ಶ್ರಾವಣ ಬಂತು ನಾಡಿಗೆ, ಬಂತು ಬೀಡಿಗೆ ಶ್ರಾವಣ ಎನ್ನುವಂತೆ ಶ್ರಾವಣ ಮಾಸದ ಆಗಮನ ನಮಗೆ ಸಂಭ್ರಮ ಸಡಗರ ತರುವ ಮಾಸವಾಗಿದೆ. ಮಾಸಗಳ ರಾಜನೆಂದು ಶ್ರಾವಣ ಮಾಸವನ್ನು ಕರೆಯುತ್ತಾರೆ. ಈ ಮಾಸದಲ್ಲಿ ನಡೆಯುವ ಧರ್ಮಾಚರಣೆಯ ವಿಧಿವಿಧಾನಗಳಾದ ಜಪ-ತಪ, ವ್ರತ-ನಿಯಮ ಪೂಜಾನುಷ್ಟಾನ ಪಾರಾಯಣ ಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ, ಪುಣ್ಯಕ್ಷೇತ್ರಗಳ ದರ್ಶನ, ಯಜ್ಞ, ಯಾಗ, ಹೋಮಹವನ ಮುಂತಾದವು ಶ್ರಾವಣ ಮಾಸದಲ್ಲೇ ಶ್ರೇಷ್ಟವೆಂದು ಹೇಳಲಾಗುತ್ತದೆ.
ಶ್ರಾವಣದಲ್ಲಿ ಒಂದೇ ರೇಖೆಯಲ್ಲಿ ಬರುವ 17 ನಕ್ಷತ್ರಗಳು ಮಂಗಳಕರವಾದ ಮಳೆಗರೆದು, ಧರೆಯ ಜನರಿಗೆ ಉನ್ನತ ಫಲಗಳನ್ನು ನೀಡುತ್ತಿದೆ. ಸಿರಿಸಂಪತ್ತು ವೃದ್ಧಿಗಾಗಿ ವರಮಹಾಲಕ್ಷ್ಮಿ ವ್ರತ, ಸಂಪತ್ತಶುಕ್ರವಾರ, ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮೃದ್ಧಿ ನೀಡುವ ಸತ್ಯನಾರಾಯಣ ಪೂಜೆ, ಮಂಗಳಗೌರೀ ವ್ರತ, ನಾಗಪಂಚಮಿ ನಾಗದೇವತೆಗೆ ಹಾಲೆರೆಯುವದು, ಸಹೋದರಿಯರ ರಕ್ಷಾಬಂಧನ, ಉಪಾಕರ್ಮ, ರಾಯರ ಆರಾಧನೆ, ಶ್ರೀಕೃಷ್ಣ ಜನ್ಮಾಷ್ಟಮಿ, ಶಿರಿಯಾಳ ಶ್ರಷ್ಟಿಯಲ್ಲದೇ ಶ್ರಾವಣದ ಸೋಮವಾರದ ಶಿವನ ಪೂಜೆಗೆ ಅಗ್ರಸ್ಥಾನವಿದೆ. ಈ ಮಾಸದಲ್ಲಿ ಬರುವ ಎಲ್ಲ ಸೋಮವಾರಗಳೂ ಮುಕ್ತಿಯ ಸೋಪಾನಗಳು ಎಂಬುದು ಶಿವ ಭಕ್ತರ ನಂಬಿಕೆಯಾಗಿದೆ. ಶ್ರವಣ ಎಂದರೆ ಆಲಿಸುವದು, ಕೇಳುವದು, ಸರ್ವ ಶ್ರೋತ್ರಗಳ ಶ್ರವಣೇಂದ್ರಿಯಗಳಿಗೆ ಯೋಗ್ಯವಾದ ಪಾರಮಾರ್ಥ ತತ್ವಧಾರೆಯನ್ನು ಶ್ರವಣಮಾಡಿಸುವ ಮಾಸವೇ ಶ್ರಾವಣಮಾಸ. ತತ್ವಪದ ಲಕ್ಷಣಗಳನ್ನು ಶೋಧಿಸಿದಾಗ ಅಶುದ್ಧ ಬುದ್ಧಿಯು ಶುದ್ಧವಾದ ನಂತರ ಗುರುಮುಖದಿಂದ ಉಪನಿಷದ್ ವಾಕ್ಯಗಳನ್ನು ಶ್ರವಣಮಾಡುವದರಿಂದ ಅಪರೂಪದ ಜ್ಞಾನವಾಗುವುದು. ಆಗ ಪರಮಾತ್ಮನೆಂಬ ಭಾವವು ಸುಸ್ಥಿರವಾಗುವುದು. ಈ ಮಾಸದಲ್ಲಿ ಬರುವ ಹಬ್ಬವೃತಗಳನ್ನು ಆಚರಿಸುವದರಿಂದ ಜಾತಕದಲ್ಲಿರುವ ಗ್ರಹದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ಈ ಮಾಸದ ಆಗಮನಕ್ಕೆ ಮನೆಯಲ್ಲಿರುವ ಸ್ತ್ರೀಯರು ಮನೆ ಬಾಗಿಲು ಸ್ವಚ್ಛಗೊಳಿಸಿ ತಿಂಗಳಿಗಾಗುವಷ್ಟು ಅಡುಗೆಗೆ ಬೇಕಾದ ಪುಡಿಗಳನ್ನು ತಯಾರಿಸಿಟ್ಟುಕೊಳ್ಳುವರು. ಮೆಣಸಿನಕಾಯಿ ಶ್ರಾವಣದಲ್ಲಿ ಹುರಿಯುವುದಿಲ್ಲ ಮನೆಯಲ್ಲಿಯ ಲಕ್ಷ್ಮಿದೇವಿಗೆ ಖಾರದ ಘಾಟು ಆಗಬಾರದು ತೊಂದರೆಯಾಗುವದು ಎಂಬ ನಂಬಿಕೆ ಇದೆ. ಪೊರಕೆ, ಬುಟ್ಟಿ, ಮರಗಳ ಖರೀದಿ ಅಲ್ಲದೇ ಹಬ್ಬ ಬರುವ ಮೊದಲು ಸ್ತ್ರೀಯರು ಬಳೆಗಳನ್ನು ಬಂಗಾರದ ಬಳೆಯನ್ನು ತೊಡುವ ಪದ್ಧತಿ ಕೂಡಾ ಕೆಲವರಲ್ಲಿದೆ. ಈ ಮಾಸದಲ್ಲಿ ಮೊದಲು ಬರುವ ಹಬ್ಬವೇ ನಾಗರ ಪಂಚಮಿ. ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬ ಹಾಡನ್ನಲ್ಲದೇ ಪಂಚಮಿ ಹಬ್ಬ ಅಣ್ಣ ಯಾಕ ಬರಲಿಲ್ಲ ಕರಿಯಾಕ ಎಂದು ಹಾಡು ಹೇಳುವ ಮನೆಯ ಹೆಣ್ಣುಮಕ್ಕಳಲ್ಲಿ ತೇಲಿಬರುತ್ತದೆ.ಜಾತಕದಲ್ಲಿ ನಾಗದೋಷಗಳಿದ್ದರೆ, ರಾಹುದೋಷ, ನಕ್ಷತ್ರ ದೋಷವಿದ್ದರೆ, ಸಂತಾನದ ನಾಗದೋಷವಿದ್ದರೆ, ಮಾಂಗಲ್ಯ ಭಾಗ್ಯ ದೋಷವಿದ್ದರೆ ನಾಗರ ಪಂಚಮಿದಿನ ನಾಗರಕಲ್ಲಿಗೆ ಅಥವಾ ಹುತ್ತಕ್ಕೆ ಹಾಲೆರೆಯುವರು. ಸಿರಿಯಾಳ ಷಷ್ಟಿಯನ್ನು ಗಂಡುಮಕ್ಕಳಿರುವ ತಾಯಂದಿರು ಆಚರಿಸುತ್ತಾರೆ.
ಈ ಮಾಸದಲ್ಲೇ ಗುರು ರಾಘವೇಂದ್ರರ ಆರಾಧನೆ ಬರುತ್ತದೆ. ಕಲಿಯುಗದ ಕಾಮಧೇನು ಕೇಳಿದ್ದನ್ನು ಪ್ರಸಾದಿಸುವ ಕಲ್ಪವೃಕ್ಷವೆಂದೇ ಭಾವಿಸಲಾದ ಮಂತ್ರಾಲಯದ ರಾಯರ ಆರಾಧನೆಯನ್ನು ಎಲ್ಲ ಅವರ ಮಠಗಳಲ್ಲಿ ಮಂತ್ರಾಲಯದಲ್ಲಿ ಮೂರು ದಿನ ಆಚರಿಸಲಾಗುತ್ತದೆ. ರಾಯರೆಂದರೆ ಸತ್ಯಧರ್ಮದ ರೂವಾರಿ, ಹರಿವಾಯುಗಳ ಒಡನಾಡಿ, ಮನುಕುಲದ ಜೀವನಾಡಿ, ನಂಬಿದವರನ್ನೆಲ್ಲ ಜಾತಿ, ಮತ, ಕುಲವೆನ್ನದೇ ಬೆಳೆಸಿದ್ದೇ ಕಾಯಕ. ಹಾಗಾಗಿ ನಂಬಿದವರಿಗೆಲ್ಲ ಅಧ್ಯಾತ್ಮ ಚಿಂತನೆಯೆಡೆಗೆ ಕರೆದೊಯ್ಯುವ ನಾಯಕ. ಸರ್ವ ವಿದ್ಯಾ ಪ್ರದಾಯಕ. ನೂರಾರು ದಾಸರು, ಸಾವಿರಾರು ಭಕ್ತರು, ಕೋಟಿ ಪಾಮರರು, ಸದಾ ಕೊಂಡಾಡುವ ಹೆಸರೇ ಶ್ರೀ ರಾಯರು. ಗುರುರಾಯರ ಸೇವಿಸಿರೋ... ಸೌಖ್ಯದಿ ಜೀವಿಸಿರೋ .... ಎಂಬ ಉಕ್ತಿ ಎಲ್ಲ ಕಾಲಕ್ಕೂ ನಿತ್ಯನೂತನ.
ಶ್ರಾವಣದ ನಾಲ್ಕು ಶುಕ್ರವಾರ ,ಶನಿವಾರ ಗೌರಿಯನ್ನು ಪೂಜಿಸಿದರೆ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯನ್ನು ಪೂಜಿಸುವ ಪದ್ಧತಿ ನಮ್ಮಲ್ಲಿದೆ.ಈ ವ್ರತವನ್ನು ಪುರುಷ ಸ್ತ್ರೀಯರು ಒಟ್ಟಿಗೆ ಮಾಡಬಹುದು. ಅದರಲ್ಲಿ ಮಹಿಳೆಯರು ಹೆಚ್ಚಾಗಿ ಈ ವ್ರತ ಮಾಡುತ್ತಾರೆ.ಈ ವೃತಾಚರಣೆಗೆ ನಿಯಮಗಳಿಲ್ಲ.ಲಕ್ಷ್ಮಿದೇವಿಯು ಸಮೃದ್ಧಿ, ಸಂಪತ್ತು, ಅದೃಷ್ಟ, ಬುದ್ಧಿವಂತಿಕೆ, ಬೆಳಕು, ಧೈರ್ಯ ಮತ್ತು ಸಂತಾನದ ಪ್ರಭಾವೀ ದೇವತೆ, ವಿವಾಹಿತ ಮಹಿಳೆಯರು ಲಕ್ಷ್ಮಿಯನ್ನು ಪೂಜಿಸುವುದರಿಂದ ಪತಿಯ ಆಯಸ್ಸು ವೃದ್ಧಿಯಾಗುವದು. ಉತ್ತಮ ಸಂತಾನಕ್ಕಾಗಿಯೂ ಮಹಿಳೆಯರು ವರಮಹಾಲಕ್ಷ್ಮಿ ವ್ರತ ಆಚರಿಸುತ್ತಾರೆ. ಶ್ರಾವಣದ ಹುಣ್ಣಿಮೆಯಂದು ರಕ್ಷಾಬಂಧನ ಆಚರಿಸುತ್ತಾರೆ. ಸಹೋದರ ಸಹೋದರಿಯರ ನಡುವಿನ ಬಾಂಧವ್ಯ ಬಲಪಡಿಸುವ ಹಬ್ಬ ಇದಾಗಿದೆ. ಅಂದಿನ ದಿನ ಸಹೋದರಿ ಸಹೋದರನಿಗೆ ರಾಖಿ ಕಟ್ಟಿ ಆರತಿ ಮಾಡಿ ಸಿಹಿ ತಿನಿಸಿ ಸಹೋದರನ ಆಶೀರ್ವಾದ ಬೇಡುತ್ತಾಳೆ.
ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ಜೊತೆ ಯಾವಾಗಲೂ ಸಹೋದರಿ ನಾನಿರುವೆನೆಂದು ಪರಸ್ಪರ ಭ್ರಾತ್ರತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ. ಅಂದಿನ ದಿನವೇ ಉಪಾಕರ್ಮ ಆಚರಣೆ ಎಂದರೆ ಉಪನಯನವಾದ ನಂತರ ಪ್ರತೀವರ್ಷ ಜನಿವಾರಧಾರಣೆ ಗಂಡುಮಕ್ಕಳು ಆಚರಿಸುವ ಹಬ್ಬ ಇದಾಗಿದೆ. ಉಪಾಕರ್ಮ ಆಚರಣೆ ಶಾಸ್ತ್ರೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕ ಹಬ್ಬವಾಗಿದೆ. ಅಂದು ಗಾಯತ್ರಿ ಮಂತ್ರದಿಂದ ಹೊಸ ಸಿದ್ಧಿಯಲ್ಲದೇ ಆತ್ಮಕಲ್ಯಾಣ, ಲೋಕ ಕಲ್ಯಾಣವಾಗುವುದು.
ಕೃಷ್ಣ ಜನ್ಮಾಷ್ಟಮಿ- "ವಂದೇ ನನ ಗಾನಾ ಶ್ಯಾಮಮಂ ಪೀತ ಕೌಶೇಯ ವಾಸಮ್ ಸನಂದನ ಸುಂದರಾಮ್ ಶುಧಾಮ್ ಶ್ರೀಕೃಷ್ಣ ಪೃಕೃತೇಪ್ಯಾರಮ್||"
ಜನ್ಮಾಷ್ಟಮಿ ನಮ್ಮ ದೇಶದಲ್ಲಿ ಆಚರಿಸುವ ಪ್ರಮುಖ ಹಬ್ಬ. ಈ ದಿನವನ್ನು ಜನ್ಮಾಷ್ಟಮಿ, ಗೋಕುಲಾಷ್ಟಮಿಯೆಂದು ಸಂಭ್ರಮದಿಂದ ಆಚರಿಸುತ್ತಾರೆ. ಕೃಷ್ಣನ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಸೂರದಾಸರು, ಪುರುಂದರದಾಸರು, ಕನಕದಾಸರು, ಮೀರಾಬಾಯಿ ಇವರೆಲ್ಲ ಕೃಷ್ಣನ ಆರಾಧಕರು. ಅಂದಿನ ದಿನ ಮನೆ ಮತ್ತು ದೇವಾಲಯಗಳನ್ನು ವಿಶೇಷ ಅಲಂಕರಿಸಿ ಪುಟ್ಟ ಕೃಷ್ಣನ ಹೆಜ್ಜೆಗಳ ರಂಗೋಲಿ ಬರೆದು ಕೃಷ್ಣನ ವಿಗ್ರಹ ಅಲಂಕರಿಸಿ ಬಗೆಬಗೆಯ ತಿಂಡಿ ಮಾಡಿ ಬೆಣ್ಣೆ ಸಮೇತ ನೇವ್ಯದ್ಯ ಮಾಡಿ ರಾತ್ರಿ ಅರ್ಘ್ಯ ಸಮರ್ಪಿಸುತ್ತಾರೆ. ಕಾರುಣ್ಯಕ್ಕೆ ಎಣೆಯಿಲ್ಲ ಎನ್ನುವ ಹಾಗೆ ಅವನು ನಮಗಾಗಿ ಅವತರಿಸಿದ ಪರಮಾತ್ಮನೆಂದು ಉಪವಾಸವಿದ್ದು ಪೂಜೆ ಸಲ್ಲಿಸುತ್ತಾರೆ. ಸಮಗ್ರ ಭೂಮಿಯನ್ನು ಪಾತ್ರೆಯನ್ನಾಗಿ ಮಾಡಿ ಅದರಲ್ಲಿ ರತ್ನ ಕವಚ ತುಂಬಿಸಿ ಉತ್ತಮೋತ್ತಮರಿಗೆ ದಾನ ಮಾಡಿದಸ್ಟು ಪುಣ್ಯ ಬರುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.
ಶ್ರಾವಣ ಮಾಸದಲ್ಲಿ ಬರುವ ಎಲ್ಲ ಹಬ್ಬಗಳೂ ಅಮೂಲ್ಯವಾದವುಗಳು.ಇಂತಹ ಅಮೂಲ್ಯ ಸಂದರ್ಭದಲ್ಲಿ ದೇವತೆಗಳ ವಿಶೇಷ ಪೂಜೆ, ಹೋಮಹವನ, ಧರ್ಮಚಿಂತನೆ, ಕಾರ್ಯಸಿದ್ಧಿಯ ಸಂಕಲ್ಪಗಳ ಮುಖಾಂತರ ಬದುಕಿನಲ್ಲಿ ಸೌಹಾರ್ದ, ಸಹಬಾಳ್ವೆ, ಸಾತ್ವಿಕ ಸಂಪನ್ನತೆ ನಮಗೆಲ್ಲ ತಂದುಕೊಡುತ್ತದೆ. ಬರುತ್ತಿರುವ ಶ್ರಾವಣದ ಸಂಭ್ರಮ ಆಚರಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ.
- ಗಿರಿಜಾ.ಎಸ್.ದೇಶಪಾಂಡೆ, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ