ಬಾಯಿಯಲ್ಲಿ ರುಚಿಯಲ್ಲಿನ ಬದಲಾವಣೆ ಮತ್ತು ಲೋಹದ ರುಚಿ ಎನ್ನುವುದು ಅತ್ಯಂತ ಯಾತನಾಮಯ ಸ್ಥಿತಿಯಾಗಿದ್ದು, ಹಸಿವಾದಾಗ ಏನು ತಿಂದರೂ ರುಚಿಯನ್ನು ಪತ್ತೆ ಹಚ್ಚಲಾಗದ ಅಸಾಹಯಕತೆ ರೋಗಿಗಳಲ್ಲಿ ಇರುತ್ತದೆ. ಇದೊಂದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಂಡು ಬರುವ ಸಮಸ್ಯೆಯಾಗಿದ್ದು, ಅತಿಯಾದ ಔಷಧಿಗಳ ದುರ್ಬಳಕೆ ಇದಕ್ಕೆ ಮೂಲ ಕಾರಣ ಎಂದು ತಿಳಿದು ಬಂದಿದೆ.
ಕೆಲವೊಂದು ಔಷದಿಗಳ ಬಳಕೆಯಿಂದ ಉಂಟಾಗುವ ಅಡ್ಡ ಪರಿಣಾಮವೇ ಲೋಹದ ರುಚಿಗೆ ಅತೀ ಸಾಮಾನ್ಯ ಕಾರಣ ಎಂದು ತಿಳಿದು ಬಂದಿದೆ. ಆದರೆ ಸಮಾಧಾನಕರ ಅಂಶವೆಂದರೆ, ಔಷಧಿಗಳನ್ನು ನಿಲ್ಲಿಸಿದ ತಕ್ಷಣ ರೋಗಿ ಮೊದಲಿನಂತೆ ರುಚಿಯನ್ನು ಆಸ್ವಾಧಿಸಲು ಸಾಧ್ಯವಾಗುತ್ತದೆ. ಆಹಾರದ ರುಚಿಯನ್ನು ಆಸ್ವಾಧಿಸಲು ಸಾಧ್ಯವಾಗದಿದ್ದಲ್ಲಿ ರೋಗಿಗಳು ತಮಗೆ ಇಷ್ಟವಾದ ಆಹಾರವನ್ನು ತಿನ್ನಲು ಇಷ್ಟಪಡುವುದಿಲ್ಲ. ನರಗಳ ತೊಂದರೆ, ಕ್ಷಕಿರಣ ಚಿಕಿತ್ಸೆ, ಕಿಮೋಥೆರಫಿ, ಸೈನುಸೈಟೀಸ್ ಕಾರಣದಿಂದಲೂ ಈ ರುಚಿ ಕಂಡು ಹಿಡಿಯಲಾಗದ ಸ್ಥಿತಿ ಬರುವ ಸಾಧ್ಯತೆ ಇರುತ್ತದೆ.
ಕಾರಣಗಳು ಏನು?
1) ಮೆಟ್ರೋನಿಡಜೋಲ್ ಮತ್ತು ಟಿನಿಡಜೋಲ್ ಎಂಬ ಆಂಟಿಬಯೋಟಿಕ್ ಔಷಧಿಗಳ ಬಳಕೆ.
2) ಕಿಮೋಥೆರಫಿ ಔಷಧಿಗಳಿಂದಲೂ ರುಚಿ ಪತ್ತೆ ಹಚ್ಚುವ ಗ್ರಂಥಿಗಳಿಗೆ ಹಾನಿಯಾಗಿ ಲೋಹದ ರುಚಿ ಬರುವ ಸಾಧ್ಯತೆ ಇರುತ್ತದೆ.
3) ಬ್ಯಾಕ್ಟೀರಿಯಾಗಳಿಂದ ಸೋಂಕು ತಗುಲಿದಾಗಲೂ ರುಚಿಯಲ್ಲಿ ವ್ಯತ್ಯಯವಾಗುತ್ತದೆ.
4) ವಿಟಮಿನ್ ಕೊರತೆಗಳಿಂದಲೂ ಲೋಹದ ರುಚಿ ಬರುವ ಸಾಧ್ಯತೆ ಇದೆ. ರೈಬೋಪ್ಲಾವಿನ್ ಮತ್ತು ವಿಟಮಿನ್12 ಕೊರತೆಯಿಂದಲೂ ಈ ಸಮಸ್ಯೆ ಕಾಡಬಹುದು.
5) ಬಾಯಿಯ ಆರೋಗ್ಯ ಸರಿಯಾಗಿ ಕಾಪಾಡಿಕೊಳ್ಳದಿದ್ದಲ್ಲಿ ಬಾಯಿಯಲ್ಲಿ ಫಂಗಲ್ (ಶಿಲೀಂದ್ರ) ಸೋಂಕು ತಗುಲಿದಾಗ ಈ ರೀತಿಯ ‘ಲೋಹದ ರುಚಿ’ ಉಂಟಾಗಬಹುದು.
6) ಅತಿಯಾದ ಧೂಮಪಾನ, ಮದ್ಯಪಾನದಿಂದಲೂ ರುಚಿಗ್ರಂಥಿಗಳಿಗೆ ಹಾನಿಯಾಗಿ ರುಚಿಯಲ್ಲಿ ವ್ಯತ್ಯಯವಾಗಬಹುದು.
7) ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಕ್ಷಕಿರಣ ಚಿಕಿತ್ಸೆಯಿಂದಲೂ ರುಚಿ ಗ್ರಂಥಿಗಳಿಗೆ ಹಾನಿಯಾಗಿ ರುಚಿ ಕಂಡು ಹಿಡಿಯಲು ಸಾಧ್ಯವಾಗದಿರಬಹುದು.
8) ‘ಸೈನುಸೈಟಿಸ್’ ಎಂಬ ಸೈನಸ್ ತೊಂದರೆಗಳಿಂದಲೂ ಲೋಹದ ರುಚಿ ಸಮಸ್ಯೆ ಉಂಟಾಗಬಹುದು.
9) ಕಬ್ಬಿಣ ಮತ್ತು ಜಿಂಕ್ (ಸತು) ಅಂಶವಿರುವು ವಿಟಮಿನ್ ಮಾತ್ರೆಗಳಿಂದಲೂ ಲೋಹದ ರುಚಿ ಉಂಟಾಗಬಹುದು. ನಾಲಗೆಯಲ್ಲಿ ಸರ್ಜರಿ, ಗಂಟಲಿನ ಸರ್ಜರಿಯ ಸಮಯದಲ್ಲಿ ರುಚಿ ಗ್ರಂಥಿಗಳಿಗೆ ಹಾನಿಯಾಗಿ ತಾತ್ಕಾಲಿಕವಾಗಿ ರುಚಿಯಲ್ಲಿ ವ್ಯತ್ಯಯ ಉಂಟಾಗುತ್ತದೆ.
10) ವಯೋಸಹಜವಾಗಿ ವೃದ್ದಾಪ್ಯದಲ್ಲಿ ರುಚಿಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯೂ ಇರುತ್ತದೆ.
11) ಅಫಘಾತಗಳ ಸಂದರ್ಭದಲ್ಲಿ ವಾಸನೆಯನ್ನು ಗ್ರಹಿಸುವ ನರಕ್ಕೆ ಏಟು ತಗುಲಿ, ನರಮಂಡಲ ಹಾನಿಯಾದಾಗಲೂ ರುಚಿಯಲ್ಲಿ ವ್ಯತ್ಯಯ ಉಂಟಾಗುವ ಎಲ್ಲಾ ಸಾದ್ಯತೆ ಇರುತ್ತದೆ.
12) ಅತಿಯಾದ ನಿರ್ಜಲೀಕರಣದಿಂದಲೂ ರುಚಿ ಗ್ರಂಥಿಗಳಿಗೆ ಕ್ಷಣಿಕ ಹಾನಿಯಾಗಿ ರುಚಿಯಲ್ಲಿ ವ್ಯತ್ಯಾಸ ಬರುವ ಸಾಧ್ಯತೆ ಇರುತ್ತದೆ.
13) ರಸದೂತಗಳ ಏರುಪೇರು ಅಥವಾ ವೈಪರೀತ್ಯದಿಂದಲೂ ರುಚಿಯಲ್ಲಿ ವ್ಯತ್ಯಾಸ ಇರುತ್ತದೆ. ಈ ಕಾರಣದಿಂದಲೂ ಗರ್ಭಿಣಿ ಹೆಂಗಸರಲ್ಲಿ ಅತಿಯಾದ ವಾಂತಿ/ವಾಕರಿಕೆ ಇರುತ್ತದೆ. ಯಾವುದೇ ಆಹಾರಪದಾರ್ಥಗಳ ವಾಸನೆಯಿಂದಲೂ ವಾಕರಿಕೆ ಬಂದಂತಾಗುತ್ತದೆ.
14) ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಲ್ಲಿ ಹೊಟ್ಟೆಯಲ್ಲಿನ ಆಮ್ಲೀಯವಾದ ಗ್ಯಾಸ್ಟ್ರಿಕ್ ಜ್ಯೂಸ್ ಬಾಯಿಗೆ ಬಂದಾಗ ರುಚಿ ಗ್ರಂಥಿಗಳಿಗೆ ಹಾನಿಯಾಗಿ ಲೋಹದ ರುಚಿ ಬರುತ್ತದೆ.
ತಡೆಯುವುದು ಹೇಗೆ?
1) ಬಾಯಿ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಬಾಯಿಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
2) ಸಾಕಷ್ಟು ದ್ರವಾಹಾರ ಸೇವನೆ ಅತೀ ಅಗತ್ಯ. ಸರಿಯಾಗಿ ನೀರು ಕುಡಿದಲ್ಲಿ ರುಚಿ ಗ್ರಂಥಿಗಳು ಸರಿಯಾಗಿ ಕೆಲಸ ಮಾಡುತ್ತದೆ.
3) ರಸದೂತಗಳ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
4) ರೇಡಿಯೋಥೆರಪಿ, ಕಿಮೋಥೆರಪಿ, ಆಂಟಿಬಯೋಟಿಕ್ ಬಳಕೆ ಸಮಯದಲ್ಲಿ ವೈದ್ಯರ ಸಲಹೆ, ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸತಕ್ಕದು.
5) ಧೂಮಪಾನ, ಮದ್ಯಪಾನ ತ್ಯಜಿಸತಕ್ಕದ್ದು.
6) ಸಕ್ಕರೆ ರಹಿತವಾದ ಚ್ಯೂಯಿಂಗ್‍ಗಮ್ ಸೇವಿಸುವುದರಿಂದಲೂ ರುಚಿ ಗ್ರಂಥಿಗಳು ಉತ್ತೇಜನಗೊಂಡು ‘ರುಚಿಯ’ ಮೇಲೆ ಹಿಡಿತ ದೊರಕುತ್ತದೆ.
ಚಿಕಿತ್ಸೆ ಹೇಗೆ?
ಬಾಯಿಯಲ್ಲಿ ‘ಲೋಹದ ರುಚಿ’ ಉಂಟಾದಾಗ ಯಾವ ಕಾರಣದಿಂದ ಈ ಸಮಸ್ಯೆ ಬಂದಿದೆ ಎಂದು ವೈದ್ಯರು ಕೂಲಂಕುಷವಾಗಿ ರೋಗಿಯನ್ನು ಪರೀಕ್ಷೆ ಮಾಡುತ್ತಾರೆ ಮತ್ತು ಈ ಸಮಸ್ಯೆಗೆ ಮೂಲಕಾರಣಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಯಾವ ಕಾರಣದಿಂದ ಉಂಟಾಗಿದೆ ಎಂದು ತಿಳಿದು ಚಿಕಿತ್ಸೆ ನೀಡಲಾಗುತ್ತದೆ. ಮಾರಣಾಂತಿಕ ಕಾಯಿಲೆ ಇದಲ್ಲವಾಗಿದ್ದರೂ ದೈನಂದಿನ ಆಹಾರ ಕ್ರಮಕ್ಕೆ ತೊಂದರೆ ಉಂಟಾಗಿ ರೋಗಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಸಾದ್ಯತೆ ಇದೆ. ನರದ ತೊಂದರೆಯಿಂದ ಈ ಸಮಸ್ಯೆ ಬಂದಿದ್ದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸರಿಪಡಿಸಲಾಗುತ್ತದೆ.
ಕೊನೆಮಾತು
ಇದೊಂದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಂಡುಬರುತ್ತಿರುವ ವಿಚಿತ್ರವಾದ ಸಮಸ್ಯೆಯಾಗಿದ್ದು, ವ್ಯಕ್ತಿ ದೈಹಿಕವಾಗಿ ಆರೋಗ್ಯವಾಗಿದ್ದರೂ ಈ ಸಮಸ್ಯೆ ಪದೇ ಪದೇ ಕಾಡುತ್ತಿರುತ್ತದೆ. ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಈ ಸಮಸ್ಯೆಗೆ ಮೂಲ ಕಾರಣ ಔಷಧಿಗಳೇ ಆಗಿರುತ್ತದೆ ಎನ್ನುವುದು ಸಮಾಧಾನಕರ ಅಂಶವಾಗಿದೆ. ಔಷಧಿ ಅಗತ್ಯವಿಲ್ಲದ ಮತ್ತು ಔಷಧಿಯ ಸೇವನೆ ನಿಲ್ಲಿಸುವುದೇ ಈ ರೋಗಕ್ಕೆ ಸರಿಯಾದ ಮದ್ದು ಎನ್ನುವುದೇ ಬಹಳ ಸೋಜಿಗದ ವಿಚಾರವಾಗಿದೆ.
ಸುಮಾರು 60 ಶೇಕಡಾ ಮಂದಿಗಳಲ್ಲಿ ಔಷಧಿಗಳ ಅಡ್ಡಪರಿಣಾಮದಿಂದಲೇ ಈ ಸಮಸ್ಯೆ ಬಂದಿದೆ ಎನ್ನುವುದು ವಿಚಿತ್ರವಾದರೂ ನಂಬಲೇ ಬೇಕಾದ ಸತ್ಯ ಎಂದೂ ಅಂಕಿಅಂಶಗಳಿಂದ ತಿಳಿದು ಬಂದಿದೆ. ಮಾನಸಿಕ ಕಾಯಿಲೆಗೆ ಅಲೋಫ್ಯುರಿನಾಲ್, ಲಿಥಿಯಮ್, ಹೃದಯದ ಕಾಯಿಲೆಗೆ ಬಳಸುವ ಔಷಧಿಗಳು, ಆಂಟಿಹಿಸ್ಟಮಿನ್ ಔಷಧಿಗಳು, ಮಲ್ಟಿವಿಟಮಿನ್ ಔಷಧಿಗಳು, ತಾಮ್ರ ಮತ್ತು ಸತುವಿನ ಅಂಶ ಜಾಸ್ತಿ ಇರುವ ಔಷಧಿಗಳು ಕೂಡಾ ಲೋಹದ ರುಚಿಯನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.
ಖಿನ್ನತೆ ತಡೆಯಲು ಬಳಸುವ ಔಷಧಿಗಳು, ಟೆಟ್ರಾಸೈಕ್ಲಿನ್ ಔಷಧಿಗಳು ಕೂಡಾ ಈ ತೊಂದರೆ ಉಂಟುಮಾಡಬಹುದು. ಅತಿಯಾದ ಸೀಸ ಅಥವಾ ಮಕ್ರ್ಯುರಿ ದೇಹಕ್ಕೆ ಸೇರಿಕೊಂಡಾಗಲೂ ಈ ರೀತಿ ‘ಲೋಹದ ರುಚಿ’ ಉಂಟುಮಾಡಬಹುದು. ಒಟ್ಟಿನಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಔಷಧಿ ನಿಲ್ಲಿಸುವುದು ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಎನ್ನುವುದು ಸೋಜಿಗವಾದರೂ ಒಪ್ಪಲೇಬೇಕಾದ ವಿಚಾರವಾಗಿದೆ.
-ಡಾ|| ಮುರಲೀ ಮೋಹನ ಚೂಂತಾರು
BDS MDS DNB MBA MOSRCSEd
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ