ಈ ವಿಶ್ವದಲ್ಲಿ ವಿಸ್ಮಯಕಾರಿ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿರುತ್ತವೆ. ಮಾನವನ ಬದುಕಿನ ಹಾದಿಯಲ್ಲಿಯೂ ಬಹಳಷ್ಟು ಕುತೂಹಲಕಾರಿ ವಿಷಯಗಳು ನಡೆಯುತ್ತಿರುತ್ತವೆ. ಅಂತಹವುಗಳಲ್ಲಿ ಬೆಂಕಿಯ ಉಗಮ ಹಾಗೂ ಚಕ್ರದ ಉಗಮ. ಇಂದು ಚಕ್ರಗಳು ಅದ್ಭುತವನ್ನೇ ಸೃಷ್ಟಿಸಿವೆ. ಅಂತಹ ಅದ್ಭುತಗಳಲ್ಲಿ ಸೈಕಲ್ ಕೂಡಾ ಒಂದು ರೀತಿಯ ವಿಸ್ಮಯವಾಗಿದೆ. ಸೈಕಲ್ (ಬೈಸಿಕಲ್ ಎಂದೂ ಕರೆಯಲಾಗುತ್ತದೆ) ಪೆಡಲ್ಲುಗಳನ್ನು ತುಳಿಯುವ ಮೂಲಕ ಚಾಲನೆ ಮಾಡುವ ಮಾನವಚಾಲಿತ ದ್ವಿಚಕ್ರವಾಹನ. 1817 ರಲ್ಲಿ ಜರ್ಮನಿಯ ಕಾರ್ಲ್ ವಾನ್ ಡ್ರೈಸ್ ಎಂಬ ವಿಜ್ಞಾನಿಯು ಮರದಿಂದ ಮಾಡಿದ “ಡ್ರೈಸಿನ್” ಎಂಬ ಯಂತ್ರವನ್ನು ತಯಾರಿಸಿದರು. ಇದಕ್ಕೆ ಪೆಡಲ್ ಇರಲಿಲ್ಲ. ಜನರು ಕಾಲಿನಿಂದ ನೆಲವನ್ನು ತಳ್ಳಿ ಮುಂದೆ ಸಾಗಬೇಕಾಗುತ್ತಿತ್ತು. ಇದು ಆಧುನಿಕ ಸೈಕಲ್‌ಗೆ ಮೊದಲ ಹೆಜ್ಜೆಯಾಯಿತು.
ನಂತರ 1860 ರ ದಶಕದಲ್ಲಿ ಫ್ರಾನ್ಸ್‌ನಲ್ಲಿ ಪಿಯರ್ ಮಿಶೋ ಮತ್ತು ಪಿಯರ್ ಲಾಲ್ಮೆಂಟ್ ಎಂಬ ಆವಿಷ್ಕಾರಕರು ಮುಂಭಾಗದ ಚಕ್ರಕ್ಕೆ ಪೆಡಲ್ ಸೇರಿಸಿದರು. ಇದರಿಂದ (Velocipede) ಎಂಬ ಹೊಸ ಮಾದರಿ ಸೈಕಲ್ “ವೆಲೊಸಿಪೀಡ್” ಜನ್ಮವಾಯಿತು. ಜನರು ಇದನ್ನು “Boneshaker” ಎಂದು ಕರೆಯುತ್ತಿದ್ದರು, ಏಕೆಂದರೆ ಕಲ್ಲಿನ ರಸ್ತೆಯಲ್ಲಿ ಓಡಿಸಿದಾಗ ಅದು ತುಂಬಾ ಅಲುಗಾಡುತ್ತಿತ್ತು ಮತ್ತು ಕದಡುತ್ತಿತ್ತು. 1870ರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ ದೊಡ್ಡ ಮುಂಭಾಗದ ಚಕ್ರ ಹಾಗೂ ಸಣ್ಣ ಹಿಂಭಾಗದ ಚಕ್ರ ಇರುವ ಸೈಕಲ್ ಬಂದಿತು. ಇದನ್ನು “Penny-Farthing” ಎಂದು ಕರೆಯಲಾಗುತ್ತಿತ್ತು. ಇದು ವೇಗವಾಗಿ ಓಡುತ್ತಿತ್ತು, ಆದರೆ ಅಪಘಾತಗಳೂ ಹೆಚ್ಚು ಆಗುತ್ತಿದ್ದವು.
ಸುರಕ್ಷಿತ ಸೈಕಲ್ (Safety Bicycle) 1885 ರಲ್ಲಿ ಇಂಗ್ಲೆಂಡ್‌ನ ಜಾನ್ ಕ್ಯಾಂಪ್ ಸ್ಟಾರ್ಲಿ “Safety Bicycle” ಅನ್ನು ಪರಿಚಯಿಸಿದರು. ಎರಡೂ ಚಕ್ರಗಳು ಒಂದೇ ಗಾತ್ರದವು, ಪೆಡಲ್ ಚೈನ್ ಮೂಲಕ ಹಿಂಭಾಗದ ಚಕ್ರವು ತಿರುಗುತ್ತಿತ್ತು. ಇದು ಇಂದಿನ ಸೈಕಲ್‌ಗೆ ಬಹಳ ಹತ್ತಿರವಾಗಿತ್ತು.
1888 ರಲ್ಲಿ ಜಾನ್ ಬಾಯ್ಡ್ ಡನ್ಲಪ್ ಗಾಳಿಯಿಂದ ತುಂಬಿದ ಟಯರ್ (Pneumatic Tyre) ಕಂಡುಹಿಡಿದರು. ಇದರಿಂದ ಸೈಕಲ್ ಸವಾರಿ ಆರಾಮದಾಯಕವಾಗಿತು. ಮುಂದಿನ ದಿನಗಳಲ್ಲಿ ಆಧುನಿಕ ಮಾದರಿಯ ಹೊಸ ಸೈಕಲ್ ಗಳು ವಿಶ್ವಾದ್ಯಂತ ಪ್ರಚಾರ ಪಡೆದವು. ಇಪ್ಪತ್ತನೇ ಶತಮಾನದಲ್ಲಿ ಸೈಕಲ್ ಸಾಮಾನ್ಯ ಜನರ ಸಂಚಾರದ ಮುಖ್ಯ ಸಾಧನವಾಗಿ ಬೆಳೆಯಿತು.
ಇಂತಹ ಸೈಕಲ್ಲುಗಳು ಪ್ರಮುಖವಾದ ಸಂಚಾರ ವಾಹನಗಳು. ಸಂಚಾರವಲ್ಲದೆ ಸೈಕಲ್ಲುಗಳನ್ನು ಮನರಂಜನೆಗಾಗಿ, ವ್ಯಾಯಾಮಕ್ಕಾಗಿ ಸಹ ಉಪಯೋಗಿಸಲಾಗುತ್ತದೆ. ಕೆಲಸ, ಶಾಲೆ, ಮಾರುಕಟ್ಟೆ ಎಲ್ಲಿಗೆ ಹೋಗಬೇಕಾದರೂ ಸೈಕಲ್ ಅತ್ಯಂತ ಅವಶ್ಯಕ ಮತ್ತು ಆರೋಗ್ಯಕರ ಸಾಧನವಾಗಿ ಪರಿಣಮಿಸಿತು. ಇಂದಿಗೂ ಸೈಕಲ್ ಕೇವಲ ಒಂದು ವಾಹನ ಅಲ್ಲ, ಅದು ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸರಳ ಜೀವನಶೈಲಿಯ ಪ್ರತೀಕವಾಗಿದೆ.
-ಕೆ. ಎನ್. ಚಿದಾನಂದ, ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



