ಕೃತಿ ಪರಿಚಯ: ಶ್ರೀ ಶ್ರೀಧರ ಚರಿತ್ರೆ

Upayuktha
0



ರತಭೂಮಿ ಯೋಗಿಗಳ, ಸಾಧುಸಂತರ ನೆಲೆವೀಡು. ಇಂತಹ ಭರತಭೂಮಿಯಲ್ಲಿ ಮಹಾರಾಷ್ಟ್ರ ರಾಜ್ಯದ ದೇಗಲೂರಿನವರಾಗಿ ನಮ್ಮ ಕರ್ನಾಟಕದ ಗುಲ್ಬರ್ಗಾದ ಲಾಡ್ ಚಿಂಚೋಳಿಯಲ್ಲಿ ಜನಿಸಿ ಬಹುದೂರದ ಸಾಗರಕ್ಕೆ ಬಂದು ವರದಹಳ್ಳಿಯಲ್ಲಿ ತಪಸ್ಸು ಮಾಡಲು, ಆಶ್ರಮ ನಿರ್ಮಿಸಲು ಶಕ್ತಿಯುತ ಸ್ಥಳವೆಂದು ಕಂಡುಕೊಂಡು ಇಲ್ಲಿ ನೆಲೆನಿಂತು ಭಗವಾನ್ ಸದ್ಗುರು ಶ್ರೀಧರಸ್ವಾಮಿಗಳು ಜನರಿಗೆ ಅನುಗ್ರಹ ಮಾಡಿದ್ದು ಸಾಗರದ ಜನತೆಯ ಬಹು ಸೌಭಾಗ್ಯವೇ ಸರಿ.


ತಾಯಿಗೆ ಅನಾರೋಗ್ಯವೆಂದು ಮಧ್ಯರಾತ್ರಿಯಲ್ಲೂ ಬಹುದೂರ ಓಡೋಡಿ ಹೋಗಿ ಔಷಧಿ ತರುತ್ತಾರೆ ಶ್ರೀಧರರು. ಅಂತಹ ಮಗನ ತಾಯಿ ಕಮಲಾಬಾಯಿಯವರು ತನ್ನ ಕೊನೆಗಾಲದಲ್ಲಿ ನೀನು ಜಗತ್ತಿನ ಎಲ್ಲ ಸ್ತಿçÃಯರನ್ನೂ ನನ್ನಂತೆಯೇ ನೋಡಿ ಅವರ ಉದ್ಧಾರವನ್ನು ಮಾಡಬೇಕು. ಈ ಮುಂದೆ ನೀನು ಮಾಡುವ ಆ ಸೇವೆಯೇ ನನ್ನ ಅಖಂಡ ಸೇವೆ ಎಂದು ವಚನ ತೆಗೆದುಕೊಂಡು ಭಾರತಾಂಬೆಯ ಮಡಿಲಿಗೆ ತನ್ನ ಮುದ್ದಿನ ಕರುಳ ಕುಡಿಯನ್ನು ಬಿಟ್ಟು ಹೋದುದು ಅವಿಸ್ಮರಣೀಯ.


ಹತ್ತೊಂಬತ್ತನೇ ವಯಸ್ಸಿನಲ್ಲಿ ಶ್ರೀಧರರು ಮರಣಪರ್ಯಂತ ಅಸ್ಖಲಿತ ಬ್ರಹ್ಮಚರ್ಯ, ಅಖಿಲ ಸ್ತಿçà ಸಮಾಜವೇ ಮಾತೃಸಮಾನ, ದ್ರವ್ಯ ಮುಟ್ಟದಿರುವಿಕೆ, ಬಂದರೂ ಪರೋಪಕಾರಕ್ಕೆ ವಿನಿಯೋಗ, ಆರ್ತರ ದುಃಖ ಪರಿಹರಿಸುವಿಕೆ ಇತ್ಯಾದಿ ಎಂಟು ಪ್ರತಿಜ್ಞೆಗೈದು ಜೀವಮಾನವಿಡೀ ಅದರಂತೆಯೇ ತಪೋಜೀವನದಲ್ಲಿದ್ದದ್ದು ಇತಿಹಾಸ. ಸಜ್ಜನಗಡದಲ್ಲಿ ಅವರು ಮಾಡಿದ ಮೂರು ವರ್ಷಗಳ ಶ್ರೀ ಸಮರ್ಥ ರಾಮದಾಸರ ಅಖಂಡ ಸೇವೆಯು ಎಲ್ಲರಿಗೂ ಆದರ್ಶ. ಭಗವಂತನ ಉಪಾಸನೆಯಲ್ಲಿ ಅಷ್ಟು ಆಳಕ್ಕಿಳಿದು ಅದರಲ್ಲಿಯೇ ಅವರು ಆನಂದವನ್ನು ಹೊಂದುತ್ತಿದ್ದರೆAದು ವೇದ್ಯವಾಗುತ್ತದೆ.


ಅಲೌಕಿಕ ಬುದ್ಧಿಚಾತುರ್ಯ ಹೊಂದಿದ್ದ ಶ್ರೀಧರರಿಗೆ ಬಹಳ ವರ್ಷ ವಿದ್ಯಾಭ್ಯಾಸ ಮಾಡುವ ಅಗತ್ಯವಿರಲಿಲ್ಲ. ಶಾಲೆಯಲ್ಲಿ ಕಲಿತ ವಿದ್ಯೆಗಿಂತ ಅದೆಷ್ಟೋ ಹೆಚ್ಚು ಪಟ್ಟು ಜ್ಞಾನ ಅವರೊಳಗಿತ್ತು. ಸಂಸ್ಕೃತದಲ್ಲಿ ಸಾವಿರಾರು ಶ್ಲೋಕಗಳ ರಚನೆ ಅದೂ ಛಂದೋಬದ್ಧವಾಗಿ, ಪ್ರವಚನದಲ್ಲಿ ಅಲೌಕಿಕ ವೇದಮಂತ್ರಗಳು ತಾನಾಗಿ ಹೊರಬರುತ್ತಿದ್ದುದು, ಇಂಗ್ಲಿಷಿನಲ್ಲಿಯೂ ಪ್ರವಚನ ಮುಂತಾದವುಗಳು ಇದಕ್ಕೆ ದೃಷ್ಟಾಂತಗಳು.


ಶ್ರೀಧರರು ಮೊದಲು ತಪಸ್ಸಿಗೆ ಹೊರಡುವ ಪೂರ್ವದಲ್ಲಿ ರಾಮನಾಮದ ವೈಶಿಷ್ಟ÷್ಯದ ಕುರಿತು ಮಾಡಿದ ಉಪನ್ಯಾಸ ಗಮನಾರ್ಹವಾದುದು. ‘ನಾರಾಯಣಾಷ್ಟಾಕ್ಷರೇ ಚ ಶಿವಪಂಚಾಕ್ಷರೇ ತಥಾ | ಸಾರ್ಥಕಾರ್ಣದ್ವಯಂ ರಾಮೋ ರಮಂತೇ ಯತ್ರ ಯೋಗಿನಃ’ || ‘ಓಂ ನಮೋ ನಾರಾಯಣಾಯ’ ಈ ನಾರಾಯಣಾಷ್ಟಾಕ್ಷರೀ ಮಂತ್ರದಿAದ ‘ರಾ’ ಎಂಬ ಅಕ್ಷರವನ್ನೂ, ‘ನಮಃ ಶಿವಾಯ’ ಎಂಬ ಶಿವ ಪಂಚಾಕ್ಷರೀ ಮಂತ್ರದಿAದ ‘ಮ’ ಎಂಬ ಅಕ್ಷರವನ್ನೂ ಆರಿಸಿ ಅವುಗಳನ್ನು ಒಟ್ಟು ಸೇರಿಸಿ, ಯಾವುದರಲ್ಲಿ ಜ್ಞಾನಯೋಗಿಗಳು ಅಹರ್ನಿಶವಾಗಿಯೂ ರಮಮಾಣ ರಾಗುವರೋ ಅಂಥ ಬ್ರಹ್ಮಸ್ವರೂಪಕ್ಕೆ ಒಪ್ಪುವ ಯಾವ ಒಂದು ಹೆಸರನ್ನು ತಯಾರಿಸಿದರೋ ಅದೇ ಈ ರಾಮನಾಮವಾಯಿತು. ಇದರಲ್ಲಿ ಹೀಗೆ ಹರಿಹರೈಕ್ಯವಿದೆ. ಇನ್ನೊಂದು ಮಹತ್ವದ ಸಂಗತಿಯೆAದರೆ ‘ರಂ’ ಇದು ಅಗ್ನಿಬೀಜ, ‘ಮಂ’ ಇದು ಮಾಯಾಬೀಜ. ಇವೆರಡೂ ಸೇರಿ ‘ರಾಮ’ ಎಂಬ ಈ ನಾಮವಾದುದರಿಂದ ಇದು ಪ್ರಕೃತಿ ಪುರುಷ ಸ್ವರೂಪ... ಹೀಗೆ.


ಪ್ರಾರ್ಥಿಸಿದವರಿಗೆ ಮಂತ್ರಾನುಗ್ರಹ ಕೊಡುವುದು, ಬೇಡಿದವರಿಗೆ ಚರಣಪಾದುಕೆ ಕೊಡುವುದು, ಸಾಧಕರ ಶಂಕೆ ಪರಿಹರಿಸುವುದು, ಬಡಬ್ರಾಹ್ಮಣ ಹುಡುಗರ ಉಪನಯನ ಮಾಡಿಸುವುದು, ಬಾಧೆಯಿದ್ದವರಿಗೆ ಬಾಧೆ ತೆಗೆಯುವುದು, ಸಂತತಿ ಇಲ್ಲದವರಿಗೆ ಪ್ರತಿಬಂಧಕ ತೆಗೆಯುವುದು, ದುಃಖಿಗಳ ದುಃಖಗಳನ್ನು ತೀರ್ಥ, ಮಂತ್ರಾಕ್ಷತೆಗಳಿAದ ಹೋಗಲಾಡಿಸುವುದು, ಬಡಬಗ್ಗರು, ಸಾಧುಗಳು, ವಿದ್ಯಾರ್ಥಿಗಳು, ಸಮಾಜ ಸಂಸ್ಥೆಯವರು ಸಹಾಯ ಕೇಳಿದರೆ ಸಹಾಯ ಮಾಡುವುದು, ಅಲ್ಲಲ್ಲಿ ದುಷ್ಟಶಕ್ತಿ ಲಯಿಸುವುದು, ಅಧ್ಯಾತ್ಮಿಕಾದಿ ವಿಷಯಗಳ ಮೇಲೆ ಪ್ರವಚನ ಮಾಡುವುದು ಇವೇ ಮುಂತಾದ ಲೋಕೋಪಕಾರಕ ಕಾರ್ಯಗಳನ್ನು ಜೀವಮಾನದುದ್ದಕ್ಕೂ ಮಾಡಿದ ಶ್ರೀಧರಸ್ವಾಮಿಗಳು ಜನರ ರೋಗನಿವೃತ್ತಿ, ಸಂಕಟ ನಿವೃತ್ತಿಗಾಗಿ ನಮಃ ಶಾಂತಾಯ.... ಮಹಾಮಂತ್ರವನ್ನು ಉಪದೇಶಿಸಿದರು. 108 ಜಪದಿಂದ ತೀರ್ಥಕ್ಕೆ ಅಭಿಮಂತ್ರಿಸಿ ಸೇವಿಸುತ್ತಾ ಬಂದರೆ ರೋಗ ಮುಕ್ತಿಯಾಗುವುದೆಂದು ಅನುಗ್ರಹಿಸಿದರು. ಹೀಗೆ ಮಾಡಿ ರೋಗಮುಕ್ತಿ, ರೋಗಶಮನ ಆದ ಸಾವಿರಾರು ಭಕ್ತರಿದ್ದಾರೆ.


ವರದಹಳ್ಳಿಯಲ್ಲಿ ಎಲ್ಲ ತೀರ್ಥಗಳ ಆವಾಹನೆ ಮಾಡಿ ಅದಕ್ಕೆ ಅತುಲಶಕ್ತಿಯನ್ನಿಟ್ಟು ಶ್ರೀಧರತೀರ್ಥವೆಂದು ನಾಮಕರಣ ಮಾಡಿ ಅನುಗ್ರಹಿಸಿದರು. ಈ ಗೋಮುಖತೀರ್ಥದಲ್ಲಿ ಸ್ನಾನ ಮಾಡಿದರೆ ಗಂಗೆಯಲ್ಲಿ ಸ್ನಾನ ಮಾಡಿದಂತೆಯೇ ಸರಿ. ಅಷ್ಟು ಆನಂದವಾಗುವುದು. ಪಾಪ ಪರಿಹಾರ ಆಗುವುದು. ಅದೆಷ್ಟೋ ಜನ ಮಾನಸಿಕ ರೋಗಿಗಳು ಕೂಡಾ ಈ ತೀರ್ಥದ ಪ್ರತಿನಿತ್ಯ ಸ್ನಾನದಿಂದ ರೋಗಮುಕ್ತಿ ಹೊಂದಿದ್ದಾರೆ.


ಧರ್ಮವು ಹೇಗೆ ಅವಿನಾಶಿಯಾಗುವುದೋ ಹಾಗೆಯೇ ಅದರ ಸಂಕೇತವಾದ ಧ್ವಜಸ್ತಂಭವೂ ಶಾಶ್ವತವಾಗಿ ಉಳಿಯಬೇಕು ಧರ್ಮವು ಶಾಶ್ವತವಾಗಿ ನೆಲೆಯೂರಬೇಕು ಎಂದು ವರದಹಳ್ಳಿಯಲ್ಲಿ ಧರ್ಮಧ್ವಜ ಸ್ಥಾಪನೆ ಮಾಡಿದರು. ಇಂದಿಗೂ ಅದು ವಿರಾಜಿಸುತ್ತಿದೆ.


ವೇದವು ಶಾಶ್ವತವಾಗಿ ಉಳಿಯಬೇಕೆಂದು ಯೋಚಿಸಿ ವರದಹಳ್ಳಿಯಲ್ಲಿ ವೇದಪಾಠಶಾಲೆ ಆರಂಭಿಸಿದರು. ಈಗಲೂ ಅದು ವ್ಯವಸ್ಥಿತವಾಗಿ ನಡೆಯುತ್ತಿದೆ. ವರದಹಳ್ಳಿ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ ಎಂದರೆ ಆ ವೈದಿಕನಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿರುವುದನ್ನು ಕಾಣಬಹುದಾಗಿದೆ.

ಗೋಸಂರಕ್ಷಣೆಯ ದೃಷ್ಟಿಯಿಂದ ಗೋಶಾಲೆ ಯನ್ನೂ ಸ್ಥಾಪಿಸಿದರು. ಹೀಗೆ ಶ್ರೀಧರಸ್ವಾಮಿಗಳು ಲೋಕಕಲ್ಯಾಣಕ್ಕಾಗಿ ಮಾಡಿದ ಕಾರ್ಯಗಳು ನೂರಾರು.

ತಮ್ಮ ಬಿಡುವಿಲ್ಲದ ಜೀವನದಲ್ಲಿ ಒಂದಿಷ್ಟು ಸಮಯವನ್ನು ಸ್ತೋತ್ರ ರಚನೆಗೆ ಮೀಸಲಾಗಿಟ್ಟು ಸಾವಿರಾರು ಸ್ತೋತ್ರಗಳ ಕೊಡುಗೆಯನ್ನಿತ್ತಿದ್ದಾರೆ. ಅವುಗಳ ಪ್ರಕಟಣೆ ಆಗಬೇಕಿದೆ. ಹಾಗೆಯೇ ಸಾವಿರಾರು ಗಂಟೆಗಳ ಪ್ರವಚನದ ಆಡಿಯೋಗಳು ಟೇಪ್ ರೆಕಾರ್ಡರ್‌ನಲ್ಲಿಯೇ ಇವೆ. ಅವುಗಳನ್ನೂ ವಾಕ್ಯರೂಪ ಮಾಡಿ ಪ್ರಕಟಣೆ ಆದರೆ ಅತ್ಯುಪಯುಕ್ತವಾಗುವುದರಲ್ಲಿ ಸಂಶಯವಿಲ್ಲ.


ಶ್ರೀ ಶ್ರೀಧರಸ್ವಾಮಿಗಳ ಚರಿತ್ರೆಯನ್ನು ಹಲವರು ವಿಸ್ತಾರವಾಗಿ ಬರೆದಿದ್ದು ಅವುಗಳ ನವಾಹ ಪಾರಾಯಣ ಕ್ರಮ, ಸಪ್ತಾಹ ಪಾರಾಯಣ ಕ್ರಮ, ದಿನತ್ರಯ ಪಾರಾಯಣ ಕ್ರಮವೂ ಇದೆ. ಪ್ರಸ್ತುತ ಕಾಲದಲ್ಲಿ ಉದ್ಯೋಗಕ್ಕಾಗಿಯೇ ಬಹುಸಮಯವನ್ನು ವ್ಯಯಿಸಬೇಕಾದವರಿಗೆ ಸ್ವಲ್ಪ ಸಮಯದಲ್ಲಿಯೇ ಓದಬಹುದಾದ ಸಂಕ್ಷಿಪ್ತವಾದ ಶ್ರೀಧರ ಚರಿತ್ರೆಯ ಅಗತ್ಯವಿತ್ತು. ಬಹುಜನರ ಬೇಡಿಕೆಯ ಮೇರೆಗೆ ಸಾಗರದ ಗೋಳಗೋಡು ಶ್ರೀಧರ ಶರ್ಮಾರವರು ಈ ಸಂಕ್ಷಿಪ್ತ ‘ಶ್ರೀಧರ ಚರಿತ್ರೆ’ಯನ್ನು ಶ್ರೀಧರರ ಭಕ್ತರಿಗಾಗಿಯೇ ಬರೆದಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದ ಇವರು ಶ್ರೀಧರಸ್ವಾಮಿಗಳ ಪರಮಭಕ್ತರಾಗಿ ಅವರ ಮಹಿಮೆಯ ಕುರಿತಾಗಿ ನಾಲ್ಕು ಪುಸ್ತಕಗಳ ಕೊಡುಗೆಯನ್ನಿತ್ತಿದ್ದಾರೆ. ವಿಸ್ತಾರವಾಗಿರುವ ಶ್ರೀಧರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ರೂಪಿಸುವುದು ಸುಲಭ ಸಾಧ್ಯವಲ್ಲ. ಸಂಕ್ಷಿಪ್ತವಾಗಿ ರೂಪಿಸುವಲ್ಲಿ ಶ್ರೀಧರ ಶರ್ಮಾರವರು ಯಶಸ್ಸು ಸಾಧಿಸಿದ್ದಾರೆ.


ಈ ಕಾರ್ಯದಲ್ಲಿ ಶ್ರೀಧರ ಶರ್ಮಾರವರ ಪತ್ನಿ ರೋಹಿಣಿ ಶರ್ಮಾರವರೂ ಕೈಜೋಡಿಸಿದ್ದಾರೆ. ರೋಹಿಣಿ ಶರ್ಮಾರವರು ವಿವಿಧ ನಿಯತಕಾಲಿಕಗಳಲ್ಲಿ ಅಂಕಣ ಬರೆಯುವುದರಲ್ಲಿ ಪ್ರಸಿದ್ಧರೂ ಹೌದು. ಇವರಿಬ್ಬರ ಶ್ರಮದಿಂದ ರೂಪಿತವಾದ ಈ ಪುಸ್ತಕವು ಬಹು ಜನರನ್ನು ತಲುಪಲಿ ಶ್ರೀಧರಸ್ವಾಮಿಗಳ ತತ್ತ÷್ವ ಆದರ್ಶಗಳು ಜನರಿಗೆ ದಾರಿದೀಪವಾಗಲಿ ಎಂಬ ಆಶಯ ನನ್ನದು. ಈ ಪುಸ್ತಕವನ್ನು ಓದುತ್ತಾ ಓದುತ್ತಾ ಬಂದAತೆ ಶ್ರೀಧರಸ್ವಾಮಿಗಳು ಇಲ್ಲಿಯೇ ಇರುವರು, ಅವರ ಜೊತೆ ಸಂಚರಿಸಿದಂತೆಯೇ ಭಾಸವಾಗುವುದು. ಅಷ್ಟು ಚೆನ್ನಾಗಿ ಓದಿಸಿಕೊಂಡು ಹೋಗುವುದು. ತಾರೀಖು, ತಿಂಗಳು, ಇಸವಿ ಹಾಕಿರುವುದಂತೂ ಅತ್ಯುಪಯುಕ್ತ. ಇಷ್ಟು ವರ್ಷಗಳ ಹಿಂದೆ ಶ್ರೀಧರಸ್ವಾಮಿಗಳು ಇಲ್ಲಿಗೆ ಬಂದಿದ್ದರು, ಹೀಗೆ ಅನುಗ್ರಹ ಮಾಡಿದರು ಇವೇ ಮುಂತಾದ ವಿಚಾರಗಳು ಮನಸ್ಸಿಗೆ ಮುದ ನೀಡುತ್ತವೆ. ಹೆಚ್ಚು ಹೆಚ್ಚು ಆವರ್ತಿ ಪಾರಾಯಣ ಮಾಡುತ್ತಾ, ಅನುಸಂಧಾನ ಮಾಡುತ್ತಾ ಬಂದಲ್ಲಿ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ಆಗುವುದರಲ್ಲಿ ಸಂಶಯವಿಲ್ಲ. ತುದಿಯಲ್ಲಿ ಶ್ರೀಧರರ ಅನುಗ್ರಹದಿಂದ ರೋಗ ನಿವಾರಣೆ, ಕಷ್ಟ ನಿವಾರಣೆ, ಇಷ್ಟಾರ್ಥ ಪ್ರಾಪ್ತಿ ಆದವರ ದೃಷ್ಟಾಂತಗಳನ್ನು ಕೊಟ್ಟಿರುವುದರಿಂದ ಅವರವರ ಸಾಮರ್ಥ್ಯಾನುಸಾರ ಗುರುವಿನ ಉಪಾಸನೆ ಮಾಡಲು ಮನಸ್ಸನ್ನು ಎಳೆದೊಯ್ಯುತ್ತದೆ. ತನ್ಮೂಲಕ ಗುರ್ವನುಗ್ರಹ ಆದಲ್ಲಿ ಈ ಪುಸ್ತಕದ ಶ್ರಮ ಸಾರ್ಥಕ.


ಕನ್ನಡ ಭಾಷೆಯಲ್ಲಿ ಬರೆದಿರುವ ಈ ಸಂಕ್ಷಿಪ್ತ ಚರಿತ್ರೆಯು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು. ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಿಗೂ ಅದು ಅನುವಾದವಾಗಬೇಕು. ತನ್ಮೂಲಕ ಶ್ರೀಧರಸ್ವಾಮಿಗಳ ಸಂದೇಶವು ದೇಶವಿದೇಶಗಳಲ್ಲಿ ಪಸರಿಸಲಿ ಎಂಬ ಅಭಿಲಾಷೆ ನನ್ನದು.


ಹೊಸಪೇಟೆಯ ಭೂಮಿ ಪುಸ್ತಕದವರು ಈ ಸಂಕ್ಷಿಪ್ತ ‘ಶ್ರೀಧರ ಚರಿತ್ರೆ’ಯನ್ನು ಪ್ರಕಟಿಸುತ್ತಿದ್ದಾರೆ. ಇವರು ಈ ಮೊದಲು ಶ್ರೀಧರ ಶರ್ಮಾರವರ ‘ಶಾಶ್ವತ ಮೌಲ್ಯಗಳು’ ಪುಸ್ತಕವನ್ನು ಪ್ರಕಟಿಸಿದ್ದು ಪ್ರಕಟಣೆಯ ಆರು ತಿಂಗಳೊಳಗೆ 900ಕ್ಕೂ ಹೆಚ್ಚು ಪ್ರತಿಗಳು ಖಾಲಿಯಾಗಿರುವುದು ವಿಶೇಷ. ಈ ಪುಸ್ತಕಕ್ಕೂ ಮುನ್ನುಡಿ ಬರೆದಿದ್ದೆ. ಮುಂದಿನ ಪುಸ್ತಕಕ್ಕೂ ಪುನಃ ಮುನ್ನುಡಿ ಬರೆಯುವ ಅವಕಾಶ ಸಿಕ್ಕಿದ್ದು ಗುರು ಅನುಗ್ರಹವೆಂದೇ ಭಾವಿಸುತ್ತೇನೆ. ಮುನ್ನುಡಿ ಬರೆಯಲು ಅನುವು ಮಾಡಿಕೊಟ್ಟ ಶ್ರೀಧರ ಶರ್ಮಾರವರಿಗೂ, ‘ಭೂಮಿ ಪ್ರಕಾಶನದ ಗಣೇಶ ಯಾಜಿ, ಸವಿತಾ ಯಾಜಿ ದಂಪತಿಗಳಿಗೂ ನನ್ನ ಧನ್ಯವಾದಗಳು.


ನಮಃ ಶಾಂತಾಯ ದಿವ್ಯಾಯ 

ಸತ್ಯಧರ್ಮ ಸ್ವರೂಪಿಣೇ | 

ಸ್ವಾನಂದಾಮೃತ ತೃಪ್ತಾಯ 

ಶ್ರೀಧರಾಯ ನಮೋ ನಮಃ ||


ಈ ಪುಸ್ತಕ ಕಾಯ್ದಿರಸಲು ಲೇಖಕ ಜಿ.ಟಿ. ಶ್ರೀಧರ ಶರ್ಮಾ ಅವರನ್ನು ಸಂಪರ್ಕಿಸಬಹುದು. 9480473568.


-ರವೀಂದ್ರ ಶರ್ಮಾ

ಕೋಣನಕಟ್ಟೆ, ಸಾಗರ ತಾಲ್ಲೂಕು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top