ನಮ್ಮ ಅಂಗಳವನ್ನೇ ಸ್ವಚ್ಛವಾಗಿಡಲಾಗದವರಿಗೆ ಅನ್ಯರ ಅಂಗಳದ ಕೊಚ್ಚೆಕೆಸರಿನ ಬಗ್ಗೆ ಮಾತನಾಡುವ ಹಕ್ಕಿದೆಯೇ? ಖಂಡಿತಾ ಇಲ್ಲ. ಮೊದಲು ತನ್ನ ಮನೆ-ಮನ, ತನ್ನ ಪರಿಸರದ ಮೇಲೆ ಕಣ್ಣು ಹಾಯಿಸಲು ಕಲಿಯಬೇಕು. ಅನಂತರ ಬೇರೆಯವರ ಬಗ್ಗೆ ಆಲೋಚಿಸಿ ಮಾತನಾಡುವುದು ಒಳ್ಳೆಯದು. ನಮ್ಮ ತಟ್ಟೆಯನ್ನದ ಬಗ್ಗೆ ಯೋಚಿಸಿ, ನಮ್ಮೊಂದಿಗೆ ಹಸಿದವರ ಉದರದ ಬಗ್ಗೆ ಸ್ವಲ್ಪ ಮನಸ್ಸು ಮಾಡಿದರೆ ಒಳ್ಳೆಯದು. ಇಲ್ಲದವರ, ಅಸಹಾಯಕರ, ವೃದ್ಧರ ಬಗ್ಗೆ ಪೂರ್ತಿ ಸಾಧ್ಯವಿಲ್ಲದಿದ್ದರೂ, ಒಂದು ಹೊತ್ತಿನ ಊಟಕ್ಕಾದರೂ ಸಹಕರಿಸೋಣ.
ಹೇಳಿದಷ್ಟು ಸುಲಭವಲ್ಲ ಗೊತ್ತಿದೆ. ಕಾರ್ಯರೂಪಕ್ಕೆ ತರುವುದು ಬಹಳ ಕಷ್ಟ. ಮನಸ್ಸು ಮತ್ತು ಆರ್ಥಿಕ ಸ್ಥಿತಿಗತಿಯೂ ಜೊತೆಗೆ ಬೇಕು. ಅದು ಕಷ್ಟಪಡುವವಗೆ ಮಾತ್ರ ಗೊತ್ತಾಗುವ ವಿಚಾರ. ಸಂಘಟನೆಯ ಕೆಲಸ ಬಹಳ ಕಷ್ಟ. ಎಲ್ಲರ ಮನಸ್ಸೂ ಒಂದೇ ಹಾಗಿಲ್ಲವಲ್ಲ. ಅರ್ಥೈಸಿಕೊಂಡು ಸಾಗುವುದು ಹರಸಾಹಸ. ಈ ಇಡೀ ಜೀವನವೇ ಒಂದು ಪಾಠಶಾಲೆಯಿದ್ದಂತೆ. ಕಲಿಯುವುದು, ಕಲಿಸುವುದು ಬಹಳಷ್ಟಿದೆ. ಎಷ್ಟು ವಿಷಯಗಳನ್ನು ಕಲಿತರೂ ಕಡಿಮೆಯೇ. ಮನದ ಸ್ವಚ್ಛತೆ ಬಹು ಮುಖ್ಯ. ಅದೇ ಇಲ್ಲ ಎಂದಾದರೆ ಇತರರಿಗೆ ಹೇಳುವ ಅರ್ಹತೆಯಾದರೂ ಇದೆಯೇ? ಎಲ್ಲವನ್ನೂ ತಲೆಯ ಮೇಲೆ ಎಳೆದು ಹಾಕಿಕೊಳ್ಳಲು ಸಾಧ್ಯವಿಲ್ಲ. ಸಾಧ್ಯವಿದ್ದಷ್ಟು ಸಹಕರಿಸಬಹುದು.
ಒಂದು ಮಾತಿದೆ "ಸಿಕ್ಕ ಸಿಕ್ಕ ಕಲ್ಲೆಲ್ಲ ರತ್ನವಾಗಲು ಸಾಧ್ಯವಿಲ್ಲವಂತೆ. ಕೆಲವೇ ಕೆಲವದರಲ್ಲಿ ಮಾತ್ರ ರತ್ನವಡಗಿರಬಹುದಂತೆ" ಅರಸುವ ಕೆಲಸ ನಮ್ಮಿಂದಾಗಬೇಕು. ನಮಗ್ಯಾಕೆ ಇಲ್ಲದ ಉಸಾಬರಿ"? ಎನ್ನುವವರ ಈ ಕಾಲದಲ್ಲಿ ಪ್ರತಿಯೊಂದೂ ಕಷ್ಟವಿದೆ. ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹವಾದರೂ ಇರಲಿ.
ಹಿರಿಯ ಕವಿಗಳ ಕವನದ ಸಾಲುಗಳು ನೆನಪಾಯಿತು.
"ತಾಪವನು ತಾಳಿಕೊಳ್ಳುವುದೇ ತಪ
ಗುರಿಯನ್ನು ನೆನೆದು ಕೊಳ್ಳುವುದೇ ಜಪ
ಸಹನೆಯನ್ನು ಕಳೆದು ಕೊಳ್ಳದಿಹುದೇ ಸಮತೆ
ಸಮತೆಯ ಸ್ಥಿರೀಕರಣವೆ ಸಮಾಧಿ""
ಹೇಳುವವರು, ನೋಡುವವರು ಇದ್ದಾರೆ ಸುತ್ತಮುತ್ತ ಎಂಬರಿವು ಇರಲಿ. ನಮ್ಮದೇ ಯೋಚನೆಗಳಿರಲಿ. ಒಬ್ಬರು ಹೇಳುವರೆಂದು ಅನುದಿನವೂ ಜೀವಿಸಲು ಆಗದು, ಜೀವನಕ್ರಮವ ಬದಲಿಸಲಾಗದು. ನಮ್ಮ ಕೈಬಾಯಿ, ಆರ್ಥಿಕ ಪರಿಸ್ಥಿತಿಯ ಮೇಲೆ ಎಲ್ಲವೂ ನಿಂತಿರಬೇಕು. ಅವಶ್ಯ, ಅನಾವಶ್ಯದ ಪ್ರಜ್ಞೆಯಿದ್ದಲ್ಲಿ ಎಲ್ಲವೂ ಸುಸೂತ್ರ.
- ರತ್ನಾ ಕೆ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


