ಗುರು-ಶಿಷ್ಯ ಪರಂಪರೆ ಭಾರತದ ಅತಿಶ್ರೇಷ್ಠ ಪರಂಪರೆ

Upayuktha
0

ಯುಗ ಪರಿವರ್ತನೆಯ ಸಂಧಿಕಾಲ: ಗುರು-ಶಿಷ್ಯ ಪರಂಪರೆಯ ಕಾರ್ಯ 


ಗುರು-ಶಿಷ್ಯ ಪರಂಪರೆ ಎಂದರೇನು ?

ಅನಾದಿ ಕಾಲದಿಂದಲೂ ಗುರು ಮತ್ತು ಶಿಷ್ಯ ಈ ಪರಿಕಲ್ಪನೆ ಇದೆ. ಗುರುಗಳು ತಮ್ಮಲ್ಲಿರುವ ಜ್ಞಾನವನ್ನು ಶಿಷ್ಯನಿಗೆ ಧಾರೆಯೆರೆದು ಅವನನ್ನು ಉನ್ನತ ಸ್ಥಾನಕ್ಕೆ ತರುತ್ತಾರೆ, ಅಂದರೆ ಅವರನ್ನು ಗುರುಗಳ ಸ್ಥಾನಕ್ಕೂ ತರುತ್ತಾರೆ. ಈ ಚಕ್ರವು ಹಿಂದಿನಿಂದಲೂ ನಡೆಯುತ್ತ ಬಂದಿದೆ, ಅದರಿಂದಾಗಿಯೇ ಇಂದು ನಮ್ಮ ಆಚರಣೆಗಳು, ಧರ್ಮದ ಜ್ಞಾನ ಮತ್ತು ಸಂಸ್ಕಾರಗಳು ಉಳಿದಿವೆ. 


ಶಾಲೆಯಲ್ಲಿ ಶಿಕ್ಷಕರ ಕಾರಣದಿಂದಲೇ ನಾವು ವಿದ್ಯಾವಂತರಾಗಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆದರೆ ‘ಗುರುಗಳು’ ವಿದ್ಯೆಯನ್ನಷ್ಟೇ ಅಲ್ಲದೇ ಶಿಷ್ಯನ ಸರ್ವತೋಮುಖ ಉನ್ನತಿಗಾಗಿ ಅವನಿಂದ ಪ್ರಯತ್ನ ಮಾಡಿಸಿ ಜೀವನದ ಉದ್ಧಾರ ಮಾಡುತ್ತಾರೆ. ಅಂತಹ ಗುರುಗಳ ಮಾರ್ಗದರ್ಶನದಿಂದ ನಮ್ಮ ನೆಲದಲ್ಲಿ ಅನೇಕ ಸಂತರು ಆಗಿ ಹೋಗಿದ್ದಾರೆ. ಈ ಸಂತರ ಅಸ್ತಿತ್ವದಿಂದಲೇ ಸಂಸ್ಕೃತಿ, ಶುದ್ಧ ಆಚರಣೆಗಳು ಉಳಿದಿವೆ. ಈ ಪರಂಪರೆಯೇ ಗುರು-ಶಿಷ್ಯ ಪರಂಪರೆ. ಇದು ಭಾರತದ ಅತಿಶ್ರೇಷ್ಠ ಪರಂಪರೆ. 


ಈ ಗುರುಶಿಷ್ಯ ಪರಂಪರೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು ಈಗಲೂ ಈ ರಾಷ್ಟ್ರದ ಉದ್ಧಾರದ ಕಾರ್ಯ ಮಾಡುತ್ತಿದೆ. ಇಲ್ಲಿ ನಾವು ‘ಗುರು’ ಎಂಬುದು ವ್ಯಕ್ತಿಯಲ್ಲದೆ ಒಂದು ತತ್ವವಾಗಿದೆ ಎಂಬುದನ್ನು ಅರಿಯಬೇಕಿದೆ. ಈ ಗುರುತತ್ವವು ಸಂತರ ಮೂಲಕ ಕಾರ್ಯನಿರತವಾಗಿ ರಾಷ್ಟ್ರದ ಮತ್ತು ಸಮಾಜದ ಉದ್ಧಾರಕ್ಕಾಗಿ ಪ್ರಯತ್ನಿಸುತ್ತಿದೆ.


ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯ ಮಾಡಿದ ಗುರು-ಶಿಷ್ಯ ಪರಂಪರೆ !

ಗುರುಶಿಷ್ಯ ಪರಂಪರೆಯು ಕಾಲಕಾಲಕ್ಕೆ ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸುವ ಅಂದರೆ ಧರ್ಮವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಜೀವನವನ್ನು ಉನ್ನತಗೊಳಿಸುವ ಕಾರ್ಯ ಮಾಡಿದೆ, ಅಂದರೆ ಧರ್ಮಸಂಸ್ಥಾಪನೆಯ ಕಾರ್ಯವನ್ನು ಸಹ ಮಾಡಿದೆ. ಈ ಪರಂಪರೆಯಿಂದಾಗಿಯೇ ಅನೇಕ ವಿದೇಶಿ ಆಕ್ರಮಣಗಳ ನಡುವೆಯೂ ಹಿಂದೂ ಧರ್ಮ ಇಂದಿಗೂ ಉಳಿದಿದೆ. 


ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯ ಬೋಧನೆ ಮಾಡಿದ ಮತ್ತು ಯುದ್ಧದಲ್ಲಿ ಧರ್ಮಕ್ಕೆ ಜಯ ಸಿಗುವಂತೆ ಮಾಡಿದ. ರಾಜ ಚಂದ್ರಗುಪ್ತ ಮೌರ್ಯನಿಗೆ ಗುರುಗಳಾದ ಆರ್ಯ ಚಾಣಕ್ಯರು ಧರ್ಮೋಪದೇಶ ಮಾಡಿ ಆದರ್ಶ ರಾಜ್ಯ ನಿರ್ಮಾಣ ಮಾಡಿದರು, ಮುಘಲರ ಉಪಟಳ ಹೆಚ್ಚಾಗಿರುವಾಗ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಮರ್ಥ ರಾಮದಾಸರು ಅಥವಾ ಸಂತ ತುಕಾರಾಮರಂತಹ ಮಹಾನ್ ಸಂತರು ಅವರಿಗೆ ದಿಶಾದರ್ಶನ ಮಾಡಿ ಹಿಂದವೀ ಸ್ವರಾಜ್ಯದ ಸ್ಥಾಪನೆ ಮಾಡಿದರು. 


ವಿದ್ಯಾರಣ್ಯರು ಮುಸಲ್ಮಾನರಿಂದ ಮತಾಂತರಗೊಂಡಿದ್ದ ಹರಿಹರ ಮತ್ತು ಬುಕ್ಕರನ್ನು ಶುದ್ಧೀಕರಿಸಿ ಅವರ ಮೂಲಕ ವಿಜಯನಗರ ಸಾಮ್ರಾಜ್ಯದ ಅಡಿಪಾಯವನ್ನು ಹಾಕಿದರು. ಇದರಿಂದ ಗುರುತತ್ತ್ವವು ಯಾವಾಗಲೂ ಧರ್ಮವನ್ನು ರಕ್ಷಿಸಲು ತನ್ನ ಶಿಷ್ಯರಿಗೆ ಆಜ್ಞಾಪಿಸಿದೆ ಅಥವಾ ಅವರಿಂದ ಈ ಕಾರ್ಯವನ್ನು ಮಾಡಿಸಿಕೊಂಡಿದೆ ಎಂಬುದು ಗಮನಕ್ಕೆ ಬರುತ್ತದೆ. 


ಈ ಎಲ್ಲ ರಾಜ ಮಹಾರಾಜರ ಕಾಲಾವಧಿಯಲ್ಲಿ ರಾಜ್ಯವು ಅವನತಿಯಲ್ಲಿರುವಾಗ ಅಥವಾ ಅಧರ್ಮವು ತಾಂಡವವಾಡುತ್ತಿರುವಾಗ ಗುರುಗಳು ಮಾರ್ಗದರ್ಶನವನ್ನು ಮಾಡಿ ಧರ್ಮದ ಪುರ್ನಸ್ಥಾಪನೆ ಮಾಡಿದ್ದಾರೆ. ಹಾಗಾಗಿ ಗುರುಶಿಷ್ಯ ಪರಂಪರೆ ಕೇವಲ ಜ್ಞಾನದಾನಕ್ಕಷ್ಟೇ ಸೀಮಿತವಾಗಿಲ್ಲ. ಧರ್ಮದ ಮೇಲಿನ ಕಪ್ಪು ಛಾಯೆಯನ್ನು ಸರಿಸಿ ಧರ್ಮದ ಪುನರ್ಸ್ಥಾಪನೆಯ ಮಹಾನ್ ಕಾರ್ಯವನ್ನು ಗುರುಶಿಷ್ಯ ಪರಂಪರೆ ಮಾಡಿದೆ. 


ಪ್ರಸ್ತುತ ಕಾಲದಲ್ಲಿ ಗುರು-ಶಿಷ್ಯ ಪರಂಪರೆಯ ಆವಶ್ಯಕತೆ ಏನು ?

ಇಂದು ಹಿಂದೂಗಳ ಮೇಲೆ ದೌರ್ಜನ್ಯ, ಮತೀಯ ತಾರತಮ್ಯತೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್, ಮತಾಂತರ ಇನ್ನೂ ಅನೇಕ ಸಮಸ್ಯೆಗಳು ನಮ್ಮ ದೇಶವನ್ನು ಕಾಡುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಆದರ್ಶ ರಾಮರಾಜ್ಯದಂತಹ ರಾಷ್ಟ್ರದ ಸ್ಥಾಪನೆ. ಪ್ರಭು ಶ್ರೀರಾಮನ ರಾಜ್ಯವು ಅತ್ಯಂತ ಸುಭೀಕ್ಷ ಮತ್ತು ಸುಖಿಯಾಗಿತ್ತು, ಪ್ರತಿಯೊಬ್ಬ ಪ್ರಜೆಯೂ ಸುರಕ್ಷಿತ ಮತ್ತು ಸಂತುಷ್ಟನಾಗಿದ್ದ, ಅಂಥದ್ದೇ ಆದರ್ಶ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆ ಪ್ರಸ್ತುತ ಕಾಲದಲ್ಲಿ ಇದೆ. ಈ ರಾಷ್ಟ್ರದ ನಿರ್ಮಾಣಕ್ಕೆ ಪ್ರತಿಯೊಬ್ಬ ಪ್ರಜೆಯೂ ಪ್ರಯತ್ನ ಮಾಡಬೇಕಿದೆ. 


ಪ್ರತಿಯೊಬ್ಬ ಪ್ರಜೆಯೂ ಸಾತ್ತ್ವಿಕ ಆಚರಣೆಗಳನ್ನು ರೂಢಿಸಿಕೊಂಡರೆ, ಧರ್ಮ ಮಾರ್ಗದಲ್ಲಿ ನಡೆದರೆ ಅದುವೇ ಆದರ್ಶ ರಾಷ್ಟ್ರ. ಆದರೆ ಈಗಿರುವ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗಲು ನಮಗೆ ಆಧ್ಯಾತ್ಮಿಕ ಬಲದ ಆವಶ್ಯಕತೆ ಇದೆ. ಹಿಂದಿನಿಂದಲೂ ಧರ್ಮದ ಮೇಲೆ, ರಾಷ್ಟ್ರದ ಮೇಲೆ ಸಮಸ್ಯೆಗಳು ಎದುರಾದಾಗ ಸಂತರು ಮತ್ತು ಗುರುಗಳ ಮಾರ್ಗದರ್ಶನ ಮತ್ತು ಅವರ ಆಧ್ಯಾತ್ಮಿಕ ಶಕ್ತಿಯಿಂದಲೇ ಧರ್ಮದ ಪುರ್ನಸ್ಥಾಪನೆ ಆಗಿರುವ ಇತಿಹಾಸ ನಮ್ಮದು. ಹಾಗಾಗಿ ಈಗಲೂ ನಾವು ಈ ಆದರ್ಶ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಪೂರ್ಣ ಮಾಡಲು ಗುರುಗಳ ಮತ್ತು ಸಂತರ ಮಾರ್ಗದರ್ಶನ ಪಡೆದು ಮುಂದೆ ಸಾಗಬೇಕಿದೆ. ಹಾಗಾಗಿ ಪ್ರಸ್ತುತ ಕಾಲದಲ್ಲಿ ಗುರು-ಶಿಷ್ಯ ಪರಂಪರೆಯ ಆವಶ್ಯಕತೆ ಇದೆ. 


ಗುರುಪೂರ್ಣಿಮೆ ಎಂದರೇನು ? ಏಕೆ ಆಚರಿಸುತ್ತಾರೆ ?

ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ. ಗುರುಪೂರ್ಣಿಮೆ ಮಹೋತ್ಸವವನ್ನು ಎಲ್ಲೆಡೆ ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ. (ತಮಿಳುನಾಡಿನಲ್ಲಿ ವ್ಯಾಸಪೂಜೆಯನ್ನು ಜ್ಯೇಷ್ಠ ಪೂರ್ಣಿಮೆಯಂದು ಮಾಡುತ್ತಾರೆ.) 


ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ 1 ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗ (ಸತ್‌ಗಾಗಿ ಮಾಡಿದ ಅರ್ಪಣೆ) ಇವುಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ 1 ಸಾವಿರ ಪಟ್ಟು ಹೆಚ್ಚಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ. 


‘ಗುರು-ಶಿಷ್ಯ ಪರಂಪರೆ’ಯು ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಆದರೆ ಕಾಲದ ಪ್ರವಾಹದಲ್ಲಿ ರಜ-ತಮಪ್ರಧಾನ ಸಂಸ್ಕೃತಿಯ ಪ್ರಭಾವದಿಂದಾಗಿ ಮಹಾನ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆಯ ನಿಮಿತ್ತದಿಂದ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಹೇಳಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದಾವಕಾಶ ಲಭಿಸುತ್ತದೆ.


ಜನಸಾಮಾನ್ಯರ ಪಾತ್ರ ಮತ್ತು ಕರೆ !

ಈ ಗುರುಪೂರ್ಣಿಮೆ ಎಂದರೆ ಸಮಸ್ತ ಹಿಂದೂ ಸಮಾಜಕ್ಕೆ ಅಮೂಲ್ಯ ಸದಾವಕಾಶವಾಗಿದೆ. ನಮ್ಮ ಧರ್ಮ-ಸಂಸ್ಕೃತಿಯನ್ನು ತಲೆಮಾರುಗಳಿಂದ ನಮ್ಮವರೆಗೆ ತಲುಪಿಸಿದ ಗುರುಶಿಷ್ಯ ಪರಂಪರೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ಗುರುಋಣದಿಂದ ಮುಕ್ತಗೊಳ್ಳಲು ಈ ಪರ್ವಕಾಲ ಒಂದು ಸುವರ್ಣ ಅವಕಾಶವಾಗಿದೆ. ಹಾಗಾಗಿ ಈ ಕಾಲಾವಧಿಯಲ್ಲಿ ಹಿಂದೂ ಸಮಾಜವು ಇಂತಹ ಧರ್ಮಸಂಸ್ಥಾಪನೆಯ ನಿಸ್ವಾರ್ಥ ಗುರುಕಾರ್ಯ ಮಾಡುತ್ತಿರುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಧನದ ಅರ್ಪಣೆಯ ಮೂಲಕ ದಾನ ಮಾಡಬಹುದು, ಇದನ್ನು ಸತ್ಪಾತ್ರೆ ದಾನವೆಂದು ಕರೆಯುತ್ತಾರೆ. 


ಈಗ 'ಇಡೀ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳ ಹತ್ಯೆ ಮಾಡಿ ಭಾರತವನ್ನು ಯುದ್ಧದತ್ತ ಸೆಳೆಯುತ್ತಿದ್ದಾರೆ. ಇಂತಹ 'ಯುದ್ಧ ಕಾಲದಲ್ಲಿ ಪ್ರತಿಯೊಬ್ಬ ನಾಗರಿಕನೂ ಸೈನಿಕನಾಗಿರುತ್ತಾನೆ' ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜನರ ಮೇಲಾಗುವ ಅನ್ಯಾಯವನ್ನು ದೂರಗೊಳಿಸಲು ಶ್ರೀರಾಮ, ಶ್ರೀಕೃಷ್ಣರಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪರಂತಹವರೂ ಯುದ್ಧವನ್ನೇ ಮಾಡ ಬೇಕಾಯಿತು. 


ಈ ಕಾರ್ಯದಲ್ಲಿ ಅವರಿಗೆ ಗುರುಪರಂಪರೆಯ ಮಾರ್ಗದರ್ಶನವೂ ಲಭಿಸಿತು. ಹಾಗಾಗಿ 'ಹಿಂದೂ ಜನಜಾಗೃತಿ ಸಮಿತಿ' ರಾಷ್ಟ್ರಪ್ರೇಮ ಹೆಚ್ಚಿಸುವ ಗುರುಪೂರ್ಣಿಮೆ ಆಚರಿಸುವ ಸಂಕಲ್ಪವನ್ನು ಮಾಡಿದೆ. ಸಮಿತಿ ಕಳೆದ 23 ವರ್ಷಗಳಿಂದ ದೇಶದಾದ್ಯಂತ ಹಲವು ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸುತ್ತಿದೆ. ಈ ವರ್ಷವೂ ಆಷಾಢ ಹುಣ್ಣಿಮೆ, ಅಂದರೆ ಜುಲೈ 10 2025 ಗುರುವಾರದಂದು,

1. ಶ್ರೀ ಗಂಗಮ್ಮ ತಿಮ್ಮಯ್ಯ ಇನ್ ಅಂಡ್ ಕನ್ವೆನ್ಷನ್ ಸೆಂಟರ್, ಬಸವೇಶ್ವರ ನಗರ, ಬೆಂಗಳೂರು.

2. ಆರ್. ವಿ. ಕಲ್ಯಾಣ ಮಂಟಪ, ಮಾರುತಿ ನಗರ ಬಸ್ ನಿಲ್ದಾಣದ ಹತ್ತಿರ, ಕೋಗಿಲು ಮುಖ್ಯ ರಸ್ತೆ, ಯಲಹಂಕ, ಬೆಂಗಳೂರು..

ಸೇರಿದಂತೆ ರಾಜ್ಯದಾದ್ಯಂತ 24 ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸಿದೆ. ಸಮಸ್ತ ಹಿಂದೂ ಬಾಂಧವರು ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಈ ಮೂಲಕ ಕರೆ ನೀಡುತ್ತೇವೆ. ರಾಜ್ಯದಾದ್ಯಂತ ಆಯೋಜನೆ ಆಗಿರುವ ಕಾರ್ಯಕ್ರಮಗಳ ಹೆಚ್ಚಿನ ಮಾಹಿತಿಗಾಗಿ HinduJagruti.org/kannada ಈ ಜಾಲತಾಣಕ್ಕೆ ಭೇಟಿ ನೀಡಬಹುದು.


-ಮೋಹನ್ ಗೌಡ 

ರಾಜ್ಯ ವಕ್ತಾರರು 

ಹಿಂದೂ ಜನಜಾಗೃತಿ ಸಮಿತಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top