ಸಾಂದರ್ಭಿಕ Meta AI ಚಿತ್ರ
- ಪ್ರಸನ್ನಾ ವಿ. ಚೆಕ್ಕೆಮನೆ
ಪಚ್ಚೆಗೆ ಕೆಂಪು ಕರೆಯ ಜರಿಯಿಪ್ಪ ಉದ್ದ ಲಂಗ ರವಕೆ ಹಾಕಿಂಡು, ಉದ್ದ ತಲೆಕಸವಿನ ಹಾಂಗೇ ಬಿಟ್ಟು ,ಮೋರಗೆ ಹಾಕಿದ ಕೆಂಪು ಬೊಟ್ಟಿಂದ ರಜ ಮೇಗೆ ಆಗಿ ಅಡ್ಡಕೆ ಗಂಧಬೊಟ್ಟು ಹಾಕಿಕ್ಕಿ ಮತ್ತೊಂದರಿ ಕನ್ನಾಟಿ ನೋಡಿತ್ತು ಮಂಜರಿ.
"ಥೇಟ್ ಮಲೆಯಾಳಿ ಮಂಗ°" ಅದರ ಹಿಂದೆ ನಿಂದೊಂಡಿದ್ದ ಸೋದರತ್ತೆ ಮಗಳು ಶಾಲಿನಿ ನೆಗೆ ಮಾಡಿತ್ತು.
ಅತ್ತಿಗೆ "ಮಂಗ" ಹೇಳಿತ್ತೂಳಿ ಮಂಜರಿಗೆ ಕೋಪ ಬಯಿಂದಿಲ್ಲೆ. ಮಲೆಯಾಳದ 'ಮಂಗ' ಬೇರೆ, ಕನ್ನಡದ ಮಂಗ° ಬೇರೆ ಹೇಳಿ ಈಗ ಅದಕ್ಕೆ ಅರ್ಥಾಯಿದು.
"ಈಗ ಮಾವ° ನೋಡೆಕು. ತಲೆಕಸವು ಬಿಕ್ಕಿ ಹಾಕಿದ್ದೆಂತಕೇಳಿ ಬೈಗು" ಶಾಲಿನಿ ಅದರ ತಲೆಕಸವು ಹಿಡ್ಕೊಂಡು ಹೇಳಿತ್ತು.
"ಶಾಲಿನೀ... ಆನು ಬಂದೇ.. ನಿನಗೆ ಹೆರಟಾತ?" ಹೆರಾಂದ ಮಲೆಯಾಳಲ್ಲಿ ದೆನಿಗೇಳುದು ಶಾಲಿನಿಯ ಜತೆಕ್ಕಾರ್ತಿ ಸುಮಿತ್ರ ಹೇಳಿ ಇಬ್ರಿಂಗೂ ಗೊಂತಿದ್ದು.
"ಇದಾ...ವನ್ನೂ" ಹೇಳಿಂಡು ಮಂಜರಿಯ ಕೈ ಹಿಡ್ಕೊಂಡೇ ಮನೆಂದ ಹೆರ ಬಂತದು.
"ದೇವಸ್ಥಾನಕ್ಕೆ ಹೆರಟದಾ?" ಸರೋಜ ಮನುಗಿದಲ್ಲಿಂದಲೇ ಕೇಳಿಯಪ್ಪಗ ಶಾಲಿನಿ
"ಅಪ್ಪಬ್ಬೇ.....ಬೇಗ ಬತ್ತೆಯಾ°" ಹೇಳಿಕ್ಕಿ ಮಂಜರಿಯ ಕೈ ಹಿಡುದು ಮನೆಯ ಜಾಲಿನ ಕೆಳಾಂಗಿಪ್ಪ ಮೆಟ್ಲು ಇಳುದು ಗದ್ದೆಯ ಕರೇಂಗೆ ಬಂತು.
ಎರಡೂ ಹೊಡೆಲಿ ಪಚ್ಚೆ ಪಚ್ಚೆ ಭತ್ತದ ಸೆಸಿಗೊ. ಅದರಂದಾಚಿಗೆ ನೇಂದ್ರಬಾಳೆ ತೋಟ, ಬಾಳೆತೋಟದ ಒಂದು ಹೊಡೇಲಿಪ್ಪ ಗೆದ್ದೆಲಿ ನೆಟ್ಟಿಕಾಯಿ ಚಪ್ಪರ ,ಗದ್ದೆಯ ಈಚ ಹೊಡೆಲಿ ಒಂದು ಹೊಳೆ.ಅದರ ಕರೆಲೆಲ್ಲ ತೆಂಗಿನಮರಂಗೊ."ದೇವರ ಸ್ವಂತ ನಾಡು" ಹೇಳಿ ಇಲ್ಲಿಗೆ ಹೆಸರು ಮಡುಗಿದ್ದು ಸುಮ್ಮನೇ ಅಲ್ಲ.
"ಎಷ್ಟು ಚಂದ!!....." ಮಂಜರಿಗೆ ಇದರ ನೋಡ್ಲೆ ಕೊಶೀಯಪ್ಪದು. ಗದ್ದೆ ಹುಣಿಲಿ ಹೋಪಗ ಅತ್ಲಾಗಿತ್ಲಾಗಿ ತಿರುಗಿ ತಿರುಗಿ ನೋಡಿಂಡು ಹೋಪ ಅದರ ಯೇವಗಲೂ ಶಾಲಿನಿ ತಮಾಷೆ ಮಾಡುದು.
"ಈ ಊರಿಂಗೆ ಹೊಸಬ್ಬೆತ್ತಿ ನೀನು ಹೇಳಿ ನಿನ್ನ ಮಂಗಾಕಾರ ನೋಡುಗಳೇ ಇಲ್ಲಿಪ್ಪವಕ್ಕೆ ಗೊಂತಕ್ಕಾತ. ನೇರ್ಪ ದಾರಿ ನೋಡಿ ನಡೆಯದ್ರೆ ಒಂದು ದಿನ ಕೆಳ ಗದ್ದೆಗೆ ಉರುಳ್ಲಿದ್ದು "
ಅತ್ತಿಗೆ ಎಂತ ಹೇಳಿರೂ ಮಂಜರಿಗೆ ಲಗಾವಿಲ್ಲೆ. ಈ ಊರಿನ ಚೆಂದ ಅದರ ಮನಸಿಂಗೆ ತಂಪು ತಂಪು ಅನುಭವ ಕೊಡುದು.
" ಕೃಷ್ಣಾ.....ಕಾಪಾಡೂ....." ಮಲೆಯಾಳಿ ಹೆಮ್ಮಕ್ಕೊ ಎಲ್ಲ ದೇವರ ಮುಂದೆ ಭಕ್ತಿಲಿ ಕೈ ಮುಗುದು ಪ್ರಾರ್ಥಿಸುದು ಕಾಂಬಗ ಅರಡಿಯದ್ದೆ ಮಂಜರಿಯುದೆ ಕೈ ಮುಗುದು ಎದುರೆ ಕಾಂಬ ದೇವರನ್ನೇ ನೋಡಿತ್ತು.
ಪೂಜೆ ಭಟ್ಟ ದೇವರ ಚೆಂದಕೆ ಅಲಂಕಾರ ಮಾಡಿತ್ತಿದ್ದ°. ತುಳಸಿ ಮಾಲೆ, ಮಲ್ಲಿಗೆ, ಸೇವಂತಿಗೆ ಮಾಲೆ ಎಲ್ಲ ಹಾಕಿ ಚೆಂದ ಕಾಂಬ ಕೃಷ್ಣದೇವರು. ಕೈಲಿ ಕೊಳಲು ಹಿಡುದು ನಿಂದ ಗೋಪಾಲಕೃಷ್ಣ!. ಊದುಬತ್ತಿ, ಕರ್ಪೂರದ ಪರಿಮ್ಮಳ ಅಲ್ಲೆಲ್ಲ ಹಬ್ಬಿತ್ತು. ಮಂಗಳಾರತಿ ಮಾಡಿ ಆರತಿ ಹೆರ ಮಡುಗಿದ ಪೂಜೆ ಬಟ್ಟನ ಸುಮ್ಮನೇ ನೋಡಿತ್ತು ಮಂಜರಿ.
ಹೆಚ್ಚು ಬೆಳಿಯೂ ಅಲ್ಲ, ತುಂಬ ಕಪ್ಪೂ ಅಲ್ಲದ್ದ ಅವನ ಮೋರೆಲಿ ಒಂದು ರೀತಿಯ ಸಾತ್ವಿಕ ಕಳೆ. ಗಂಧ, ಭಸ್ಮ ನಾಮ ಹಾಕಿದವನ ಕೊರಳಿಲ್ಲಿ ಒಂದು ಸ್ಪಟಿಕದ ಮಾಲೆ. ತಲೆಕಸವು ಕೊರಳಿಂಗೆ ವರೆಗೆ ಇದ್ದು, ಅವನ ಉರೂಟು ಮೋರಗೆ ಹೆಚ್ಚು ಆಕರ್ಷಣೆ ಕೊಡುದು ಸಣ್ಣಕೆ ಬಿಟ್ಟ ಗಡ್ಡ..
"ಪ್ರಸಾದ ತೆಕ್ಕೊಳ್ಳಿ.. ಎಂತ ಎನ್ನನ್ನೇ ನೋಡಿಂಡು ನಿಂದುಕೊಂಡದು ? ಎಂತಯಿದ್ದೆನ್ನ ಮೋರೆಲಿ ? "ರಜಾ ಕುಶಾಲು ಸೇರ್ಸಿ ಸಣ್ಣಕೆ ನೆಗೆ ಮಾಡಿಂಡು ಕೇಳಿದ° ಅವ°. ಬಹುಶಃ ಪ್ರಸಾದ ಕೊಡ್ಲೆ ಗಂಧವೂ,ಹೂಗು ಕೈಲಿ ಹಿಡುದು ರಜ ಹೊತ್ತಾತಾದಿಕ್ಕು.
'ಸುತ್ತೂ ಇಪ್ಪವೆಲ್ಲ ಆಗಳೇ ಪ್ರಸಾದ ತೆಕ್ಕೊಂಡು ಹೋದವಾ ? ಆನು ಮಾಂತ್ರ!! ' ಛೀ.....ಪಜೀತಿಯಾತನ್ನೇ.. ಎಂತ ಗ್ರೇಶುಗವ°' ಮಂಜರಿಗೆ ನಾಚಿಕೆಯಾಗಿ ಮತ್ತೊಂದರಿ ಅವನ ಮೋರೆ ನೋಡುವ ಧೈರ್ಯ ಬಯಿಂದಿಲ್ಲೆ.
" ವರ ಊರಿಲ್ಲಿ ಕೂಸುಗೊಕ್ಕೆ ತೊಳಶಿ ಹೂಗು ಕೊಡುವ ಕ್ರಮ ಇಲ್ಲೆ. ಅದಕ್ಕೆ ಮಲೆಯಾಳವು ಸರೀ ಗೊಂತಿಲ್ಲೆ, ಹಾಂಗೆ ಎಂತ ಹೇಳೆಕೂಳಿ ಗೊಂತಾಯಿದಿಲ್ಲೇದಿಕ್ಕು.ಹ್ಹ..ಹ್ಹ.." ಶಾಲಿನಿ ಅವನತ್ರೆ ನೆಗೆ ಮಾಡಿಂಡು ಹೇಳಿಯಪ್ಪಗ 'ಅಬ್ಬಾ..ಬಚಾವ್' ಹೇಳಿ ಗ್ರೇಶಿತ್ತು ಮಂಜರಿ.
"ಹೋ.... ಹಾಂಗಾ.. ಇಲ್ಲಿಪ್ಪವಕ್ಕೆಲ್ಲ ' ತುಳಸಿಕ್ಕದಿರಿಲ' ಸಿಕ್ಕಿರೆ ಹೆಚ್ಚು ಕೊಶಿಯಪ್ಪದು, ಹಾಂಗೆ ಕೊಟ್ಟದಷ್ಟೆ. ಇವ್ವಾರು ಹೊಸ ಜನ ?" ಮಲ್ಲಿಗೆ ಹೂಗಿನ ಉದ್ದ ಮಾಲೆಯನ್ನೇ ಅದರ ಕೈಗೆ ಕೊಟ್ಟುಕೊಂಡು ಅವ° ಶಾಲಿನಿಯತ್ರೆ ಕೇಳಿದ°.
"ಎನ್ನ ಸೋದರತ್ತೆಯ ಮಗಳು, ಕಳುದ ವಾರ ಊರಿಂದ ಬಂದದು. ಬಿ.ಎಸ್ಸಿ, ಬಿ.ಎಡ್ ಆಯಿದು......" ಶಾಲಿನಿ ಮಂಜರಿಯ ವಿವರ ಎಲ್ಲ ಅವನತ್ರೆ ಹೇಳಿತ್ತು. ಮಂಜರಿಗೆ ಮಲೆಯಾಳ ಸರೀ ಗೊಂತಿಲ್ಲದ್ದ ಕಾರಣ ಅದು ಹೇಳಿದ್ದದು ಪೂರ್ತಿ ಅರ್ಥಾಯಿದಿಲ್ಲೆ. ಸುಮ್ಮನೇ ನೆಗೆ ಮಾಡಿತ್ತು.
" ಅಂಬಗ ಇನ್ನು ಮಲೆಯಾಳ ಕಲಿಯೆಕಷ್ಟೆಯಾ ? " ಅವ° ಮಲೆಯಾಳ ಮಿಶ್ರಿತ ಹವ್ಯಕಲ್ಲಿ ಮಾತಾಡಿಯಪ್ಪಗ ಮಂಜರಿಯೊಟ್ಟಿಂಗೆ ಶಾಲಿನಿ, ಸುಮಿತ್ರ ಕೂಡ ನೆಗೆ ಮಾಡಿದವು.
"ಎಂಗಳೂ ಅತ್ಲಾಗಿಯಾಣವೇ.ಎನ್ನ ಅಜ್ಜನ ಅಜ್ಜನ ಕಾಲಲ್ಲಿ ಇಲ್ಲಿಗೆ ಬಂದದಾಡ. ಮನೆಲಿ ಕೆಲವು ವರ್ಷ ಮದಲೆ ಕೂಡ ಹವ್ಯಕ ಮಾತಾಡಿಂಡಿದ್ದದು. ಈಗ ಎಂಗೊಗೆ ಭಾಷೆಯಿಲ್ಲೆ. ಎಲ್ಲ ಮಲೆಯಾಳವೇ ಆಯಿದು " ಅವ° ನೆಗೆ ಮಾಡಿಂಡು ಅರ್ಧಂಬರ್ಧ ಹವ್ಯಕಲ್ಲಿ ಮಾತಾಡಿಂಡೇ ಅವನ ಕೆಲಸ ಮುಗುಶಿ ದೇವಸ್ಥಾನಕ್ಕೆ ಬೀಗ ಹಾಕಿ ಹೆರಟ°.
"ಅವನತ್ರೆ ಮಾತಾಡಿ ನಾವಿಲ್ಲಿ ಬಾಕಿ, ಅವ° ಈಗ ಹೋಗಿ ಎರಡು ಮದುವೆ ಮಾಡ್ಸಿಕ್ಕಿ ಬಕ್ಕು" ಶಾಲಿನಿ ನೆಗೆ ಮಾಡಿಂಡೇ ಮಂಜರಿಯ ಕೈ ಹಿಡುದು ನಡವಲೆ ಸುರು ಮಾಡಿತ್ತು. "ಅವ° ಎಷ್ಟು ಮದುವೆ ಮಾಡ್ಸಿರೆಂತ ಅವನ ಮದುವೆಪ್ಪಲೆ ಆರೂ ಒಪ್ಪುತ್ತವಿಲ್ಲೆನ್ನೇ..." ಸುಮಿತ್ರ ಮಲೆಯಾಳಲ್ಲಿ ಹೇಳಿರೂ ಮಂಜರಿಗೆ ಅರ್ಥ ಆತು.
"ಅದೇಕೆ? " ಕಾಂಬಲೆ ಲಕ್ಷಣಯಿದ್ದ°, ಒಂದು ವಾರಂದ ಮಂಜರಿಯೂ ಶಾಲಿನಿಯೊಟ್ಟಿಂಗೆ ನಿತ್ಯ ದೇವಸ್ಥಾನಕ್ಕೆ ಹೋವ್ತು. ಅಲ್ಲಿಗೆ ಬಪ್ಪವರೊಟ್ಟಿಂಗೆ ಅವನ ನಡವಳಿಕೆಯೂ ತುಂಬಾ ಮೃದು. ಎಷ್ಟೋ ಜನ ಅವನತ್ರೆ "ಮಗಳ ಮದುವೆಗೆ, ಕೆಲಸ ಸಿಕ್ಕಲೆ, ಕೇಸು ಗೆಲ್ಲಲೆ......" ಹೇಳಿ ವಿಶೇಷ ಪ್ರಾರ್ಥನೆ ಮಾಡ್ಸುದು ನೋಡಿದ್ದದು. ಮತ್ತೆ ಕೆಲವು ಜೆನಂಗೊ ಅವರ ಪ್ರಾರ್ಥನೆ ಫಲಿಸಿದ್ದು ' ಹೇಳಿಯೂ ವಿಶೇಷ ಕಾಣಿಕೆ ಕೊಡುದನ್ನೂ ಕಂಡಿದು.
" ಅವ° ಜ್ಯೋತಿಷ್ಯ, ವಾಸ್ತು , ಸಂಸ್ಕೃತ ಎಂ.ಎ. ಎಲ್ಲ ಕಲ್ತರೂ ಎಂತ ಪ್ರಯೋಜನ ಇಲ್ಲೆ. ಅವನ ತಮ್ಮ ನೋಡು, ಮೂರು ವರ್ಷದ ಡಿಪ್ಲೊಮಾ ಮಾಡಿ ಚೆನ್ನೈ ಲಿ ಕೆಲಸಲ್ಲಿಪ್ಪವಂಗೆ ಮದುವೆ ನಿಗೆಂಟಾತು " ಶಾಲಿನಿಯೂ ಹೇಳಿತ್ತು.
"ಅಯ್ಯೋ, ಅಷ್ಟು ಕಲ್ತ ಅವಂಗೇಕೆ ಕೂಸು ಸಿಕ್ಕಿದ್ದಿಲ್ಲೆ?" ಮಂಜರಿಗೆ ಆಶ್ಚರ್ಯ.
"ನೀನೇವ ಕಾಲಲ್ಲಿ ಇದ್ದೆ ಮೋಳೇ.. ಈಗಾಣ ಕಾಲಲ್ಲಿ ಪುರೋಹಿತರಿಂಗೆ, ಅಡಿಗ್ಗೆ ಹೋಪವಕ್ಕೆ ಎಲ್ಲ ಕೂಸು ಸಿಕ್ಕುತ್ತಿಲ್ಲೆ ಹೇಳಿ ಎಲ್ಲಾ ಊರಿಲ್ಲಿಯೂ ಚರ್ಚೆ ಆವ್ತಾಯಿದ್ದು. ನೀನೆಂತರ ಅಂಬಗ ಇಷ್ಟು ದಿನ ಕೋಲೇಜಿಂಗೆ ಹೋಗಿ ಕಲ್ತದು ಬರೀ ಪುಸ್ತಕದ ಬದನೆಕಾಯಿ ಮಾತ್ರವಾ? ಊರಿಲ್ಲಿ ನಡವ ವಿಶಯಂಗೊ ರಜವು ಗೊಂತಾವ್ತಿಲ್ಲೆಯಾ ? ಹ್ಹ....ಹ್ಹ...."
ಮಂಜರಿ ಮಾತಾಡಿದ್ದಿಲ್ಲೆ. ಅದಕ್ಕೆ ಆ ವಿಶಯ ಹೆಚ್ಚು ಗೊಂತಿಲ್ಲೆ. ಪುಸ್ತಕ, ಓದು, ಮನೆ ಬಿಟ್ಟರೆ ಅದಕ್ಕೆ ಹೂಗಿನ ಸೆಸಿಯೇ ಹೆಚ್ಚು ಪ್ರೀತಿ. ಮೊಬೈಲು ಕೂಡ ಅಗತ್ಯಂದ ಹೆಚ್ಚು ನೋಡುವ ಕೂಸಲ್ಲ ಅದು.
ಊರಿನ ಶುದ್ದಿಗಳ ಎಲ್ಲ ಅಬ್ಬೆ, ಅಪ್ಪ ಮಾತಾಡುದು ಕೇಳಿದರೂ ಈ ವಿಶಯ ಇಷ್ಟೆಲ್ಲ ಇದ್ದೂಳಿ ಅದಕ್ಕೂ ಗೊಂತಿತ್ತಿದ್ದಿಲ್ಲೆ. ಈಗ ಶಾಲಿನಿ ಹೇಳಿಯಪ್ಪಗ ರಜಾ ಆಲೋಚನೆ ಮಾಡುವ ಹಾಂಗಾತು ಅದಕ್ಕೆ.
ಅವು ಮೂರು ಜೆನವೂ ಅದೂ,ಇದೂ ಮಾತಾಡಿಂಡು ಮನಗೆ ಬಂದವು.
"ದೇವಸ್ಥಾನಲ್ಲಿ ತುಂಬ ಜೆನ ಇತ್ತಿದ್ದವಾ ? ಎಂತ ತಡವಾದ್ದು?" ವಿಷ್ಣು ಮಾವ° ಕೇಳಿದವು. ಅವು ಮಂಜರಿಯ ಸೋದರತ್ತೆ ಗೆಂಡ° ನೂ ಅಪ್ಪು, ಅಬ್ಬೆಯ ಅಣ್ಣನೂ ಅಪ್ಪು.
"ಹ್ಹ....ಹ್ಹ.....ಇಂದೆಂತಾದ್ದು ಗೊಂತಿದ್ದಾಪ್ಪಾ°?" ಶಾಲಿನಿ ಅಲ್ಲಿ ನಡದ ವಿಶಯವ ಎಲ್ಲ ಮನೆಲಿ ದೊಡ್ಡಕೆ ಹೇಳಿತ್ತು.
"ಇದವನ ಚೆಂದ ನೋಡಿಂಡು ಬಾಕಿ ಆತ.. ಅವ° ಮಾತಾಡದ್ರೆ ಅಲ್ಲೇ ಕುತ್ತ ನಿಲ್ಲುತಿತೋ ಏನೋ, ಲಾಯ್ಕಿತ್ತು ಕತೆ. ಭಾಶೆಯು, ಕ್ರಮವು ವೆತ್ಯಾಸಾದರೆ ಅಸ ಬಡಿವ ಚೆಂದವೇ. ಎನಗೆ ಗ್ರೇಶುಗ ಈಗಲೂ ನೆಗೆ ಬತ್ತು...."
"ಆತು ಬಿಡು, ಮನು ಒಳ್ಳೆ ಮಾಣಿ, ಸುಮ್ಮನೇ ಅವನ ಎಂತಾರು ಹೇಳೆಡ" ಸರೋಜತ್ತೆ ಒಳಾಂದಲೇ ಹೇಳಿದವು.
ಮಂಜರಿ ಒಳ ಬಂದು ಅಂಗಿ ಮಾತಿಕ್ಕಿ ಮನೆಯ ಹಿಂದಾಣ ಜೆಗುಲಿಲಿ ಹೋಗಿ ಕೂದತ್ತು. ಕಣ್ಣು ಮುಚ್ಚಿರೂ, ಒಡದರೂ ಅದಕ್ಕೆ ಅವನದ್ದೇ ರೂಪ ಕಾಂಬಲೆ ಸುರುವಾತು.
'ಮಾವ° ಮನು ಹೇಳಿ ಹೆಸರು ಹೇಳಿದ್ದವು, ಚೆಂದದ ಹೆಸರು, ಅವನೂ ಹಾಂಗೇ. ಗುಣವೂ ಒಳ್ಳೆದು ಹೇಳ್ತವು, ಆದರೂ ಏಕೆ ಕೂಸು ಸಿಕ್ಕಿದ್ದಿಲ್ಲೆ. ಸುಮಿತ್ರ ಹೇಳಿದಾಂಗೆ ಪೂಜೆ ಮಾಡುವ ಕಾರಣ ಆದಿಕ್ಕಾ? ಛೇ....! ಹಾಂಗೊಂದು ಕ್ರಮ ಇದ್ದಾ? ಗುಣ ಒಳ್ಳೆದಿದ್ದರೆ ಸಾಲದಾ ? ಆನು ಆರನ್ನಾರು ಮದುವೆ ಆವ್ತೆ ಹೇಳಿದರೆ ಅಪ್ಪ° ಒಪ್ಪುಗಾ? ' ಒಂದರಿ ಹಾಂಗಿದ್ದ ಯೋಚನೆ ಬಂದರೂ ಕೂಡ್ಲೇ ಅದರ ತಲೆಂದ ತೆಗದಿಡ್ಕಿತ್ತು.
" ಇದೆಂತ ಇಲ್ಲಿ ಬಂದು ಕೂದ್ದು? ಬಾ ..ಕಾಪಿ ಕುಡಿವ°. ಇಲ್ಯಾಣ ವಿಶೇಷ ತಿಂಡಿ ಪುಟ್ಟುದೆ ,ಕಡ್ಲೆ ಬೆಂದಿಯುದೆ ಮಾಡಿದ್ದವು ಅಜ್ಜಿ" ಅಬ್ಬೆ ಬಂದು ದಿನಿಗೇಳಿಯಪ್ಪಗ ಕೂದಲ್ಲಿಂದಾ ಫಕ್ಕನೆ ಎದ್ದತ್ತದು.
" ಎಂತ ಉದಾಸೀನಪ್ಪಲೆ ಸುರುವಾತ ?" ನಿನ್ನ ಅಪ್ಪ° ನಾಳಂಗೆ ಬಕ್ಕು. ನೀನು ಹೋವ್ತರೆ ಹೋಗು, ಆನು ಅತ್ತಗೆ ಸರೀ ನಡವಲೆ ಎಡಿವನ್ನಾರ ಬತ್ತಿಲ್ಲೆ. ಇಲ್ಲಿ ಅಜ್ಜಿಗೆ ಒಬ್ಬನೇ ಬಂಙಕ್ಕು " ಅಬ್ಬೆಯ ಮಾತಿಂಗೆ ಮಂಜರಿ ಎಂತದೂ ಹೇಳಿದ್ದಿಲ್ಲೆ.
ಅಬ್ಬೆಯ ಬಿಟ್ಟು ತುಂಬ ದಿನ ನಿಂದು ಅದಕ್ಕೂ ಅಭ್ಯಾಸ ಇಲ್ಲೆ. ಶಾಲೆ, ಕಾಲೇಜಿಂಗೆ ಹೋಪಗಲೂ ಮನೆಂದಲೇ ಹೋಗಿ ಬಂದ ಜೆನ ಅದು.
ಸರೋಜಿನಿ ಮಂಜರಿಯ ಸೋದರತ್ತೆ. ಕೇರಳದ ಪಾಲೆಕ್ಕಾಡಿಲ್ಲಿ (ಪಾಲ್ಘಾಟ್) ಇಪ್ಪದು. ಚಾಟು ಮದುವೆ ಆದ್ದದಾದರೂ ಅವರ ಮದುವೆ ಅಪ್ಪಗ ಮಾವಂಗೆ ಇತ್ಲಾಗಿ ಬಂದಾಯಿದು. ಮತ್ತೆ ಮಾವಂಗೆ ಇಲ್ಲಿ ಕೆಲಸ ಸಿಕ್ಕಿತ್ತು ಹೇಳಿ ಅಜ್ಜಿಯನ್ನು ಕರಕೊಂಡು ಕುಟುಂಬ ಸಮೇತರಾಗಿ ಇಲ್ಲಿಯೇ ಬಂದು ನೆಲೆಸಿದ್ದು. ಹಾಂಗಾಗಿ ಅವಕ್ಕೆಲ್ಲ ಹೆಚ್ಚು ಮಲೆಯಾಳ ಕ್ರಮವೇ ಅಭ್ಯಾಸ. ಆದರೂ ಅಜ್ಜಿ ಕೆಲವು ಕ್ರಮಂಗಳ ಈಗಲೂ ಒಳುಶಿಕೊಂಡಿದವು.
ಶಾಲಗೆ ರಜೆ ಸಿಕ್ಕಿಯಪ್ಪಗ ಸರೋಜತ್ತೆ ಊರಿಂಗೆ ಬಂದುಕೊಂಡಿದ್ದತ್ತು. ರಣ ಬೇಸಗೆಲಿ ಪಾಲೆಕ್ಕಾಡು ಕೊದಿವಷ್ಟು ಬೆಶಿಲು. ಹಾಂಗಾಗಿ ಅವ್ವೇ ಊರಿಂಗೆ ಬಪ್ಪಗ ಮಂಜರಿಗೆ ಮಾವನ ಮನೆಗೆ ಹೋಪಲೆಡಿಯನ್ನೆ. ಮತ್ತೆ ಅಂಬಗಂಬಗ ಹೋಪಲೆ ಅದು ಹತ್ತರೆಯೂ ಅಲ್ಲ. ಹಾಂಗಾಗಿ ಅದಕ್ಕೆ ಈ ಮಾವನ ಮನಗೆ ಹೆಚ್ಚು ಬಂದು ಗೊಂತಿಲ್ಲೆ. ಅಬ್ಬೆಯೊಟ್ಟಿಂಗೆ ಅಜ್ಜನ ತಿಥಿಗೆ ವರ್ಷಕ್ಕೊಂದರಿ ಬಪ್ಪದೇ ಹೆಚ್ಚು.
ಈಗ ಅತ್ತಗೆ ಕಾಲು ಅಡಿಮೊಗಚ್ಚಿ ಬೀಗಿ ನಡವಲೆ ಎಡಿಯದ್ದಷ್ಟು ಜೋರಾಯಿದು. ಮಾವಂಗೆ ರಜೆ ಹಾಕಲೂ ಎಡಿಯ. ಶಾಲಿನಿ, ಶಾಕಂಭರಿ ಇಬ್ರಿಂಗೂ ಕೋಲೇಜು, ಶಾಲಗೆ ಹೋಪಲಿದ್ದು. ಅಜ್ಜಿಗೆ ಒಬ್ಬಂಗೇ ಎಲ್ಲವೂ ಪೂರೈಸುತ್ತಿಲ್ಲೆ. ಹಾಂಗಾಗಿ ಕಾಲು ಬೇನೆ ಗುಣಪ್ಪನ್ನಾರ ಬಂದು ನಿಂಬಲೆಡಿಗೋಳಿ ಸರೋಜ° ಅತ್ತಿಗೆ ಹತ್ತರೆ ಕೇಳಿದ್ದದು.
"ಮಂಜರಿಯ ಪರೀಕ್ಷೆ ಮುಗುದ ಕಾರಣ ಅದರ ಒಬ್ಬನೇ ಬಿಟ್ಟಿಕ್ಕಿ ಹೋಪದು ಬೇಡ, ಆನು ಆಪೀಸಿಂದ ಬಪ್ಪಗ ತಡವಾದರೆ ಇಡೀ ದಿನ ಉದಾಸೀನ ಅಕ್ಕದಕ್ಕೆ" ಹೇಳಿ ಅಪ್ಪ° ಹೇಳಿದ್ದದೇ ತಡ ಮಂಜರಿ ಭಾರೀ ಕೊಶೀಲಿ ಹೆರಟತ್ತು. ಶಾಲಿನಿಯೊಟ್ಟಿಂಗೆ ಒಂದು ವಾರ ಕೂಬಲಕ್ಕನ್ನೇ. ಅಂದರೂ ಅಪ್ಪನ ಬಿಟ್ಟಿಕ್ಕಿ ಹೋಪಲೆ ಮನಸ್ಸಿಲ್ಲೆ ಕೂಸಿಂಗೆ. ರಜಾ ಮುರು ಮುರು ಮಾಡಿಯಪ್ಪಗ
" ಒಂದು ಹತ್ತು ದಿನ ಕಳುದು ಆನು ಕರಕೊಂಡು ಬಪ್ಪಲೆ ಬತ್ತೆ " ಹೇಳಿ ಅಪ್ಪ° ಹೇಳಿದ್ದು ರಜ ಸಮದಾನ ಆತು ಮಂಜರಿಗೆ.
ಸರಿಯಾಗಿ ಭಾಶೆ ಬಾರದ್ದ ಕಾರಣ ಆ ಊರಿಂಗೆ ಹೋಪಲೆ ರಜಾ ಅಂಜಿಕೆಯೂ ಇದ್ದದಕ್ಕೆ. ಅಂದರೂ ಅಬ್ಬೆ ಒಟ್ಟಿಂಗೆ ಇದ್ದನ್ನೇಳಿ ಧೈರ್ಯ. ಶಾಲಿನಿಯ ಕಾಂಬ ಆಶೆ.
(ಇನ್ನೂ ಇದ್ದು...)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ