ಕಮಲಶಿಲೆ ದೇವಸ್ಥಾನದಿಂದ ಮುಂದೆ ಹಳ್ಳಿಹೊಳೆ ಮಾರ್ಗವಾಗಿ ಸಂಚರಿಸುವಾಗ ದಟ್ಟ ಕಾಡು ಕಳೆದು ಪಾರೆ ಎನ್ನುವ ನೂರಾರು ಎಕ್ರೆ ಮುರಕಲ್ಲಿನ ಬಯಲು ಪ್ರದೇಶ ಸಿಗುತ್ತದೆ (Laterite plain).
ಮಳೆಗಾಲದ ನಡು ಮಧ್ಯೆ ಇಲ್ಲಿ Utricularia ಪ್ರಭೇದದ Utricularia reticulata ಎಂಬ ಮಾಂಸಹಾರಿ ಸಸ್ಯ ಹೀಗೆ ಬೆಳೆದು ಹೂ ಬಿಟ್ಟು ಕಣ್ಣು ಹಾಯಿಸಿದಷ್ಟು ದೂರ ಕಂಗೊಳಿಸುತ್ತದೆ. ನಾನು ಈ ಸ್ಥಳವನ್ನು ಪ್ರಥಮವಾಗಿ ನೋಡಿದಂದಿನಿಂದ ಪ್ರತಿ ಮಳೆಗಾಲದಲ್ಲೊಮ್ಮೆ ಈ ಪ್ರದೇಶಕ್ಕೆ ಯಾತ್ರೆ ಹೊರಡುವುದು ವಾಡಿಕೆ. ಹಾಗೇ ಈ ಸಲವೂ ಒಂದಷ್ಟು ಮಂದಿ ಸಸ್ಯ ಮಿತ್ರರನ್ನು ಜೊತೆ ಸೇರಿಸಿಕೊಂಡು ಹೊರಟೆ. ಆದರೆ ಈ ವರ್ಷ ದುರದೃಷ್ಟವಶಾತ್ ಹೂವು ಪೂರ್ಣ ಪ್ರಮಾಣದಲ್ಲಿ ಅರಳಿರಲಿಲ್ಲ. ಒಂದಷ್ಟು ದಿನ ಬಿಟ್ಟು ಬರಬೇಕಿತ್ತು. ಆದರೂ "ಪಾರೆ" ಎಂಬ ಸ್ಥಳ Utricularia reticulata ಹೂವಿನಿಂದ ಅಲಂಕಾರ ಮಾಡಿಸಿಕೊಳ್ಳಲು ಅಣಿಯಾಗಿತ್ತು.
ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಎರಡು ಪ್ರಭೇದದ ಮಾಂಸಾಹಾರಿ ಸಸ್ಯಗಳು ಕಂಡುಬರುತ್ತವೆ. ಅದರಲ್ಲಿ ಒಂದು drosera ಪ್ರಭೇದದ ಸಸ್ಯಗಳು (ಹುಳುಹಿಡುಕನ ಗಿಡ) ಇನ್ನೊಂದು ನಾವು ತೋರಿಸುತ್ತಿರುವ "ಪಾರೆ" ಎಂಬ ಬಯಲು ಸುಂದರಿಯನ್ನು ಅಲಂಕರಿಸುತ್ತಿರುವ Utricularia ಪ್ರಭೇದ.
utricularia ಪ್ರಭೇದದ ಹಲವಾರು ಸಸ್ಯಗಳು ಕರ್ನಾಟಕದಲ್ಲಿ ಕಂಡು ಬರುತ್ತದೆ. ಇದಕ್ಕೆ Bladderwort ಸಸ್ಯಗಳು ಎಂದೂ ಹೇಳುತ್ತಾರೆ. ಇದರ ಬೇರುಗಳಲ್ಲಿ ಮೂತ್ರಕೋಶದಂತ ರಚನೆ ಇರುತ್ತದೆ. ನಿರ್ವಾತವಾದ ಈ bladder ಗಳ ಮೇಲೆ ಸೂಕ್ಷ್ಮ ಕೂದಲುಗಳು ಇರುತ್ತದೆ. ಸಣ್ಣ ಕೀಟಗಳು ಈ ಸೂಕ್ಷ್ಮ ಕೂದಲನ್ನು ಸೋಕಿದ ಕೂಡಲೇ bladder ತಕ್ಷಣ ತೆರೆದುಕೊಂಡು ಬೇಟೆಯಾಗಿ ಬರುವ ಸಣ್ಣ ಜೀವಿಗಳನ್ನು ಸುತ್ತಮುತ್ತ ಇರುವ ನೀರಿನ ಸಹಿತ ಒಳಗೆ ಎಳೆದುಕೊಳ್ಳುತ್ತದೆ.ನಂತರ ಜೀರ್ಣಕಾರಕ ಕಿಣ್ವಗಳನ್ನು ಸ್ರವಿಸಿ, ಜೀವಿಯನ್ನು ಪೋಷಕಾಂಶಗಳಿಂದ ಕೂಡಿದ ದ್ರವವಾಗಿ ಮಾರ್ಪಡಿಸುತ್ತವೆ.
ಮತ್ತೆ ಪುನಃ ಕಮಲಶಿಲೆ ಸಮೀಪದ ಪಾರೆಯ ವಿಷಯಕ್ಕೆ ಬರೋಣ. ಪಾರೆ ಎಂಬುದು ವಿಶಾಲವಾಗಿ ಹರಡಿರುವ ಮುರಕಲ್ಲಿನ ಭೂಮಿ. ಮಳೆಗಾಲ ಪ್ರಾರಂಭವಾಗಿ ನೀರು ಈ ಮುರಕಲ್ಲಿನ ಭೂಮಿಯಲ್ಲಿ ಹರಿಯಬೇಕು. ಆಗ ಸುಪ್ತಾವಸ್ಥೆಯಲ್ಲಿರುವ utricularia reticulata ಸಸ್ಯದ ಬೀಜ ಅಥವಾ ಸಸ್ಯ ಮೊಗ್ಗುಗಳು ಚೈತನ್ಯ ತುಂಬಿ ಚಿಗಿತು ಕೊಳ್ಳುತ್ತದೆ. ಮಳೆಗಾಲವು ಉತ್ತುಂಗಕ್ಕೇರುತ್ತಿದ್ದಂತೆ, ಸಾಮೂಹಿಕ ಹೂಬಿಡುವ ಘಟನೆ ಸಂಭವಿಸುತ್ತದೆ. ಮಳೆಗಾಲ ಮುಗಿದಂತೆ ಮತ್ತೆ ಸುಪ್ತಾವಸ್ಥೆಗೆ ತೆರಳುತ್ತದೆ.
utricularia ಪ್ರಭೇದದಲ್ಲಿ ಇದು utricularia reticulata ಎಂದು ಗುರುತಿಸಲು ಸಹಾಯ ಮಾಡಿದವರು ಎಂದಿನ ಹಾಗೆ ಖ್ಯಾತ ಸಸ್ಯಶಾಸ್ತ್ರಜ್ಞ ಡಾ. ಸಂಪತ್ ಕುಮಾರ್ ಇವರು. ಇದಕ್ಕೆ ನಿರ್ದಿಷ್ಟವಾದ ಕನ್ನಡ ಹೆಸರು ಸಿಗಲಿಲ್ಲ. ತುಳುವಿನಲ್ಲೂ ಇದ್ದ ಬಗ್ಗೆ ಮಾಹಿತಿ ಇಲ್ಲ. ಡಾ. ಸಂಪತ್ ಕುಮಾರ್ ಅವರು ಇದನ್ನೇ ಅನುಮೋದಿಸುತ್ತಾ utricularia ಪ್ರಬೇದದ ಸಸ್ಯಗಳಿಗೆ ನಿರ್ದಿಷ್ಟವಾದ ಕನ್ನಡದ ಹೆಸರುಗಳು ಇಲ್ಲ. ಆದರೆ ಬೇರುಗಳಲ್ಲಿ ಇರುವ bladder ವಿನ್ಯಾಸದ ರಚನೆಗಳಿಂದ utricularia ಸಸ್ಯಗಳಿಗೆ ನೀರು ಗುಳ್ಳೆ ಸಸ್ಯ ಎಂದು ಹೇಳುತ್ತಾರೆ ಎನ್ನುವ ಅಭಿಪ್ರಾಯ ಕೊಟ್ಟರು. bladder ಗೆ ಗಾಳಿ ಗುಳ್ಳೆ ಎನ್ನುವ ಕನ್ನಡ ಹೆಸರೂ ಸಹ ಇದೆ. ಈ ಸಸ್ಯದ bladder ರಚನೆ ಮೊದಲು ನಿರ್ವಾತ ಹೊಂದಿ ಬೇಟೆಯ ನಂತರ ನೀರಿನಿಂದ ತುಂಬಿಕೊಳ್ಳುತ್ತದೆ ಆದ್ದರಿಂದ "ನೀರುಗುಳ್ಳೆ" ಎಂಬ ಹೆಸರು ಅತ್ಯಂತ ಸಮಂಜಸ.
ಇಲ್ಲಿರುವ ಚಿತ್ರಗಳಲ್ಲಿ ಸಂಪೂರ್ಣ ಹೂ ಬಿಟ್ಟು ಕಂಗೊಳಿಸುವ ಚಿತ್ರಗಳು ಹೋದ ವರ್ಷದವು, ಮಿಕ್ಕಂತೆ ಉಳಿದ ಚಿತ್ರಗಳು ಈ ಸಲ ತೆಗೆದದ್ದು. ಈ ಸಸ್ಯದ ಬಗ್ಗೆ ಯಾವ ಜನಪದೀಯ ಔಷಧೀಯ ಅರಿವುಗಳೂ ಸಿಗಲಿಲ್ಲ.
- ಸುರೇಶ್ ರಾಜ್ ಭಟ್ ಕೋಡು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ