ನಮಗೆ ಭಗವಂತ ಎರಡು ಕಿವಿಗಳನ್ನು, ಎರಡು ಕಣ್ಣುಗಳನ್ನು ಕೇಳಲು, ನೋಡಲು ಕೊಟ್ಟು ಸಹಕರಿಸಿದ್ದಾನಲ್ಲವೇ? ನಾವು ಮಾತ್ರ ದೇವನ ಆಸೆಯನ್ನು ಪೂರೈಸದೆ, ನಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತೇವೆ. (ಎಲ್ಲರಲ್ಲ). ಶಬ್ದಗಳನ್ನು ಕೇಳುವುದೇ ಕಿವಿಯ ಕೆಲಸ. ಹಿತ ಮಿತ ಕಿವಿಗಳಿಗಿಷ್ಟ, ಘೋರ-ಕರ್ಕಶ ಯಾಕೋ ಹಿಡಿಸದು. ಯಕ್ಷಗಾನ, ನಾಟಕ, ಒಮ್ಮೊಮ್ಮೆ ಶಿಕ್ಷಕರಿಗೂ ಸಮಯ, ಸಂದರ್ಭವರಿತು ಸ್ವರಭಾರ ಬೇಕಾಗಬಹುದು. ಅಧ್ಯಾಪಕರ ಮಾತು, ಬೋಧನೆ ಎಲ್ಲದರಲ್ಲೂ ಸ್ವರಭಾರ ಅಗತ್ಯವಾಗಿ ಬೇಕು. ಅದು ಕೇವಲ ಮಗುವಿನ, ಆಲಿಸುವಿಕೆ ಗ್ರಹಿಕೆ, ಬುದ್ಧಿವಿಕಸನಕ್ಕಾಗಿ, ಕಣ್ಣುಗಳ ಚುರುಕುತನಕ್ಕಾಗಿ, ಜ್ಞಾನ ಸಂಪಾದನೆಗೆ ಮಾತ್ರ.
ವೇದಶಾಸ್ತ್ರ ಪುರಾಣ, ಮಹಾತ್ಮರ ಜೀವನ ಚರಿತ್ರೆ, ಮಧುರವಾದ ಮಾತು, ಸಂಗೀತ ಇದನ್ನೆಲ್ಲ ಆಲಿಸಲು ಕಿವಿಗಳು ಬೇಕು. "ಭದ್ರಂ ಕರ್ಣೇಭಿ: ಶೃಣುಯಾಮ ದೇವಾ:" ಎಂಬುದಾಗಿ ವೇದಗಳಲ್ಲಿ ಉಲ್ಲೇಖವಿದೆ. ಒಳ್ಳೆಯದನ್ನೇ ಕೇಳೋಣ ನೋಡೋಣ-ಹೇಳೋಣ. ಕಿವಿಗಳಿಗೆ ಬಾಗಿಲುಗಳೆಂಬ ತಡೆಯಿಲ್ಲ. ನಾವೇ ಕೃತಕವಾಗಿಟ್ಟುಕೊಳ್ಳಬೇಕಷ್ಟೆ, ಆರೋಗ್ಯ ದೃಷ್ಟಿಯಿಂದ. ತಡೆಯೊಡ್ಡಿದರೂ ಸ್ವಲ್ಪ ಕೇಳಬಹುದು.
ಸದ್ವಿಚಾರಗಳು, ಸಾಧು ಸಂತರ ನುಡಿಗಳು, ಹಿರಿಯರ ಮಾತುಗಳು, ಕಿರಿಯರ ತೊದಲ್ನುಡಿಗಳು ನಮ್ಮ ಮೇಲೆ ಗಾಢ ಪರಿಣಾಮ ಬೀರುತ್ತದೆ. ಉತ್ತಮ ಪುಸ್ತಕಗಳ ಅಧ್ಯಯನವೂ ಜ್ಞಾನಕ್ಕೆ ಬೇಕು. ಶ್ರವಣವೆನ್ನುವುದು ಬೇಕೋ ಬೇಡದೆಯೋ ಆಗುವ ಕೆಲಸ. ಬೇಕಾದ್ದನ್ನು ಮಾತ್ರ ಸ್ವೀಕರಿಸೋಣ. ಕಣ್ಣುಗಳು ಹಾಗಲ್ಲ. ಬೇಡವಾದ್ದು, ಅಪಾಯದ್ದು ಇಷ್ಟವಿಲ್ಲವೆಂದಾದರೆ ರೆಪ್ಪೆಗಳು ಭದ್ರತೆ ನೀಡಿ ರಕ್ಷಿಸುತ್ತದೆ. "ಸರ್ವೇಂದ್ರಿಯಾಣಾಂ ನಯನಂ ಪ್ರಧಾನಮ್" ಸುಭಾಷಿತ ವಾಕ್ಯ. ಕಣ್ಣೆನ್ನುವ ಅಮೂಲ್ಯ ಸಂಪತ್ತಿನ ಆರೋಗ್ಯ ಬಹು ಮುಖ್ಯ.
ಕಣ್ಣಿದ್ದೂ ಕುರುಡಾಗಿ ವರ್ತಿಸುವವರೂ ನಮ್ಮ ನಿಮ್ಮ ನಡುವೆಯಿದ್ದಾರೆ, ಅವರೇ 'ಜಾಣಕುರುಡರು'. ಕಿವಿಗಳಿದ್ದೂ ಕೇಳದಂತೆ ನಾಟಕ ಮಾಡುವವರನ್ನು 'ಜಾಣ ಕಿವುಡರು' ಹೇಳುತ್ತೇವೆ. ಅನ್ಯರ ಕಷ್ಟ-ಕಾರ್ಪಣ್ಯಗಳಿಗೆ ಕಿವಿಯಾಗೋಣ, ಕಣ್ಣಾಗೋಣ.ಎಲ್ಲವೂ ದೇವನ ಕೊಡುಗೆ,ಸರಿಯಾದ ದಾರಿಯಲ್ಲಿ ಮುನ್ನಡೆಯೋಣ.
ತಾನೇ ಕಲಿತವ, ತನಗೇ ಎಲಲ್ಲವೂ ತಿಳಿದಿರುವುದು, ತಾನು ಹೇಳಿದ್ದೇ ವೇದವಾಕ್ಯವೆಂಬ ಅಹಂ ಬೇಡ. ಹಿರಿಯ-ಕಿರಿಯ ಎನ್ನುವ ಭೇದ ಬೇಡ. ಹೇಳುವ ರೀತಿಯಲ್ಲಿ ಹೇಳಬೇಕು, ಸ್ಥಳ, ಸಮಯ, ಸಂದರ್ಭದ ಅರಿವಿರಬೇಕು. ದೇವರಿಗೆ ಅಪಚಾರವಾಗದಂತೆ ಕಾರ್ಯ ನಿರ್ವಹಿಸಬೇಕು, ಸುತ್ತಮುತ್ತ ಸೇರಿದವರಿಗೆ ಮುಜುಗರ ತರುವ ವ್ಯವಹಾರ ಮಾಡಬಾರದು. ಕಣ್ಣು, ಕಿವಿ, ಬಾಯಿಗಳ ಸಂದರ್ಭವರಿತು ಬಳಸಿ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳೋಣ.
ಕಲಿತವನು ತಾನೆಂಬ ಮಮಕಾರ ಬಿಟ್ಟುಬಿಡು
ಕಲಿಯಲಿದೆ ಬಹಳಷ್ಟು ಅರಿಯದೇ ನಿನಗೆ/
ತಿಳಿಯುತಲಿ ಕಲಿಯುತಲಿ ಗೌರವಿಸು ಎಲ್ಲರನು
ಕಲಿಶರಣು ನೀನಪ್ಪೆ--ಕೃಷ್ಣಕಾಂತೆ//
- ರತ್ನಾ ಕೆ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ