ಹಳಗನ್ನಡ, ನಡುಗನ್ನಡ ಕಾವ್ಯಗಳು ಸಾಹಿತ್ಯಲೋಕದ ಅಕ್ಷಯಪಾತ್ರೆಗಳು: ಚೇತನರಾಮ ನೂರಿತ್ತಾಯ

Upayuktha
0


 ಮೀಯಪದವು: "ಹಳಗನ್ನಡ ಹಾಗೂ ನಡುಗನ್ನಡ ಕಾವ್ಯಗಳು ಸಾಹಿತ್ಯ ಲೋಕದ ಅಕ್ಷಯಪಾತ್ರೆಗಳು. ಎಲ್ಲ ಸಾಹಿತ್ಯಾಭಿಮಾನಿಗಳೂ ಕಲಾಭಿಮಾನಿಗಳೂ ಅವುಗಳನ್ನು ಯಥೇಚ್ಛವಾಗಿ ಬಳಸಬೇಕು, ತನ್ಮೂಲಕ ಮುಂದಿನ ಪೀಳಿಗೆಗೆ ಅವುಳನ್ನು ಶುದ್ಧರೂಪದಲ್ಲಿಯೇ ನೀಡಬೇಕು" ಎಂದು ಕಾಸರಗೋಡಿನ ಶಿವಳ್ಳಿ ಬ್ರಾಹ್ಮಣ ಸಭಾ (ರಿ) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೇತನರಾಮ ನೂರಿತ್ತಾಯ, ಪಜಿಂಗಾರು ಅಭಿಪ್ರಾಯಪಟ್ಟರು.


ಗಮಕ ಕಲಾ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಗಳ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮೀಯಪದವಿನ ಚಿಗುರುಪಾದೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಗಮಕಶ್ರಾವಣ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಮುಖ್ಯ ಭಾಷಣಗಾರರಾಗಿ ಮಾತಾಡಿದರು.

 

ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಅವರು ದೀಪಬೆಳಗಿ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು ಅವರು ಮುಖ್ಯ ಅತಿಥಿಗಳಾಗಿ ಗಮಕ ಕಲೆಯ ಪ್ರಾಚೀನತೆಯ ಬಗ್ಗೆ ಮಾತಾಡಿದರು.  



ವಿ.ಬಿ. ಕುಳಮರ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಾಸರಗೋಡಿನಲ್ಲಿ ಗಮಕ ಪರಂಪರೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅದು ಬೆಳೆದು ಬಂದ ಇತಿಹಾಸವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀಶ ಕವಿಯ ಜೈಮಿನಿಭಾರತದಿಂದಾಯ್ದ "ಕುಶಲವರ ಜನನ" ಎಂಬ ಕಾವ್ಯಭಾಗವನ್ನು ಖ್ಯಾತ ಗಮಕಿ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ಸುಶ್ರಾವ್ಯವಾಗಿ ವಾಚನ ಮಾಡಿದರು. ನಿವೃತ್ತ ಪ್ರಾಂಶುಪಾಲ ಯು.ಎಸ್. ವಿಶ್ವೇಶ್ವರ ಭಟ್ ಅವರು ತುಲನಾತ್ಮಕವಾಗಿ ವ್ಯಾಖ್ಯಾನ ಗೈದರು.  


ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಸ್ವಾಗತಿಸಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಧನ್ಯವಾದವಿತ್ತರು. ವಿ.ಬಿ. ಕುಳಮರ್ವ ವಿರಚಿತ ಭಾಮಿನಿ ಷಟ್ಪದಿಯ ಗಮಕಗೀತೆಯನ್ನು ಅಧ್ಯಾಪಿಕೆ ಶ್ರೀಮತಿ ರಾಧಾಮಣಿ ಅವರು ಪ್ರಾರ್ಥನೆಯಾಗಿ ಹಾಡಿದರು. ಪುಷ್ಪರಾಜ ಶೆಟ್ಟಿ ಅವರು ಕಾರ್ಯಕ್ರಮದ ನಿರ್ವಹಣೆ ಗೈದರು.


ವಿ.ಬಿ.ಕುಳಮರ್ವ ಅವರ ಮುತ್ತಾತ ದಿ.ಕುಳಮರ್ವ ವೆಂಕಪ್ಪ ಭಟ್ಟರು ಇನ್ನೂರು ವರ್ಷಗಳ ಹಿಂದೆ ತಾಳೆಯೋಲೆಯಲ್ಲಿ ಕಬ್ಬಿಣದ ಕಂಠದ ಮೂಲಕ ಬರೆದ ಸಮಗ್ರ ತೊರವೆ ರಾಮಾಯಣ ಮಹಾಕಾವ್ಯವು ವ್ಯಾಸ ಪೀಠದ ಮೇಲೆ ವಿಶೇಷ ಆಕರ್ಷಣೆಯಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top