ಉಜಿರೆ: “ಕಲಾವಿದರಿಗೆ ಯಕ್ಷಗಾನ ಅರ್ಥಗಾರಿಕೆ ಎನ್ನುವುದು ತಪಸ್ಸಾಗಬೇಕು. ಪುರಾಣ ಲೋಕದ ಅನಾವರಣವು ಅರ್ಥದಾರಿಯಿಂದಾಗಬೇಕು. ಆತ ಅದಕ್ಕೆ ಶಕ್ತನಾಗಿರಬೇಕು. ಸುಂದರ ಪದಪ್ರಯೋಗಳ ಮೂಲಕ ನೀಡುವ ಪುರಾಣದ ಸಂದೇಶಗಳು ಜೀವನ ಉತ್ಕರ್ಷಕ್ಕೆ ದಾರಿ.
ಯಕ್ಷಗಾನದಲ್ಲಿ ವಾಚಿಕವು ಪ್ರಧಾನವೆಂದು ನನ್ನ ಅನುಭವದಿಂದ ತಿಳಿದುಕೊಂಡಿದ್ದೇನೆ. ಇಲ್ಲವಾದರೆ ಆಂಗಿಕ, ಆಹಾರ್ಯ, ಸಾತ್ವಿಕಗಳು ಚೇಷ್ಟೆಯಾಗಿ ಕಾಣುತ್ತದೆ. ಅದು ತುಂಬಿ ಬರಬೇಕಾದರೆ ವಾಚಿಕ ಅತ್ಯಾವಶ್ಯಕವಾಗಿ ಬೇಕು.” ಎಂದು ಯಕ್ಷಗಾನ ದಶಾವತಾರಿ ಕೆ. ಗೋವಿಂದ ಭಟ್ ಹೇಳಿದರು.
ಅವರು ಪುತ್ತೂರಿನ ‘ಶ್ರೀ ಸುಕೃತಿಂದ್ರ ಕಲಾ ಮಂದಿರದಲ್ಲಿ’ಜರುಗಿದ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿ ಮಾತನಾಡುತ್ತಿದ್ದರು. ರಾಜಾ ಹಾಸ್ಯ ಬಿರುದಾಂಕಿತ ಕೀರ್ತಿಶೇಷ ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ನಡೆಯುವ ಸಪ್ತಾಹವನ್ನು ಪುತ್ತೂರಿನ ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನ ಹಾಗೂ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ಜಂಟಿಯಾಗಿ ಆಯೋಜಿಸಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲರ್ಸ್ ಇದರ ಮ್ಹಾಲಕ ಬಲರಾಮ ಆಚಾರ್ಯರು ವಹಿಸಿ ಮಾತನಾಡುತ್ತಾ, “ಯಕ್ಷಗಾನವೆಂಬುದು ವಿಶಿಷ್ಟ ಕಲಾ ಪ್ರಾಕಾರ. ಅಲ್ಲಿ ಉತ್ಪತ್ತಿಯಾಗುವ ರಸ ಏನಿದೆಯೋ ಅದು ಜ್ಞಾನಸದೃಶ”ಎಂದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಹಾಗೂ ಪುತ್ತೂರು ಶ್ರೀ ರಾಘವೇಂದ್ರ ಮಠದ ಕಾರ್ಯದರ್ಶಿ ಶ್ರೀ ಯು. ಪೂವಪ್ಪ ಸಂದರ್ಭೋಚಿತವಾಗಿ ಮಾತನಾಡಿದರು.
ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಸ್ವಾಗತಿಸಿ, ನಿರ್ವಹಿಸಿದರು. ಶ್ರೀಗಳಾದ ವೆಂಕಟರಾಮ ಭಟ್ ಸುಳ್ಯ, ಸ್ವಸ್ತಿಕ ಪದ್ಯಾಣ, ಅಶೋಕ ಸುಬ್ರಹ್ಮಣ್ಯ ಪೆರುವಡಿ, ರಮೇಶ ಭಟ್ ಪುತ್ತೂರು ಸಹಕರಿಸಿದರು. ಬಳಿಕ ಸಪ್ತಾಹದ ಮೊದಲ ತಾಳಮದ್ದಳೆ ‘ತರಣಿಸೇನ ಕಾಳಗ’ ಸಂಪನ್ನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ