ಗೋವು, ವಿದ್ಯೆ, ಧರ್ಮರಕ್ಷಣೆಗೆ ಪಣ ತೊಡಿ: ರಾಘವೇಶ್ವರ ಶ್ರೀ

Upayuktha
0

ಶ್ರೀಗಳ 50ನೇ ವರ್ಧಂತಿ; ಶಿಷ್ಯಕೋಟಿಯಿಂದ ವೈವಿಧ್ಯಮಯ ಕಾರ್ಯಕ್ರಮ




ಗೋಕರ್ಣ: ಸಮಾಜದ ಪ್ರತಿಯೊಬ್ಬರೂ ಗೋವು, ವಿದ್ಯೆ ಹಾಗೂ ಧರ್ಮರಕ್ಷಣೆಗೆ ಕಂಕಣಬದ್ಧರಾಗಬೇಕು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದೇ ನಿಜವಾದ ವರ್ಧಂತಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತದಲ್ಲಿರುವ ಪರಮಪೂಜ್ಯರ 50ನೆ ೀ ವರ್ಧಂತ್ಯುತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಗೋವಿನಲ್ಲಿ ಧರ್ಮ ಅಡಗಿದೆ. ಈಶ್ವರನ ವಾಹನವಾದ ನಂದಿ ಧರ್ಮದ ಪ್ರತೀಕ. ಧರ್ಮ ಸಂಸ್ಕøತಿ, ಗೋವಿನ ರಕ್ಷಣೆಗೆ ಪಣ ತೊಡೋಣ. ಮುಂದಿನ ಪೀಳಿಗೆಗೆ ಜ್ಞಾನಪರಂಪರೆಯ ಉಡುಗೊರೆ ನೀಡೋಣ ಎಂದರು.


ವರ್ಧಂತಿಯ ರೂಪದಲ್ಲಿ ಇಂಥ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸುವ ಕಾರ್ಯ ಸದಾ ನಡೆಯಲಿ. ಗೋರಕ್ಷಣೆ, ವಿಶ್ವವಿದ್ಯಾಪೀಠದ ರಕ್ಷಣೆ, ಧರ್ಮದ ಆಚರಣೆಯ ಮೂಲಕ ಅರ್ಥಪೂರ್ಣವಾಗಿ ವಧರ್ಂತಿಯನ್ನು ಆಚರಿಸಿ ಎಂದು ಸಲಹೆ ಮಾಡಿದರು.


ಸಂಪತ್ತಿನಷ್ಟೇ ಸದ್ಭುದ್ಧಿಯೂ ಮುಖ್ಯ. ಆದ್ದರಿಂದ ಮಕ್ಕಳಿಗೆ ಎಳವೆಯಲ್ಲೇ ಸುಜ್ಞಾನ ನೀಡಿ. ತಂದೆ- ತಾಯಿಗಳನ್ನು ದೇವರಂತೆ ಭಕ್ತಿಯಿಂದ ಕಾಣುವ ಸಂಸ್ಕಾರವನ್ನು ನೀಡುವಂತಾಗಬೇಕು. ಆಗ ಮಾತ್ರ ಸಮಾಜಕ್ಕೆ ಭವಿಷ್ಯ ಎಂದು ಪ್ರತಿಪಾದಿಸಿದರು. ವೇದವಿದ್ಯೆಗೆ ಮೀಸಲಾದ ಶಿವಗುರುಕುಲ ಹಾಗೂ ಪರಂಪರಾಗತ ಶಿಕ್ಷಣ ನೀಡುವ ಪರಂಪರಾ ಗುರುಕುಲವಿಷ್ಣು ಗುಪ್ತ ವಿಶ್ವವಿದ್ಯಾಪೀಠದ ಹಾಗೂ ಸಮಾಜದ ಎರಡು ಕಣ್ಣುಗಳಿದ್ದಂತೆ. ಸಕಲ ಪ್ರಾಚೀನ ವಿದ್ಯಾ ಕಲೆಗಳ ಬೀಜಾಂಕುರ ಈ ಗುರುಕುಲದಿಂದಲೇ ಆಗುತ್ತದೆ. ಮುಂದೆ ತಕ್ಷಶಿಲೆಯ ಪ್ರತಿರೂಪವಾದ ವಿಶ್ವವಿದ್ಯಾಪೀಠವಾಗಿ ಇದು ಬೆಳೆಯಲು ಆರಂಭವಾಗುತ್ತಿರುವುದು ಇಲ್ಲಿಂದಲೇ ಎಂದು ಹೇಳಿದರು.


ಮುಂದಿನ ದಿನಗಳಲ್ಲಿ ಸಮಾಜಕ್ಕೆ, ರಾಷ್ಟ್ರಕ್ಕೆ ವಿಶ್ವಕ್ಕೆ ಬೆಳಕು ನೀಡುವ ಇಂಥ ವ್ಯವಸ್ಥೆಯನ್ನು ಬೆಳೆಸುವುದು ಇಡೀ ಸಮಾಜದ ಜವಾಬ್ದಾರಿ ಎಂದು ಸೂಚಿಸಿದರು. ನಿಮ್ಮ ಸಂತೋಷ ನಮ್ಮ ಸಂತೋಷ, ನಿಮ್ಮ ತೃಪ್ತಿ ನಮ್ಮ ತೃಪ್ತಿ, ನಿಮ್ಮ ದುಃಖ ನಮ್ಮ ದುಃಖವಾಗಬೇಕು. ಆಗ ಗುರುಶಿಷ್ಯರ ಸಂಬಂಧಕ್ಕೆ ಅರ್ಥ ಬರುತ್ತದೆ ಎಂದು ವಿಶ್ಲೇಷಿಸಿದರು. ಸಂಸಾರದಲ್ಲೂ ವರ್ಧಂತಿ ಬೆಳವಣಿಗೆಯ ಸಂಕೇತ. ಆದರೆ ಪೀಠಾಧಿಪತಿಗಳಾಗಿ ಸಂನ್ಯಾಸ ಸ್ವೀಕರಿಸಿದರೆ ಆಗುವ ಬೆಳವಣಿಗೆ ಅಸಾಧಾರಣ. ಲಕ್ಷ ಲಕ್ಷ ಜನರ ವಿಶ್ವಕುಟುಂಬ ಸನ್ಯಾಸಿಯ ಕುಟುಂಬವಾಗಿ ಮಾರ್ಪಡುತ್ತದೆ. ಆದ್ದರಿಂದ ಇಂಥ ಸ್ಥಾನದಲ್ಲಿ ವರ್ಧಂತಿಗೆ ವಿಶೇಷ ಅರ್ಥವಿದೆ ಎಂದರು.


ಶಿಷ್ಯರ ಶ್ರದ್ಧೆ, ನಿಷ್ಠೆ, ನಮಸ್ಕಾರಗಳು ಹೃದಯದಲ್ಲಿ ನೆಲೆಸಿರುವ ಭಗವಂತನಿಗೆ ಸಮರ್ಪಣೆಯಾಗುತ್ತದೆ. ನಿಮ್ಮೆಲ್ಲರ ನಮಸ್ಕಾರಗಳ ಚೈತನ್ಯದ ಮೂಲಕ್ಕೆ ಸಲ್ಲಲಿ ಎಂದರು.


ಎಲ್ಲರನ್ನೂ ಲೋಕಕ್ಕೆ ಮಾತೆಯೇ ಕರೆ ತರುವುದು; ಲೋಕದಲ್ಲಿ ನಮ್ಮನ್ನು ಬೆಳಗುವಂತೆ ಮಾಡಿದ್ದೂ ಮಾತೆಯರೇ. ಮಾತೆಯರು ವರ್ಧಂತಿಯಂದು ಮಠವನ್ನು ಬೆಳಗುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಒಬ್ಬ ಮಾತೆ ಗುರುವನ್ನು ಲೋಕಕ್ಕೆ ನೀಡಿದರೆ, ಲಕ್ಷಾಂತರ ಮಾತೆಯರು ಗುರು ಸಂಕಲ್ಪವನ್ನು ಹೊತ್ತು ಬೆಳೆಸಿ, ಯೋಜನೆಯಾಗಿ ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.


ಮಾತೆಯರ ಸಂಪೂರ್ಣ ಸಮರ್ಪಣೆ ಪರಂಪರಾ ಗುರುಕುಲಕ್ಕೆ ಸಲ್ಲಲಿದೆ ಎಂದು ಶ್ರೀಗಳು ಹೇಳಿದರು. ಸಂಸ್ಕಾರಯುತ ಜ್ಞಾನವನ್ನು ಹೊತ್ತು ಪರಿಪೂರ್ಣರಾಗಿ ಹೊರಬರುವ ಮೂಲಕ ಪರಂಪರಾ ಗುರುಕುಲದ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಿ ಬೆಳೆಯಲಿ ಎಂದು ಆಶಿಸಿದರು. ವೈದಿಕರು ಕೂಡಾ ಶಿವಗುರುಕುಲಕ್ಕೆ 18 ಲಕ್ಷ ರೂಪಾಯಿಗಳನ್ನು ಸಮರ್ಪಿಸಿದ್ದಾರೆ. ಇಂದು ಸಮರ್ಪಣೆಯಾದ ದೇಣಿಗೆಯೆಲ್ಲ ಪರಂಪರಾ ಹಾಗೂ ಶಿವಗುರುಕುಲಕ್ಕೆ ಸಲ್ಲುತ್ತದೆ.


ಶ್ರೀಮಾತೆ ವಿಜಯಲಕ್ಷ್ಮಿಯವರು ದೀಪಪ್ರಜ್ವಲನ ಮಾಡಿದರು. ಹೊರನಾಡು ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತೃ ಭೀಮೇಶ್ವರ ಜೋಶಿ ದಂಪತಿ ಸರ್ವಸೇವೆ ನೆರವೇರಿಸಿದರು. 500ಕ್ಕೂ ಹೆಚ್ಚು ಮಾತೆಯರು ಭಾರತೀಭವನದಲ್ಲಿ ಕುಂಕುಮಾರ್ಚನೆ ನೆರವೇರಿಸಿದರೆ, ರಾಜ್ಯದ ಎಲ್ಲೆಡೆ ಶ್ರೀಮಠದ ಅಂಗಸಂಸ್ಥೆಗಳು, ಶಾಖಾಮಠಗಳು, ದೇವಸ್ಥಾನ, ಮಂದಿರಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಲಾಯಿತು. ಮಾತೃತ್ವಮ್ ವತಿಯಿಂದ ಕುಂಕುಮಾರ್ಚನೆ ಕಾಣಿಕೆಯನ್ನು ವಾತ್ಸಲ್ಯಧಾರೆಯಾಗಿ 50 ಲಕ್ಷ ರೂಪಾಯಿಗಳ ದೇಣಿಗೆ ಸಮರ್ಪಿಸಲಾಯಿತು. ಜತೆಗೆ ಶ್ರೀಮಠದ ಎಲ್ಲ ಗೋಶಾಲೆಗಳಲ್ಲಿ ಮತ್ತು ಅಂಗಸಂಸ್ಥೆಗಳಲ್ಲಿ ಇರುವ ಗೋವುಗಳಿಗೆ ಗೋಗ್ರಾಸವನ್ನು ನೀಡಲಾಯಿತು. ವೈದಿಕ ವಿಭಾಗದಿಂದ ಅರುಣ ಹವನ, ಆಯುಷ್ಯಸೂಕ್ತ ಹೋಮ, ಅರುಣ ನಮಸ್ಕಾರ, 18 ಲಕ್ಷ ರೂಪಾಯಿ ಸದಾಶಯ ಸಮರ್ಪಣೆ ನಡೆಯಿತು. ಯುವ ಮತ್ತು ವಿದ್ಯಾರ್ಥಿ ವಿಭಾಗದ ವತಿಯಿಂದ ಹವ್ಯಕ ಮಹಾಮಂಡಲದ ವ್ಯಾಪ್ತಿಯ ಎಲ್ಲೆಡೆಗಳಲ್ಲಿ ಸುವರ್ಣ ವೃಕ್ಷ ಯೋಜನೆಯಡಿ 50 ಸಾವಿರ ಸಸಿಗಳನ್ನು ನೆಡಲಾಯಿತು.


ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಲೋಕಸಂಪರ್ಕಾಧಿಕಾರಿ ಕೆಕ್ಕಾರು ರಾಮಚಂದ್ರ, ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃಪ್ರಧಾನರಾದ ದೇವಿಕಾ ಶಾಸ್ತ್ರಿ, ಪದಾಧಿಕಾರಿಗಳಾದ ಈಶ್ವರ ಪ್ರಸಾದ್ ಕನ್ಯಾನ, ರುಕ್ಮಾವತಿ ರಾಮಚಂದ್ರ, ಕೃಷ್ಣಮೂರ್ತಿ ಮಾಡಾವು, ಮಾಜಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಚಾತುರ್ಮಾಸ್ಯ ತಂಡದ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ಧರ್ಮಕರ್ಮ ವಿಭಾಗದ ಕೂಟೇಲು ರಾಮಕೃಷ್ಣ ಭಟ್, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಮಹೇಶ್ ಹೆಗಡೆ ಮತ್ತಿತತರು ಉಪಸ್ಥಿತರಿದ್ದರು. ಗಣೇಶ್ ಜೋಶಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top