ ಮಾಡಿ ಬೆಂಗಳೂರು ಸೇರುವ ಆಸೆ ಇತ್ತು. ರಾಯರನ್ನ ಯಾವುದೋ ಹೋಟೆಲ್ ನಲ್ಲೋ ಅಂಗಡಿಲೋ ಕೆಲಸಕ್ಕೆ ಸೇರಿಸಿದರೆ ಮನೆ ಬಾಡಿಗೆ ಖರ್ಚು ಆಗಿ ಹೋಗ್ತಿತ್ತು ಎನ್ನುವ ಆಲೋಚನೆ ಪಾರ್ವತಮ್ಮನಿಗೆ ಬಂದಿತ್ತು.
ಆದರೆ ರಾಯರು ಕೃಷಿ ಬದುಕಿಗೆ ಟ್ಯೂನ್ ಆಗಿದ್ದರು. ಪಾರ್ವತಮ್ಮನ ಜಮೀನು ಮಾರಿ ಬೆಂಗಳೂರು ಸೇರಿ ಅಲ್ಲಿ ಯಾರ ಕೆಳಗೋ ಜೀತ ಮಾಡುವ ಮನಸ್ಥಿತಿ ಇರಲಿಲ್ಲ..!! ಇಲ್ಲೇ ಗಂಡ ಹೆಂಡತಿಗೆ ಡಿಫರೆನ್ಸ್ ಬಂತು.
ಮಕ್ಕಳ ವಿಧ್ಯಾಭ್ಯಾಸಕ್ಕೆ, ಸ್ವಲ್ಪ ಮಟ್ಟಿಗೆ ಮನೆ ನಿರ್ವಹಣೆ ಮಾಡಲು ಪಾರ್ವತಮ್ಮನ ಬಳಗದವರು ಹಣಕಾಸಿನ ಸಹಾಯ ಮಾಡಿದರು, ಈ ಋಣಕ್ಕೆ ಪಾರ್ವತಮ್ಮ ಈ ಬಂಧುಗಳ ಮನೆ ಬಾಣಂತನ ಹಬ್ಬ ಹರಿದಿನಗಳಲ್ಲಿ ಬಡ್ಡು ಬಳಿಯಲು ಆ ಕಡೆ ಸುತ್ತ ತೊಡಗಿದರು. ಮೊದಲೇ ವಿಪರೀತ ಸುತ್ತವ ಖಯಾಲಿ ಇದ್ದ ಪಾರ್ವತಮ್ಮನಿಗೆ ಈ ಡಿಸ್ ಅಡ್ವಂಟೇಜು ಒಂದು ಅಡ್ವಂಟೇಜಾಗಿ ಕಾಣಿಸಿತು.
ಈ ನಡುವೆ ಒಂದೈದಾರು ವರ್ಷಗಳಲ್ಲಿ ರಾಯರ ಕಾಳುಮೆಣಸು ಕಾಫಿ ಕೃಷಿ ಫಲ ನೀಡತೊಡಗಿತು. ರಾಯರು ಟನ್ ಗಟ್ಟಲೆ ಕಾಳುಮೆಣಸು ಬೆಳೆದು ದೊಡ್ಡ ಬೆಲೆ ಪಡೆದರು. ಪಾರ್ವತಮ್ಮನ ತವರ ಪೈಕಿ ಸಹಾಯದ ಋಣ ತೀರಿಸಿದರು. ಆದರೆ ತಿರುಗುವ ಚಾಳಿ ಕಲಿತಿದ್ದ ಪಾರ್ವತಮ್ಮ ತಿರಗೋದು ಬಿಡಲಿಲ್ಲ. ಗಂಡನ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದರು.
ಪಾರ್ವತಮ್ಮನಿಗೂ ಈಗ ಐವತ್ತನಾಲ್ಕು ವರ್ಷ ಆಗಿತ್ತು. ಯಾಕೋ ಬೆನ್ನು ಮೂಳೆಯ ನೋವು ಶುರುವಾಗಿ ಈಗ ಮೊದಲಿನಂತೆ ಕಾಲಿಗೆ ಚಕ್ರ ಕಟ್ಟಿ ಕೊಂಡು ತಿರುಗಲಾರದ ಪರಿಸ್ಥಿತಿ ಬಂದಿತ್ತು. ಜೊತೆಗೆ ಕೆಲಸ ಮಾಡಲಾರದ ಪಾರ್ವತಮ್ಮ ಈಗ ಪೈಕಿಯವರಿಗೂ ಬೇಡವಾಗಿದ್ದರು. ಈಗ ಗಂಡ ಭೂಷಣ ರಾಯರೇ ಪಾರ್ವತಮ್ಮ ನಿಗೆ ಗತಿಯಾಗಿತ್ತು.
ಯೌವನದ ಒಂದು ಐದಾರು ವರ್ಷ ಕಾಲ ಬಹಳ ಪ್ರೀತಿ ಕೊಟ್ಟಿದ್ದ ಪಾರ್ವತಮ್ಮ ರಾಯರು ಕೈಸೋತ ನಂತರ ಪ್ರೀತಿ "ಕಟ್ ಆಫ್" ಮಾಡಿದ್ದರು. ಆದರೆ ಹೆಂಡತಿಯ ಈ ಬದಲಾವಣೆಯ ಬಗ್ಗೆ ಯಾವ ಬೇಸರ ನೋವೂ ಇಟ್ಟುಕೊಳ್ಳದ ರಾಯರು ಹೆಂಡತಿ ಕೂತಲ್ಲೇ ತಿಂಡಿ ತೀರ್ಥ ಊಟ ಮಾಡಿ ಬಡಿಸುತ್ತಿದ್ದರು.
ಪಾರ್ವತಮ್ಮ ನಿಗೆ ಈಗ ಗಂಡನ ಸೇವೆ ಅನಿವಾರ್ಯ. ಅರವತ್ತು ವರ್ಷ ವಯಸ್ಸಿನ ರಾಯರು ಈಗಲೂ ಕೃಷಿ ಜಮೀನಿನ ದೇಖಾರೇಖಿ ಬಿಟ್ಟಿರಲಿಲ್ಲ. ಹೆಂಡತಿ ಸೇವೆ ಮಾಡಿ ತೋಟದ ಕಡೆಗೆ ಒಂದು ರೌಂಡ್ ಹಾಕಿಕೊಂಡು ಮನೆಗೆ ಬಂದು ಮತ್ತೆ ಮಧ್ಯಾಹ್ನ ದ ಸ್ನಾನ ಅಹ್ನಿಕ ಮಾಡುತ್ತಿದ್ದರು.
ಸುಮಾರು ಮೂವತ್ತನಾಲ್ಕು ವರ್ಷಗಳ ಪಾರ್ವತಮ್ಮ ರಾಯರ ದಾಂಪತ್ಯದಲ್ಲಿ ಆರೇಳು ವರ್ಷಗಳ ಕಾಲ ಉಚ್ರಾಯ ಸಾಂಸಾರಿಕ ಸುಖ ಪರಸ್ಪರ ಅನುಭವಿಸಿ ಸೋರೆಗೊಂಡಿತ್ತು. ಯಾವಾಗ ಈ ಕುಟುಂಬದ ಆರ್ಥಿಕ ಆಧಾರದ ಮೂಲಕ್ಕೇ ಪೆಟ್ಟು ಬಿತ್ತೋ ಅಲ್ಲಿಂದ ಗಂಡ ಹೆಂಡತಿ ಹಂತ ಹಂತವಾಗಿ ನಾನೊಂದು ತೀರ ನೀನೊಂದು ತೀರ ವಾಗಿದ್ದರು. ಈ ಕಾಲದ ನಗರ ದ ಜೀವನ ಆಗಿದ್ದಿದ್ದರೆ ಗಂಡ ಹೆಂಡತಿ ಡೈವರ್ಸ್ ಆಗ್ತಿತ್ತೇನೋ... ಆದರೆ ಮಕ್ಕಳ ಕಾರಣವೋ ಅಥವಾ ಇನ್ನಾವ ಅಗೋಚರ ಬಾಂಡಿಂಗ್ ಕಾರಣವೋ ಈ ಮೂವತ್ತನಾಲ್ಕು ವರ್ಷದ ಈ ದಾಂಪತ್ಯ ಉಳಿದಿತ್ತು.
ಸುಮಾರು ಇಪ್ಪತ್ತೈದು ಇಪ್ಪತ್ತಾರು ವರ್ಷದ ನಂತರ ಊರೂರು ಸುತ್ತಿ ಕಾಲು ಸೋತಂತಾಗಿ, ಬೆನ್ನೋವು ಶುರುವಾದ ಮೇಲೆ ಪಾರ್ವತಮ್ಮ ಮನೆ ಕಡೆ ಆಗಿದಾರೆ. ತಂಗಿ ತಮ್ಮ ಅಣ್ಣ ಅಕ್ಕ ಮುಂತಾದ ತವರು ಬಳಗಕ್ಕೂ ಬಡ್ಡ್ ಬಳಿಯಲಾಗದ ಅನಾರೋಗ್ಯದ ಕಾರಣಕ್ಕೆ ಪಾರ್ವತಮ್ಮ ಈಗ ಬೇಡವಾಗಿದ್ದರು. ಮಗ ಮಗಳಿಗೆ ಒಳ್ಳೆಯ ಕಡೆ ಮದುವೆ ಆಗಿತ್ತು, ಅವರೂ ಪಟ್ಟಣದ ದಾವಂತದ ಜೀವನದಲ್ಲಿ ಕಳೆದು ಹೋಗಿದ್ದರು. ಬಹಳ ವರ್ಷಗಳಿಂದ ಅಪ್ಪ ಅಮ್ಮರಿಂದ ದೂರದ ಹಾಸ್ಟೆಲ್ ಗಳಲ್ಲೇ ವಿಧ್ಯಾಭ್ಯಾಸದ ಕಾರಣ, ಜೊತೆಗೆ ಅಪ್ಪ ಅಮ್ಮನ ನಡುವೆ ಭಿನ್ನತೆ ಕೂಡ ಇದ್ದದ್ದರಿಂದ ಅಪ್ಪ ಅಮ್ಮ ಮನೆಯ ಬಗ್ಗೆ ಒಂದು ಅಂತರ ಮಕ್ಕಳುಗಳಲ್ಲಿ ಮೂಡಿತ್ತು.
ಗಟ್ಟಿ ಇದ್ದ ಅಮ್ಮ ಗೇಯಕ್ಕೆ ಎಲ್ರಿಗೂ ಬೇಕಿತ್ತು. ಆದರೆ ಈಗ ಬೆನ್ನು ನೋವಿನಿಂದ ಬಳಲುತ್ತಿರುವ ಅಮ್ಮ- ಪಾರ್ವತಮ್ಮ ಅಕ್ಕ ತಂಗಿ ಅತ್ತಿಗೆ ಯಾರಿಗೂ ಬೇಡವಾಗಿದ್ದರು.
ಪಾರ್ವತಮ್ಮ ರಾಯರ ಕುಟುಂಬದ ಆರ್ಥಿಕ ಸ್ಥಿತಿ ಕೈಕೊಟ್ಟ ಕಾಲದಲ್ಲಿ ಪಾರ್ವತಮ್ಮನ ತಾಳಕ್ಕೆ ಕುಣಿಯದ, ಒಂದು ಬಗೆಯಲ್ಲಿ ಮಂಕಾಗಿ ಚುರುಕ್ ನೆಸ್ ಕಳೆದುಕೊಂಡ ಗಂಡ "ರಾಯರ ಬಗ್ಗೆ" ಪಾರ್ವತಮ್ಮನಿಗೆ ಅತೀವ ತಾತ್ಸಾರ ಮೂಡಿತ್ತು. ಅದೊಂದು ವೈದೀಕದಲ್ಲಿ (ಹಿರಿಯರ ವಾರ್ಷಿಕ ತಿಥಿ) ತೀರಾ ಸಸಾರ ಮಾಡಿ ತಮ್ಮ ಗಂಡನ ಕುರಿತು ಪಾರ್ವತಮ್ಮ ರಾಯರ ಅಕ್ಕಂದಿರ ಎದುರು ಹೀಗೆಳೆದಾಗ ಒಬ್ಬ ಅಕ್ಕ ಪಾರ್ವತಮ್ಮನ ಮೇಲೆ ತಿರುಗಿ ಬಿದ್ದು "ತಮ್ಮ"ನ ಡಿಫೆಂಡ್ ಮಾಡಿಕೊಂಡರು.
"ನೋಡು ಪಾರ್ವತಿ ಜೀವನದಲ್ಲಿ ಏಳು ಬೀಳು ಸಾಮಾನ್ಯ. ಗಂಡ ಸೋತಾಗ ಹೆಂಡತಿ ತಾಸಾರ ಮಾಡೋದು ಅಲ್ಲ..!! ಗಂಡನ ಜೊತೆಗೆ ನಿಲ್ಲಬೇಕು.. ದುಡಿಯೋ ಗಣಸರಿಗೆ ಅವಕಾಶ ಕೊಡಬೇಕು. ಯಾವತ್ತೂ ಗಂಡನನ್ನು "ನೀ ಯಾತಕ್ಕೂ ಪ್ರಯೋಜನ ಇಲ್ಲದವನು" ಅಂತ ಹೀಗೆಳಿಬಾರದು.
ಹಿಂದಿನವರು ಸಂಸಾರ ವ್ಯವಸ್ಥೆನ ಸುಮ್ಮನೆ ಮಾಡಿಲ್ಲ..!! ನಾವು ಮನೆ ನ ಬೇಸಿಗೆ ಬಿಸಲನ್ನ, ಮಳೆಗಾಲದಲ್ಲಿ ನೀರಿನಿಂದ, ಚಳಿಗಾಲದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಹ್ಯಾಗೆ ಕಟ್ಟಿಕೋತೀವೋ ಸಂಸಾರನೂ ಅಷ್ಟೇ. ಗಂಡ ದುಡಿಯುವಾಗ ಹೆಂಗೆ ಅವನ ದುಡಿಮೆನ ಹೆಂಡತಿ ಮಕ್ಕಳು ಅನುಭವಿಸಿ ಸುಖ ಪಡ್ತಾರೋ ಹಂಗೆ ಗಂಡನ ಕೈ ಕಾಲಿಯಾದಾಗ ಅವನ ಕೈ ಕಾಲಿ ಅಂತ ದೂರ ಆಗೋದು ಅಲ್ಲ. ಇಬ್ಬರು ಒಟ್ಟು ಸೇರಿ ಕಷ್ಟದ ಜೀವನ ಎದುರಿಸಬೇಕು.
ಅಡಿಕೆ ರೋಗ ಬಂದು ಅದನ್ನೇ ನಂಬಿಕೊಂಡ ನಿನ್ನ ಗಂಡ ಕುಸಿದು ಹೋಗಿದ್ದಾನೆ. ನೀನು ಈ ಸಮಯದಲ್ಲಿ ಅವನ ಒಟ್ಟಿಗೆ ನಿಂತು ದುಡಿಯುವ ದಾರಿ ಹುಡಕಬೇಕು. ಅದನ್ನ ಬಿಟ್ಟು ನೀನು ಕಾಲಿಗೆ ಚಕ್ರ ಕಟ್ಟಿಕೊಂಡು. 'ಆ ಅಕ್ಕ ಈ 'ತಂಗಿ ಆ 'ಅಣ್ಣ ಈ 'ತಮ್ಮ 'ಅವರ ಮನೆ 'ಇವರ ಮನೇನ ಇಲ್ಲಿ ಗಂಡನನ್ನು ಒಂಟಿ ಮಾಡಿ ಸುತ್ತೋದು ಅಲ್ಲ. ನೀನು ತುಂಬಾ ದೊಡ್ಡ ತಪ್ಪು ಮಾಡಿದ್ದಿ. ಒಂದಲ್ಲ ಒಂದು ದಿನ ನೀ ಇವತ್ತು ಸಸಾರ ಮಾಡಿದ ಗಂಡನೇ ನೀ ಸೋತಾಗ ಕೈ ಹಿಡಿಯೋದು ಜ್ಞಾಪಕ ಇಟಕ..." ಎಂದು ಸರಿಯಾಗಿ ತರಾಟೆ ತಗೊಂಡಿದ್ದರು.
ಅತ್ತಿಗೆ ಕಟು ಮಾತಿಗೆ ಪಾರ್ವತಮ್ಮ ಪತರ ಗುಟ್ಟಿ ಹೋಗಿದ್ದರು.
......... ಮುಂದುವರಿಯುವುದು.......
- ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ