ಮಂಗಳೂರನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸಲು ಒಂದು ಐತಿಹಾಸಿಕ ಉಪಕ್ರಮ
ಮಂಗಳೂರು: ಮಂಗಳೂರಿನ ಔದ್ಯಮಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕೆನರಾ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) 'ಎಲಿವೇಟ್ ಬ್ರಾಂಡ್ ಮಂಗಳೂರು' ಹೆಸರಿನ ನೂತನ ಉಪಕ್ರಮವನ್ನು ಆ.23ರಂದು ಶನಿವಾರ ಪ್ರಾರಂಭಿಸಲಿದೆ.
ಅಂದು ಸಂಜೆ 5 ಗಂಟೆಯಿಂದ 7 ಗಂಟೆಯ ವರೆಗೆ ದ ಅವತಾರ್ ಕನ್ವೆನ್ಷನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಭಾಗವಹಿಸಲಿದ್ದಾರೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಪ್ರಗತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ವಿಶೇಷ ಉಪಕ್ರಮವನ್ನು ಎಲಿವೇಟ್ ಬ್ರಾಂಡ್ ಮಂಗಳೂರು ಹೆಸರಿನಲ್ಲಿ ಚಾಲನೆಗೊಳಿಸಲಾಗುತ್ತಿದೆ. ಈ ಉಪಕ್ರಮವು ಹಲವು ಸರಣಿ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕೆಸಿಸಿಐ ನಿರ್ದೇಶಕರು ಅಧ್ಯಕ್ಷರಾದ ಆನಂದ್ ಜಿ. ಪೈ ಹಾಗೂ ಎಲಿವೇಟ್ ಬ್ರಾಂಡ್ ಮಂಗಳೂರು ಉಪಕ್ರಮದ ನಿರ್ದೇಶಕಿ ಮತ್ತು ಅಧ್ಯಕೆ ಕು. ಎಂ ಆತ್ಮಿಕಾ ಅಮೀನ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಆನಂದ್ ಜಿ. ಪೈ (ಅಧ್ಯಕ್ಷರು), ಪಿ.ಬಿ. ಅಹಮದ್ ಮುದಸ್ಸರ್ (ಉಪಾಧ್ಯಕ್ಷರು), ಅಶ್ವಿನ್ ಪೈ ಮಾರೂರ್ (ಕಾರ್ಯದರ್ಶಿ), ಸುಜಿರ್ ಪ್ರಸಾದ್ ನಾಯಕ್ (ನಿರ್ದೇಶಕರು), ಕು. ಎಂ. ಆತ್ಮಿಕಾ ಅಮೀನ್ (ನಿರ್ದೇಶಕಿ ಮತ್ತು ಅಧ್ಯಕ್ಷೆ- ಎಲಿವೇಟ್ ಬ್ರ್ಯಾಂಡ್ ಮಂಗಳೂರು.) ಹಾಗೂ ಮೈತ್ರೇಯ ಎ. (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಉಪಸ್ಥಿತರಿದ್ದರು.
ಕೆಸಿಸಿಐ ಪ್ರಕಟಣೆಯ ಪೂರ್ಣ ವಿವರ:
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಈ ವರ್ಷದ ತನ್ನ ಪ್ರಮುಖ ಕೇಂದ್ರೀಯ ಯೋಜನೆಯಾದ “ಎಲಿವೇಟ್ ಬ್ರ್ಯಾಂಡ್ ಮಂಗಳೂರು” ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಿದೆ. ಹಂತ ಹಂತವಾಗಿ ಜಾರಿಗೊಳಿಸಲಿರುವ ಈ ಯೋಜನೆ, ಮಂಗಳೂರಿನ ಅಪಾರ ಸಾಮರ್ಥ್ಯವನ್ನು ಜಾಗತಿಕವಾಗಿ ಪರಿಚಯಿಸುವುದು ಇದರ ಉದ್ದೇಶ. ತನ್ನ ತಂತ್ರಜ್ಞಾನದ ದೃಷ್ಟಿಯಿಂದ ಅನುಕೂಲಕರವಾದ ಸ್ಥಳ, ಚೈತನ್ಯಮಯ ಉದ್ಯಮಗಳು, ವೈವಿಧ್ಯಮಯ ಸಂಸ್ಕೃತಿ ಮತ್ತು ಅನನ್ಯ ಆದರಾತಿಥ್ಯವನ್ನು ಹೊಂದಿರುವ ಮಂಗಳೂರು, ಜಾಗತಿಕ ವೇದಿಕೆಯಲ್ಲಿ ತನಗೆ ಸಲ್ಲಬೇಕಿರುವ ಯೋಗ್ಯ ಸ್ಥಾನವನ್ನು ಪಡೆಯಲು ಸಂಪೂರ್ಣವಾಗಿ ಸಜ್ಜಾಗಿದೆ. ಅದನ್ನು ಸಾಕಾರಗೊಳಿಸಲು ಕೆಸಿಸಿಐ ಬದ್ಧವಾಗಿದೆ.
ಜಾಗತಿಕ ಮಾನ್ಯತೆಯ ದೃಷ್ಟಿಕೋನ
ಮಂಗಳೂರಿನ ಕೈಗಾರಿಕೆ, ವಾಣಿಜ್ಯ, ಸಂಸ್ಕೃತಿ, ವ್ಯಾಪಾರ, ಮನರಂಜನೆ, ಕ್ರೀಡೆ, ಪಾಕಶಾಸ್ತ್ರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ತನ್ನ ವೈಶಿಷ್ಟ್ಯತೆಗಳಿಂದ, ಮಂಗಳೂರನ್ನು ಸಕಾರಾತ್ಮಕ ಹಾಗೂ ನೈಜ ದೃಷ್ಟಿಯಲ್ಲಿ ಜಗತ್ತಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸೃಜನಶೀಲರು, ಕೈಗಾರಿಕಾ ನಾಯಕರು, ಸರ್ಕಾರೀ ಸಂಸ್ಥೆಗಳು ಮತ್ತು ನಾಗರಿಕರ ಸಮ್ಮಿಲನದೊಂದಿಗೆ ಬಲಿಷ್ಠ ಮತ್ತು ಆಕರ್ಷಕವಾದ ಬ್ರ್ಯಾಂಡ್ ಪರಿಚಯಿಸಲು ಕೆಸಿಸಿಐ ಒಂದು ಸಾಮೂಹಿಕ ಪ್ರಯತ್ನವನ್ನು ಮುನ್ನಡೆಸಲು ಬದ್ಧವಾಗಿದೆ.
ಈ ಏಕೀಕೃತ ಕ್ರಮವು 'ಬೊಲ್ಪು'-, ಸಿಲಿಕಾನ್ ಬೀಚ್ ಪ್ರೋಗ್ರಾಂ, "ವಿಸಿಟ್ ಮಂಗಳೂರು" ಮತ್ತು ಅನೇಕ ಸರ್ಕಾರೀ ಯೋಜನೆಗಳಂತಹ ಈಗಾಗಲೇ ಚಾಲನೆಯಲ್ಲಿರುವ ಬ್ರ್ಯಾಂಡಿಂಗ್ ಪ್ರಯತ್ನಗಳನ್ನು ಒಗ್ಗೂಡಿಸಿ, ಅವುಗಳ ದೃಷ್ಯತೆ ಮತ್ತು ನಿರಂತರತೆಯನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ.
ಹಂತ 1- ಅಡಿಪಾಯ ನಿರ್ಮಾಣ
ಇಂದಿನ ಕಾರ್ಯಕ್ರಮದ ಉದ್ಘಾಟನೆಯೊಂದಿಗೆ ಮೊದಲನೆಯ ಹಂತ ಪ್ರಾರಂಭವಾಗುತ್ತಿದೆ. ಮಂಗಳೂರು ಬ್ರ್ಯಾಂಡಿಂಗ್ ಪ್ರಯಾಣಕ್ಕೆ ಭದ್ರ ಅಡಿಪಾಯ ಹಾಕುವ ಉದ್ದೇಶದಿಂದ ರೂಪಿಸಲಾದ ನಾಲ್ಕು ಪ್ರಮುಖ ಯೋಜನೆಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ:
ಪಾಡ್‌ಕಾಸ್ಟ್ ಸರಣಿ– ಈ ಸರಣಿಯು ಉದ್ಯಮಿಗಳು, ವೃತ್ತಿಪರರು, ಕಲಾವಿದರು ಮತ್ತು ಸಮುದಾಯ ನಾಯಕರೊಂದಿಗೆ ಆಕರ್ಷಕವಾದ ಸಂವಾದ, ಸಂದರ್ಶನಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಭಾಗವೂ ವ್ಯವಹಾರ ಮತ್ತು ತಂತ್ರಜ್ಞಾನದಿಂದ ಹಿಡಿದು ಆಹಾರ, ಸಂಸ್ಕೃತಿ, ಕ್ರೀಡೆ ಮತ್ತು ಪರಂಪರೆ ವರೆಗಿನ ನಗರದ ವಿಭಿನ್ನ ಆಯಾಮಗಳನ್ನು ಅನಾವರಣಗೊಳಿಸುತ್ತದೆ. ವೈಯಕ್ತಿಕ ಅನುಭವಗಳ ಕಥಾನಕಗಳು ಮತ್ತು ಸ್ಥಳೀಯ ಅಂಶಗಳನ್ನು ಸೆರೆಹಿಡಿಯುವ ಮೂಲಕ, ಪಾಡ್‌ಕಾಸ್ಟ್ ಮಂಗಳೂರಿನ ಪ್ರಾಮಾಣಿಕ ಚಿತ್ರವನ್ನು ನೀಡುವುದರ ಜೊತೆಗೆ ಜಾಗತಿಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಗುರಿ ಹೊಂದಿದೆ.
ಪ್ರವಾಸೋದ್ಯಮ ಬ್ರೋಶರ್‌ಗಳು - ಸಾಮಾನ್ಯ ಹಾಗೂ ಕಿರು ಗಾತ್ರದ ಆವೃತ್ತಿಗಳಲ್ಲಿ ಲಭ್ಯವಾಗುವ ಸಮಗ್ರ ಪ್ರವಾಸೋದ್ಯಮ ಬ್ರೋಶರ್‌ಗಳು ಮಂಗಳೂರಿನ ಪರಂಪರೆ ಮತ್ತು ಆಧುನಿಕತೆಯ ವಿಶಿಷ್ಟ ಸಮ್ಮಿಲನವನ್ನು ಪ್ರದರ್ಶಿಸುತ್ತವೆ. ಈ ಬ್ರೋಶರ್‌ಗಳಲ್ಲಿ ಪ್ರಸಿದ್ಧ ಸ್ಮಾರಕಗಳು, ಸಾಂಸ್ಕೃತಿಕ ಅನುಭವಗಳು, ಆಹಾರ ವೈವಿಧ್ಯಗಳು ಮತ್ತು ಮಂಗಳೂರನ್ನು ವಿಶೇಷಗೊಳಿಸುವ, ಬೆಳಕಿಗೆ ಬಾರದ ಆಕರ್ಷಣೆಗಳನ್ನು ಹೈಲೈಟ್ ಮಾಡಲಾಗುತ್ತದೆ. ಸುಂದರ ಮತ್ತು ಆಕರ್ಷಕವಾಗಿ, ಮಾಹಿತಿಪೂರ್ಣವಾಗಿ ವಿನ್ಯಾಸಗೊಳಿಸಲಾದ ಈ ಬ್ರೋಶರ್‌ಗಳು ಪ್ರವಾಸಿಗರಿಗೆ ಉಪಯುಕ್ತ ಮಾರ್ಗದರ್ಶಿಗಳಾಗುವುದರ ಜೊತೆಗೆ ಮಂಗಳೂರನ್ನು ಭೇಟಿ ನೀಡಲೇಬೇಕಾದ ತಾಣವಾಗಿ ಪ್ರದರ್ಶಿಸುತ್ತವೆ.
ಸ್ಮರಣಿಕೆ ಸಂಗ್ರಹ- ಮಂಗಳೂರಿನ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರೇರಿತವಾಗಿರುವ ವಿಶೇಷವಾಗಿ ಆಯ್ದ ಸ್ಮರಣಿಕೆಗಳ ಸಂಗ್ರಹಾಲಯವನ್ನು ರೂಪಿಸಲಾಗುತ್ತದೆ. ಈ ಸ್ಮರಣಿಕೆಗಳನ್ನು ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಹೋಟೆಲ್‌ಗಳು, ಪ್ರವಾಸಿ ಏಜೆನ್ಸಿಗಳು ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಉನ್ನತ ಗುಣಮಟ್ಟದ, ಸ್ಥಳೀಯವಾಗಿ ತಯಾರಿಸಲಾದ ಉತ್ಪನ್ನಗಳನ್ನು ಒದಗಿಸುವ ಮೂಲಕ ಈ ಯೋಜನೆ ಮಂಗಳೂರಿನ ಗುರುತನ್ನು ಬಲಪಡಿಸುವುದರ ಜೊತೆಗೆ ಸ್ಥಳೀಯ ಶಿಲ್ಪಿಗಳು ಮತ್ತು ಉದ್ಯಮಿಗಳಿಗೆ ಅವಕಾಶ ಒದಗಿಸುತ್ತದೆ.
ಹೋಂಸ್ಟೇಗಳಲ್ಲಿನ ಆತಿಥ್ಯ ಸುಧಾರಣೆ - ನೈಜ ಮತ್ತು ಆರಾಮದಾಯಕ ಪ್ರವಾಸ ಅನುಭವಗಳ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿ, ಕೆಸಿಸಿಐ ಮಂಗಳೂರಿನ ಹೋಮ್ ಸ್ಟೇ ವಲಯವನ್ನು ಬೆಂಬಲಿಸಿ ಬಲಪಡಿಸುವ ಯೋಜನೆಯನ್ನು ಹೊಂದಿದೆ. ಅತಿಥ್ಯ ಸೇವೆಗಳನ್ನು ಸುಧಾರಿಸುವುದು, ಗುಣಮಟ್ಟದಲ್ಲಿ ನಿರಂತರತೆಯನ್ನು ಕಾಪಾಡುವುದು ಮತ್ತು ಅಂತರರಾಷ್ಟ್ರೀಯ ಆತಿಥ್ಯ ಮಾನದಂಡಗಳನ್ನು ಪೂರೈಸಲು ಆತಿಥೇಯರಿಗೆ ಅಗತ್ಯ ಜ್ಞಾನ ಮತ್ತು ಸಾಧನಗಳನ್ನು ಒದಗಿಸುವುದರ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ಈ ಯೋಜನೆಯು ಮಂಗಳೂರಿಗೆ ಬರುವ ಪ್ರವಾಸಿಗರಿಗೆ ಎಂದೆಂದೂ ಮರೆಯದ ಅನುಭವಗಳನ್ನು ಕೊಟ್ಟು ಮತ್ತೆ ಮತ್ತೆ ಬರುವಂತೆ ಮಾಡುವುದು ಮತ್ತು ಶ್ರೇಷ್ಠ ಮೌಖಿಕ ಪ್ರಚಾರವನ್ನು ಉತ್ತೇಜಿಸುವ ಗುರಿ ಹೊಂದಿದೆ.
ಭವ್ಯ ಉದ್ಘಾಟನಾ ಸಮಾರಂಭ
ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯದ ವಿಧಾನಸಭಾ ಅಧ್ಯಕ್ಷರು ಮತ್ತು ಸಂಸದರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದು, ಮಂಗಳೂರು ಜಾಗತಿಕ ಮಾನ್ಯತೆ ಪಡೆಯುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಸಂಸದರೊಂದಿಗೆ ವಿಶೇಷ ಸಂವಾದ ನಡೆಯಲಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ದೊರೆಯುತ್ತಿರುವ ನೈತಿಕ ಬೆಂಬಲವನ್ನು ಇನ್ನಷ್ಟು ಬೆಳಕಿಗೆ ಒಡ್ಡಲಿದೆ.
ಅನಂತರ ಪ್ರವಾಸೋದ್ಯಮ, ಶಿಕ್ಷಣ, ಐಟಿ, ಸ್ಟಾರ್ಟ್‌ಅಪ್‌ಗಳು, ಆರೋಗ್ಯ, ಹೂಡಿಕೆ ಮತ್ತು ಚಲನಚಿತ್ರ ಕ್ಷೇತ್ರಗಳ ನಾಯಕರನ್ನು ಒಳಗೊಂಡ ಚರ್ಚಾ ಗೋಷ್ಠಿ ನಡೆಯಲಿದೆ. ಅನುಭವ ಸಂಪನ್ನ ನಿರೂಪಕರ ಮಾರ್ಗದರ್ಶನದಲ್ಲಿ ನಡೆಯುವ ಈ ಚರ್ಚಾಗೋಷ್ಠಿಯಲ್ಲಿ, ಪ್ರತಿ ಕ್ಷೇತ್ರವು ಮಂಗಳೂರಿನ ಬ್ರ್ಯಾಂಡ್ ಗುರುತನ್ನು ಬಲಪಡಿಸಲು ನೀಡಬಹುದಾದ ಕೊಡುಗೆಯ ಬಗ್ಗೆ ಗಮನ ಕೇಂದ್ರೀಕರಿಸಲಾಗುವುದು.
ಕಾರ್ಯಕ್ರಮಕ್ಕೆ ವೈಯಕ್ತಿಕ ಸ್ಪರ್ಶ ನೀಡುವ ಉದ್ದೇಶದಿಂದ, 'ಅನುಭವ ಕೇಂದ್ರ'ವನ್ನು (Experience Centre) ಸ್ಥಾಪಿಸಲಾಗುತ್ತಿದೆ. ಇಲ್ಲಿ ಭಾಗವಹಿಸಿದವರು ಮಾದರಿ ಸ್ಮರಣಿಕೆಗಳನ್ನು ವೀಕ್ಷಿಸುವುದರೊಂದಿಗೆ, ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಪೋಸ್ಟ್ ಕಾರ್ಡ್‌ಗಳನ್ನು ಬರೆಯುವ ಅವಕಾಶವನ್ನು ಪಡೆಯುತ್ತಾರೆ. ಈ ಪೋಸ್ಟ್ ಕಾರ್ಡ್‌ಗಳನ್ನು ಕಳುಹಿಸುವ ಕಾರ್ಯವನ್ನು ಕೆಸಿಸಿಐ ವಹಿಸಿಕೊಂಡಿದ್ದು, ಸ್ವೀಕರಿಸುವ ಪ್ರತಿಯೊಬ್ಬರಿಗೂ ಮಂಗಳೂರಿಗೆ ಭೇಟಿ ನೀಡುವ ಹೃತ್ಪೂರ್ವಕ ಆಹ್ವಾನವನ್ನು ನೀಡುತ್ತಿದೆ.
ಮುನ್ನೋಟ:
"ಎಲಿವೇಟ್ ಬ್ರ್ಯಾಂಡ್ ಮಂಗಳೂರು" ಕೇವಲ ಒಂದು ಉದ್ಘಾಟನಾ ಕಾರ್ಯಕ್ರಮವಲ್ಲ; ಇದು ದೀರ್ಘಕಾಲೀನ ಪ್ರಯಾಣದ ಪ್ರಾರಂಭವಾಗಿದೆ. ಭವಿಷ್ಯದಲ್ಲಿ ಪ್ರವಾಸೋದ್ಯಮ, ಕೈಗಾರಿಕೆ, ಸಂಸ್ಕೃತಿ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳು ಹಾಗೂ ಸುಧಾರಣೆಗಳನ್ನು ಪರಿಚಯಿಸಲಾಗುವುದು. ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ. ಮಂಗಳೂರನ್ನು ಅವಕಾಶಗಳ ನಗರ, ಸಂಸ್ಕೃತಿಯ ನಗರ, ಮತ್ತು ವಿಶ್ವಮಟ್ಟದ ಅನುಭವಗಳ ಕೇಂದ್ರವಾಗಿಸುವ ಏಕೀಕೃತ ಹಾಗೂ ನಿರಂತರ ಬ್ರ್ಯಾಂಡಿಂಗ್ ಪ್ರಯತ್ನವನ್ನು ರೂಪಿಸುವುದೇ ಈ ಉಪಕ್ರಮದ ಉದ್ದೇಶ.
ನಿರ್ಮಾತೃಗಳು, ಉದ್ಯಮಿಗಳು, ಮಾಧ್ಯಮ, ನಾಗರಿಕ ನಾಯಕರು ಮತ್ತು ನಾಗರಿಕರೆಲ್ಲರಿಗೂ ಈ ಸದುದ್ದೇಶಕ್ಕೆ ತಮ್ಮ ಧ್ವನಿಯನ್ನು ನೀಡುವಂತೆ ಕೆಸಿಸಿಐ ಕರೆ ನೀಡಿದೆ. ಸಮೂಹ ಪ್ರಯತ್ನದ ಮೂಲಕ, ಮಂಗಳೂರು ಸ್ಥಳೀಯ ಮಾನ್ಯತೆಯನ್ನು ಮೀರಿ ಜಾಗತಿಕ ನಕ್ಷೆಯಲ್ಲಿ ಶಾಶ್ವತ ಸ್ಥಾನವನ್ನು ಪಡೆಯುವುದು ಈ ಉಪಕ್ರಮದ ಉದ್ದೇಶವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ