ಬಿಡಿಸಲಾಗದ ಒಗಟು
ಜನಸಂಖ್ಯೆ ಎಂಬುದನ್ನು ಮಾನವ ಸಂಪನ್ಮೂಲ ಎಂದು ಪರಿಭಾವಿಸಿದಾಗ ಅದು ದೇಶಕ್ಕೆ ಕೊಡುಗೆಯೇ. ಆದರೆ ಅದು ಕೇವಲ ಸಂಖ್ಯೆಯಷ್ಟೇ ಆದರೆ ದೇಶಕ್ಕೆ ಅದಕ್ಕಿಂತ ದೊಡ್ಡ ಸಮಸ್ಯೆ ಬೇರಿಲ್ಲ. ಇಂದಿನ ಅಭಿವೃದ್ಧಿಶೀಲ ಯುಗದಲ್ಲಿ ವೈಜ್ಞಾನಿಕ ಅನ್ವೇಷಣೆಗಳು ಮಾನವನನ್ನು ಈ ವಿಶ್ವದ ಒಡೆಯನಾಗಿ ಮಾಡಿದರೂ, ಅವನು ಮಾತ್ರ ತನ್ನನ್ನು ತಾನೇ ನಿಯಂತ್ರಣಕ್ಕೊಳಪಡಿಸುವುದು ಅಸಾಧ್ಯವಾಗಿದೆ. ಜನಸಂಖ್ಯಾ ಸ್ಪೋಟವು ಜಗತ್ತಿನ ಬಹುತೇಕ ಭಾಗಗಳಲ್ಲಿ ಬಿಡಿಸಲಾಗದ ಒಗಟಾಗಿದೆ.
146 ಕೋಟಿ ಜನಸಂಖ್ಯೆ ಹಾಗೂ ಅತೀ ಹೆಚ್ಚು ಯುವಜನರನ್ನು ಹೊಂದಿರುವ ಭಾರತಕ್ಕೆ ಮಾನವ ಸಂಪನ್ಮೂಲ ವರವೂ ಹೌದು. ಅಧಿಕ ಸಂಖ್ಯೆಯಲ್ಲಿರುವ ಯುವ ಶಕ್ತಿ ಭಾರತದ ವರ್ತಮಾನ ಮತ್ತು ಭವಿಷ್ಯ. ಮಾನವ ಬಂಡವಾಳದ ಸದ್ಬಳಕೆಯ ಮೂಲಕ ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ತಲುಪುವಂತಾದಾಗ ಮಾತ್ರ ಸುಸ್ಥಿರ ಹಾಗೂ ಅರ್ಥಪೂರ್ಣ ಅಭಿವೃದ್ಧಿ ಸಾಧ್ಯ.
ಡೇ ಆಫ್ 5 ಬಲಿಯನ್(1987)
ವಿಶ್ವ ಜನಸಂಖ್ಯೆಯು 1987 ಜುಲೈ 11 ರಂದು 500 ಕೋಟಿಯ ಗಡಿಯನ್ನು ತಲುಪಿತು. ಇದು ವಿಶ್ವಜನಸಂಖ್ಯಾ ಶಾಸ್ತ್ರದಲ್ಲಿ ಒಂದು ಹೆಗ್ಗುರುತು ಕ್ಷಣವಾಗಿತ್ತು ಮತ್ತು ವಿಶ್ವದಾದ್ಯಂತ ತ್ವರಿತ ಜನಸಂಖ್ಯಾ ಬೆಳವಣಿಗೆಯತ್ತ ಗಮನ ಸಳೆಯಿತು. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ಗಮನಿಸಿ ವಿಶ್ವಸಂಸ್ಥೆ 1987ರಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಜನಸಂಖ್ಯೆಯ ಕುರಿತಾದ ಸಮಸ್ಯೆಗಳ ಅರಿವನ್ನು ಮೂಡಿಸಲು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಮಂಡಳಿಯು 1989ರ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲು ಕರೆ ನೀಡಿತು.
ಆತಂಕ ಮೂಡಿಸುತ್ತಿರುವ ಜನಸಂಖ್ಯೆ:
ಎಷ್ಟೋ ಮಿಲಿಯ ವರ್ಷಗಳ ನಂತರ 1800 ರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ ಒಂದು ಬಿಲಿಯ ಅಂದರೆ 100 ಕೋಟಿಯನ್ನು ಮೊತ್ತ ಮೊದಲ ಬಾರಿಗೆ ತಲುಪಿತು ಮುಂದೆ 127 ವರ್ಷಗಳ ನಂತರ ಅಂದರೆ 1927ರಲ್ಲಿ ಜಗತ್ತಿನ ಜನಸಂಖ್ಯೆ ದ್ವಿಗುಣಗೊಂಡು 2 ಬಿಲಿಯ ತಲುಪಿತು. ಮುಂದಿನ 33 ವರ್ಷಗಳಲ್ಲಿ ಅಂದರೆ 1960 ರಲ್ಲಿ 3 ಬಿಲಿಯ ತಲುಪಿ, ಮುಂದೆ 14 ವರ್ಷಗಳಲ್ಲಿ 1974ಕ್ಕೆ 4 ಬಿಲಿಯ ತಲುಪಿತು. ಮುಂದೆ ಕೇವಲ 13 ವರ್ಷಗಳಲ್ಲಿ(1987) ಜುಲೈ 11 ರಂದು ಜಗತ್ತಿನ ಜನಸಂಖ್ಯೆ 5 ಬಿಲಿಯ ತಲುಪಿತು. ಮುಂದೇ ಕೇವಲ 12 ವರ್ಷಗಳ ಅಂತರದಲ್ಲಿ 6 ಬಿಲಿಯ (1999) ಹಾಗೂ 7 ಬಿಲಿಯನ್ (2011) ತಲುಪಿತು. ಇದೀಗ 11 ವರ್ಷಗಳ ಅಂತರದಲ್ಲಿ 8 ಬಿಲಿಯನ್ (2022) ತಲುಪಿ ಈಗ 8.23 ಬಿಲಿಯನ್ ತಲುಪಿದೆ.
ಜನಸಂಖ್ಯೆ ಎನ್ನುವುದು ಕೇವಲ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಳಿದಿಲ್ಲ. ಬಹಳ ಹಿಂದಿನಿಂದಲೂ ಮಾನವ ಸಮಾಜದಲ್ಲಿ ಆತಂಕ ಮೂಡಿಸುತ್ತಲೇ ಬಂದಿದೆ. ಕ್ರಿ.ಪೂ 4 ನೇ ಶತಮಾನದಲ್ಲಿ ಜಗತ್ತಿನ ಜನಸಂಖ್ಯೆ ಕೇವಲ 20 ಕೋಟಿ ಇದ್ದಾಗಲೇ ಪ್ಲೇಟೋ ಮತ್ತು ಅರಿಸ್ಟಾಟಲ್ ಮೊದಲಾದ ದಾರ್ಶನಿಕರು ಕಟ್ಟುನಿಟ್ಟಿನ ಜನನ ನಿಯಂತ್ರಣ ಕ್ರಮಗಳಿಗೆ ಸಲಹೆ ನೀಡಿದ್ದರು.
2025 ರ ಘೋಷವಾಕ್ಯ:
ಈ ವರ್ಷದ ಥೀಮ್, "ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ಅವರು ಬಯಸುವ ಕುಟುಂಬಗಳನ್ನು ರಚಿಸಲು ಯುವಜನರನ್ನು ಸಬಲೀಕರಣಗೊಳಿಸುವುದು", ಯುವಕರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಕ್ಕುಗಳು, ಸಾಧನಗಳು ಮತ್ತು ಅವಕಾಶಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದನ್ನು ಕರೆ ನೀಡುತ್ತದೆ. ಇಂದು, ಪ್ರಪಂಚವು 10 ರಿಂದ 24 ವರ್ಷದೊಳಗಿನ 1.8 ಶತಕೋಟಿ ಯುವಜನರನ್ನು ಹೊಂದಿದೆ: ಇತಿಹಾಸದಲ್ಲಿ ಅತಿದೊಡ್ಡ ಪೀಳಿಗೆ. ಅವರು ಆರ್ಥಿಕ ಅಭದ್ರತೆ, ಲಿಂಗ ಅಸಮಾನತೆ, ಸೀಮಿತ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ, ಹವಾಮಾನ ವೈಪರೀತ್ಯ ಮತ್ತು ಸಂಘರ್ಷವನ್ನು ಎದುರಿಸುತ್ತಿದ್ದಾರೆ.
"ಯುವಕರು ನಮ್ಮ ಭವಿಷ್ಯವನ್ನು ಮಾತ್ರ ರೂಪಿಸುತ್ತಿಲ್ಲ; ಅವರು ನ್ಯಾಯಯುತ, ಅಂತರ್ಗತ ಮತ್ತು ಸುಸ್ಥಿರವಾದದ್ದನ್ನು ಬೇಡುತ್ತಿದ್ದಾರೆ" ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಒತ್ತಿ ಹೇಳುತ್ತಾರೆ.
ಜಗತ್ತಿನ ಪ್ರತಿ ಐದು ಜನ ಯುವಕರಲ್ಲಿ ಒಬ್ಬ ಭಾರತೀಯ:
ಚೀನಾದ ನಂತರ ಅತೀ ಹೆಚ್ಚು ಜನರನ್ನು ಹೊಂದಿರುವ ದೇಶವಾದ ಭಾರತ ಬೌಗೋಳಿಕವಾಗಿ ಜಗತ್ತಿನ 2.4% ಭೂಭಾಗವನ್ನು ಹೊಂದಿದೆ, ಆದರೆ ಜಗತ್ತಿನ 17.05% ಜನರು ಭಾರತದಲ್ಲಿದ್ದಾರೆ. ಜಗತ್ತಿನ ಪ್ರತಿ 6 ಜನರಲ್ಲಿ ಒಬ್ಬ ಭಾರತೀಯ. ಜಾಗತಿಕ ವರಮಾನದಲ್ಲಿ ಭಾರತದ ಪಾಲು ಕೇವಲ 2.51%. ಬೌಗೋಳಿಕವಾಗಿ ಅಮೇರಿಕಾ ಭಾರತದ ಎರಡೂವರೆ ಪಟ್ಟು ದೊಡ್ಡದಿದೆ. ಆದರೆ ಜನಸಂಖ್ಯೆಯಲ್ಲಿ ಭಾರತವು ಅಮೇರಿಕಾದ ಮೂರೂವರೆ ಪಟ್ಟು ದೊಡ್ಡದಿದೆ. ಭಾರತದ ವಾರ್ಷಿಕ ಜನಸಂಖ್ಯಾ ಹೆಚ್ಚಳವು ಆಸ್ಟ್ರೇಲಿಯಾ ದೇಶದ ಒಟ್ಟು ಜನಸಂಖ್ಯೆಗೆ ಸಮನಾಗಿದೆ. 15ರಿಂದ 25 ವರ್ಷ ವಯೋಮಾನದವರ ಸಂಖ್ಯೆ ಜಗತ್ತಿನಲ್ಲಿ 120 ಕೋಟಿ ಇದ್ದರೆ; ಭಾರತದಲ್ಲೇ 25 ಕೋಟಗೂ ಅಧಿಕ ಇದೆ. ಅಂದರೆ ಜಗತ್ತಿನ ಪ್ರತ ಐವರು ಯುವಜನರಲ್ಲಿ ಒಬ್ಬರು ಭಾರತೀಯ. ಯುವಪೀಳಿಗೆ ಜಗತ್ತಿಗೆ ಹೊಸ ರೂಪ ಕೊಡಬೇಕಿದೆ. ಇದರಲ್ಲಿ ಭಾರತೀಯರೇ ಹೊರಬೇಕಾದ ಹೊಣೆಗಾರಿಕೆ ದೊಡ್ಡದು!.
ಜನಸಂಖ್ಯೆ ವರದಾನವಾಗುವ ಅಂಶಗಳು:
ಯುವ ಶಕ್ತಿ – ಶ್ರಮಶಕ್ತಿ: ಭಾರತದಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಜನರು 15 ರಿಂದ 59 ವಯಸ್ಸಿನ ನಡುವೆ ಇದ್ದು, ಈ ಜನಶಕ್ತಿ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ. ಇದನ್ನು "ಲಾಭದಾಯಕ ಜನಸಂಖ್ಯಾ ಕಿಟಕಿ" ಎಂದು ಕರೆಯಲಾಗುತ್ತದೆ.
ಆವಿಷ್ಕಾರ ಮತ್ತು ಉದ್ಯಮಶೀಲತೆ: ಯುವಜನತೆಗೆ ಇರುವ ಹೊಸ ಆಲೋಚನೆಗಳು ಹಾಗೂ ತಂತ್ರಜ್ಞಾನಪ್ರಿಯ ಮನಸ್ಥಿತಿಯು ನೂರಾರು ಸ್ಟಾರ್ಟ್‌ಅಪ್ಗಳ ರೂಪದಲ್ಲಿ ವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಭಾರತವು ಇಂದು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಇಕೋಸಿಸ್ಟಂ ಹೊಂದಿದೆ.
ದೊಡ್ಡ ಆಂತರಿಕ ಮಾರುಕಟ್ಟೆ: ದೇಶದ ವಿಶಾಲ ಜನಸಂಖ್ಯೆಯು ವ್ಯಾಪಾರ-ವ್ಯವಹಾರಕ್ಕೆ ಬೃಹತ್ ಗ್ರಾಹಕ ಮಾರುಕಟ್ಟೆಯಾಗಿ ಕೆಲಸ ಮಾಡುತ್ತಿದೆ. ಇದು ದೇಶೀಯ ಉತ್ಪಾದನೆಯ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ.
ವೈವಿಧ್ಯಮಯ ಪ್ರತಿಭೆಗಳು: ಜನಸಂಖ್ಯೆಯಲ್ಲಿನ ವೈವಿಧ್ಯತೆ– ಭಾಷೆ, ಸಂಸ್ಕೃತಿ, ಕೌಶಲ್ಯ– ದೇಶದ ಸೇವಾ, ತಂತ್ರಜ್ಞಾನ, ಸೃಜನಾತ್ಮಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ನಿರಂತರ ಬೆಳವಣಿಗೆಯನ್ನು ತರುತ್ತಿದೆ.
ಜನಸಂಖ್ಯೆಯ ನಕಾರಾತ್ಮಕತೆಗಳು:
ಸಂಪನ್ಮೂಲಗಳ ಮೇಲಿನ ಒತ್ತಡ: ನೀರು, ಆಹಾರ, ವಾಸಸ್ಥಳ, ವಿದ್ಯುತ್, ಆರೋಗ್ಯ ಸೇವೆಗಳು– ಎಲ್ಲವೂ ಜನಸಂಖ್ಯೆಯ ಹೆಚ್ಚಳದಿಂದಾಗಿ ಅಗತ್ಯಕ್ಕಿಂತ ಕಡಿಮೆಯಾಗುತ್ತಿವೆ. ಹೆಚ್ಚಿನ ಜನಸಂಖ್ಯೆಯಿಂದಾಗಿ ಆಯಾ ದೇಶಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದೆ ಬೀಳುತ್ತವೆ. ಹೆಚ್ಚಿನ ಜಾಗತಿಕ ಸಮಸ್ಯೆಗಳ ಹಿಂದೆಯೂ ಹೆಚ್ಚುತ್ತಿರುವ ಜನಸಂಖ್ಯೆಯ ನೆರಳು ಕಾಣುತ್ತಿದೆ.
ಉದ್ಯೋಗ ಮತ್ತು ಶಿಕ್ಷಣದ ಕೊರತೆ: ಹೆಚ್ಚಿನ ಜನರಿಗೆ ಸಮರ್ಪಕ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಸಿಗದಿರುವುದು ಯುವಜನತೆಗೆ ಅಸಮಾಧಾನವನ್ನುಂಟು ಮಾಡುತ್ತಿದೆ. ಈಗಾಗಲೇ ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಡತನ, ಆಹಾರ, ಅನಕ್ಷರತೆ, ಬಾಲ ಕಾರ್ಮಿಕರು, ನಿರುದ್ಯೋಗ ಸಮಸ್ಯೆಗಳು ಕಾಡುತ್ತಿವೆ.
ಆರ್ಥಿಕ ಅಸಮಾನತೆ: ಕೆಲವರು ಅಪಾರ ಸಂಪತ್ತು ಹೊಂದಿದರೆ, ಇತರರು ಮೂಲಭೂತ ಅಗತ್ಯಗಳಿಗೆ ಪರದಾಡುತ್ತಿದ್ದಾರೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ.
ಪರಿಸರದ ಮೇಲೆ ಪರಿಣಾಮ: ಜನಸಂಖ್ಯೆಯ ಒತ್ತಡದಿಂದ ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಕಸದ ಸಮಸ್ಯೆ, ವಾಯು–ಜಲ ಮಾಲಿನ್ಯ, ಅರಣ್ಯ ನಾಶ ಮುಂತಾದವುಗಳು ಉಂಟಾಗುತ್ತಿವೆ. ವಿಶ್ವದ ಜನಸಂಖ್ಯೆ ಹೆಚ್ಚಿದಂತೆ ಜಾಗತಿಕ ತಾಪಮಾನದ ಸಮಸ್ಯೆ, ನೈಸರ್ಗಿಕ ವಿಪತ್ತು ಹಾಗೂ ಇನ್ನಿತರ ಸಮಸ್ಯೆಗಳು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.
ಭಾರತ-ಕಾರ್ಮಿಕರ ರಾಷ್ಟ್ರ- ಡೆಮಾಗ್ರಫಿಕ್ ಡಿವಿಡೆಂಡ್:
ಜನಸಂಖ್ಯೆಯ ವಯಸ್ಸಿನ ರಚನೆಯ ಬದಲಾವಣೆಯು ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಸಂಭವತೆಯನ್ನು ಡೆಮಾಗ್ರಫಿಕ್ ಡಿವಿಡೆಂಡ್ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಅವಲಂಬಿತ ಜನಸಂಖ್ಯೆಯ ಪ್ರಮಾಣ ಕಡಿಮೆಯಾಗಿ, ಕೆಲಸ ಮಾಡುವ ವಯಸ್ಸಿನ ಜನರ ಪ್ರಮಾಣ ಹೆಚ್ಚಾಗುವ ಸ್ಥಿತಿಯಾಗಿರುತ್ತದೆ.
ಜನಸಂಖ್ಯಾ ಸ್ಪೋಟದ ಈ ಸಂದರ್ಭದಲ್ಲಿ ಭಾರತ ಈಗ ಆರ್ಥಿಕ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣವನ್ನು ಹೊಂದಿದೆ. ಹೆಚ್ಚುತ್ತಿರುವ ಜನಸಂಖ್ಯೆ ಒಂದೆಡೆ ಸವಾಲಾದರೆ, ಇನ್ನೊಂಡೆಡೆ ಅದು ಬೆಳವಣಿಗೆಗೆ ಅವಕಾಶವನ್ನೂ ಒದಗಿಸಿಕೊಡುತ್ತದೆ.
ಭಾರತದ ಜನಸಂಖ್ಯೆಯಲ್ಲಿ 62.5% ಜನರು ಕೆಲಸ ಮಾಡುವ (15-59) ಪ್ರಾಯದವರಾಗಿದ್ದಾರೆ. ಈ ಪ್ರಮಾಣವು 2036 ರಲ್ಲಿ ಗರಿಷ್ಟ 65% ತಲುಪಲಿದೆ. ಈ ರೀತಿಯ ಲಾಭವನ್ನು ಭಾರತವು 2006 ರಿಂದ 2036 ವರೆಗೆ ಮೂರು ದಶಕಗಳ ಕಾಲ ಅನುಭವಿಸಲಿದೆ. ಆದರೆ ಇದು ವಾಸ್ತವವಾಗಬೇಕಾದಲ್ಲಿ ಜನರ ಜೀವನ ಮಟ್ಟ ಸುಧಾರಿಸುವಂತಹ ಅನೇಕ ವಲಯಗಳಲ್ಲಿ ಹಣಹೂಡಿಕೆ ಅಗತ್ಯವಾಗುತ್ತದೆ.
ಜನಸಂಖ್ಯೆ ಒಂದು ಶಕ್ತಿ– ಅದನ್ನು ರೂಪಿಸುವ ಕೌಶಲ್ಯ ನಮ್ಮಲ್ಲಿ ಇರಬೇಕು!
ದೇಶದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು, ಲಭ್ಯ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಭಾರತೀಯರ ಬದುಕು ಸಹನೀಯವಾಗಿರಲು ಸಾಧ್ಯವಿದೆ. ಅತೀ ಹೆಚ್ಚು ಯುವಜನರನ್ನು ಹೊಂದಿರುವ ಭಾರತಕ್ಕೆ ಜನಸಂಖ್ಯೆ ವರದಾನವಾಗಿದೆ, ಯುವ ಶಕ್ತಿ ಭಾರತದ ವರ್ತಮಾನ ಮತ್ತು ಭವಿಷ್ಯ.
ಮಾನವ ಬಂಡವಾಳದ ಸದ್ಬಳಕೆಯ ಮೂಲಕ ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ತಲುಪುವಂತಾದಾಗ ಮಾತ್ರ ಸುಸ್ಥಿರ ಹಾಗೂ ಅರ್ಥಪೂರ್ಣ ಅಭಿವೃದ್ಧಿ ಸಾಧ್ಯ. ಯುವ ಜನರಲ್ಲಿ ಸಮಕಾಲೀನ ಕೌಶಲ್ಯವರ್ಧನೆ ಮಾಡುವ ಮೂಲಕ ಜನಸಂಖ್ಯೆಯನ್ನು ಮಾನವ ಸಂಪತ್ತು ಆಗಿ ಪರಿವರ್ತಿಸಿ ಅಭಿವೃದ್ದಿಯನ್ನು ಪಡೆಯಲು ಸಾಧ್ಯ.
ಶಿಕ್ಷಣ ಸಂಸ್ಥೆಗಳು ಕೇವಲ ಪದವೀಧರರನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳಾಗದೆ, ಜ್ಞಾನ, ಕೌಶಲ, ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಪೋಷಿಸುವ ಕೇಂದ್ರಗಳಾಗಬೇಕು. ಸಂಶೋಧನೆ ಮತ್ತು ನಾವಿನ್ಯತೆ ಉನ್ನತ ಶಿಕ್ಷಣದ ಪ್ರಮುಖ ಅಂಶಗಳಾಗಬೇಕು. ನಮ್ಮ ದೇಶದ ಸಮಸ್ಯೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸುವ ಹಾಗೂ ಹೊಸತನವನ್ನು ಕಂಡುಕೊಳ್ಳುವ ಪ್ರಕ್ರಿಯೆಗಳಲ್ಲಿ ಯುವಮನಸ್ಸುಗಳು ತೊಡಗಿಸಿಕೊಳ್ಳುವಂತಾಗಬೇಕು.
ಸಮರ್ಥ ಯೋಜನೆಗಳು ಹಾಗೂ ಜವಾಬ್ದಾರಿಯುತ ನಾಗರಿಕತೆಯಿಂದ ಜನಸಂಖ್ಯೆ ಶಕ್ತಿಯಾಗಬಹುದು. ಆದರೆ ಅದು ಹೊಣೆಗಾರಿಕೆ, ಯೋಜನೆ, ಶಿಕ್ಷಣ ಹಾಗೂ ಸಮರ್ಥ ಆಡಳಿತದ ಮೂಲಕ ಮಾತ್ರ ಜನಸಂಖ್ಯೆ ಒಂದು ವರದಾನವಾಗಲು ಸಾಧ್ಯ. ದೇಶದ ಶ್ರಮಶಕ್ತಿಯನ್ನು ದೇಶದ ಶಕ್ತಿಯನ್ನಾಗಿ ಪರಿವರ್ತಿಸುವ ಸವಾಲು ನಮ್ಮ ಮುಂದಿದೆ. ಜನಸಂಖ್ಯೆ ಹೊರೆಯಾಗಿರದೆ ಸಂಪನ್ಮೂಲವಾಗಲಿ.
- ಡಾ. ಎ. ಜಯ ಕುಮಾರ ಶೆಟ್ಟಿ
ವಿಶ್ರಾಂತ ಪ್ರಾಂಶುಪಾಲರು
ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ