ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಅಭಿವ್ಯಕ್ತಿ ಸ್ವೇಚ್ಛಾಚಾರವಲ್ಲ, ಮಾಧ್ಯಮದ ಹೆಸರಿಟ್ಟುಕೊಂಡವರೆಲ್ಲರೂ ಮಾಧ್ಯಮದವರಲ್ಲ

Upayuktha
0



ನಾನು ಬರೆಯುತ್ತಿರುವುದು ತುಸು ದೀರ್ಘವಾಗಿದೆ. ಇದು ಸಾಕಷ್ಟು ಮಂದಿಗೆ ಇಷ್ಟವಾಗದು ಎಂದು ಕೂಡ ಗೊತ್ತು. ಆದರೆ ಮಾಧ್ಯಮದ ವಿದ್ಯಾರ್ಥಿಯಾಗಿ ಸೋಶಿಯಲ್ ಮೀಡಿಯಾದ ಬಗ್ಗೆ, ಧರ್ಮಸ್ಥಳದ ಸ್ಥಳೀಯನಾಗಿ ಧರ್ಮಸ್ಥಳದ ಬಗ್ಗೆ ನನ್ನದೇ ಆದ ಕೆಲವು ವಿಚಾರಗಳನ್ನು ಹಂಚಿಕೊಳ್ಳಬೇಕಾಗಿದೆ. ಮತ್ತು ಇದು ನೂರಕ್ಕೆ ನೂರು ವೈಯಕ್ತಿಕ. 


ಯೂಟ್ಯೂಬರುಗಳು, ಸೋಶಿಯಲ್ ಮೀಡಿಯಾದ ಕೆಲವು ಪೇಜುಗಳು, ಮತ್ತು ಅವುಗಳಿಗೆ ಏನೂ ಕಮ್ಮಿಯಿಲ್ಲದಂತೆ ವರ್ತಿಸುತ್ತಿರುವ ಮುಖ್ಯವಾಹಿನಿಯವು ಎನ್ನಬಹುದಾದ ಕೆಲವು ಟಿವಿ ಚಾನೆಲ್ ಗಳು … ಇವುಗಳ ಬಗ್ಗೆ ಒಂದಿಷ್ಟು ಅಸಹನೆಯ ಕೆಲವು ಪೋಸ್ಟ್‌ ಗಳನ್ನು ಇತ್ತೀಚೆಗೆ ಹಾಕಿದಾಗ “ನಿಮಗ್ಯಾಕೆ ಸಂಕಟ…?” “ಅವರು ನಿಮಗೇನು ಮಾಡಿದ್ದಾರೆ?” “ಅವು ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತಿದ್ದಾವೆ” ಇತ್ಯಾದಿ ಪ್ರತಿಕ್ರಿಯೆಗಳು ಬಂದವು.


ಇದು ಡಿಜಿಟಲ್ ಮಾಧ್ಯಮಗಳ ಕಾಲ ಎಂಬುದರಲ್ಲಿ ಎರಡು ಮಾತಿಲ್ಲ. “Future is digital” ಅಂತ ಘೋಷಿಸಿ ದಶಕವೇ ಉರುಳಿದೆ. ಫ್ಯೂಚರ್ ಈಸ್ ಡಿಜಿಟಲ್ ಅಂದಾಗ ಅಲ್ಲೊಂದು ಸಂಭ್ರಮ, ಭವಿಷ್ಯದ ಕುರಿತ ಕುತೂಹಲ ಇತ್ತು. ಸಾಮಾಜಿಕ ಮಾಧ್ಯಮದ ಆವಿರ್ಭಾವವನ್ನು ನಾವೆಲ್ಲ “democratization of communication – ಸಂವಹನದ ಪ್ರಜಾಪ್ರಭುತ್ವೀಕರಣ” ಎಂದು ಸಂಭ್ರಮಿಸಿದೆವು. ಪತ್ರಿಕೆಗಳೂ ಸೇರಿದಂತೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಜನಸಾಮಾನ್ಯರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಅವಕಾಶ ಸಿಗದ ಹೊತ್ತಿನಲ್ಲಿ ಓಯಸಿಸ್ಸಿನಂತೆ ಕಂಡದ್ದು ಸೋಶಿಯಲ್ ಮೀಡಿಯಾ. ಓ! ಎಲ್ಲರಿಗೂ ಮಾತಾಡುವ ಒಂದು ವೇದಿಕೆ ಸಿಕ್ಕಿತು, ಇನ್ನು “ಧ್ವನಿಯಿಲ್ಲದವರು” ಎಂದು ಹೇಳಬೇಕಾಗಿಲ್ಲ ಅಂತ. 


ಆದರೆ ಬರಬರುತ್ತಾ ಅದು ಹಾಗಾಗುತ್ತಿಲ್ಲವಲ್ಲ ಎಂಬುದೇ ವಿಷಾದದ ಸಂಗತಿ. ಮಾಧ್ಯಮ ಎಂದು ಕರೆಸಿಕೊಳ್ಳಬೇಕಾದರೆ ಒಂದು ವೇದಿಕೆಗಿರಬೇಕಾದ ಪ್ರಾಥಮಿಕ ಲಕ್ಷಣವೇ ಜವಾಬ್ದಾರಿ ಮತ್ತು ನಿಷ್ಪಕ್ಷಪಾತತೆ. ಅದನ್ನು ಸೋಶಿಯಲ್ ಮೀಡಿಯಾ ಉಳಿಸಿಕೊಂಡಿದೆಯಾ? ಇತ್ತೀಚೆಗಂತೂ ಪರಸ್ಪರ ಹೊಡೆದಾಡಿಕೊಳ್ಳುವ, ಜನರ ಮಧ್ಯೆ ದ್ವೇಷ ಮತ್ತು ಅಪನಂಬಿಕೆ ಬಿತ್ತುವ ಏಜೆಂಟುಗಳಾಗಿಯೇ ಇವು ಬೆಳೆಯುತ್ತಿವೆ. ಇವುಗಳಿಗಿಂತ ಮಿಗಿಲಾಗಿ ಸೋಶಿಯಲ್ ಮೀಡಿಯಾದ ಮೂಲಕ ಒಂದಿಷ್ಟು ದುಡಿದುಕೊಳ್ಳಬಹುದು, ಅದಕ್ಕೆ ಬೇಕಾಗಿರುವ ಫಾಲೋವರ್ಸ್, ಕ್ಲಿಕ್ಸ್ ಮತ್ತು ವ್ಯೂಸ್ ಸಂಪಾದಿಸಿಕೊಳ್ಳುವುದಕ್ಕೆ ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂದೇ ಬಹಳಷ್ಟು ಮಂದಿ ತಿಳಿದುಕೊಂಡಂತಿದೆ.


ಸುದ್ದಿಯ ಕ್ಷುಲ್ಲಕೀಕರಣ (trivialization of news) ನಡೆಯುತ್ತಿದೆ ಎಂದು ಹೊಸ ಸಹಸ್ರಮಾನದ ಆದಿಯಲ್ಲಿ ಸಾಕಷ್ಟು ಮಂದಿ ಕಳವಳಪಟ್ಟರು. ಸುದ್ದಿಮೌಲ್ಯದ ಪರಿಕಲ್ಪನೆಗಳೆಲ್ಲ ಮೂಲೆಗುಂಪಾಗಿ ಸಣ್ಣಪುಟ್ಟ ವಿಚಾರಗಳೆಲ್ಲ ಸುದ್ದಿಯಾಗುತ್ತಿವೆಯಲ್ಲ ಎಂಬ ಆತಂಕ ಅದು. ಈಗಿನ ಸೋಶಿಯಲ್ ಮೀಡಿಯಾ ಪೇಜುಗಳು, ಯೂಟ್ಯೂಬರುಗಳು “ಸುದ್ದಿ” ನೀಡುವ ನೆಪದಲ್ಲಿ ಎತ್ತಿಕೊಳ್ಳುತ್ತಿರುವ ವಿಷಯಗಳನ್ನು ನೋಡಿದರಂತೂ ಅಂದಿನ ಆತಂಕಗಳೆಲ್ಲ ಯಾವ ಲೆಕ್ಕದ್ದು ಎನಿಸುತ್ತದೆ. ಯಾರು ಯಾರೊಂದಿಗೆ ಓಡಿ ಹೋದರು, ಯಾರಿಗೆ ಯಾರೊಂದಿಗೆ ಅಫೇರ್ ಇದೆ, ಯಾರಿಗೆ ಡೈವೋರ್ಸ್ ಆಯ್ತು, ಯಾರು ಸರೋಗಸಿ ಮಾಡಿಸಿಕೊಂಡರು, ವೀರ್ಯದಾನಿ ಯಾರು… ಇತ್ಯಾದಿ ತೀರಾ ತೀರಾ ವೈಯಕ್ತಿಕ ಎನಿಸುವ ವಿಷಯಗಳೆಲ್ಲ ಜಗತ್ತಿನ ಮಹಾ ವಿದ್ಯಮಾನಗಳೆಂಬಂತೆ ಚಿತ್ರಿತವಾಗುತ್ತಿವೆ. ಮುಖ್ಯವಾಹಿನಿಯ ಮಾಧ್ಯಮಗಳು ಕೂಡ ಇವನ್ನೆಲ್ಲ ಮಾಡುತ್ತಿವೆಯಲ್ಲ ಎಂದು ಕೇಳಬಹುದು. ಅವೂ ಮಾಡುತ್ತಿವೆ, ಆದರೆ ಅವಕ್ಕೊಂದು ವಿಳಾಸ ಇದೆ. ಸಂಪಾದಕರು ಇದ್ದಾರೆ. ಅವರನ್ನು ಪ್ರಶ್ನಿಸಬಹುದು. ಕಾನೂನಿನ ಪರಿಧಿಯನ್ನು ತೋರಿಸಿಕೊಡಬಹುದು. ಆದರೆ ಇವುಗಳ ಕತೆಯೇನು? ಇವರನ್ನೆಲ್ಲ ಕೇಳುವವರು ಯಾರು? 


ಹೆಚ್ಚಿನವರೂ ಹಿಟ್-ಅಂಡ್-ರನ್ ಕೇಸಿನವರೇ. ಸಂಕ ಮುರಿದಲ್ಲಿ ಸ್ನಾನ ಮಾಡುವವರು; ಕಂಡಲ್ಲೊಂದು ಕಲ್ಲೆತ್ತಿ ಒಗೆದು ಓಡಿಹೋಗುವವರು, ಅನಾಮಿಕರು, ವಿಳಾಸವಿಲ್ಲದವರು. ಇಂತಹ ಪೇಜುಗಳಿಂದ, ಪೋಸ್ಟುಗಳಿಂದ, ಕಮೆಂಟುಗಳಿಂದ ಸೋಶಿಯಲ್ ಮೀಡಿಯಾ ಕದಡಿದ ರಾಡಿಯಂತೆ ಆಗಿದೆ. ಇವರು ನಿಷ್ಪಕ್ಷಪಾತವಾಗಿ ಯಾವುದೋ ಹೋರಾಟ ನಡೆಸುತ್ತಿದ್ದಾರೆ ಎಂಬುದು ಶುದ್ಧ ಬೊಗಳೆ. ಇವರು ಎತ್ತಿಕೊಳ್ಳುತ್ತಿರುವ ಕಂಟೆಂಟ್, ಅದಕ್ಕೆ ಕೊಡುವ ವಿವರಣೆ, ಬಳಸುತ್ತಿರುವ ಭಾಷೆ, ಮಂಡಿಸುತ್ತಿರುವ ಅಭಿಪ್ರಾಯ – ಯಾವುದರಲ್ಲೂ ಸಮತೋಲನ ಇಲ್ಲ. ಎಲ್ಲರೂ ತಮ್ಮ ಮೂಗಿನ ನೇರಕ್ಕೆ ಮಾತಾಡುವವರೇ. ಎಲ್ಲ ಯೂಟ್ಯೂಬರುಗಳು, ಸೋಶಿಯಲ್ ಮೀಡಿಯ ಪೇಜುಗಳು ಹೀಗೆಯೇ ಇವೆ ಎಂಬುದೇನೂ ನನ್ನ ಅಭಿಪ್ರಾಯ ಅಲ್ಲ. ಆದರೆ ಬಹುಪಾಲು ಮಂದಿಯ ಕಥೆ ಇದೇ ಆಗಿದೆ. ಇವರಿಗೆ ಯಾವ ಆಂದೋಲನವೂ ಬೇಕಿಲ್ಲ, ಯಾರಿಗೂ ನ್ಯಾಯ ಕೊಡಿಸಬೇಕಿಲ್ಲ. ಇವರಿಗಿರುವುದು ಒಂದೋ ವ್ಯೂಸ್ ಹುಚ್ಚು, ಇಲ್ಲಾ ಯಾವುದೋ ಒಂದು ಅಜೆಂಡಾ. ಮಾಧ್ಯಮಗಳಿಗೂ ರೆಗ್ಯುಲೇಶನ್ ಬೇಕಿದೆ, ಸೋಶಿಯಲ್ ಮೀಡಿಯಾಕ್ಕೂ ಬೇಕಿದೆ ಎಂದ ಕೂಡಲೇ ಇವರೆಲ್ಲ “ಅಭಿವ್ಯಕ್ತಿ ಸ್ವಾತಂತ್ರ್ಯ”ದ ವರಸೆ ಹಚ್ಚಿಕೊಳ್ಳುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹನನ… ಅಭಿಪ್ರಾಯ ಹತ್ತಿಕ್ಕುವ ಪ್ರಯತ್ನ… ಇತ್ಯಾದಿ. ಯಾವುದು ಅಭಿವ್ಯಕ್ತಿ ಸ್ವಾತಂತ್ರ್ಯ? ಯಾರನ್ನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ತೇಜೋವಧೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹೇಗಾಗುತ್ತದೆ? 19(1)(a) ವಿಧಿ ಮೂಲಕ ವಾಕ್ & ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿರುವ ಅದೇ ಸಂವಿಧಾನ 19(2) ವಿಧಿಯನ್ನೂ ಸೂಚಿಸಿಲ್ಲವೇ? ಅಭಿವ್ಯಕ್ತಿಯ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ-ಸಾಮರಸ್ಯ ಕದಡುವ ಅಧಿಕಾರವನ್ನು ಯಾವ ಕಾನೂನು, ಸಂವಿಧಾನ ಕೊಟ್ಟಿದೆ?


ನಿನ್ನೆ ಧರ್ಮಸ್ಥಳದಲ್ಲಿ ನಡೆದ - “ಯೂಟ್ಯೂಬರುಗಳ ಮೇಲೆ ಹಲ್ಲೆ” ಎಂದು ಕರೆಸಿಕೊಂಡ – ಪ್ರಕರಣವಾದರೂ ಸರಿ. ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಏನಿದ್ದರೂ ಕಾನೂನುಬದ್ಧವಾಗಿ ಹೋಗಬೇಕು ಎಂಬ ಮಾತನ್ನೆಲ್ಲ ನಾನು ಒಪ್ಪುತ್ತೇನೆ. ಆದರೆ ಜನಸಾಮಾನ್ಯರು ಎಷ್ಟು ಸಮಯ ಅಂತ ತಾಳ್ಮೆ ವಹಿಸಿಯಾರು? ಒಂದು ಹಂತದಲ್ಲಿ ಅವರು ತಾಳ್ಮೆ ಕಳೆದುಕೊಳ್ಳುವುದು ವಿಚಿತ್ರವೇನೂ ಅಲ್ಲ. ಅದು ಮನುಷ್ಯಗುಣ. ಅದರಲ್ಲೂ ತಾವು ದಿನನಿತ್ಯ ನಡೆದಾಡುವ, ಬದುಕುತ್ತಿರುವ ಊರಿನ ಬಗ್ಗೆ, ತಾವು ಗೌರವಿಸುವ ಧಾರ್ಮಿಕ ಕೇಂದ್ರದ ಬಗ್ಗೆ, ಮಂದಿಯ ಬಗ್ಗೆ ನಿರಂತರವಾಗಿ ಅವಹೇಳನಕರವಾದ ಮಾತುಗಳನ್ನು ಆಡುವಾಗ ಅವರ ತಾಳ್ಮೆ ಕಟ್ಟೆಯೊಡೆದದ್ದು ಎಲ್ಲಿಯೂ ನಡೆಯದ ಘಟನೆಯೇನೂ ಅಲ್ಲ. ಅದು ಹೇಗೆ ಅಷ್ಟು ಸುಲಭವಾಗಿ ಇವರೆಲ್ಲ "ಗೂಂಡಾ"ಗಳು ಅಂತ ಯಾರೋ ಬ್ರಾಂಡ್‌ ಮಾಡುವುದಕ್ಕೆ ಬರುತ್ತದೆ? ಅಕ್ರಮ –ಅನ್ಯಾಯ ನಡೆದಾಗ ಅದನ್ನು ತನಿಖೆ ಮಾಡುವುದಕ್ಕೆ, ಶಿಕ್ಷಿಸುವುದಕ್ಕೆ ನಮ್ಮಲ್ಲಿ ಪೊಲೀಸ್ ಇದೆ, ನ್ಯಾಯಾಂಗ ವ್ಯವಸ್ಥೆ ಇದೆ. ಎಲ್ಲವೂ ಕ್ರಮಬದ್ಧವಾಗಿ ನಡೆಯಲಿ ಎಂದು ಒತ್ತಾಯಿಸುವುದಕ್ಕೆ ನಮಗೆ ಸಂವಿಧಾನಬದ್ಧ ಹಕ್ಕೂ ಇದೆ. ಆದರೆ ಅದೇ ತನಿಖೆ ಮಾಡುವ, ತೀರ್ಪು ನೀಡುವ, ಶಿಕ್ಷೆ ಘೋಷಿಸುವ ಹಕ್ಕನ್ನು ಈ ಸೋಶಿಯಲ್ ಮೀಡಿಯದವರಿಗೆ ಯಾರು ಕೊಟ್ಟಿದ್ದಾರೆ? ಕಳೆದ ಕೆಲವು ತಿಂಗಳುಗಳಿಂದ ಇವರ ವರಸೆ ಹಾಗೆಯೇ ಇದೆ. ಇಂಥವರೇ ತಪ್ಪಿತಸ್ಥರು, ಇಂಥವರೇ ಅತ್ಯಾ * ಚಾರಿಗಳು, ಇವರನ್ನು “ಒದ್ದು ಒಳಗೆ ಹಾಕಿ” ಎಂದು ಒಂದೇ ಸಮನೆ ಹೇಳುತ್ತಲೇ ಇದ್ದಾರೆ. ಇವರನ್ನು ನೋಡಿಕೊಂಡು ಇಂಗ್ಲಿಷ್ ಮಾಧ್ಯಮಗಳೂ “hundreds of ra* pes” “mass bu* rrials” “serial ki* llings” ಎಂದೆಲ್ಲ ದಿನನಿತ್ಯ ಬರೆಯತೊಡಗಿವೆ. ಮೊನ್ನೆ ಒಂದು ಇಂಗ್ಲಿಷ್ ಮಾಧ್ಯಮದ ಸುದ್ದಿಗೆ ಬಂದ ಕಮೆಂಟ್ ಗಳಲ್ಲಿ “bulldoze that temple”  ಅಂತ ಒಬ್ಬ ಹಾಕಿದ್ದ. ಇವರಿಗೆ ಆ ದೇವಸ್ಥಾನ ಏನು ಮಾಡಿದೆ? ರಾಷ್ಟ್ರಮಟ್ಟದಲ್ಲಿ ಈ ಪುಕಾರುಗಳು ಕೊಟ್ಟಿರುವ ಚಿತ್ರಣವಾದರೂ ಏನು? ಎಂಬುದು ಇವರ ಅಸಲೀ ಉದ್ದೇಶವೇನು ಎಂಬ ಪ್ರಶ್ನೆಯನ್ನು ಸ್ಥಳೀಯರಲ್ಲಿ ಹುಟ್ಟುಹಾಕಿರುವುದು ಸಹಜವೇ ಆಗಿದೆ.  “ಆಪರೇಷನ್ ಅಸ್ಥಿಪಂಜರ” “ಧರ್ಮಸ್ಥಳ ಗಢಗಢ”, ಧರ್ಮಸ್ಥಳ ಹಾರರ್, ಧರ್ಮಸ್ಥಳ ಫೈಲ್ಸ್ … ಏನು ಸೀರಿಯಲ್ ಕಿ* ಲ್ಲಿಂ ಗ್ಸ್, ಮಾಸ್ ಬರಿ ಯಲ್ಸ್ ಅಂದರೆ? ಏನು ಅಲ್ಲಿ ಹ* ತ್ಯಾ ಕಾಂಡ ನಡೆದಿದೆಯಾ? ಮೊದಲು ಹತ್ತಾರು ಇದ್ದದ್ದು ನೂರಾರು ಆಗಿ ಈಗ ಅವರಿವರ ಬಾಯಿಗೆ ಸಿಕ್ಕು ಸಾವಿರಾರು ಎಲ್ಲ ಆಗಿದೆ. ಇಲಿ ಹೋಯಿತು ಎಂದದ್ದು ಹುಲಿ ಹೋಯಿತು ಎಂದಾದ ಹಾಗೆ. 


ಆ ಊರಿನ ಮಂದಿ ಎಷ್ಟು ದಿನ ಅಂತ ಇದನ್ನೆಲ್ಲ ನೋಡಿಕೊಂಡು ಕುಳಿತಾರು? ಈ ಹೂತದ್ದನ್ನು ಅಗೆಯುವ ಕೆಲಸ ಆರಂಭವಾದ ಮೇಲಂತೂ ಇವರಿಗೆಲ್ಲ ಹಬ್ಬವೇ ಆಗಿ ಹೋಗಿದೆ. ಕ್ಷಣಕ್ಕೊಂದು ಸುದ್ದಿ, ಅದರಲ್ಲಿ ರೋಚಕತೆ. ಎಲ್ಲಿ ಸಾಧ್ಯವೋ ಅಲ್ಲೆಲ್ಲ ಬಣ್ಣ ತುಂಬುವ ಕಟ್ಟುಕತೆಗಳು. ಸೋಶಿಯಲ್ ಮೀಡಿಯಾ ಬಳಸುವ ಮಂದಿಗಂತೂ ಹುಚ್ಚರ ಸಂತೆಯಲ್ಲಿ ಓಡಾಡಿದ ಅನುಭವ. ಅಲ್ಲಿ ಸಿಕ್ಕಿತಂತೆ ಇಲ್ಲಿ ಸಿಕ್ಕಿತಂತೆ… ಸುಳ್ಳುಸುದ್ದಿಗಳ ಮಹಾಪೂರ. ಮನಬಂದಂತೆ, ತಮ್ಮ ಪ್ರಾಪಗಾಂಡಕ್ಕೆ ಸರಿಹೊಂದುವಂತೆ ಎಡಿಟ್‌ ಮಾಡಿದ ವೀಡಿಯೋಗಳು... ಅರೆಬೆಂದ ಮಾಹಿತಿಗಳು... ಅರ್ಥವಿಲ್ಲದ ಲಾಜಿಕ್‌ ಗಳು... ಒಂದು ಅರ್ಥಪೂರ್ಣ ವಾಕ್ಯವನ್ನೂ ನೆಟ್ಟಗೆ ಹೇಳಲಾಗದ ಪರಮ ಅಜ್ಞಾನಿಗಳು...  ಇವರೆಲ್ಲ ಸ್ವತಂತ್ರ ಪತ್ರಕರ್ತರು ಹೇಗಾದರು? ಇವರಿಗೆಲ್ಲ ಸುದ್ದಿಮೂಲ ಯಾವುದು? ತನಿಖಾಧಿಕಾರಿಗಳೇನು ಗಂಟೆಗೊಮ್ಮೆ ಸುದ್ದಿಗೋಷ್ಠಿ ಮಾಡಿ ಪ್ರಕಟಣೆ ನೀಡುತ್ತಿದ್ದಾರೆಯೇ? ಈ ಲಾ ಯ ರು ಗಳು ಅನ್ನಿಸಿಕೊಂಡವಿಗೆಲ್ಲ ಬ್ರೇಕಿಂಗ್ ನ್ಯೂಸ್ ಕೊಡುವುದೇ ಕೆಲಸವಾ? ಎಲ್ಲವನ್ನೂ ಇವರೇ ಮಾಡುವುದಾದರೆ ತನಿಖಾ ತಂಡ ಯಾಕೆ? ಇವರೇ ಎಲ್ಲ ಮಾಡಬಹುದಲ್ಲ?


ಅನ್ಯಾಯ ನೂರಲ್ಲ, ಒಂದೇ ಆದರೂ ಅದು ಅನ್ಯಾಯವೇ. ಅನ್ಯಾಯ ಮಾಡಿದವರಿಗೆ ಶಿಕ್ಷೆ ಆಗಬೇಕು. ಆದರೆ ಅದನ್ನೆಲ್ಲ ನೋಡಿಕೊಳ್ಳುವುದಕ್ಕೆ ಒಂದು ವ್ಯವಸ್ಥೆ ನಮ್ಮಲ್ಲಿದೆಯಲ್ಲ? ಅದರಲ್ಲಿ ನಂಬಿಕೆಯಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಇದೆಲ್ಲ ಬರೀ ಸೆಲೆಕ್ಟಿವ್. ತಾವಂದುಕೊಂಡಂತೆ ಪೊಲೀಸರು ಕ್ರಮ ಕೈಗೊಂಡಾಗ ಇವರು ನಮ್ಮ ಪೊಲೀಸ್ ವ್ಯವಸ್ಥೆ ಗ್ರೇಟ್ ಅನ್ನುವವರು, ಹಾಗೆ ನಡೆಯದಾಗ ಪೊಲೀಸರೆಲ್ಲ ಭ್ರಷ್ಟರು ಅನ್ನುವವರು. ತಾವಂದುಕೊಂಡಂತೆ ನ್ಯಾಯಾಲಯದಿಂದ ತೀರ್ಪು ಬಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಗ್ರೇಟ್ ಅನ್ನುವವರು. ಅದಕ್ಕೆ ವಿರುದ್ಧವಾದದ್ದು ಸಂಭವಿಸಿದಾಗ ನಮಗೆ ಅದರಲ್ಲಿ ನಂಬಿಕೆಯಿಲ್ಲ ಅನ್ನುವವರು. ಹೇಗೆ ಬೇಕೋ ಹಾಗೆ. ಇಂಥವರನ್ನೆಲ್ಲ ನೋಡಿನೋಡಿ ಸಾಕಾಗಿದೆ. 


ಆರಂಭದಲ್ಲೇ ಹೇಳಿಕೊಂಡಂತೆ, ಧರ್ಮಸ್ಥಳಕ್ಕೆ ನಾನೊಬ್ಬ ಸ್ಥಳೀಯನಾಗಿ, ಆಸ್ತಿಕನಾಗಿ ಕೆಲವು ಮಾತು ಹೇಳಬೇಕಿದೆ. ನಾನೀಗ ಅಲ್ಲಿ ವಾಸ್ತವ್ಯವಿಲ್ಲ, ನಿನ್ನೆಯ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿಯೂ ಇಲ್ಲ. ಆದರೆ ಅದು ನಾನು ಹುಟ್ಟಿ ಬೆಳೆದ, ಶಿಕ್ಷಣ ಪಡೆದ ಊರು. ಆ ಊರಿಗೂ ನನಗೂ ಒಂದು ಭಾವನಾತ್ಮಕ ಸಂಬಂಧ ಇದೆ.  “ಧರ್ಮಸ್ಥಳ” ಎಂಬುದು ನಮಗೆ ಬರೀ ಊರಲ್ಲ, ಬರೀ ದೇವಸ್ಥಾನವಲ್ಲ, ಅದಕ್ಕಿಂತಲೂ ಹೆಚ್ಚಿನದು. ಅದನ್ನು ಪದಗಳಲ್ಲಿ ವಿವರಿಸಲಾರೆ. ಅದರ ಬಗ್ಗೆ ಎಲ್ಲೋ ದೂರದಲ್ಲಿ ಕುಳಿತಿರುವವರು, ಸೋಶಿಯಲ್ ಮೀಡಿಯಾ ಶೂರರು, ಯಾವ ಸಾಮಾಜಿಕ ಕಾಳಜಿಯೂ ಇಲ್ಲದ ಕೆಲವು ಯೂಟ್ಯೂಬರುಗಳು, ಇನ್ಯಾವುದೋ ಅಜೆಂಡಾ ಹೊತ್ತವರು ಹೇಳಿದ್ದನ್ನು ಕೇಳಿಸಿಕೊಂಡು ಜನ ತಲೆಗೊಂದರಂತೆ ಬಾಯಿಗೆ ಬಂದಂತೆ ಮಾತಾಡುವಾಗ ಮನಸ್ಸಿಗೆ ನೋವಾಗುತ್ತದೆ. ನಮ್ಮ ಗುರಿ ಧರ್ಮಸ್ಥಳ ಅಲ್ಲ, ಅದರ ನೇತೃತ್ವ ವಹಿಸಿಕೊಂಡಿರುವ ವ್ಯಕ್ತಿಗಳದ್ದು ಎಂದು ಪದೇಪದೇ ಹೇಳುವವರನ್ನು ಕಂಡಿದ್ದೇನೆ. ನೇರವಾಗಿ ಹೇಳಿಬಿಡುತ್ತೇನೆ: ಇದೆಲ್ಲ ದೊಡ್ಡ ಸಂಖ್ಯೆಯ ಆಸ್ತಿಕರನ್ನು ಎದುರು ಹಾಕಿಕೊಳ್ಳಬಾರದು ಎಂಬ ತಂತ್ರಗಳಷ್ಟೇ. ನನಗೆ ಧರ್ಮಸ್ಥಳ ಊರು, ದೇವಸ್ಥಾನದ ಬಗ್ಗೆ ಅಭಿಮಾನ ಇರುವಷ್ಟೇ, ಅದರ ಧರ್ಮಾಧಿಕಾರಿಗಳಾಗಿರುವ ಹೆಗ್ಗಡೆಯವರ ಬಗೆಗೂ ಗೌರವ ಇದೆ. ಅದಕ್ಕೆ ಕಾರಣ ಬಾಲ್ಯದಿಂದಲೂ ಕಂಡಿರುವ ಅವರ ವ್ಯಕ್ತಿತ್ವ.


ಆ ವ್ಯಕ್ತಿ ಆಸೆಪಟ್ಟಿದ್ದರೆ ದೇವಸ್ಥಾನಕ್ಕೆ ಹರಿದುಬರುವ ಕಾಣಿಕೆಯಲ್ಲಿ ತಾನೇ ಅರಮನೆ ಕಟ್ಟಿಕೊಳ್ಳಬಹುದಿತ್ತು. ಆದರೆ ಅವರು ಸುತ್ತಲಿನ ಹಳ್ಳಿಗಳ ಅಭ್ಯುದಯದ ಕನಸು ಕಂಡರು.  ಶ್ರೀ ವೀರೇಂದ್ರ ಹೆಗ್ಗಡೆಯವರು ತೊಂಬತ್ತರ ದಶಕದ ಆರಂಭದಲ್ಲಿ ಹುಟ್ಟುಹಾಕಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಒಂದು ದೊಡ್ಡ ಕ್ರಾಂತಿಯಾಗಿ ಹೊರಹೊಮ್ಮಿತು. ನಮ್ಮಂತಹ ಸಾವಿರಾರು ಕುಟುಂಬಗಳು ಮೂರು ಹೊತ್ತು ಸರಿಯಾಗಿ ಉಂಡು ಉತ್ತಮ ವಿದ್ಯಾಭ್ಯಾಸ ಪಡೆದು ಈ ಹಂತಕ್ಕೆ ಬಂದುದರ ಹಿಂದೆ ಧರ್ಮಸ್ಥಳದ ಯೋಜನೆಗಳ ಕೊಡುಗೆ ತುಂಬ ಇದೆ. ಸಿಬಂತಿಯಲ್ಲಿದ್ದ ಪುಟ್ಟ ತೋಟ, ಅಡಿಕೆ-ತೆಂಗು, ನೀರಾವರಿ, ಗೊಬ್ಬರ, ಅದಕ್ಕೆ ಅಗತ್ಯವಿದ್ದ ಹಣಕಾಸು ಬಹುಪಾಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಬಲವೇ. ಇದು ನಮ್ಮ ಕಥೆ ಮಾತ್ರವಲ್ಲ, ದಕ್ಷಿಣ ಕನ್ನಡದ ಸಾವಿರಾರು ಕುಟುಂಬಗಳ ಕಥೆ. ಎಲ್ಲರೂ ಯೋಜನೆ ಕೊಟ್ಟ ಶಕ್ತಿಯಿಂದಲೇ ಎದ್ದುನಿಂತವರು (ಮುಂದೆ ಅದು ಇಡೀ ಕರ್ನಾಟಕಕ್ಕೆ ಮತ್ತು ದೇಶದ ವಿವಿಧ ಭಾಗಗಳಿಗೆ ವ್ಯಾಪಿಸಿತು). ತಮ್ಮ ಯೋಜನೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಖುದ್ದು ಭೇಟಿ ಮಾಡಿ ನೋಡುತ್ತಿದ್ದವರು ಹೆಗ್ಗಡೆಯವರು. ಅವರು ಕುಟುಂಬ ಸಮೇತ ನಮ್ಮ ತೋಟಕ್ಕೂ ಬಂದು ನಮ್ಮವರಲ್ಲೇ ಒಬ್ಬರಂತೆ ಕುಳಿತು ಕಾಟು ಮಾವಿನಹಣ್ಣು ಶರಬತ್ತು ಕುಡಿದು ಹೋಗುತ್ತಿದ್ದುದು ನಾವು ಚಿಕ್ಕವರಿದ್ದಾಗ ಕಂಡ ದೃಶ್ಯ. ಹಸಿದವನಿಗೆ ಸಿದ್ಧ ಆಹಾರ ಕೊಡುವುದಷ್ಟೇ ಅಲ್ಲ, ದುಡಿಯುವ ದಾರಿಯನ್ನೂ ತೋರಿಸಿಕೊಡಿ ಎಂಬುದನ್ನು ಅವರು ಪ್ರಯೋಗತಃ ಸಿದ್ಧಪಡಿಸಿದವರು. ಅಪ್ಪನಿಗೆ ಧರ್ಮಸ್ಥಳ ಯೋಜನೆಯಿಂದ ದೊರೆತ “ಮಾದರಿ ಕೃಷಿಕ” ಬೋರ್ಡು ತುಮಕೂರಿಗೆ ಬಂದ ಮೇಲೂ ನಮ್ಮಲ್ಲಿ ಜೋಪಾನವಾಗಿದೆ. ಧರ್ಮಸ್ಥಳದ ʼಸಂಚಾರಿ ಆಸ್ಪತ್ರೆʼಯಂತೂ ನಮ್ಮ ಹಳ್ಳಿಗಳಿಗೆ ವರದಾನವೇ ಆಗಿತ್ತು. ಎಷ್ಟೊಂದು ಕಡೆಯಿಂದ ಔಷಧಿ ತಂದು ಗುಣವಾಗದಿದ್ದ ಅಮ್ಮನ ಎದೆನೋವು ಕಡಿಮೆಯಾದದ್ದು ಇದೇ ಸಂಚಾರಿ ಆಸ್ಪತ್ರೆಯ ವೈದ್ಯರಿಂದ.


ಪಿಯುಸಿ ನಂತರ ಓದುವುದೇ ಆಗದು ಎಂಬಂತಿದ್ದ ನನಗೆ ಕಾಲೇಜು ಶಿಕ್ಷಣ ಸಾಧ್ಯವಾಗಿಸಿದ್ದು ಉಜಿರೆಯ ಎಸ್.ಡಿ.ಎಂ. ಕಾಲೇಜು ಮತ್ತು ಶ್ರೀ ಸಿದ್ಧವನ ಗುರುಕುಲ. ಅಷ್ಟು ಕಡಿಮೆ ಖರ್ಚಿನಲ್ಲಿ ಕಾಲೇಜು ಓದುವುದು ಆಗಲೂ, ಈಗಲೂ ಊಹಿಸುವುದು ಕಷ್ಟ. ಸಿದ್ಧವನವಂತೂ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕುವುದನ್ನು ಹೇಳಿಕೊಟ್ಟ ಗುರುಕುಲ. ಪಕ್ಕದಲ್ಲಿದ್ದ ರತ್ನಮಾನಸ ಇಂತಹದೇ ಇನ್ನೊಂದು ಸಂಸ್ಥೆ. ನಾನು ಎಂ.ಎ. ಓದುವಾಗಲೂ ಬೆಂಬಲವಾಗಿ ನಿಂತದ್ದು ಪ್ರತಿ ತಿಂಗಳೂ ಎಸ್.ಡಿ.ಎಂ. ಎಜುಕೇಶನ್ ಸೊಸೈಟಿ ಕೊಡುತ್ತಿದ್ದ ಇನ್ನೂರು ರುಪಾಯಿ ಶಿಷ್ಯವೇತನ. ಜಾತಿಯ ಆಧಾರದಲ್ಲಿ ಬಡತನ, ಸಾಮಾಜಿಕ ಸ್ಥಿತಿಗತಿ ಮತ್ತು ಸರ್ಕಾರಿ ಸೌಲಭ್ಯವನ್ನು ನಿರ್ಧರಿಸುವ ಕಾಲದಲ್ಲಿ ನಮ್ಮಂತಹ ಸಾವಿರಾರು ಕುಟುಂಬಗಳ ಬೆನ್ನಿಗಿದ್ದದ್ದು ಹೆಗ್ಗಡೆಯವರ ದೂರದರ್ಶಿತ್ವ.


ಅವರು ಹುಟ್ಟುಹಾಕಿದ ರುಡ್ಸೆಟ್, ಜನಜಾಗೃತಿ ಯೋಜನೆ, ಸಿರಿ ಗ್ರಾಮೋದ್ಯೋಗ,  ಜ್ಞಾನವಿಕಾಸ, ಮಹಿಳಾ ಸ್ವಸಹಾಯ ಸಂಘಗಳು, ಪ್ರಗತಿಬಂಧು ಗುಂಪುಗಳು, ಸಾಮೂಹಿಕ ವಿವಾಹ, ಜ್ಞಾನದೀಪ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ… ಇಂತಹ ನೈಜ ಅಭಿವೃದ್ಧಿಯ ಉಪಕ್ರಮಗಳಿಗೆ ಲೆಕ್ಕವಿಲ್ಲ. ಕುಡಿತದ ಚಟಕ್ಕೆ ಸಿಕ್ಕಿ ಸರ್ವನಾಶವಾಗುವ ಸಾವಿರಾರು ಕುಟುಂಬಗಳಿಗೆ ಬೆಳಕಾದದ್ದು ಅವರ ಪರಿಕಲ್ಪನೆಯ ಮದ್ಯವರ್ಜನ ಶಿಬಿರಗಳು. ನಾವೂ ಉಜಿರೆ ಕಾಲೇಜಲ್ಲಿದ್ದಾಗ ಎನ್ನೆಸ್ಸೆಸ್ ಕಡೆಯಿಂದ ಎಷ್ಟೋ ಮದ್ಯವರ್ಜನ ಶಿಬಿರಗಳಿಗೆ ಹೋಗಿ ಜಾಗೃತಿ ಮೂಡಿಸುವ ನಾಟಕ, ಪ್ರಹಸನಗಳನ್ನು ಪ್ರದರ್ಶಿಸಿದ್ದುಂಟು. ಈ ಶಿಬಿರಗಳು ಈಗಲೂ ರಾಜ್ಯದ ಬೇರೆಬೇರೆ ಕಡೆ ನಡೆಯುತ್ತಲೇ ಇವೆ. ಕಳೆದ ವರ್ಷ ಇಲ್ಲೇ ತುಮಕೂರಿನ ಹಳ್ಳಿಯೊಂದರಲ್ಲಿ ನಡೆಯುತ್ತಿದ್ದ ಮದ್ಯವರ್ಜನ ಶಿಬಿರಕ್ಕೆ ಹೋಗಿ ಒಂದು ಅವಧಿ ತೆಗೆದುಕೊಂಡು ಬಂದಿದ್ದೆ.


ಕಳೆದ ವರ್ಷ ಧರ್ಮಸ್ಥಳದಲ್ಲೊಮ್ಮೆ ಶ್ರೀ ಹೆಗ್ಗಡೆಯವರನ್ನು ಕಾಣುವ ಅಚಾನಕ್‌ ಸಂದರ್ಭ ಬಂತು. ಆಗ ನನ್ನದೆರಡು ಪುಸ್ತಕಗಳನ್ನು ಅವರಿಗೆ ಕೊಟ್ಟೆ. ವಿದ್ಯಾರ್ಥಿಯಾಗಿದ್ದಾಗಲಷ್ಟೇ ಅವರನ್ನು ಭೇಟಿಯಾಗಿದ್ದೆ. ಏನಿಲ್ಲವೆಂದರೂ ಇಪ್ಪತ್ತು ವರ್ಷ ಆಗಿತ್ತು. ಹೆಸರು ನೋಡಿದ ಕೂಡಲೇ "ಓ! ನೀನು ನಮ್ಮ ಹುಡುಗ ಅಲ್ವ ಮಾರಾಯ?" ಎಂದು ಹೇಳಿ ನನ್ನನ್ನೇ ಅಚ್ಚರಿಪಡಿಸಿದ್ದರು. ಆರತಿಯ ಪುಸ್ತಕಗಳನ್ನು ನೋಡಿ "ಇವಳು ನಮ್ಮ ಯಕ್ಷಗಾನದವಳು ಅಲ್ವ?" ಅಂದರು. ವಿದ್ಯಾರ್ಥಿಯಾಗಿದ್ದಾಗ ಬರೆದ ಲೇಖನಗಳನ್ನು ಓದಿ ಅವರು ಬೆನ್ನುತಟ್ಟಿದ ಉದಾಹರಣೆಗಳಿದ್ದವು. ಕಾಲೇಜಿನ ಯಕ್ಷಗಾನದ ತಂಡವೆಂದರೆ ಅವರಿಗೆ ತುಂಬ ಪ್ರೀತಿ. ಅವರನ್ನು ಪ್ರತಿದಿನ ಭೇಟಿಯಾಗುವ ನೂರಾರು ಮಂದಿಯಿದ್ದಾರೆ. ಇಷ್ಟು ವರ್ಷಗಳ ನಂತರ  ವಿದ್ಯಾರ್ಥಿಗಳ ಹೆಸರು ನೋಡಿ ಗುರುತಿಸುವುದು ಸಾಧ್ಯವಾ ಅಂತ ಸೋಜಿಗವಾಯ್ತು. "ಈ ಪುಸ್ತಕಗಳನ್ನು ಅಮ್ಮನಿಗೆ ಕೊಡು. ಅವರು ಓದಿ ವಿಷಯ ಹೇಳ್ತಾರೆ" ಎಂದು ತಮ್ಮ ಬಳಿಯಿದ್ದವರಿಗೆ ಕೊಟ್ಟಿದ್ದರು.


ಇರಲಿ… ಹೇಳಿದಷ್ಟೂ ಮುಗಿಯದು. ಧರ್ಮಸ್ಥಳ ಮತ್ತು ಹೆಗ್ಗಡೆಯವರ ಬಗ್ಗೆ ಗೌರವ ಭಾವನೆ ಯಾಕೆಂಬುದನ್ನು ವಿವರಿಸುವುದಕ್ಕೆ ಒಂದಷ್ಟು ಹೇಳಬೇಕಾಯಿತು. ಹೀಗೆ ಹೇಳಿಕೊಳ್ಳುವುದಕ್ಕೆ ನನಗೆ ಹಿಂಜರಿಕೆಯೇನೂ ಇಲ್ಲ. ಇದು ನನಗೆ ಪರಿಚಯವಿರುವ ಸಾಕಷ್ಟು ಮಂದಿಗೆ ಇಷ್ಟವಾಗುವುದಿಲ್ಲ ಎಂಬುದು ನನಗೆ ಚೆನ್ನಾಗಿಯೇ ಗೊತ್ತು. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬರಬಹುದೆಂದೂ ಗೊತ್ತು. ಆದರೆ ಹೇಳಬೇಕೆನಿಸಿದ್ದನ್ನು ಹೇಳದೆ ಇರಲಾರೆ. ನೀವು ಗೌರವಿಸುವ ಕಾನೂನನ್ನು ನಾನೂ ಗೌರವಿಸುತ್ತೇನೆ. ಅನ್ಯಾಯ ಎಲ್ಲೇ ನಡೆದರೂ ಯಾರೇ ನಡೆಸಿದರೂ ಅದನ್ನು ಒಪ್ಪುವವನು, ಬೆಂಬಲಿಸುವವನು ನಾನು ಖಂಡಿತ ಅಲ್ಲ. ಆದರೆ ನಿರ್ದಿಷ್ಟ ಪ್ರಕರಣಗಳ ಉದಾಹರಣೆ ಕೊಟ್ಟು ಕಾನೂನುಬದ್ಧ ತನಿಖಾ ಸಂಸ್ಥೆಗಳ, ಗೌರವಾನ್ವಿತ ನ್ಯಾಯಾಲಯಗಳ ಕಾರ್ಯವೈಖರಿ ಹಾಗೂ ತೀರ್ಪುಗಳನ್ನು ಅಗೌರವಿಸುವ, ತಾವೇ ನ್ಯಾಯಾಧೀಶರಂತೆ ವರ್ತಿಸುವ, ಸ್ವತಃ ತಮ್ಮ ಮಾತು-ಕೃತಿಗಳಲ್ಲಿ ಸಚ್ಚಾರಿತ್ರ್ಯವನ್ನು ಹೊಂದಿರದ ಮಂದಿಯ ಕುರಿತು ನನಗೆ ಏನೇನೂ ಗೌರವವಿಲ್ಲ. ಇದೇ ಮಾತು – ನಾನು ಯಾವ ಬೇಜವಾಬ್ದಾರಿ ಸೋಶಿಯಲ್ ಮೀಡಿಯಾದ ವಿಚಾರವಾಗಿ ಆರಂಭಿಸಿದೆನೋ – ಅದಕ್ಕೂ ಅನ್ವಯಿಸುತ್ತದೆ. ಇವರು ಇಲ್ಲೇ ನಿಲ್ಲುವುದಿಲ್ಲ, ಇನ್ನೊಂದು ಬಣ್ಣದ ಕಥೆ ಸಿಕ್ಕಾಗ ಅಲ್ಲಿಗೆ ಹೋಗುತ್ತಾರೆಂದು ನನಗೆ ಗೊತ್ತು. ಮಾಧ್ಯಮಗಳು news value ಆಧಾರದಲ್ಲಿ ಕೆಲಸ ಮಾಡುವುದು ಸಹಜ ಎಂದು ಅದರ ವಿದ್ಯಾರ್ಥಿಯಾದ ನನಗೆ ಗೊತ್ತು. ಆದರೆ ʼನ್ಯೂಸ್‌ʼಗೊಂದು ʼವ್ಯಾಲ್ಯೂʼ ಬೇಡವೇ? ಮಾಡುವ ಕೆಲಸಕ್ಕೊಂದು ಮರ್ಯಾದೆ ಬೇಡವೇ? ಸಮಾಜದ ಹಿತ, ಶಾಂತಿ, ಸುವ್ಯವಸ್ಥೆ- ಮಾಧ್ಯಮಗಳ ಪ್ರಧಾನ ತತ್ತ್ವ ಆಗಿರಬೇಕು. ಅವುಗಳೇ ತಮ್ಮ ಲಾಭಕ್ಕಾಗಿ ತಿದಿಯೊತ್ತುವ ಕೆಲಸ ಮಾಡಿದರೆ ಹೇಗೆ?


- ಸಿಬಂತಿ ಪದ್ಮನಾಭ ಕೆ.ವಿ

(ಲೇಖಕರು: ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥರು)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top