ಧಾತುಗಳ ಸಮಸ್ಥಿತಿ ಆರೋಗ್ಯ; ವಿಕಾರವೇ ಅನಾರೋಗ್ಯ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಸಪ್ತಧಾತುಗಳು ಸಮಸ್ಥಿತಿಯಲ್ಲಿದ್ದರೆ ಆರೋಗ್ಯ; ಅವುಗಳಲ್ಲಿ ವೈಷಮ್ಯ ಅಥವಾ ವಿಕಾರ ಉಂಟಾದರೆ ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆರೋಗ್ಯ ಇದ್ದರೆ ಸುಖ; ರೋಗವಿದ್ದರೆ ಅದು ದುಃಖಕ್ಕೆ ಕಾರಣವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 15ನೇ ದಿನವಾದ ಗುರುವಾರ 'ದಿನಚರ್ಯ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ಆರೋಗ್ಯವಂತನ ಆರೋಗ್ಯ ರಕ್ಷಣೆ ಮತ್ತು ಮತ್ತು ರೋಗಗಳ ಪ್ರಶಮನ ಆಯುರ್ವೇದದ ಮುಖ್ಯ ಉದ್ದೇಶಗಳು ಎನ್ನುವುದನ್ನು ಚರಕ ಸಂಹಿತೆ ಸ್ಪಷ್ಟಪಡಿಸಿದೆ ಎಂದರು.


ಅನ್ನದ ಅಭಿಲಾಷೆ ಇರಬೇಕು; ಊಟ ಮಾಡಿದ್ದು ಸುಲಭವಾಗಿ ಜೀರ್ಣವಾಗಬೇಕು; ಜೀರ್ಣವಾದ ಬಳಿಕ ತ್ಯಾಜ್ಯಗಳು ದೇಹದಿಂದ ಸರಿಯಾಗಿ ಹೊರಹೋಗಬೇಕು. ದೇಹ ಹಗುರವಾಗಿರಬೇಕು; ಕಣ್ಣು, ಕಿವಿ, ಮೂಗು ಎಲ್ಲವೂ ಪ್ರಸನ್ನವಾಗಿರಬೇಕು; ಸಕಾಲಕ್ಕೆ ನಿದ್ದೆ- ಎಚ್ಚರ ಆಗಬೇಕು. ಮನಸ್ಸು ಪ್ರಫುಲ್ಲವಾಗಿರಬೇಕು; ಎಲ್ಲಕ್ಕಿಂತ ಹೆಚ್ಚಾಗಿ ದೇಹಾಗ್ನಿ ಸಮವಾಗಿರಬೇಕು. ಇದು ಆರೋಗ್ಯವಂತರ ಲಕ್ಷಣ ಎಂದು ವಿಶ್ಲೇಷಿಸಿದರು.


ಆಯುರ್ವೇದವೆಂಬ ಕಲ್ಪವೃಕ್ಷದ ಸ್ವಸ್ಥವೃತ್ತಶಾಖೆಯಲ್ಲಿ ವಿವರಿಸಿದ ದಿನಚರ್ಯ, ಋತುಚರ್ಯ, ರಾತ್ರಿಚರ್ಯಗಳನ್ನು ಪಾಲಿಸುವುದರಿಂದ ಆರೋಗ್ಯವೆಂಬ ಅಮೃತಫಲ ಲಭ್ಯವಾಗಲಿದೆ ಎಂದು ಬಣ್ಣಿಸಿದರು. ಅಂತೆಯೇ ಆತುರುವೃತ್ತದಲ್ಲಿ ರೋಗಗಳ ವಿವರಣೆ ಇದೆ. ವಾತ, ಪಿತ್ತ, ಕಫ ಎಂಬ ಮೂರು ಧಾತುಗಳು ಸಮಸ್ಥಿತಿಯಲ್ಲಿದ್ದರೆ ಮಾತ್ರ ಆತ್ಮಜ್ಞಾನ ಲಭ್ಯವಾಗುತ್ತದೆ ಎಂದು ಹೇಳಿದರು.


ಸರಿಯಾದ ಬೆಳವಣಿಗೆ ವಿಕಾಸ; ಇಲ್ಲದಿದ್ದರೆ ಅದು ವಿಕಾರವಾಗುತ್ತದೆ. ದೇವರು ಕೊಟ್ಟ ಆಯುಸ್ಸನ್ನು ಉಳಿಸಿಕೊಳ್ಳುವ ಬಗೆಯನ್ನು ಆಯುರ್ವೇದ ವಿವರಿಸಿದೆ. ಕಾಲವೆಂಬ ಅಮೃತವನ್ನು ಸದ್ಬಳಕೆ ಮಾಡಿಕೊಂಡರೆ ಆಯುಷ್ಯ ವೃದ್ಧಿಸಿಕೊಳ್ಳಲೂ ಅವಕಾಶವಿದೆ. ಸಮಾಧಾನದ ಬದುಕಿನಿಂದ ಉಸಿರು ವಿಸ್ತಾರವಾಗುತ್ತದೆ  ಎಂದು ಹೇಳಿದರು.


ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಯುವ ಪ್ರಧಾನ ಚಂದನಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ತಂಡದ ಪ್ರಧಾನ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಕುಮಟಾ ಮಂಡಲದ ಅಧ್ಯಕ್ಷ ಸುಬ್ರಾಯ ಭಟ್, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.


ಅಂಬಾಗಿರಿ, ಹರೀಶೆ ಮಂಗಳೂರು, ಹಾರ್ಸಿಕಟ್ಟೆ, ಬಿದ್ರಕಾನ ಮತ್ತು ಸಿದ್ದಾಪುರ ವಲಯಗಳ ಶಿಷ್ಯಭಕ್ತರು ಸರ್ವಸೇವೆ ನೆರವೇರಿಸಿದರು. ಸಿದ್ದಾಪುರ ಮಂಡಲದ ನೂತನ ಅಧ್ಯಕ್ಷರಾಗಿ ಸತೀಶ್ ಆಲ್ಮನೆ ಮತ್ತು ಕಾರ್ಯದರ್ಶಿಯಾಗಿ ರಾಮಮೂರ್ತಿ ಗೋಳಗೋಡು ಮತ್ತು ನೂತನ ತಂಡದ ಪದಾಧಿಕಾರಿಗಳು ಸೇವಾದೀಕ್ಷೆ ಸ್ವೀಕರಿಸಿದರು. ಮಾತೆಯರಿಂದ ಲಕ್ಷಕ್ಕೂ ಹೆಚ್ಚು ದೀಪದ ಬತ್ತ ಸಮರ್ಪಣೆ ನಡೆಯಿತು. ಅಶೋಕೆಯ ವೈಭವವನ್ನು ಬಣ್ಣಿಸುವ ಪ್ರವಾಸಿ ಪ್ರಪಂಚದ ಸಂಚಿಕೆಯನ್ನು ಶ್ರೀಗಳು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ವೇದಮೂರ್ತಿ ಪರಮೇಶ್ವರ ಮಾರ್ಕಂಡೆಯವರ ನೇತೃತ್ವದಲ್ಲಿ ಕುಮಟಾ- ಹೊನ್ನಾವರ ಮಂಡಲಗಳ ಶಿಷ್ಯರಿಂದ ಲಕ್ಷ ತುಳಸಿ ಅರ್ಚನೆ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top