'ಮೌನವಾದ ಓದು ಕಾವ್ಯಕ್ಕೆ ಮಾಡುವ ಅಪಚಾರ' -ಬೇಂದ್ರೆ
ಬೆಂಗಳೂರಿನ ಕೋರಮಂಗಲದ ಸೇಂಟ್ ಜೋನ್ಸ್ ಆಡಿಟೋರಿಯಂದಲ್ಲಿ 2025 ಆಗಸ್ಟ್ 8, 9, ಹಾಗೂ 10 ರಂದು ನಡೆದ 'ಬುಕ್ ಬ್ರಹ್ಮ'ದ ಸಾಹಿತ್ಯ ಉತ್ಸವದಲ್ಲಿ ಮೂಡಿ ಬಂದ ಉದ್ಗಾರವಿದು. ಕಾವ್ಯಕ್ಕೆ ಮೌನ ಸಮ್ಮತವಲ್ಲ. ಬೇಂದ್ರೆ ಅವರು ತಮ್ಮ ಕವನಗಳನ್ನು ಅತ್ಯಂತ ಸ್ಪಷ್ಟವಾಗಿ ಓದುತ್ತಿದ್ದರು ಎಂದು ಹಾಸ್ಯ ಭಾಷಣಕಾರ ವೈ ವಿ ಗುಂಡೂರಾವ ಹೇಳಿದರು. ಅವರು 'ಸಾಹಿತ್ಯ- ಹಾಸ್ಯದ ಹಾಸುಹೊಕ್ಕು' ಎಂಬ ಗೋಷ್ಠಿಯ ಸಂಚಾಲಕ ರಾಗಿದ್ದರು. ಅವರು ಹಿರಿಯ ಕವಿ ಬಿ ಆರ್ ಲಕ್ಷ್ಮಣರಾವ ಹಾಗೂ ಚುಟುಕು ಚಾಬೂಕಿನ ಸರದಾರ ಡುಂಡಿರಾಜ ಅವರನ್ನು ಮಾತಿಗೆಳೆದು ಅವರ ಹಾಸ್ಯದ ಲಹರಿಗಳನ್ನು ಉಕ್ಕಿಸುವಲ್ಲಿ ಯಶಸ್ವಿಯಾದರು.
ಬುಕ್ ಬ್ರಹ್ಮವು ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯ ಸಾಹಿತಿಗಳೊಂದಿಗೆ ಸಂವಾದ, ಮಾತುಕತೆ, ಪುಸ್ತಕ ಬಿಡುಗಡೆ, ಮುಖಾಮುಖಿ- ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಇಲ್ಲಿ ಜಾನಪದವೂ ಇತ್ತು, ಏಐ, ವಿಜ್ಞಾನ- ತಂತ್ರಜ್ಞಾನ, ಕಾದಂಬರಿ ಲೋಕ, ಸಂಗೀತದ ವಿಭಿನ್ನ ಆಯಾಮಗಳು ಇದ್ದವು.
ಬೂಕರ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಸ್ತಾಕ ತಮ್ಮ ಕೃತಿಗಳ ಕುರಿತು ವಿಭಿನ್ನ ಆಲೋಚನೆಗಳನ್ನು ಹಂಚಿಕೊಂಡರು. ತಮಿಳು ಲೇಖಕ ಪೆರುಮಾಳ ಮುರುಗನ್ ಅವರು ಇಂದು ಸಾಹಿತಿಗಳು ಹಾಗೂ ಸಾಹಿತ್ಯ ಲೋಕ ಎದುರಿಸುತ್ತಿರುವ ಜಟಿಲ ಸಮಸ್ಯೆಗಳ ಬಗ್ಗೆ ಪ್ರೇಕ್ಷಕರೊಂದಿಗೆ ಸಂವಾದಿಸುತ್ತ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ಖ್ಯಾತ ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರನ್ನು ಅವರ ಮಗ ಪ್ರವರ ಕೊಟ್ಟೂರ ಮಾತನಾಡಿಸಿದ್ದು ವಿಶೇಷವಾಗಿತ್ತು. 'ಕುಂವಿ' ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತ, 'ನಾವು ಇಂದು ಯಾವ ಕಾಲ ಘಟ್ಟದಲ್ಲಿ ಇದ್ದೇವೆ, ಇಂದಿನ ಲೇಖಕನ ಸವಾಲುಗಳೇನು? ಎಂಬ ಬಗ್ಗೆ ಮಾತನಾಡಿದರು. ಆಂಧ್ರದಲ್ಲಿ 70-80ರ ದಶಕದಲ್ಲಿ ಇದ್ದ ಭಯಂಕರ ದಬ್ಬಾಳಿಕೆ ಕ್ರೌರ್ಯದ ಬಗ್ಗೆ ಹೇಳಿದರು. 'ನನ್ನ ಕಥೆ ಕಾದಂಬರಿಗಳಲ್ಲಿ ಇದೆಲ್ಲ ಬಂದಿದೆ. ನನ್ನ ಆತ್ಮಕಥೆ ಕೂಡ ಇದರ ಬಗ್ಗೆ ಮಾತನಾಡುತ್ತದೆ' ಎಂದರು.
ಆಗ ನಾನು ಅಕ್ಷರ ಕಲಿಯುವುದೇ ಒಂದು ದೊಡ್ಡ ಸವಾಲಾಗಿತ್ತು, ದಲಿತ ಹುಡುಗರಿಗೆ ಕಲಿಕೆ ಬೇಕೆ ಬೇಕು ಎಂದು ತಾವು ಪ್ರತಿಪಾದಿಸಿದ್ದು, ಅದಕ್ಕಾಗಿ ಅಲ್ಲಿನ ಗೌಡ, ತನ್ನನ್ನು ಕೊಲ್ಲಿಸಲು 'ಸುಪಾರಿ' ನೀಡಿದ್ದು, ತಾವು ಆ ಕೊಲೆಗಾರ 'ನಾರಾಯಣಿ'ಯನ್ನು ಮುಖಾಮುಖಿಯಾಗಿ, ಅವನಿಗೆ ತಮ್ಮ ಸದುದ್ದೇಶದ ಬಗ್ಗೆ ತಿಳಿಸಿ ಹೇಳಿದ್ದು, ಅದನ್ನು ಕೇಳಿದ ನಂತರ ಅವನು ಕೊಲ್ಲುವ ಯೋಜನೆಯನ್ನು ಕೈ ಬಿಟ್ಟಿದ್ದು,... ಹೀಗೆ ಎಲ್ಲವನ್ನು ಸವಿಸ್ತಾರವಾಗಿ ಹೇಳಿದರು. ನಿಜಕ್ಕೂ ಅವರ ಬದುಕೇ ಒಂದು ಕಾದಂಬರಿಯಾಗಬಹುದಾದಷ್ಟು ರೋಚಕತೆಯನ್ನು ಒಳಗೊಂಡಿದೆ. ಇದೆಲ್ಲ ಸಾಧ್ಯವಾದದ್ದು ಬುಕ್ ಬ್ರಹ್ಮದಿಂದ.
ಕಳೆದ ವರ್ಷದ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ 25 ಲೇಖಕರ ಕೃತಿ 'ಅಂತ್ಯವಾಗದು ಕಥೆ'ಯನ್ನು ಕಥೆಗಾರ ಚಿದಾನಂದ ಸಾಲಿ ಹಾಗೂ ಪತ್ರಕರ್ತ ವಿಶಾಖ ಅವರು ಬಿಡುಗಡೆ ಮಾಡಿದರು. ಕಥಾ ಸ್ಪರ್ಧೆ ಹೇಗೆ ಲೇಖಕರನ್ನು ಬರೆಯಲು ಪ್ರೇರೇಪಿಸುತ್ತದೆ, ಅದರಲ್ಲಿನ ವೈವಿಧ್ಯತೆ.... ಕಥಾ ವಿಸ್ಮಯದ ಬಗ್ಗೆ ಅವರು ಹೇಳಿದರು. ಇದು ಮುಂದೆ ಬರೆಯಬಲ್ಲವರಿಗೆ ದಿಕ್ಸೂಚಿಯಾಗಬಲ್ಲದು.
ಖ್ಯಾತ ಕೋಳಲು ವಾದಕ ಪಂ.ಪ್ರವೀಣ ಗೋಡಖಿಂಡಿ ಹಾಗೂ ಕಾದಂಬರಿಕಾರ ಶಿರೀಶ ಜೋಶಿ ಅವರ ಸಂಗೀತವನ್ನೇ ಆಧರಿಸಿದ ಕಾದಂಬರಿ ಕುರಿತು ಸಂವಾದ ನಡೆಯಿತು. ಕಾದಂಬರಿಕಾರ ಬಾಳಾಸಾಹೇಬ ಲೋಕಾಪುರ ಅವರು ಪ್ರವೀಣ ಗೋಡಖಿಂಡಿ ಹಾಗೂ ಜೋಶಿ ಅವರನ್ನು ಈ ಕುರಿತು ಮಾತನಾಡಿಸಿದರು. ಗೋಡ್ಖಿಂಡಿ ಅವರು ಈ ಕಾದಂಬರಿ ರೂಪಗೊಂಡ ಬಗ್ಗೆ ಹಲವು ಅಚ್ಚರಿಯ ಅಂಶಗಳನ್ನು ಹೊರಗೆಡಹಿದರು. ಕನ್ನಡವೇ ತಮಗೆ ಸರಿಯಾಗಿ ಬರದ ಸಂದರ್ಭದಲ್ಲಿ ಅದನ್ನು ಇಂಗ್ಲೀಷನಲ್ಲಿ ಬರೆದದ್ದು, ಅದನ್ನು ಧಾರವಾಡ ಕನ್ನಡದಲ್ಲಿ ಅನುವಾದಿಸಲು ಯಾರಾದರೂ ಸಿಗುತ್ತಾರಾ? ಎಂದು ಜಯಂತ ಕಾಯ್ಕಿಣಿ ಅವರನ್ನು ಕೇಳಿದ್ದು, ಅವರು ನೀವೇ ಅದನ್ನು ಅನುವಾದಿಸಿರಿ ಎಂದು ಹೇಳಿದ್ದು..... ಎಲ್ಲವನ್ನು ಹೇಳಿದರು. ಸ್ವತಃ ಸಂಗೀತದ ಬಗ್ಗೆ ಬಲ್ಲವರೇ ಕಾದಂಬರಿ ಬರೆದರೇ ಅದು ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಅಂಶ ಇಲ್ಲಿ ವ್ಯಕ್ತವಾಯಿತು.
'ಸ್ತ್ರೀ ಎಂದರೆ ಅಷ್ಟೇ ಸಾಕೆ?' ಎನ್ನುವ ವಿಶಿಷ್ಟ ಗೋಷ್ಠಿಯಲ್ಲಿ ಸಂವಾದಿಸಿದ, ಪದ್ಮಿನಿ ನಾಗರಾಜ, ಶಾಂತಿ ಅಪ್ಪಣ್ಣ, ಹೇಮಾ ಪಟ್ಟಣಶೆಟ್ಟಿ, ಕುಸುಮಾ ಆಯರಳ್ಳಿ ತಮಗಾದ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪುರುಷನಿಗೆ ಏನೂ ಬೇಕಾದರೂ ಬರೆಯಲು ಸ್ವಾತಂತ್ರ್ಯವಿದೆ, ಅದೇ ಮಹಿಳೆಯೊಬ್ಬಳು ಬರೆದರೇ, ಅದು ಕೊಂಕು ಮಾತುಗಳಿಗೆ ಗ್ರಾಸವಾಗುತ್ತದೆ ಎಂದರು. ಲೈಂಗಿಕತೆ ಬಗ್ಗೆ ಬರೆದರೆ ಅದು ನಿಮ್ಮ ಸ್ವಂತ ಅನುಭವವಾ? ಎಂದು ಕೇಳುವ ಕೀಳು ಮನಸ್ಥಿತಿ ಈ ಸಮಾಜಕ್ಕಿದೆ ಎಂದರು.'ಉರಿವ ಬೆಂಕಿಗೆ ಮೈಯೆಲ್ಲಾ ಬಾಯಿ' ಕಥಾ ಸಂಕಲನದಲ್ಲಿ ಬರುವ ಒಂದು ಕಥೆಯಲ್ಲಿ, ಒಬ್ಬಳು ತನ್ನ ಗಂಡನನ್ನು ಬಿಟ್ಟು ಬೇರೆ ಪುರುಷನಿಂದ ಮಗು ಪಡೆಯಲು ಬಯಸುತ್ತಾಳೆ, ಇದನ್ನು ಆನ್ಲೈನ ಕಾರ್ಯಕ್ರಮದಲ್ಲಿ ಕೇಳಿದ ವಿಮರ್ಶಕ ಮಹಾಶಯನೊಬ್ಬ,'ಯಾಕ್ರಿ ಹಿಂಗೆಲ್ಲ ಬರಿತಿರಿ?' ಎಂದು ಕೇಳಿದ್ದು ಇದೆ ಎಂದರು ಪದ್ಮಿನಿ ನಾಗರಾಜ. ಇದೇ ರೀತಿಯ ತಮ್ಮ ಅನುಭವಗಳನ್ನು ಶಾಂತಿ ಅಪ್ಪಣ್ಣ, ಕುಸುಮಾ ಆಯರಳ್ಳಿ ಕೂಡ ಹೇಳಿದರು.
ಬೂಕರ ಪ್ರಶಸ್ತಿ 'ಎದೆಯ ಹಣತೆ'ಗೆ ಹೇಗೆ ಬಂತು? ಎಂಬ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಇದರಲ್ಲಿ ಬಾನು ಮುಸ್ತಾಕ, ದೀಪಾ ಬಾಸ್ತಿ, ಕಾನಿಷ್ಕ ಗುಪ್ತಾ, ಮೌತುಷಿ ಮುಖರ್ಜಿ ಅವರು ಪಾಲ್ಗೊಂಡಿದ್ದರು. ಮಲೆಯಾಳ ಕೃತಿ ಬಿಟ್ಟು ಹೇಗೆ ಕನ್ನಡ ಕೃತಿ ಈ ಪ್ರಶಸ್ತಿ ಪಡೆಯಿತು? ಎಂದೂ ಹಲವರು ಕೇಳಿದರು. ಶಕ್ತಿಶಾಲಿ ಬರವಣಿಗೆ, ಕೃತಿಯ ವಿಷಯ ಕೂಡ ಪ್ರಮುಖ ಪಾತ್ರ ವಹಿಸುತ್ತವೆಯೆ? ಎಂದೂ ಚರ್ಚೆ ದಿಕ್ಕು ಬದಲಿಸಿತು.
ದೀಪಾ ಬಾಸ್ತಿ ಮಾತನಾಡುತ್ತ, 'ತಾವು ಇದನ್ನು ಇಂಗ್ಲಿಷಿಗೆ ಅನುವಾದ ಮಾಡಿದಾಗ, ಇದು ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತದೆ ಎಂದು ಅನಿಸಿರಲಿಲ್ಲವೆಂದು ಹೇಳಿದರು. ಪ್ರಶಸ್ತಿ ಪುರಸ್ಕೃತ ಪಟ್ಟಿಯ ಶಾರ್ಟಲಿಸ್ಟ ಬಂದಾಗ ನಮಗೆ ಆಶ್ಚರ್ಯವೂ ಆಯಿತು' ಎಂದು ಹೇಳಿದರು.
'ಏಣಗಿ ಬಾಳಪ್ಪ' ಕೃತಿಯ ಹನ್ನೊಂದನೆ ಮುದ್ರಣವನ್ನು ಡಾ.ಮಹಾಂತೇಶ ಬಿರಾದಾರ, ವೃತ್ತಿರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜನ ಕಡಕೋಳ ಬಿಡುಗಡೆ ಮಾಡಿದರು. ಕವಿತಾ ಪ್ರಕಾಶನದ ಪ್ರಕಾಶಕ ಲೇಖಕ ಗಣೇಶ ಅಮೀನಗಡ ಇದ್ದರು.
ಲೇಖಕರೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಬಾನು ಮುಸ್ತಾಕ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಕುಂವಿ, ದೀಪಾ ಬಾಸ್ತಿ, ಪೆರುಮಾಳ ಮುರುಗನ್, ಗಿರೀಶ ಕಾಸರವಳ್ಳಿ, ಬಿಆರ್ ಎಲ್, ನಾ ಸೋಮೇಶ್ವರ, ಪ್ರತಿಭಾ ನಂದಕುಮಾರ, ಜೋಗಿ, ಎಂ ಎಸ್ ಆಶಾದೇವಿ, ಕೆ ಆರ್ ಮೀರಾ, ಲಕ್ಷ್ಮಣ ಗಾಯಕವಾಡ, ವಸುಧೇಂದ್ರ, ಶರಣಕುಮಾರ ಲಿಂಬಾಳೆ, ಮಕರಂದ ಸಾಠೆ ಮೊದಲಾದವರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು, ಕೇಳುಗರ ಪ್ರಶ್ನೆಗಳಿಗೂ ಉತ್ತರಿಸಿದರು.
ಬುಕ್ ಬ್ರಹ್ಮವು ಕಾದಂಬರಿ ಹಾಗೂ ಕಥಾ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ಕಥಾ ಸ್ಪರ್ಧೆಯಲ್ಲಿ ಸುಲ್ತಾನ ಮನ್ಸೂರ ಅವರ' ಪೇರೇಡ ಪೋಡಿಮೋನು ಕಥೆ ಪ್ರಥಮ, ಸದಾಶಿವ ಸೊರಟೂರ ಅವರ 'ಬೆಳಕು ಕುಡಿದ ಸಂಜೆ' ದ್ವಿತೀಯ ಹಾಗೂ ದಾದಾಪೀರ ಜೈಮನ್ ಅವರ' ದಿಗಿಲು' ಕಥೆ ತೃತೀಯ ಬಹುಮಾನ ಪಡೆದುಕೊಂಡವು. ಉಳಿದ ಅನೇಕ ಕಥೆಗಳಿಗೆ ಮೆಚ್ಚುಗೆ ಪಡೆದ ಕಥೆಗಳು ಹಾಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಅಮರೇಶ ನುಗಡೋಣಿ, ಸುಮಂಗಲಾ, ಸುನಂದಾ ಕಡಮೆ ತೀರ್ಪುಗಾರರಾಗಿದ್ದರು. ಕಾದಂಬರಿ ಸ್ಪರ್ಧೆಯಲ್ಲಿ ಸುಶೀಲಾ ಡೋಣೂರ ಅವರ 'ಪೀಜಿ' ಅತ್ಯುತ್ತಮ ಕಾದಂಬರಿ ಪುರಸ್ಕಾರ ಪಡೆಯಿತು. ಬಸವರಾಜ ಕಲ್ಗುಡಿ ಹಾಗೂ ಅನುಪಮಾ ಪ್ರಸಾದ ಅವರು ತೀರ್ಪುಗಾರರಾಗಿದ್ದರು. ರಾಜಶೇಖರ ಹಳಿಮನೆ, ಗುರುಪ್ರಸಾದ ಕಂಟಲಗೆರೆ, ದೀಪಾ ಜೋಶಿ, ತುಂಬಾಡಿ ರಾಮಯ್ಯ ಅವರ ಕಾದಂಬರಿಗಳು ಸಮಾಧಾನಕರ ಬಹುಮಾನ ಪಡೆದವು.
ಬಿ ಜಯಶ್ರೀ ಅವರ ಜಾನಪದ ಗಾಯನದ ಸಂಭ್ರಮ ಮುಗಿಲೆತ್ತರಕ್ಕೇರಿತ್ತು. ಟಿ ಎಂ ಕೃಷ್ಣ ಅವರ ಶಾಸ್ತ್ರೀಯ ಗಾಯನ ಶ್ರೋತೃಗಳ ಹರುಷವನ್ನು ನೂರ್ಮಡಿಸಿತ್ತು. 'ದುರ್ಯೋಧನ ವಧಂ' ಎಂಬ ಯಕ್ಷಗಾನವನ್ನು ಬೆಂಗಳೂರ ಕಥಕ್ಕಳಿ ಕ್ಲಬ್ ಅತ್ಯಂತ ಸುಂದರವಾಗಿ ನಡೆಸಿಕೊಟ್ಟಿತು.
ಪಂ. ಪ್ರವೀಣ ಗೋಡಖಿಂಡಿ ಅವರ ಕೊಳಲು ವಾದನ, ಪಂ. ಗಣಪತಿ ಭಟ್ ಹಾಸಣಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಟಿ ಎಂ ಕೃಷ್ಣ, ಮಾನಸಿ ಪ್ರಸಾದ ಅವರ ಸಂಗೀತ ಕಾರ್ಯಕ್ರಮಗಳು ಸಾಹಿತ್ಯ ಉತ್ಸವದ ಮೆರುಗನ್ನು ಹೆಚ್ಚಿಸಿದವು. ಲಕ್ಷ್ಮಿ ಚಂದ್ರಶೇಖರ ಅವರ 'ಸಿಂಗಾರೆವ್ವ' ಏಕವ್ಯಕ್ತಿ ಪ್ರದರ್ಶನ ಕಾರ್ಯಕ್ರಮವೂ ಉತ್ಸವದ ಹೈಲೇಟ್.
ಶಿಲ್ಪಕಲೆ ಬಗ್ಗೆ ಶಿಲ್ಪಿ ಮಾನಯ್ಯ ಬಡಿಗೇರರು, ಚಿತ್ರಕಲೆ ಬಗ್ಗೆ ಕೆ ವಿ ಸುಬ್ರಹ್ಮಣ್ಯಮ್, ವೆಂಕಟಾಚಲಪತಿ, ರಿಷಿಕೇಶ ಬಹದ್ದೂರ ದೇಸಾಯಿ ಅವರು 'ಕರ್ನಾಟಕ ಶಿಲ್ಪ ಪರಂಪರೆ ನಿನ್ನೆ-ನಾಳೆ' ಎಂಬ ಗೋಷ್ಠಿಯಲ್ಲಿ ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದರು.
ಕವಿ ಮೂಡ್ನಾಕುಡು ಚಿನ್ನಸ್ವಾಮಿ, ಚಿತ್ರ ನಿರ್ದೇಶಕ - ಕವಿ ಯೋಗರಾಜಭಟ್ಟ, ಕೇರಳದ ಕಥೆಗಾರ್ತಿ ಕೆ ಆರ್ ಮೀರಾ, ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ, ರಘುನಾಥ ಚ ಹ ಅವರ ಹಾಜರಿ ಈ ಸಾಹಿತ್ಯ ಉತ್ಸವಕ್ಕೆ ವಿಶೇಷ ಕಳೆ ತಂದು ಕೊಟ್ಟಿತ್ತು.
'ಈಶಾನ್ಯ ಸೀಮೆಯ ಹೊಸ ಫಸಲು' ಈ ಗೋಷ್ಠಿಯಲ್ಲಿ ಹೊಸ ರೀತಿಯ ಸಂವಾದ ನಡೆಯಿತು. ಹೊಸ ಕತೆಗಳು ರೂಪಗೊಳ್ಳುವ ಬಗೆ, ಭಾಷೆಯನ್ನು ದುಡಿಸಿಕೊಳ್ಳುವ ರೀತಿ... ಎಲ್ಲ ಸಂವಾದಗಳ ಆಶಯವಾಗಿತ್ತು. ಅಮರೇಶ ಗಿಣಿವಾರ, ಕಪೀಲ ಹುಮನಾಬಾದೆ, ಚಂದ ರವಿಚಂದ್ರ, ಅಜಯವರ್ಮಾ ಅಲ್ಲೂರಿ ಇದರಲ್ಲಿ ಭಾಗವಹಿಸಿದ್ದರು.
'ಬದಲಾಗುತ್ತಿರುವ ಚರಿತ್ರೆಯ ಪುಟಗಳು' ಈ ಸಂವಾದದಲ್ಲಿ ಶಿವಶರಣ ಅರುಣಿ, ವಿಜಯ ತಂಬಂಡ, ಅಶೋಕ ಶೆಟ್ಟರ, ರಾಜೇಶ ಹಂಗು ಅವರು ಹೊಸ ರೀತಿಯ ಆಲೋಚನೆಗಳಿಂದ ಕೇಳುಗರ ಕುತೂಹಲಕ್ಕೆ ಇಂಬು ಕೊಟ್ಟರು.
ಇಲ್ಲಿ ಚಿಣ್ಣರ ಲೋಕವೂ ಅನೇಕ ಕನಸುಗಳನ್ನು ಹರಡಿಕೊಂಡು ಕುಳಿತಿತ್ತು.
ಬಿ ಜಯಶ್ರೀ ಅವರ ಕಂಚಿನ ಕಂಠ ಎಲ್ಲೆಡೆ ಝೆಂಕಾರ ಪ್ರತಿಧ್ವನಿಸಿತು. ಕರಿಮಾಯಿ ಎಂಬೋಳು ಮಾದೇಶ್ವರಾ.... ಅದ್ಭುತ. ಇವರ ತಂಡ ಚಂದ ಕಾರ್ಯಕ್ರಮ ಕೊಟ್ಟಿತು.
ಕೊನೆಯ ದಿನ ಬುಕ್ ಬ್ರಹ್ಮದ 2025ರ ಸಾಹಿತ್ಯ ಪುರಸ್ಕಾರವನ್ನು ಮಲೆಯಾಳಂ ಲೇಖಕಿ ಕೆ ಆರ್ ಮೀರಾ ಅವರಿಗೆ ನೀಡಿ ಅವರನ್ನು ಗೌರವಿಸಲಾಯಿತು. ಚಂದ್ರಶೇಖರ ಕಂಬಾರ, ಮಧು ವೀರರಾಘವನ್, ದಾಮೋದರ ಮಾಝೋ ಅವರು ಅತಿಥಿಗಳಾಗಿದ್ದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೀರಾ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ಬಹಳ ಆಪ್ತವಾಗಿತ್ತು ಈ ಸಂವಾದ.
ಒಟ್ಟಿನಲ್ಲಿ ಮೂರು ದಿನದ ಈ ಕಾರ್ಯಕ್ರಮ ಬಹಳ ಉಪಯುಕ್ತ ಹಾಗೂ ಆಪ್ತವಾಗಿತ್ತು. ಜೈಪುರ ಫೆಸ್ಟಿವಲನ್ನು ಇದು ನೆನಪಿಸಿತು. ಇದನ್ನು ಸಾಧ್ಯವಾಗಿಸಿದ್ದು ಬುಕ್ ಬ್ರಹ್ಮದ ದೇವು ಪತ್ತಾರ ಹಾಗೂ ಸತೀಶ ಚಪ್ಪರಿಕೆ ಅವರು. ಅವರಿಗೆ ಕನ್ನಡದ ಎಲ್ಲ ಸೃಜನಶೀಲ ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
- ಶ್ರೀನಿವಾಸ ಜಾಲವಾದಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

