ಇಂದು ನನ್ನ ಬಳಿ ಒಬ್ಬಳು ಗರ್ಭಿಣಿ ಪರೀಕ್ಷೆಗೆ ಬಂದಳು. ಐದು ತಿಂಗಳ ಗರ್ಭಿಣಿ, ನನ್ನ ಬಳಿ ಮೊದಲನೇ ಭೇಟಿ, ಕಳೆದ ಎರಡು ಗರ್ಭಾವಸ್ಥೆಯಲ್ಲಿ ಗರ್ಭಪಾತವಾಗಿರುವುದು ನನಗೆ ಗೊತ್ತಾದ ತಕ್ಷಣ ಈ ಕಳೆದ ಐದು ತಿಂಗಳು ಅವಳೇನಾದರೂ ಗರ್ಭಪಾತ ಆಗುವುದನ್ನು ತಡೆಯಲು ಚಿಕಿತ್ಸೆಯಲ್ಲಿ ಇರುವಳೇ ಪರೀಕ್ಷಿಸಲು ಮನಸ್ಸು ಮೊದಲಾಯಿತು, ಹಾಗೆ ಅವಳ ಹಿಂದಿನ ಪರೀಕ್ಷಾ ಚೀಟಿ, ರಿಪೋರ್ಟ್ ಎಲ್ಲಾ ಕಣ್ಣಾಡಿಸಲು ಅಲ್ಲೊಂದು ಆಘಾತ ಕಾದಿತ್ತು.
ಮೇ ತಿಂಗಳ ಸ್ಕ್ಯಾನಿಂಗ್ ನಲ್ಲಿಯೇ ಒಂಬತ್ತು ವಾರಕ್ಕೆ ಮಗುವಿನ ಹೃದಯ ಬಡಿತ ನಿಂತಿತ್ತು. ನಾನು ಇವಳಿಗೆ ಇದು ಗೊತ್ತಿಲ್ಲವೇ ಎಂದು ಅವಳನ್ನು ವಿಚಾರಿಸಲು ಅವಳು ಪ್ರತಿ ತಿಂಗಳು ಬೇರೆ ಬೇರೆ ವೈದ್ಯರ ಬಳಿ ಪರೀಕ್ಷೆ ಸ್ಕ್ಯಾನಿಂಗ್ ಮಾಡಿಸಿರುವ ಚೀಟಿಗಳನ್ನು ಕಣ್ಣ ಮುಂದೆ ಇಟ್ಟಳು. ಎರಡು ಬಾರಿ ಮಗು ಗರ್ಭಪಾತವಾದಾಗಲೂ ಅವಳಿಗೆ ಸ್ವಲ್ಪ ರಕ್ತಸ್ರಾವ ಕಾಣಿಸಿಕೊಂಡಿತ್ತು, ಆದರೆ ಈ ಬಾರಿ ಬರಿ ಸ್ಕ್ಯಾನಿಂಗ್‌ನಲ್ಲಿ ಮಗುವಿಗೆ ಹೃದಯ ಬಡಿತ ಇಲ್ಲ ಎನ್ನುವ ಮಾಹಿತಿ, ಅವಳಿಗೆ ಅವಳ ಮಗು ಚಿಗುರುವ ಹಂತಕ್ಕೆ ಅಂತ್ಯವಾಗಿದೆ ಎಂಬುದನ್ನು ಅರಗಿಸಿಕೊಳ್ಳಲಾಗಿಲ್ಲ. ಸುತ್ತಲ ಎಲ್ಲಾ ಒಳ್ಳೆ ವೈದ್ಯರು ಪ್ರತಿಷ್ಠಿತ ಆಸ್ಪತ್ರೆ ಸುತ್ತಿ ಸ್ಕ್ಯಾನಿಂಗ್ ಮಾಡಿಸಿರುವ ಆಕೆ ಯಾರಾದರೂ ಅವಳ ಮಗು ಬದುಕಿದೆ ಎಂದು ಹೇಳುವರು ಎಂಬ ನಿರೀಕ್ಷೆಯಲ್ಲಿ ಕಾದಿದ್ದಾಳೆ, ಆದರೆ ಎಲ್ಲಾ ವೈದ್ಯರು ಅವಳ ನಿರೀಕ್ಷೆಗೆ ಎದುರಾಗಿ ಉತ್ತರಿಸಲು ಕಂಗಾಲಾಗಿದ್ದಾಳೆ. ಆ ಮರಣ ಹೊಂದಿರುವ ಮಗುವನ್ನು ಗರ್ಭದಿಂದ ತೆಗೆಯಲು ಆಸ್ಪತ್ರೆಗೆ ದಾಖಲಾಗಬೇಕು ಎಂದರೆ ಎಲ್ಲಾ ವೈದ್ಯರ ಸಲಹೆ ಧಿಕ್ಕರಿಸಿ ಮಗುವಿನ ಉಳಿವಿನ ನಿರೀಕ್ಷೆಯಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆ ಸುತ್ತಿದ್ದಾಳೆ. ಎಲ್ಲಾ ವೈದ್ಯರು ವೈದ್ಯರ ಸಲಹೆ ಮೀರಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದಾಳೆ ಎಂದು ಬರೆಸಿಕೊಂಡು ಮನೆಗೆ ಕಳಿಸಿದ್ದಾರೆ.
ಈ ನಡುವೆ ಅವಳ ತಾಯಿಯ ಅನಾರೋಗ್ಯವು ಅವಳನ್ನು ಎಲ್ಲೂ ನಿಲ್ಲಲು ಅನುವು ಮಾಡಿಲ್ಲ. ಎಲ್ಲಾ ಕಡೆ ಸುತ್ತಿ ಕೊನೆಗೆ ನನ್ನ ಎದುರು ಬಂದು ಕೂತ ಅವಳ ಕಣ್ಣಲ್ಲಿ ತಾಯ್ತನದ ತುಡಿತ ಎದ್ದು ಕಾಣುತ್ತಿತ್ತು. ಆದರೆ ವಾಸ್ತವವ ನಾ ಒಪ್ಪಲೇಬೇಕಿತ್ತು.
ನಾನು ಅದನ್ನು ಹುಚ್ಚಾಟ ಎನ್ನಲೂ ಆಗದೆ ಮೂರು ತಿಂಗಳಿನಿಂದ ಸತ್ತ ಮಗು ಒಳಗೇ ಉಳಿದು ಅವಳಿಗೆ ಆಗಿರಬಹುದಾದ ಸಮಸ್ಯೆಗಳ ಎಣಿಸಲಾಗದೆ ಗಾಬರಿಯಾಗಿ ಕುಳಿತೆ. ಮತ್ತೆ ಸಮಾಧಾನವಾಗಿ ಅವಳಿಗೆ ವಾಸ್ತವ ತಿಳಿಸಿದೆ. ಒಳಗಿರುವ ಮಗುವನ್ನು ತೆಗೆಯಲೇಬೇಕಾದ ಅವಶ್ಯಕತೆ ಅರ್ಥಮಾಡಿಸಿದೆ. ಅದರಿಂದ ಅವಳಿಗೆ ಆಗಬಹುದಾದ ಸೋಂಕು, ರಕ್ತಸ್ರಾವ, ಎಲ್ಲವನ್ನೂ ಮನವರಿಕೆ ಮಾಡಿದೆ. ಆದರೂ ಅವಳು ಕೊನೆಗೊಮ್ಮೆ ಸ್ಕ್ಯಾನಿಂಗ್ ಮಾಡಿಸಿ, ಈಗಲೂ ಅದೇ ರಿಪೋರ್ಟ್ ಬಂದರೆ ನೋಡುವ ಎಂದಾಗ ನನಗೆ ಕೋಪ & ಕರುಣೆ ಒಟ್ಟಿಗೆ ಮೂಡಿ ಬಂತು. ಅವಳ ಹಠಕ್ಕೆ ಮಣಿದು ಸ್ಕ್ಯಾನಿಂಗ್ ಮಾಡಿಸಿದೆ, ಈ ಬಾರಿ ಅವಳು ಸತ್ಯ ಅರ್ಥ ಮಾಡಿಕೊಂಡಳು, ಎಲ್ಲಾ ಪರೀಕ್ಷೆ ಮಾಡಿ ಆ ಸತ್ತ ಮಗುವನ್ನು ಹೊರಗೆ ತೆಗೆದೆ. ಸದ್ಯಕ್ಕೆ ಅದರಿಂದ ಅವಳಿಗೆ ಏನೂ ತೊಂದರೆಯಾಗಿಲ್ಲ ಎನ್ನುವ ಸಮಾಧಾನ.
ಆದರೂ ಮಗು ಬದುಕಬಹುದು, ಏನೋ ಚಮತ್ಕಾರವಾಗಬಹುದೆಂದು, ಮೂರು ತಿಂಗಳಿಂದ ಕಾಯುತ್ತಿರುವ ಅವಳ ತಾಳ್ಮೆ ಹೆಣ್ಣಿಗೆ ತಾಯ್ತನದ ಹಿಂಗಿತ ಹಾಗೂ ತುಡಿತದ ಬಗ್ಗೆ ಮತೊಮ್ಮೆ ನನ್ನ ಕಣ್ಣು ತೆರಸಿತು. "ಹೆಣ್ಣೆಂದರೆ ಹಾಗೇ ಮಗುವಿಗಾಗಿ ತುಡಿಯುತಾ ಮಡಿಯಲೂ ಹೇಸದ ಮಮತೆಯ ಕಡಲು".
- ಡಾ. ಶಾಲಿನಿ ವಿ.ಎಲ್
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ
ಸಾರ್ವಜನಿಕ ಆಸ್ಪತ್ರೆ, ಸುಳ್ಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ