ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ‘ ಅಲೋಶಿಯಸ್ ಫೆಸ್ಟ್ 2025’ರ ಉದ್ಘಾಟನಾ ಸಮಾರಂಭವು ಎಲ್.ಸಿ.ಆರ್.ಐ ಸಭಾಂಗಣದಲ್ಲಿ ಸೋಮವಾರ ಆಗಸ್ಟ್ 25 ರಂದು ನಡೆಯಿತು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಈ ಉತ್ಸವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಸಂತ ಅಲೋಶಿಯಸ್ ನನ್ನ ಸ್ವಂತ ಸಂಸ್ಥೆ ಎಂದು ಹೇಳಿಕೊಳ್ಳಲು ನನಗೆ ಯಾವಾಗಲೂ ಅಪಾರ ಹೆಮ್ಮೆಯಿದೆ. ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡುವ ನೀವುಗಳು ಜೀವನದ ಯಶಸ್ಸಿನಲ್ಲೂ ಪರಿಣಿತಿ ಹೊಂದುವವರಿದ್ದೀರಿ. ಅಲೋಶಿಯಸ್‌ನಲ್ಲಿ ಅಧ್ಯಯನ ಮಾಡಿದವರು ಕೇವಲ ಔಪಚಾರಿಕ ಶಿಕ್ಷಣ ಮಾತ್ರವಲ್ಲದೆ ಅದರೊಂದಿಗೆ ಉದ್ಯಮಶೀಲತೆ, ನಾಯಕತ್ವ ದಲ್ಲೂ ಶ್ರೇಷ್ಠರು. ಸಂತ ಅಲೋಶಿಯಸ್ ಸದಾ ಸಮಗ್ರ ಶಿಕ್ಷಣವನ್ನು ಒದಗಿಸುತ್ತಿದೆ. ಈ ಸಂಸ್ಥೆಯಲ್ಲಿ ರುವ ಅದ್ಭುತ ಪರಂಪರೆ ಎಂದರೆ SACAA, ಇದು ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸಿ, ವಿವಿಧ ಕ್ಷೇತ್ರಗಳ ವ್ಯಕ್ತಿತ್ವಗಳನ್ನು ಪರಿಚಯಿಸುತ್ತದೆ. ಇಲ್ಲಿ ಕಲಿತವರು ಪ್ರಪಂಚದಾದ್ಯಂತ ಮಿಂಚುತ್ತಿದ್ದಾರೆ. ಈ ಸಂಸ್ಥೆಯು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ ಎಂದರು.
ಕಾರ್ಯಕ್ರಮದ ಗೌರವ ಅತಿಥಿ ಚಿತ್ರ ನಟ ರಾಜ್ ದೀಪಕ್ ಶೆಟ್ಟಿ ಅವರು ಮಾತನಾಡಿ, ಸ್ಪರ್ಧೆಗಳು ಯಾವಾಗಲೂ ನಡೆಯುತ್ತಲೇ ಇವೆ, ಆದರೆ ನಾವು ಅವುಗಳಲ್ಲಿ ಪಾಲ್ಗೊಂಡಾಗ ಮಾತ್ರ ನಮ್ಮ ನಿಜವಾದ ಯಶಸ್ಸನ್ನು ಅರಿಯುತ್ತೇವೆ. ಕನಸು ದೊಡ್ಡದಾಗಿರಲಿ ಅಥವಾ ಸಣ್ಣದಾಗಿರಲಿ, ನಾವು ಅದನ್ನು ಸಾಧಿಸವಲ್ಲಿ ಶ್ರಮಪಟ್ಟರೆ ಮಾತ್ರ ಆ ಕನಸು ನನಸಾಗುತ್ತದೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ವಿವಿಯ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟೀಸ್ ಎಸ್.ಜೆ. ಮಾತನಾಡಿ, ಯಶಸ್ಸು ಎಂಬುವುದು ಇಚ್ಛೆ ಮತ್ತು ಕಾರ್ಯದ ಸಮಿಲ್ಲನವಾಗಿದೆ. ಸೋಲು ಎಂಬುವುದು ಜೀವನದ ಅವಿಭಾಜ್ಯ ಅಂಗ. ಮೊದಲ ಪ್ರಯತ್ನದಲ್ಲಿ ನಾವು ನಮ್ಮ ಗುರಿ ತಲುಪದೇ ಇದ್ದಾಗ ಅದು ನಮ್ಮ ಕೊನೆಯ ನಿರ್ಣಯವೆಂದು ಅಂದುಕೊಳ್ಳದೆ ಮುಂದಿನ ಪ್ರಯತ್ನದಲ್ಲಿ ಭಾಗಿಯಾಗಿ ಯಶಸ್ಸನ್ನು ಕಾಣುವಲ್ಲಿ ತಲ್ಲೀನರಾಗಬೇಕು ಎಂದರು.
ಈ ಸಮಾರಂಭದಲ್ಲಿ ಇತ್ತೀಚೆಗೆ ಅತಿ ಉದ್ದನೆಯ ಎಕ್ಸ್‌ಪೋಷನ್ ಗಿಫ್ಟ್ ಬಾಕ್ಸ್ ತಯಾರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಅಪೇಕ್ಷಾ ಕೊಟ್ಟಾರಿ, ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ ತೃತೀಯ ಬಿಎ ವಿದ್ಯಾರ್ಥಿನಿ ರೆಮೋನಾ ಎವೆಟ್ ಪಿರೇರಾ, ಏಕ ಕಾಲಕ್ಕೆ ಎರಡೂ ಕೈಗಳಿಂದ ಹತ್ತಕ್ಕೂ ಹೆಚ್ಚು ವಿಭಿನ್ನ ಶೈಲಿಯಲ್ಲಿ ಬರೆಯುವ ಕಲೆ ಹಾಗೂ ಹಲವು ವಿಶ್ವ ದಾಖಲೆ ಬರೆದ ಪ್ರಥಮ ಬಿಎ ವಿದ್ಯಾರ್ಥಿನಿ ಆದಿ ಸ್ವರೂಪ ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ವಿಝ್‌ಡೋಮ್ ಎಜ್ಯುಕೇಶನ್ ಇದರ ಸ್ಥಾಪಕ ಡಾ. ಗುರು ತೇಜ್ ಹಾಗೂ ವ್ಯವಸ್ಥಾಪನಾ ನಿರ್ದೇಶಕಿ ಡಾ. ಫ್ರಾನ್ಸಿಸ್ಕಾ ತೇಜ್ ಆಗಮಿಸಿದ್ದರು. ಈ ಸಂದರ್ಭ ಡಾ. ಫ್ರಾನ್ಸಿಸ್ಕಾ ತೇಜ್ ಮಾತನಾಡಿ, ಇಂದಿನ ಕಾಲದಲ್ಲಿ ಶಿಕ್ಷಣವೆಂದರೆ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಭವಿಷ್ಯದಲ್ಲಿ ನೀವು ಹೋಗುವ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧಾತ್ಮಕ ಪೈಪೋಟಿ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ಹೊಸ ಚಿಂತನೆ ಮತ್ತು ವಿಮರ್ಶಾತ್ಮಕ ವಿಶ್ಲೇಷಣೆಯ ಉತ್ತಮ ಮನೋಭಾವವನ್ನು ಹೊಂದಿರಬೇಕು. ಈ ಸಂಸ್ಥೆಯು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠಾಧಿಕಾರಿ ವಂ. ಮೆಲ್ವಿನ್ ಜೋಸೆಫ್ ಪಿಂಟೋ ಎಸ್.ಜೆ. ವಹಿಸಿದ್ದರು.
ವೇದಿಕೆಯಲ್ಲಿ ಕುಲಸಚಿವರುಗಳಾದ ಡಾ. ಆಲ್ವಿನ್ ಡೆʼಸಾ, ಡಾ. ರೊನಾಲ್ಡ್ ನಝರತ್, ಹಣಕಾಸು ಸಚಿವ ವಂ. ವಿಶ್ವಾಸ್ ಮಿಸ್ಕಿತ್ ಎಸ್.ಜೆ., ವಿವಿಧ ಉತ್ಸವ ಸಂಯೋಜಕರು, ಸಾಂಸ್ಕೃತಿಕ ಕಾರ್ಯದರ್ಶಿ ಶ್ರಾವಣಿ ಕೆ ಭಟ್ ಉಪಸ್ಥಿತರಿದ್ದರು.
ಒಟ್ಟು 36 ಸ್ಪರ್ಧೆಗಳಲ್ಲಿ 60ಕ್ಕೂ ಹೆಚ್ಚಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂತ ಅಲೋಶಿಯಸ್ ಗೊನ್ಹಾಗ ಪದವಿ ಪೂರ್ವ ಕಾಲೇಜು, ಮಂಗಳೂರು, ಪ್ರಥಮ ಸ್ಥಾನ ಗಳಿಸಿದರೆ, ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜು, ಉಜಿರೆ ದ್ವಿತೀಯ ಸ್ಥಾನವನ್ನು ಗಳಿಸಿತು. ಸಾಂಸ್ಕೃತಿಕ ಉತ್ಸವ ಸ್ಪರ್ಧೆಯಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜು, ಉಜಿರೆ, ಪ್ರಥಮ ಸ್ಥಾನ ಗಳಿಸಿದರೆ ಕಣಚೂರು ಮಹಿಳಾ ಪದವಿ ಫುರ್ವ ದ್ವಿತೀಯ ಸ್ಥಾನವನ್ನು ಗಳಿಸಿತು.
ಉದ್ಘಾಟನಾ ಸಮಾರಂಭದಲ್ಲಿ ಸಂಯೋಜಕಿ ಭವ್ಯಾ ಶೆಟ್ಟಿ ಸ್ವಾಗತಿಸಿ, ಸಹ ಸಂಯೋಜಕಿ ಡಾ. ಸ್ಮಿತಾ ಡಿ.ಕೆ. ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಸಹ ಸಂಯೋಜಕ ಡಾ. ದಿನೇಶ್ ನಾಯಕ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನ್ಸನ್ ರೇಗೋ ವಂದಿಸಿದರು. ವಿದ್ಯಾರ್ಥಿಗಳಾದ ಜೆನಿಸಿಯಾ ಹಾಗೂ ಆಲಿಯಾ ಖಾನ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

