ಇದು ನಿಮ್ಮ ಒಬ್ಬರ ಸಮಸ್ಯೆ ಅಲ್ಲ, ಮಲೆನಾಡಿನ ಬಹುತೇಕ ಅಡಿಕೆ ಬೆಳೆಗಾರರ ಸಮಸ್ಯೆ ಇದೇ ಆಗಿದೆ. ಕಳೆದ ಎರಡು ತಿಂಗಳ ಮಳೆ ಅವಾಂತರ, ಕಳೆದ ಐದು ದಿನಗಳ ಬಾರಿ ಗಾಳಿ, ಸ್ಪ್ರೇ ಮಾಡಲಾಗದ ಪರಿಸ್ಥಿತಿ, ಎಲೆ ಚುಕ್ಕಿಯೊಂದಿಗೆ ಕೊಳೆ ರೋಗದ ವ್ಯಾಪಕತೆ, ಮಂಗ-ಕಾಡುಕೋಣ-ಆನೆ ಕಾಟಗಳಿಂದ ಮಲೆನಾಡಿನ ಅಡಿಕೆ ಬೆಳೆಗಾರ ಗಾಣದಲ್ಲಿ ಹಿಂಡಲ್ಪಟ್ಟ ಕಬ್ಬಿನ ಜಲ್ಲೆಯಂತಾಗಿದ್ದಾನೆ.
ಅಡಿಕೆ ಉದುರುವ ಸಮಸ್ಯೆ ಕಂದಾಯ ಇಲಾಖೆಗೆ ಬರೋಲ್ಲ.
ಅರಣ್ಯ ಇಲಾಖೆಯವರೇ ಮಂಗಗಳನ್ನು ಕಾಡಂಚಿನ ತೋಟಗಳಿಗೆ ಬರುವಂತೆ ಮಾಡಿರುವುದರಿಂದ, ಅವರು ನಿಮ್ಮ ತೋಟದ ಅಡಿಕೆ ಸಮಸ್ಯೆಗೆ ಸ್ಪಂದಿಸುವುದಿಲ್ಲ.
ಗ್ರಾಮ ಪಂಚಾಯತಿಯ PDO, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಏನೂ ಮಾಡಲು ಸಾಧ್ಯವಿಲ್ಲ ಅಂತ ವಾಸ್ತವವಾಗಿ ಕೈ ಚಲ್ಲುತ್ತಾರೆ. ಅಮ್ಮಮ್ಮಾ ಅಂದ್ರೆ ಮುಂದಿನ ಗ್ರಾಮ ಸಭೆ ಮೀಟಿಂಗ್‌ನಲ್ಲಿ ಇಡುವ ಒಂದು ಉದ್ದ ಲಾಂಗ್ ಎಕ್ಸಸೈಜ್ ಬುಕ್‌ನಲ್ಲಿ ನಿಮಗೆ ಉಚಿತ 5 ಅಡಿಕೆ ಗಿಡಗಳನ್ನು ಆದ್ಯತೆಯ ಮೇಲೆ ಕೊಡಲಾಗುವುದೆಂಬ ಪಟ್ಟಿಯಲ್ಲಿ ಹೆಸರು ಬರೆದುಕೊಳ್ಳುತ್ತಾರೆ!
ತೋಟಗಾರಿಕೆ ಇಲಾಖೆಯಲ್ಲಿ ಮೈಲುತುತ್ತ ಸಬ್ಸಿಡಿ ಅಂತ ಎಕರೆಗೆ ₹.600 ರಂತೆ ಧನ ಸಹಾಯ ಕೊಡುತ್ತಿದ್ದಾರೆ, ಪಡೆದುಕೊಳ್ಳಬಹುದು. ಈ ಮೈಲುತುತ್ತ ಸಬ್ಸಿಡಿಗೆ ಅರ್ಜಿ, ಫೋಟೋ, ಪಹಣಿ, ಆಧಾರ್, ರೇಷನ್ ಕಾರ್ಡ್, ಮೈಲುತುತ್ತ ಬಿಲ್ಲು, ಜಾತಿ ಪ್ರಮಾಣ ಪತ್ರ, ಪಹಣಿಯಲ್ಲಿ ಅಡಿಕೆ ಅನ್ನುವುದು ಅಳಿಸಿ ಹೋಗಿದ್ರೆ (ಕೆಲಸ ಇಲ್ಲದ ಇಲಾಖೆಗಳು ಪಹಣಿ ಕಾಲಂನಲ್ಲಿ ಆಗಾಗ ದೀರ್ಘಾವಧಿ ಬೆಳೆಯನ್ನೂ ಅಳಿಸುವ ಒಂದು ವಿಶಿಷ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತವೆ) ನೋಟರಿಯಿಂದ ಧೃಡೀಕರಣ,
ಬ್ಯಾಂಕ್ ಪಾಸ್ ಜೆರಾಕ್ಸ್‌ಗಳನ್ನು ದ್ವಿಪ್ರತಿಗಳಲ್ಲಿ ಸಲ್ಲಿಸಬೇಕು!
ಇನ್ನು ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಗಳು ಚುನಾವಣೆ ಇಲ್ಲದೆ ಸತ್ತು ಹೋಗಿವೆ.
ನಿಮ್ಮಲ್ಲೇನೋ ಗೊತ್ತಿಲ್ಲ, ರಾಜ್ಯದ ಬಹುತೇಕ ಶಾಸಕರುಗಳಿಗೆ (ಎಲ್ಲಾ ಪಕ್ಷದ) ನೂರಾರು ಸಮಸ್ಯೆಗಳಿವೆ: ಅರಿವಿನ ಕೊರತೆ, ಕಾಳಜಿ ಕೊರತೆ,
ಹೆಚ್ಚಿದ ಬಿಪಿ/ಶುಗರ್/ಅಹಂಕಾರ,
ನಿಷ್ಕ್ರಿಯತೆ ಫೋಬಿಯ,
ರಕ್ತದಲ್ಲಿ ಕಾಮನ್‌ಸೆನ್ಸ್ ಅಪಾಯ ಮಟ್ಟಕ್ಕಿಂತ ಕಮ್ಮಿ ಇರುವುದು,
ಹಣದ ಹ್ಯಾಂಗ್‌ಓವರ್
ಜನರಿಗೆ ಮುಖ ತೋರಿಸಲೂ ಆಗದೆ ಇರುವಂತಹ 'ಮುಖದ ಮೇಲೆ ಅಡಿಕೆ ಎಲೆ ಚುಕ್ಕಿ ರೀತಿಯ ನೈತಿಕ ಕಪ್ಪು ಕಲೆಗಳು,
ಇತ್ಯಾದಿ ಇನ್ನೂ ಇವೆ!!
ಇನ್ನು ನಮ್ಮ ನಮ್ಮ ಕ್ಷೇತ್ರದ MP ಯಾರು ಅಂತ AI ಗೂಗಲ್ ಸರ್ಚ್ ಬಳಸಿ ನೋಡುವಾ ಅಂದ್ರೆ "ಮಾಹಿತಿ ಲಭ್ಯವಿಲ್ಲ" ಅಂತ ಬರ್ತಾ ಇದೆ!!
ಕೊನೇಯಲ್ಲಿ ಹೇಳಿದ್ರಲ್ಲ "ದೇವರೇ ಗತಿ" ಅಂತ, ಅದೊಂದೆ ಆಶಾದಾಯಕ ಭರವಸೆ.
ಶ್ರಾವಣ ಮಾಸ ಶುರುವಾಗಿದೆ, ಹಬ್ಬಗಳ ಸಾಲು. ದೇವರನ್ನೇ ಎಲ್ಲರೂ ಬೇಡಿಕೊಳ್ಳುವ!
ಡಫ್‌ನೈಟ್ ಒಳ್ಳೇದು ಮಾಡಿಯೇ ಮಾಡುತ್ತಾನೆ.
ತೋಟದ ಕಡೆ ಹೆಚ್ಚು ತಿರುಗಾಡುವುದು ಒಳ್ಳೇದಲ್ಲ! ಬಿದ್ದ ಅಡಿಕೆಗಳನ್ನು ನೋಡಬೇಡಿ, ಮರದ ತಲೆಯನ್ನೂ ನೋಡಬೇಡಿ.
ಸಮಯ ಕಳೆಯುವುದಕ್ಕೆ
ಗ್ರಾಮ ಒನ್,
ಬಾಪೂಜೀ ಕೇಂದ್ರ,
ಗ್ರಾಮ ಪಂಚಾಯತಿ,
ತಾಲೂಕು ಆಫೀಸು,
RI ಕಛೇರಿ,
ಬ್ಯಾಂಕ್,
ಜೆರಾಕ್ಸ್ ಅಂಗಡಿ,
ಫೋಟೋ ಸ್ಟುಡಿಯೋ
ನೋಟರಿ ಕಛೇರಿ,
ಸಹಕಾರ ಸೊಸೈಟಿ,
ತೋಟಗಾರಿಕಾ ಇಲಾಖೆ,
ಕೃಷಿ ರೈತ ಸಂಪರ್ಕ ಕೇಂದ್ರ,
ಇಂಟರ್‌ನೆಟ್ ಸಿಗುವ ಊರಿನಾಚೆಯ ಎತ್ತರ ಗುಡ್ಡ ಪ್ರದೇಶ....
ಇಲ್ಲೆಲ್ಲ ಆ್ಯಂಡ್ರಾಯ್ಡ್ ಮೊಬೈಲ್‌ನೊಂದಿಗೆ ಸುತ್ತಾಡ್ತಾ ಇರಬಹುದು.
ಇದೆಲ್ಲ ಯಾಕೆ ಅಂದ್ರೆ ನಂಬರ್ ಒಂದು ತೋಟದ ದುರಂತ ಪರಿಸ್ಥಿತಿಯಿಂದ ದೂರ ಇದ್ದು ಕೊಂಚ ನೆಮ್ಮದಿ ಪಡೆಯುವುದಕ್ಕೆ ಮತ್ತು ಬೆಳೆ ಸರ್ವೆ, ಬೆಳೆ ವಿಮೆ, ₹.600 ಸಬ್ಸಿಡಿ, ಫೋಟೋ ತೆಗೆಸಲು, ಜೆರಾಕ್ಸ್ ಮಾಡಿಸಲು, ಲಿಂಕ್ ಮಾಡಿಸಲು, KYC ಅಪ್‌ಡೇಟ್ ಮಾಡಿಸಲು ಮುಂತಾದ ಕೃಷಿಯ ಆಧುನಿಕ ತಾಂತ್ರಿಕ 'ಬೇಸಾಯ' ಮಾಡಲು!
ಇಷ್ಟು ಮಾಡುತ್ತಾ ನಗುನಗುತ್ತಾ ಇರೋಣ, ದೇವರಿದಿನಾ, ನೋಡ್ಕತಾನೆ. ಏನಂತೀರಿ.
ಸು ಫ್ರೆಂ ಸೋ ಅಂತ ನಗಿಸುವ ಸಿನಿಮಾ ಬಂದಿದೆಯಂತೆ, ಬರ್ತೀರಾ!?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ