ಸಾಂದರ್ಭಿಕ Meta AI ಚಿತ್ರ
ಹೊಸ ಊರು, ಹೊಸ ಜೆನಂಗೊ, ಹೊಸ ಭಾಶೆ , ಹೊಸ ಆಹಾರ ಕ್ರಮಂಗೊ ಎಲ್ಲವೂ ಹೊಸತ್ತದಕ್ಕೆ. ಅಂದರೂ ಎಲ್ಲವೂ ಇಷ್ಟ ಆತು. 'ಆನು ಗ್ರೇಶಿದಷ್ಟು ಹೆದರಿಕೆ ಇಲ್ಲೆ ಇಲ್ಲಿ' ಹೇಳಿ ಮನಸಿಲ್ಲೇ ಸಮದಾನ ಪಟ್ಟುಕೊಂಡತ್ತು.
ಚೆಂಬೈ ವೈದ್ಯನಾಥ ಭಾಗವತರ್ ಇದ್ದ ಊರಾದ ಕಾರಣ ಆದಿಕ್ಕು, ಅಲ್ಯಾಣ ಪ್ರತಿಯೊಂದು ಮನೆಲೂ ಸಂಗೀತದ ಸಪ್ತಸ್ವರದ ಆಲಾಪ, ಯಾವುದಾದರೊಂದು ತಂತಿವಾದ್ಯದ ಮಿಡಿತ. ಸಂಗೀತ ಕಲಿಯದ್ದ ಜನಂಗಳೇ ಅಲ್ಲಿ ಇಲ್ಲೆ ' ಹೇಳುದು ಕಂಡು ಮಂಜರಿಗೆ ' ಎನಗೂ ಸಣ್ಣಾದಿಪ್ಪಗ ಉದಾಸೀನ ಮಾಡದ್ದೆ ಸಂಗೀತ ಕಲ್ತಿಕ್ಕಲಾವ್ತಿತೂಳಿ ಕಂಡತ್ತು.
ಎರಡನೇ ಕ್ಲಾಸಿಲ್ಲಿಪ್ಪಗಲೇ ಅಬ್ಬೆ ಸಂಗೀತ ಕಲಿವಲೆ ಸೇರ್ಸಿರೂ ಮಂಜರಿಗೆ ಸಪ್ತಸ್ವರ ಕಲಿವಲೇ ಉದಾಸೀನ ಆಗಿ ಹೇಂಗೋ ಜತಿ ಸ್ವರದ ವರೆಗೆ ಕಲ್ತು ಬಿಟ್ಟಿದು. ಮತ್ತೆ ಅಬ್ಬೆ ಎಷ್ಟು ಒತ್ತಾಯ ಮಾಡಿದರೂ ಕಲಿವಲೆ ಉಮೇದು ತೋರ್ಸಿದ್ದಿಲ್ಲೆ. ಅಪ್ಪನೂ ಮಂಜರಿಯ ಪರವಾಗಿ ಹೇಳಿದ ಕಾರಣ ಮತ್ತೆ ಅಬ್ಬೆಯೂ ಸುಮ್ಮನೆ ಕೂದ್ದು.
'ಇನ್ನು ಅದರ ಆಲೋಚನೆ ಮಾಡಿ ಪ್ರಯೋಜನ ಇಲ್ಲೆ ' ಹೇಳಿ ಮನಸಿಲ್ಲೇ ಹೇಳಿಕೊಂಡತ್ತು ಮಂಜರಿ.
ಉದಿಯಪ್ಪಗ ಎದ್ದು ಕೆರೆಲಿ ಮುಂಗಿ ಮಿಂದಿಕ್ಕಿ ,ತಲೆಕಸವು ಬೆನ್ನಿಲ್ಲಿ ಹರಡಿ, ಗಂಧದ ಅಡ್ಡಬೊಟ್ಟು ಹಾಕಿದ ಹೆಮ್ಮಕ್ಕೊ ದೇವಸ್ಥಾನಕ್ಕೆ ಹೋಪದು ಕೂಡ ಆ ಊರಿನ ಒಂದು ವಿಶೇಷ ಕ್ರಮವೇ.
"ಕೇರೆ ತಿಂಬ ರಾಜ್ಯಕ್ಕೆ ಹೋದರೆ ನಡೂತುಂಡು ತಿನ್ನೆಕಾಡ' ಹಾಂಗೆ ಎಂಗಳೂದೆ ಇದೇ ಕ್ರಮ ಮಾಡುದು. ದೇವಸ್ಥಾನಕ್ಕೆ ಹೋಪಲಿಪ್ಪ ಕಾರಣ ಈ ಮಕ್ಕೊ ಬೇಗ ಏಳ್ತವು. ಇಲ್ಲದ್ರೆ ಎಂಟು ಗಂಟೆ ವರೆಗೂ ಹಾಸಿಗೆಂದ ಏಳವು" ಅತ್ತೆ ಹೇಳುಗ ಮಂಜರಿಗೆ ನೆಗೆ ಬಂತು.
ಅದೂದೆ ಹಾಂಗೆ, ಕೋಲೇಜಿಂಗೆ ರಜೆ ಇದ್ದರೆ ಏಳೂವರೆ, ಎಂಟು ಗಂಟೆ ವರೆಗೆ ಗುಡಿಹೆಟ್ಟಿ ಒರಗ್ಗು. ಅಬ್ಬೆ ಎಷ್ಟು ದಿನಿಗೇಳಿರೂ ಹಂದ ಅದು.
"ಅಂತೇ ಅದರ ಬೊಬ್ಬೆ ಹಾಕಿ ಏಳ್ಸುದೆಂತಕೆ? ಎಂತಾರು ಕೆಲಸ ಆಯೆಕಾರೆ ಎನ್ನತ್ರೆ ಹೇಳು " ಅಪ್ಪ° ಅಬ್ಬೆ ಹತ್ರೆ ಹೇಳುದರ ಎಷ್ಟೋ ಸರ್ತಿ ಕೇಳಿದ್ದು. ಆದರೂ ಇಲ್ಲಿಗೆ ಬಂದ ಮತ್ತೆ ಅದರ ದಿನಚರಿಯೇ ಬದಲಿತ್ತು. ಉದಿಯಪ್ಪಗ ಬೇಗ ಎದ್ದು ಮಿಂದು ಶಾಲಿನಿಯೊಟ್ಟಿಂಗೆ ದೇವಸ್ಥಾನಕ್ಕೆ ಹೋಪದರಿಂದ ಹಿಡುದು ,ಇರುಳು ಒರಗುವ ವರೆಗೂ ಅದರೊಟ್ಟಿಂಗೆ ಎಲ್ಲಾ ಕೆಲಸಕ್ಕೂ ಸೇರುಗದು.
ಆದರೆ ಇಂದು ಮಾಂತ್ರ ಮನಸ್ಸು ಅದು ಹೇಳಿದಾಂಗೆ ಕೇಳ್ತಿಲ್ಲೆ. ಮನುವಿನ ನೆಂಪೇ ಮನಸ್ಸಿಂಗೆ ಯಾವುದೋ ಒಂದು ರೀತಿಯ ಕೊಶಿ ಕೊಡ್ತಾಯಿದ್ದು. ಅವನ ತಲಗೆ ಒಂದು ನವಿಲು ಗರಿ ಕುತ್ತಿ, ಕೈಲೊಂದು ಕೊಳಲು ಕೊಟ್ರೆ ಅವನನ್ನೇ ಕೃಷ್ಣನ ಹಾಂಗೆ ಕಾಂಗು. ಮನಸಿಲ್ಲಿ ಗ್ರೇಶಿಂಡೇ ಅತ್ತೆಯ ಸಣ್ಣ ಮಗಳು ಶಾಕಂಭರಿಯ ಶಾಲೆ ಪುಸ್ತಕ ಮಡುಗುವಲ್ಲಿಂದ ಒಂದು ಲಾಯ್ಕ ಕಾಗದವುದೆ, ಪೆನ್ಸಿಲುದೆ ತೆಕ್ಕೊಂಡು, ಮನಸ್ಸಿಲ್ಲಿ ಮೂಡಿ ಬಂದ ಚಿತ್ರವ ಬಿಡುಸಿತ್ತು.
ಬರೇ ಕೃಷ್ಣನ ಚಿತ್ರ ಸಾಕಾ ? ಒಂದು ರಾಧೆಯೂ ಇರಲಿ, ಬೇಕಾರೆ ಅವನ ಕೊಳಲಿನ ಅದರ ಕೈಲಿ ಹಿಡುಶುವ°, ರಾಧೆಯ ಹತ್ತರೆ ನಿಂದ ಕೃಷ್ಣ ಅದರ ಕೊಳಲು ಕೇಳಿ ಕಣ್ಣು ಮುಚ್ಚಿ ನಿಂಬ ಹಾಂಗಿದ್ದ ಚಿತ್ರ. ರಾಧೆಯು, ಕೃಷ್ಣನೂ ಒಂದು ಗದ್ದೆಯ ಹತ್ತರೆ ಇಪ್ಪ ಮರಕ್ಕೆ ಎರಗಿ ನಿಂದೊಂಡಿದ್ದ ಹಾಂಗೂದೆ ಮಾಡಿದ್ದು. ಎಂತೋ ನೆಂಪಾದ ಹಾಂಗೆ ಕೃಷ್ಣನ ಕಿಮಿಂದ ಕೆಳ ಸಣ್ಣ ಕಪ್ಪು ಚುಕ್ಕಿ ಹಾಕಿಯಪ್ಪಗ ಏನೋ ಸಂತೃಪ್ತ ಭಾವ.
ದೂರಕೆ ನೀಲಿ ಕಾಂಬ ದೊಡ್ಡ ಗುಡ್ಡೆ, ದೇವಸ್ಥಾನಕ್ಕೆ ಹೋಪಗ ಮಂಜರಿ ಆ ಗುಡ್ಡೆ ನೋಡಿದ್ದು,"ತೇನ್ ಮಲ" ಹೇಳಿ ಆ ಗುಡ್ಡೆಯ ಹೆಸರಾಡ. ತೇನ್ ಹೇಳಿರೆ ಜೇನ. ಜೇನುಗುಡ್ಡೆ..! ಬಹುಶಃ ಆ ಗುಡ್ಡೆಲಿ ತುಂಬ ಜೇನ ಸಿಕ್ಕುತ್ತಾದಿಕ್ಕು. ಭಾರೀ ಚೆಂದದ ಗುಡ್ಡೆ, ಆ ಗುಡ್ಡೆಯೇ ಈ ಚಿತ್ರಲ್ಲೂ ಬಂತು.
"ಹೇಯ್..... ಇದೆಂತರ ?ಎಷ್ಟು ಚೆಂದದ ಚಿತ್ರ!! ನೀನಿಷ್ಟು ಚೆಂದಕೆ ಚಿತ್ರ ಬಿಡುಸುತ್ತೆ ಹೇಳಿ ಗೊಂತೇ ಇತ್ತಿದ್ದಿಲ್ಲೆ. ನೋಡ°, ನೋಡ°....." ಶಾಲಿನಿ ಬಂದು ಅದರ ಕೈಲಿಪ್ಪ ಕಾಗದ ಎಳದತ್ತು.
"ವಾಹ್!! ಬರೀ ಪೆನ್ಸಿಲ್ ಲಿ ಇಷ್ಟು ಲಾಯ್ಕ ಚಿತ್ರ ಮಾಡ್ಲೆಡಿತ್ತಾ? ಇದಕ್ಕೆ ಬಣ್ಣ ಕೊಡು. ಬಣ್ಣದ ಪೆಟ್ಟಿಗೆ ಇಲ್ಲೇ ಇದ್ದು" ಹೇಳಿಂಡೇ ಬಣ್ಣದ ಪೆಟ್ಟಿಗೆ, ನಾಲ್ಕೈದು ಬ್ರೆಶ್ಶು ಎಲ್ಲ ತಂದು ಕೊಟ್ಟತ್ತು.
"ಏ.. ಈ ಕೃಷ್ಣನ ಎಲ್ಲೋ ನೋಡಿದ್ದೆ. ಈ ಕಣ್ಣು, ಈ ನೆಗೆ ಎಲ್ಲಾ ಎನಗೆಲ್ಲೋ ಕಂಡಾಂಗಾವ್ತು" ಶಾಲಿನಿ ಕೃಷ್ಣನ ಚಿತ್ರ ನೋಡಿ ಹೇಳಿಂಡಿಪ್ಪಗಳೇ ಮನು ಫಕ್ಕನೆ ಅಲ್ಲಿಗೆ ಬಂದ°. ಅವನ ಕಂಡಪ್ಪಗ ಮಂಜರಿಯ ಮೋರೆ ಕೆಂಪಾತು.
ಶಾಲಿನಿ ಕೈಲಿ ಹಿಡ್ಕೊಂಡಿಪ್ಪ ಚಿತ್ರವ ಅಪ್ಪನ ಕೈಲಿ ಕೊಟ್ಟಿಕ್ಕಿ ಒಳ ಬಂತು.
"ಇದೆನ್ನ ಸೊಸೆ ಬಿಡುಸಿದ ಚಿತ್ರ. ಹೇಂಗಾಯಿದು ಹೇಳು ? " ಮಾವ° ಮನುವಿಂಗೆ ಚಿತ್ರ ತೋರ್ಸಿದವು. ಅವ° ಅದರ ಕೈಲಿ ಹಿಡುದು ಸರಿಯಾಗಿ ನೋಡಿದ°. ನೋಡ್ತಾ ಇಪ್ಪ ಹಾಂಗೆ ನೆಗೆ ಮಾಡಿದವನ ಮೋರೆ ಏಕೋ ಗಂಭೀರ ಆತು. ಬಾಗಿಲ ಎಡೇಲಿ ನಿಂದೊಂಡು ಅವನ ಮೋರೆಯನ್ನೇ ನೋಡಿಂಡಿದ್ದ ಮಂಜರಿಯ ಎದೆಲಿ ಅವಲಕ್ಕಿ ಕುಟ್ಟಿದ ಅನುಭವ.
'ದೇವರೇ ಅವಂಗೆ ಗೊಂತಾಗದ್ರೆ ಸಾಕು. ಸುಮ್ಮನೇ ಕುಶಾಲಿಂಗೆ ಬರದ ಚಿತ್ರ ನೋಡ್ಲೆ ಅವ° ಬಕ್ಕು ಹೇಳಿ ಕನಸಿಲ್ಲೂ ಗ್ರೇಶಿದ್ದಿಲ್ಲೆ. ಬೇಕಾತಿಲ್ಲೆ ಈ ಮಕ್ಕಳಾಟಿಕೆ!!
"ಇದಾ.. ಮಂಜರಿ ಮನುವಿನ ಕಾಪಿ ಕುಡಿವಲೆ ಬಪ್ಪಲೆ ಹೇಳು" ಅತ್ತೆ ಒಳಾಂದ ದಿನಿಗೇಳಿ ಹೇಳಿಯಪ್ಪಗ ಮಂಜರಿಗೆ ಹೆರ ಹೋಗದ್ದೆ ನಿವೃತ್ತಿ ಇಲ್ಲದ್ದಾಂಗಾತು.
"ಕಾಪಿ ಕುಡಿವಲೆ ಬರೆಕಾಡ " ಮೆಲ್ಲಂಗೆ ಹೇಳಿರೂ ಅವಂಗೆ ಕೇಳಿತ್ತು. ಒಟ್ಟಿಂಗೆ ಮಾವನುದೆ " ಹೋಗು ಕಾಪಿ ಕುಡುದಿಕ್ಕಿ ಬಾ. ಬಂದ ವಿಶಯ ಮತ್ತೆ ಮಾತಾಡುವೊ°" ಹೇಳಿದವು. "ಕೃಷ್ಣನ ಚಿತ್ರ ಬಿಡುಸಿದ್ದು ಲಾಯ್ಕ ಆಯಿದು. ಕೃಷ್ಣನ ಕೊರಳಿಲ್ಲಿ ಒಂದು ಸಣ್ಣ ಮಜ ಇದ್ದು ಹೇಳಿ ನಿಂಗೊಗೆ ಹೇಂಗೆ ಗೊಂತಾದ್ದು?" ಅವನ ಪ್ರಶ್ನೆ ಕೇಳಿ ಮಂಜರಿಗೆ ನಾಚಿಕೆಯಾತು.
ಅವನ ಕಂಡಪ್ಪಗ ಅದೇಕೆ ಮನಸ್ಸಿಲ್ಲಿ ಎಂತೋ ಒಂದು ಮಧುರ ಭಾವ! ಇಷ್ಟರವರೆಗೆ ಆರ ಕಂಡಪ್ಪಗಳೂ ಹಾಂಗಾಯಿದಿಲ್ಲೆ. "ಹತ್ತರೆ ನಿಂದ ರಾಧೆಯೂ ಚಂದ ಇದ್ದಾತ. ಅಭಿನಂದನೆ" ಮನುವಿನ ಈ ಮಾತು ಕೇಳಿಯಪ್ಪಗ ಜನ್ಮ ಸಾರ್ಥಕ ಹೇಳಿ ಆತು ಅದಕ್ಕೆ.
"ನಾಳಂಗೆ ಎಂಗಳಲ್ಲಿ ಒಂದು ಪೂಜೆ, ಬದ್ಧ ಎಲ್ಲ ಇದ್ದು. ನಿಂಗೊ ಎಲ್ಲೋರು ಬರೆಕು. ಊರಿಂದ ಬಂದವಕ್ಕೆ ವಿಶೇಷ ಹೇಳಿಕೆ " ಹೇಳಿಕ್ಕಿ ಅವ° ಮಂಜರಿಯ ನೋಡಿ ನೆಗೆ ಮಾಡಿದ°. ಆ ನೆಗೆಗೆ ಅಯಸ್ಕಾಂತದ ಶಕ್ತಿ ಇದ್ದಾಂಗಾತಕ್ಕೆ.
"ಅಂಬಗ ಭಾರೀ ಒಳ್ಳೆ ಶುದ್ದಿ, ಎಂಗೊಗೊಂದು ಮದುವೆ ಸುಧರಿಕೆ ಕೆಲಸ ಇದ್ದಂಬಗ. ಎಲ್ಲಿಂದ ಕೂಸು? ಎಂತ ಮಾಡ್ತು? " ಮಾವ° ಕೊಶೀಲಿ ಪ್ರಶ್ನೆ ಕೇಳಿರೆ ಒಳ ನಿಂದ ಮಂಜರಿಯ ಮೋರೆ ಕುಞಿ ಕುಞಿ ಆತು.
ಮತ್ತೆ ಮನಸ್ಸಿಲ್ಲಿ ಸಮದಾನ ಮಾಡಿಕೊಂಡತ್ತು. 'ಎನಗೂ ಅವಂಗೂ ಎಂತ ಸಂಬಂಧ ? ಅವ° ಎನಗೆಂತಾಯೆಕು ?' ಹಾಂಗೆ ಗ್ರೇಶಿಂಡು ಹೆರಾಣ ಮಾತಿಂಗೆ ಕೆಮಿ ಕೊಟ್ಟತ್ತು.
"ಗಟ್ಟದ ಮೇಗಾಣ ಕೂಸು, ತಮ್ಮಂಗೆ ಮದುವೆ ನಿಗಂಟಾದ ಕಾರಣ ಅಬ್ಬೆ ಅಪ್ಪ ತುಂಬ ಒತ್ತಾಯ ಮಾಡ್ತವು. ಹಾಂಗೆ ಮತ್ತೆ ಜಾತಿ ನೋಡದ್ದೆ ಒಪ್ಪಿದೆ. ಅವು ಹತ್ತು ಜೆನ ಬಕ್ಕಾಡ...." ಮನುವಿನ ಮಾತಿಲ್ಲಿ ದೊಡ್ಡ ಸಂತೋಶ ಇಲ್ಲೇಳಿ ಅವನ ಸ್ವರಲ್ಲಿ ಗೊಂತಾಗಿಂಡಿದ್ದತ್ತು.
"ಅದು ಒಳ್ಳೆದಾತು, ಈಗಾಣ ಕಾಲಲ್ಲಿ ಇದೆಲ್ಲ ಸಾಮಾನ್ಯ." ಮಾವ° ಹೇಳಿಯಪ್ಪಗ ಅವ ಸುಮ್ಮನೇ ತಲೆ ಆಡ್ಸಿದ. "ಅಬ್ಬೆ ತುಂಬಾ ಕೂಗಿತ್ತು. ಇಲ್ಲದ್ರೆ ಆನು ಒಪ್ಪುತಿತಿಲ್ಲೆ. ಎನಗೇಳಿ ಹುಟ್ಟಿದ ಕೂಸು ಅದಾದಿಕ್ಕು. ಅಂಬಗ ನಾಳಂಗೆ ಎಲ್ಲೋರು ಬನ್ನೀ" ಹೇಳಿಕ್ಕಿ ಹೆರಟವ ಮಂಜರಿಯ ಅಬ್ಬೆ ಹತ್ತರೆ "ನಾಳೆ ಬನ್ನೀ ಅತ್ತೇ" ಹೇಳಿ ಮತ್ತೊಂದರಿ ಹೇಳಿಕ್ಕಿ ಹೆರಟ.
"ಎಷ್ಟೊಳ್ಳೆ ಗುಣದ ಮಾಣಿ. ಅವನ ಮದುವೆಪ್ಪಲೆ ನಮ್ಮಲ್ಲಿ ಕೂಸು ಸಿಕ್ಕುತ್ತಿಲ್ಲೆ ನೋಡು, ಈಗಾಣ ಅವಸ್ಥೆಯೇ. ಎಲ್ಲ ಕಲಿಕಾಲ!" ಮಾವ ಹಾಂಗೆ ಹೇಳಿಂಡು ಎಲೆ ತಟ್ಟೆ ಹತ್ತರಂಗೆ ಎಳದವು. ಮಂಜರಿಯ ತಲೆ ತುಂಬ ಮನುವೇ ಇತ್ತಿದ್ದ°.
ಅವನ ಕಂಡು ಒಂದು ವಾರ ಆದ್ದಷ್ಟೆ ಆದರೂ ಆ ಮಾತು, ನೆಗೆ, ರೂಪ ಎಲ್ಲ ಎಷ್ಟೋ ಮದಲೇ ಎನಗೆ ಗೊಂತಿದ್ದು ಹೇಳುವ ಹಾಂಗಿದ್ದ ಅನುಭವ. ಇರುಳು ಒರಗದ್ದೆ ಅಂತೇ ಹೊಡಚ್ಚಿಂಡು ಕೂದತ್ತು.
ಶಾಲಿನಿ "ಎಂತಾವ್ತು" ಕೇಳಿರೂ ಅದಕ್ಕೆ ಉತ್ತರ ಹೇಳ್ಲೇ ಎಡ್ತಿದಿಲ್ಲೆ. ಉದೆಕಾಲಕ್ಕೆ ರಜ್ಜ ಒರಕ್ಕು ಬಂತು. ಆ ಒರಕ್ಕಿಲ್ಲಿ ಕಂಡದು ಚೆಂದದ ಕನಸು. ನವಿಲುಗರಿ ತಲೆಲಿ ಮಡುಗಿದ ಕೃಷ್ಣ, ರಾಧೆಯ ಹಾಂಗೆ ಅಲಂಕಾರ ಮಾಡಿದ ಮಂಜರಿಯ ಹತ್ತರಂಗೆ ಬಂದಪ್ಪಗ ಕೈಲಿದ್ದ ಜಾಜಿ ಮಲ್ಲಿಗೆ ಮಾಲೆಯ ಅವನ ಕೊರಳಿಂಗೆ ಹಾಕಿತ್ತದು'. ಫಕ್ಕನೆ ಎಚ್ಚರಿಕೆ ಮಂಜರಿಗೆ
'ಆ ಕೃಷ್ಣನ ರೂಪ.... ಅದು.. ಅವನೇ ಅಲ್ಲದಾ.....! ಮತ್ತೊಂದರಿ ಮನಸಿಲ್ಲಿ ನೆಂಪು ಮಾಡಿಯಪ್ಪಗ ಅದು ಮನು ಹೇಳಿ ಗೊಂತಾಗಿ ಪುನಃ ಕಣ್ಣು ಮುಚ್ಚಿ ಮನುಗಿತ್ತು.
ಈ ಕನಸು ಸತ್ಯ ಆಗಿದ್ದರೆ!! ಸುಮ್ಮನೇ ನೆಗೆ ಬಂತು. ಆನು ಒಪ್ಪಿರೆ ಸಾಕಾ? ಅಬ್ಬೆ ಅಪ್ಪ ಒಪ್ಪೆಡದಾ? ಈಗಾಣ ಕೂಸುಗೊ ಒಪ್ಪುತ್ತವಿಲ್ಲೆ ಹೇಳುದು. ನಿಜವಾಗಿಯೂ ಒಪ್ಪದ್ದದಾರು? ಆದರೆ ಎನ್ನ ಅಪ್ಪ ಆನು ಕೇಳಿದರೆ ಖಂಡಿತಾ ಬೇಡ ಹೇಳವು. ಮಗಳ ಮನಸ್ಸಿಂಗೆ ಬೇಜಾರಪ್ಪ ಹಾಂಗೆ ಒಂದು ದಿನವೂ ಮಾಡಿದ್ದವಿಲ್ಲೆ. ಅಂದರೂ ಇನ್ನೀಗ ಆರು ಒಪ್ಪಿಗೆ ಕೊಟ್ರೆಂತ. ಅವಂಗೆ ಮದುವೆ ನಿಗೆಂಟಾತನ್ನೇ.. ' ಹಾಂಗೇ ಆಲೋಚನೆ ಮಾಡಿಂಡು ಎಷ್ಟೊತ್ತಿಂಗೆ ಒರಗಿತ್ತೋ ಅದಕ್ಕೇ ಗೊಂತಿಲ್ಲೆ.
ಇನ್ನೂ ಇದ್ದು....
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ