ಜುಲೈ 24- ರಾಷ್ಟ್ರೀಯ ಆದಾಯ ತೆರಿಗೆ ದಿನ
ಪ್ರತಿ ಪ್ರಜೆಯ ಆದ್ಯ ಕರ್ತವ್ಯವೆಂದರೆ ದೇಶದ ಅಭಿವೃದ್ಧಿಗೆ ತನ್ನ ಪಾಲು ನೀಡುವುದು. ಅದರಲ್ಲಿ ಅತ್ಯಂತ ಪ್ರಮುಖವಾದುದು ಆದಾಯ ತೆರಿಗೆ ಪಾವತಿ. ಇದು ಕೇವಲ ಕಾನೂನು ಬಾಧ್ಯತೆಯಷ್ಟೇ ಅಲ್ಲ, ರಾಷ್ಟ್ರದ ಶ್ರೇಯಸ್ಸಿಗೆ ಕೊಡುವ ಪ್ರಾಮಾಣಿಕ ಕೊಡುಗೆ. 'ತೆರಿಗೆ ಪಾವತಿ- ರಾಷ್ಟ್ರ ನಿರ್ಮಾಣಕ್ಕೆ ನಾಂದಿ' ಎನ್ನುವುದರಲ್ಲಿ ಅರ್ಥ ತುಂಬಿದೆ. ಪ್ರತಿಯೊಬ್ಬರೂ ನೀಡುವ ಸಣ್ಣ ಕೊಡುಗೆಗಳು ಸೇರಿ ದೊಡ್ಡ ಬದಲಾವಣೆಗಳನ್ನು ಸೃಷ್ಟಿಸುತ್ತವೆ.
‘ನಾನು ಪಾವತಿಸಿದ ತೆರಿಗೆ ಎಲ್ಲಿ ಹೋಗುತ್ತದೆ?:
ತೆರಿಗೆ ಮೂಲಕ ಸರ್ಕಾರ ಸಾರ್ವಜನಿಕ ಬದುಕಿಗೆ ಬೇಕಾದ ಮೂಲ ಸೌಕರ್ಯಗಳನ್ನು ನಿರ್ಮಿಸುತ್ತದೆ, ಅಂದರೆ, ರಸ್ತೆ ನಿರ್ಮಾಣ, ವಿದ್ಯುತ್ ವಿತರಣೆ, ಶಿಕ್ಷಣ, ಆರೋಗ್ಯ, ರಕ್ಷಣಾ ವ್ಯವಸ್ಥೆ, ಬೆಳೆಗೆ ಬೆಂಬಲ ಬೆಲೆ, ಸಾಮಾಜಿಕ ಭದ್ರತೆ ಮುಂತಾದವುಗಳಿಗೆ ತಗಲುವ ವೆಚ್ಚಕ್ಕೆ ತೆರಿಗೆ ಹಣವನ್ನು ಬಳಸಲಾಗುತ್ತದೆ.
ಆದಾಯ ತೆರಿಗೆಯು ಒಂದು ರೀತಿಯ ಹೊಣೆಯಾದರೂ, ಇದರಿಂದ ಪರೋಕ್ಷ ಅನುಕೂಲಗಳನ್ನು ನೀಡುವ ಆದಾಯ ತೆರಿಗೆ ಇಲಾಖೆಯು ಪ್ರತೀ ವರ್ಷ ಜುಲೈ 24ನ್ನು ರಾಷ್ಟ್ರೀಯ ಆದಾಯ ತೆರಿಗೆ ದಿನವನ್ನಾಗಿ ಆಚರಿಸುತ್ತದೆ.
ಜುಲೈ 24ರ ಮಹತ್ವ: ಭಾರತದಲ್ಲಿ ಆದಾಯ ತೆರಿಗೆಯ 150ನೇ ವರ್ಷಾಚರಣೆ 2010 ರಲ್ಲಿ ನಡೆಯಿತು. ಅಂದಿನಿಂದ ದೇಶದಲ್ಲಿ ಜುಲೈ 24 ರಂದು ಆದಾಯ ತೆರಿಗೆ (Income Tax Day/ ಆಯಕರ್) ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಭಾರತದ ತೆರಿಗೆ ವ್ಯವಸ್ಥೆಯ ಇತಿಹಾಸ ಮತ್ತು ಪ್ರಗತಿಯನ್ನು ಸ್ಮರಿಸುವ, ಗೌರವಿಸುವ, ಮತ್ತು ತೆರಿಗೆದಾರರಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ.
ಆದಾಯ ತೆರಿಗೆ ಹಿನ್ನೆಲೆ: 1860 ರಲ್ಲಿ ಬ್ರಿಟಿಷ್ ಕಾಲದ ಹಣಕಾಸು ಸಚಿವರಾಗಿದ್ದ ಸರ್ ಜೇಮ್ಸ್ ವಿಲ್ಸನ್, ಲಾರ್ಡ್ ಕಾನ್ಯಿಂಗ್ ಆಡಳಿತದ ಸಂದರ್ಭದಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಯನ್ನು ಪರಿಚಯಿಸಿದರು. 1922 ರಲ್ಲಿ ಸಮಗ್ರ ಆದಾಯ ತೆರಿಗೆ ಕಾಯ್ದೆ ಜಾರಿಯಾಗಿದ್ದು, 1924 ರಲ್ಲಿ ಕೇಂದ್ರ ಕಂದಾಯ ಮಂಡಳಿ (CBR) ಸ್ಥಾಪನೆಯಾಯಿತು. 1981 ರಲ್ಲಿ ಆದಾಯ ತೆರಿಗೆ ಇಲಾಖೆಯ ಗಣಕೀಕರಣ ಪ್ರಾರಂಭವಾಗಿದ್ದು ಬಹುತೇಕ ತೆರಿಗೆ ನೀತಿಗಳು ಮತ್ತು ಸೌಲಭ್ಯಗಳು ಅಂತರ್ಜಾಲದಲ್ಲಿ ಲಭ್ಯವಿದೆ. 2009 ರಲ್ಲಿ CPC (Centralized Processing Centre) ಸ್ಥಾಪನೆಯಾಗಿದ್ದು, ದೇಶದ ಎಲ್ಲಾ ಆದಾಯ ತೆರಿಗೆ ಸಲ್ಲಿಕೆಯ ಪರಿಶೀಲನೆಯು ಬೆಂಗಳೂರಿನಲ್ಲಿ ನಡೆಯುತ್ತದೆ. 2021ರಲ್ಲಿ ಹೊಸ ಇ-ಫೈಲಿಂಗ್ ಪೋರ್ಟಲ್ ಲೋಕಾರ್ಪಣೆಯಾಗಿದ್ದು ಆನ್ಲೈನ್ ತೆರಿಗೆ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ.
ಜುಲೈ 24 ರಂದು ಆಚರಿಸಲಾಗುವ ಆದಾಯ ತೆರಿಗೆ ದಿನವು ಭಾರತದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಈ ದಿನವು 1860 ರಲ್ಲಿ ಸರ್ ಜೇಮ್ಸ್ ವಿಲ್ಸನ್ ಅವರು ಭಾರತದಲ್ಲಿ ಆದಾಯ ತೆರಿಗೆಯನ್ನು ಪರಿಚಯಿಸಿದ ದಿನವನ್ನು ಸ್ಮರಿಸುತ್ತದೆ. ಈ ಆರಂಭಿಕ ಅನುಷ್ಠಾನವು ಅಡಿಪಾಯವನ್ನು ಹಾಕಿದರೂ, 1922 ರ ಸಮಗ್ರ ಆದಾಯ ತೆರಿಗೆ ಕಾಯ್ದೆಯು ದೇಶದಲ್ಲಿ ರಚನಾತ್ಮಕ ತೆರಿಗೆ ವ್ಯವಸ್ಥೆಯನ್ನು ಸ್ಥಾಪಿಸಿತು. 1924 ರಲ್ಲಿ, ಕೇಂದ್ರ ಕಂದಾಯ ಮಂಡಳಿ ಕಾಯ್ದೆಯು ಆದಾಯ ತೆರಿಗೆ ಕಾಯ್ದೆಯನ್ನು ನಿರ್ವಹಿಸುವ ಜವಾಬ್ದಾರಿಯುತ ಶಾಸನಬದ್ಧ ಸಂಸ್ಥೆಯಾಗಿ ಮಂಡಳಿಯನ್ನು ರಚಿಸುವ ಮೂಲಕ ಈ ರಚನೆಯನ್ನು ಮತ್ತಷ್ಟು ಬಲಪಡಿಸಿತು. ಈ ಅವಧಿಯಲ್ಲಿ ಪ್ರತಿ ಪ್ರಾಂತ್ಯಕ್ಕೂ ಆದಾಯ ತೆರಿಗೆ ಆಯುಕ್ತರ ನೇಮಕವನ್ನು ಮಾಡಿತು, ಜೊತೆಗೆ ಸಹಾಯಕ ಆಯುಕ್ತರು ಮತ್ತು ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.
1981 ರಲ್ಲಿ ಗಣಕೀಕರಣವನ್ನು ಪರಿಚಯಿಸುವುದರೊಂದಿಗೆ ತಾಂತ್ರಿಕ ಪ್ರಗತಿಗಳು ಸಹ ನಿರ್ಣಾಯಕ ಪಾತ್ರವನ್ನು ವಹಿಸಿದವು. ಈ ಆರಂಭಿಕ ಹಂತವು ಚಲನ್‌ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಸ್ಕರಿಸುವತ್ತ ಗಮನಹರಿಸಿತು. ಅಂತಿಮವಾಗಿ, 2009 ರಲ್ಲಿ, ಇ-ಫೈಲ್ಡ್ ಮತ್ತು ಪೇಪರ್ ರಿಟರ್ನ್‌ಗಳ ಬೃಹತ್ ಸಂಸ್ಕರಣೆಯನ್ನು ನಿರ್ವಹಿಸಲು ಬೆಂಗಳೂರಿನಲ್ಲಿ ಕೇಂದ್ರೀಕೃತ ಸಂಸ್ಕರಣಾ ಕೇಂದ್ರವನ್ನು (ಸಿಪಿಸಿ) ಸ್ಥಾಪಿಸಲಾಯಿತು, ಇದು ನ್ಯಾಯವ್ಯಾಪ್ತಿ-ಮುಕ್ತ ರೀತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
`ಆದಾಯ ತೆರಿಗೆ ದಿನವು ಭಾರತದಲ್ಲಿ ತೆರಿಗೆ ಆಡಳಿತದ ಐತಿಹಾಸಿಕ ಬೆಳವಣಿಗೆಯನ್ನು ಗೌರವಿಸುವುದಲ್ಲದೆ, ಹೆಚ್ಚು ಪರಿಣಾಮಕಾರಿ ಮತ್ತು ತೆರಿಗೆದಾರರಿಗೆ ಸ್ನೇಹಿ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿರುವ ನಿರಂತರ ಪ್ರಗತಿ ಮತ್ತು ಆಧುನೀಕರಣ ಪ್ರಯತ್ನಗಳನ್ನು ಬಿಂಬಿಸುತ್ತದೆ.
ಈ ವರ್ಷದ ಆದಾಯ ತೆರಿಗೆ ದಿನವನ್ನು "ಪಾರದರ್ಶಕತೆ ಮತ್ತು ನಂಬಿಕೆಯ ಸಬಲ ಶಕ್ತಿಯೆಡೆಗೆ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿವಿಧ ನಗರಗಳಲ್ಲಿ ಅನೇಕ ಕಾರ್ಯಾಗಾರಗಳು, ಸೆಮಿನಾರ್‌ಗಳು ಹಾಗೂ ಜನ ಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತೆರಿಗೆದಾರರ ಬಾಧ್ಯತೆ ಮತ್ತು ಸಹಕಾರದ ಮಹತ್ವವನ್ನು ತಿಳಿಸುತ್ತದೆ.
ಈ ದಿನದ ಪ್ರಯುಕ್ತವಾಗಿ ಆದಾಯ ತೆರಿಗೆ ಇಲಾಖೆ ತಮ್ಮ ಸೇವೆಗಳ ಬಗ್ಗೆ ಜನರಲ್ಲಿ ತಿಳಿವು ಮೂಡಿಸುವುದು ಹಾಗೂ ತೆರಿಗೆ ಪಾವತಿಯಲ್ಲಿ ಸಂವೇದನಾಶೀಲತೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. ಪ್ರಾಮಾಣಿಕ ತೆರಿಗೆದಾರರಿಗೆ ಗೌರವಪೂರ್ಣವಾಗಿ ಸನ್ಮಾನಿಸಿ, ಇತರರಿಗೂ ಮಾದರಿಯಾಗುವಂತೆ ಪ್ರೇರಣೆಯನ್ನೂ ನೀಡಲಾಗುತ್ತಿದೆ.
ನಮ್ಮ ತೆರಿಗೆ ನಮ್ಮ ಹೆಮ್ಮೆ: ಜುಲೈ 24 ಕೇವಲ ಒಂದು ದಿನವಲ್ಲ, ಇದು ನಾವೆಲ್ಲರೂ ಒಟ್ಟಾಗಿ ರಾಷ್ಟ್ರದ ಆರ್ಥಿಕ ಪ್ರಗತಿಯಲ್ಲಿ ಪಾಲುಗೊಳ್ಳುವ ಸಂಕೇತ. ಆದಾಯ ತೆರಿಗೆ ಪಾವತಿ ಮಾಡುವುದು ನೌಕರ, ಉದ್ಯಮಿ ಮತ್ತು ವ್ಯಾಪಾರಸ್ಥರ ದೇಶಭಕ್ತಿಗೆ ಪ್ರತಿಬಿಂಬವಾಗಿದೆ. ಆರ್ಥಿಕ ವರ್ಷ 2024-25 ರಲ್ಲಿ ರಿಲಯನ್ಸ್ ಕಂಪೆನಿಯು ರೂ. 25,707 ಕೋಟಿ ಆದಾಯ ತೆರಿಗೆ ನೀಡುವ ಮೂಲಕ ಅತ್ಯಂತ ಅಧಿಕ ತೆರಿಗೆ ನೀಡಿರುವ ಪಟ್ಟಿಯಲ್ಲಿ ಸೇರಿದೆ. ವಯಕ್ತಿಕ ತೆರಿಗೆದಾರರಲ್ಲಿ ಸಿನಿಮಾ ನಟರಾದ ಅಮಿತಾಭ್ ಬಚ್ಚನ್ ರವರು ರೂ.120 ಕೋಟಿ ತೆರಿಗೆ ಪಾವತಿಸಿ ಅಗ್ರ ಕ್ರಮಾಂಕದಲ್ಲಿದ್ದಾರೆ.
ಪ್ರಸ್ತುತ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಪಾವತಿಯ ಪಾರದರ್ಶಕತೆಯನ್ನು ಗಮನಿಸಬಹುದು. ಇತ್ತೀಚಿನ ದಿನಗಳಲ್ಲಿ ಪಾರದರ್ಶಕ ಮತ್ತು ಸುಲಭ ಪಾವತಿ ವ್ಯವಸ್ಥೆಗಳ ಮೂಲಕ ಸರ್ಕಾರ ಹೆಚ್ಚು ಸರಳತೆ ತರಲು ಪ್ರಯತ್ನಿಸುತ್ತಿದೆ. ಡಿಜಿಟಲ್ ವ್ಯವಸ್ಥೆಗಳ ಮೂಲಕ ಕೆಲವೇ ನಿಮಿಷಗಳಲ್ಲಿ ತೆರಿಗೆ ಪಾವತಿ ಸಾಧ್ಯವಾಗುತ್ತಿದೆ. ತೆರಿಗೆ ಪಾವತಿ ಕಾನೂನು ಪ್ರಕಾರ ಜವಾಬ್ದಾರಿಯಾದರೆ, ನೈತಿಕವಾಗಿ ಅದು ದೇಶದ ಬೆಳವಣಿಗೆಯ ನಾಂದಿಯಾಗಿದೆ. ಸರಿಯಾದ ಸಮಯದಲ್ಲಿ ನಿಖರವಾದ ತೆರಿಗೆ ಪಾವತಿಸಿ ನಮ್ಮ ನೆಲ, ನುಡಿ, ನಾಡಿಗೆ ವಿಧೇಯರಾಗೋಣ. ಈ ಮೂಲಕ ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಕೈಜೋಡಿಸೋಣ. ಏಕೆಂದರೆ, ಪ್ರಾಮಾಣಿಕತೆ ಮತ್ತು ನೈತಿಕತೆಯ ಪಥದಲ್ಲಿ ನಾವು ಸಾಗಿದಾಗಲೇ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ.
ನಾವು ಪಾವತಿಸುವ ತೆರಿಗೆ ಹಣ ಯಾವುದೇ ಅಭಿವೃದ್ದಿ ಯೋಜನೆಗೆ ಸಹಾಯಕವಾಗುತ್ತದೆ ಎಂದರೆ ಅದಕ್ಕಿಂತ ದೊಡ್ಡ ಹೆಮ್ಮೆ ಯಾವುದಿದೆ? ಸಮಾಜದಲ್ಲಿರುವ ಎಲ್ಲ ಮೂಲಸೌಕರ್ಯಗಳಿಗೂ ನಮ್ಮದೇ ಸ್ವಲ್ಪ ಪಾಲಿದೆ. ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು, ಆಸ್ಪತ್ರೆಯಲ್ಲಿ ದುರ್ಬಲರಿಗೆ ಚಿಕಿತ್ಸೆ ಸಿಗುವ, ಕಬ್ಬಿನ ಬೆಲೆಯಲ್ಲಿ ಬೆಳೆಗಾರನ ಮುಗುಳ್ನಗೆ - ಇವೆಲ್ಲವೂ ನಮ್ಮ ತೆರಿಗೆಯ ಭಾಗವಾಗಿದೆ ಎಂದರಿತಾಗ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಹಾಗಾಗಿ ದೇಶದ ಸುಸ್ಥಿರ ಬೆಳವಣಿಗೆಗೆ ಆದಾಯ ತೆರಿಗೆ ನೀಡಿ ಪ್ರಜ್ಞಾವಂತ ಮತ್ತು ಮಾದರಿ ನಾಗರಿಕರಾಗೊಣ ಎಂದು 166 ನೇ ಆದಾಯ ತೆರಿಗೆ ದಿನಾಚರಣೆಯನ್ನು ಸಂಭ್ರಮಿಸೋಣ.
- ಡಾ. ಭಾನುಪ್ರಕಾಶ್ ಬಿ. ಈ
ಪ್ರಾಧ್ಯಾಪಕರು, ಎಸ್‌ಡಿಎಂ ಕಾಲೇಜು, ಉಜಿರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ