Student Article: ಬಸ್ಸು ಪ್ರಯಾಣ ಎನ್ನೋದೇ ಒಂದು ತಪಸ್ಸು

Upayuktha
0

ಸಾಂದರ್ಭಿಕ ಚಿತ್ರ



ಗಂಟೆ ಏಳು ಆಗುತ್ತಿದ್ದಂತೆ ಮನೆಯ ತುಂಬಾ ಅವಸರದ ವಾತಾವರಣ ಒಂದು ತುಂಬಿಬಿಡುತ್ತದೆ. ಒಂದು ಕಡೆಯಿಂದ ಕಾವಲಿಯಲ್ಲಿ ಕಾದ ದೋಸೆ ಎದ್ದು ಒಂದು ತಟ್ಟೆಗೆ ಬಿದ್ದಿರುತ್ತದೆಯಷ್ಟೇ, ಅಷ್ಟರಲ್ಲಿ "ಅಮ್ಮ, ತಿಂಡಿ ಇನ್ನೂ ಆಗಿಲ್ಲವಾ? ತಡವಾಯಿತು" ಎಂದು ಬರುವ ಒಂದು ಸ್ವರ ನಿಲ್ಲುವಷ್ಟರಲ್ಲಿ ಮತ್ತೊಂದು ಧ್ವನಿ "ಅಯ್ಯೋ, ಅಮ್ಮ ನಿಂಗೆ ಎಷ್ಟು ಬಾರಿ ಹೇಳುವುದು ತಿಂಡಿ ಬೇಗ ಮಾಡು ಎಂದು, ಬಸ್ಸು ಸಿಗೋದಿಲ್ಲ, ತಡವಾಗುತ್ತೆ" ಎಂದು ರೇಗುತ್ತಾಳೆ. "ಸರಿ ಇವತ್ತು ನನಗೆ ಏನು ಬೇಡ ನಾಳೆಯಿಂದಾದರೂ ಬೇಗ ತಿಂಡಿ ಮಾಡು" ಎಂದು ಹೇಳುತ್ತಾ ಟಿಫಿನ್ ಬಾಕ್ಸ್‌ ಅನ್ನು ಬ್ಯಾಗಲ್ಲಿ ಹಾಕಿಕೊಂಡು ಒಬ್ಬಳು ಹೋಗಿಯೇ ಬಿಡುತ್ತಾಳೆ.


ಪಾಪ ದಿನಪೂರ್ತಿ ದುಡಿದು ರಾತ್ರಿ ಲೇಟಾಗಿ ಮಲಗಿದ ತಾಯಿ ಮರುದಿನ ಬೆಳಗ್ಗೆ ಎದ್ದೇಳುವಾಗ ಕೊಂಚ ತಡವಾಗುವುದರಿಂದ ತಿಂಡಿ ಮಾಡುವುದು ತಡವಾಗುತ್ತದೆ. ಆದರೆ ಆ ತಾಯಿ ತನ್ನನ್ನು ತಾನೇ ದೂಷಿಸಿಕೊಂಡು ತನ್ನ ಮಕ್ಕಳು ಅದೇಗೆ ಹಸಿವನ್ನು  ತಡೆದುಕೊಳ್ಳುತ್ತಾರೋ? ಎಂದು ದಿನಪೂರ್ತಿ ಮರುಗುತ್ತಾಳೆ. ಆದರೆ ಸೂಕ್ಷ್ಮವಾಗಿ ನೋಡಿದರೆ ಇದರಲ್ಲಿ ಆ ಮಕ್ಕಳ ತಪ್ಪು ಏನು ಇಲ್ಲ. ಅವಕ್ಕೆ ತಾಯಿಯ ಕಷ್ಟವನ್ನು ಅರ್ಥ ಮಾಡಿಕೊಳ್ಳುವಷ್ಟು ಸಮಯವೂ ಇರುವುದಿಲ್ಲ. ಅಷ್ಟಕ್ಕೂ ಇಷ್ಟಕ್ಕೆಲ್ಲ ಒಂದೇ ಒಂದು ಕಾರಣವೆಂದರೆ ಮತ್ತು ಇದೆಲ್ಲಾ ಒಂದೇ ಒಂದು ಉದ್ದೇಶದಿಂದ ನಡೆಯುತ್ತದೆ ಎಂದರೆ ಅದು ಬಸ್ಸಿನಿಂದ. ಹೌದು, ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ನಡೆಯುವ ಪ್ರಸಂಗವಿದು.


ಬೆಳಿಗ್ಗೆ ಎದ್ದು ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಸ್ಸಿಗಾಗಿ ಓಡುವ ಸಮಯದಲ್ಲಿ ನಡೆಯುವ ಒಂದು ಸರ್ವೇಸಾಮಾನ್ಯ ಘಟನೆ ಇದಾಗಿದೆ. ಇದು ಸಾಮಾನ್ಯವಾಗಿ ದಿನನಿತ್ಯ ನಡೆಯುತ್ತಿರುತ್ತದೆ ಅದರಲ್ಲೂ ಶಾಲಾ- ಕಾಲೇಜುಗಳಿಗೆ ಹೋಗುವ ಮಕ್ಕಳಿರುವ ಮನೆಯಲ್ಲಿ, ಆಫೀಸು ಕಚೇರಿ ಗಳಿಗೆ ಕೆಲಸಕ್ಕಾಗಿ ಹೋಗುವವರು ಇರುವ ಮನೆಯಲ್ಲಿ ಇರುವ ಸಾಮಾನ್ಯ ಸಂಗತಿ ಇದು. ಇದನ್ನು ಬೆಳಗ್ಗಿನ ಯುದ್ಧ ಎಂದರು ತಪ್ಪಾಗಲಾರದು. ಇನ್ನೂ ಮಳೆಗಾಲವಾಗಿದ್ದರೆ ಅದೊಂದು ಪಜಿತಿ ಆಗಿರುತ್ತದೆ. ಇನ್ನು ಮನೆಯಲ್ಲಿ ಇಷ್ಟೆಲ್ಲ ಆಗಿ ಅದೇ ಕೋಪದಲ್ಲಿ, ಕೈಯಲ್ಲಿರುವ ವಾಚ್ ನೋಡಿಕೊಂಡು ಎರಡು ಕಿಲೋಮೀಟರ್ ನಡೆದು ಬಸ್ ಸ್ಟ್ಯಾಂಡಿಗೆ ಹೋಗುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ. ಇನ್ನೂ, ಇಷ್ಟೆಲ್ಲಾ ಆಗಿ ಆ ಪುಣ್ಯಕ್ಕಾದರೂ ಬಸ್ಸು ಸಿಕ್ಕರೆ ಸರಿ, ಆದರೆ ನಾವು ತಲುಪುವಷ್ಟರಲ್ಲಿ ಜಸ್ಟ್ ಮಿಸ್ ಆದರೆ ಆಗ ಆಗುವ ನೋವು- ಬೇಜಾರು ಅಷ್ಟಿಷ್ಟಲ್ಲ.



ಹೀಗೆ ಮಿಸ್ ಆದ ಬಸ್ ನಿಂದಾಗಿ ಇನ್ನು ಅರ್ಧ- ಮುಕ್ಕಾಲು ಗಂಟೆ ಬಸ್ ಸ್ಟ್ಯಾಂಡ್ನಲ್ಲಿ ಕಾಯುವ ನಾಯಿ ಪಾಡು ಬೇಡವೇ ಬೇಡ. ಕಾಯುವ ಕಷ್ಟ ಕಾದವನಿಗೆ ಗೊತ್ತು. ಅದರಲ್ಲೂ, ಸರಿಯಾದ ಬಸ್ ಸ್ಟ್ಯಾಂಡ್ ಇದ್ದರೆ ಏನೋ ಪರವಾಗಿಲ್ಲ ಆದರೆ ಬಸ್ ಸ್ಟ್ಯಾಂಡಿಗೂ ಗತಿ ಇಲ್ಲದ ಸ್ಟಾಪ್ ನಲ್ಲಿ ನಿಂತು ಕಾಲು ನೋಯಿಸಿಕೊಳ್ಳುವುದು ನಮ್ಮ ಹಿಂದಿನ ಜನ್ಮದ ಪಾಪವಿರಬೇಕು ಎಂದು ಅನ್ನಿಸುವುದಂತು ನಿಜ. ಕಾದು -ಕಾದು ಕಾಲು ನೋವಾದ ಮೇಲೆ ಬಂದ ಬಸ್ಸಿಗೆ ಹತ್ತೋದು ಇನ್ನೊಂದು ರೀತಿಯ ಹೋರಾಟ. ಹತ್ತುವಷ್ಟರಲ್ಲಿ ಸಾಂಬಾರಿಗೆ ಹಿಂಡಿದ ನಿಂಬೆಹಣ್ಣಿನಂತೆ ಆಗಿರುತ್ತೀವಿ.


ಇನ್ನು ಇದರ ಮಧ್ಯದಲ್ಲಿ ಒದ್ದೆಯಾದ ಛತ್ರಿ ಒಂದೆಡೆ ಬಸ್ಸಿನಲ್ಲಿ ಜಾಗ ಬೇಡುತ್ತದೆ. ಇನ್ನು ಬೆನ್ನಿಗೆ ಬಿದ್ದ ಬ್ಯಾಗನ್ನು ಯಾರಲ್ಲಾದರೂ ನೀಡೋಣವೆಂದರೆ ಮುಖ ತಿರುಗಿಸುವವರು ಹತ್ತಾರು ಮಂದಿ. ಒಂದೆಡೆಯಿಂದ ಕಂಡಕ್ಟರ್ ಟಿಕೆಟ್ ಕೊಡಲಾಗದೆ ಪರದಾಡಿಕೊಂಡು ಬ್ಯಾಗನ್ನು ಯಾರಾಲ್ಲಾದರೂ ಕೊಡಿ ಎಂದು ಬಯ್ಯುವ ಬೈಗುಳಗಳು, ಎಲ್ಲವು ಒಟ್ಟಿಗೆ ಸೇರಿ ಒಂದು ಬಾರಿ ನಮ್ಮ ತಲೆಯನ್ನು ಹಿಂಡಿಬಿಡುತ್ತವೆ. ಇಷ್ಟೆಲ್ಲಾ ಆಗಿ ಏನೋ ಇಳಿಯಬೇಕಾದ ಸ್ಟಾಪ್ ಬಂತು ಎನ್ನುವಷ್ಟರಲ್ಲಿ ಇಳಿಯುವುದು ಹೇಗೆ ಎಂಬ ಪ್ರಶ್ನೆ ತಲೆ ನೋವಿಗೆ ಕಾರಣವಾಗುತ್ತದೆ. ಅದೆಷ್ಟೋ ಬಾರಿ ಇಳಿಯುವಾಗ ಚಪ್ಪಲಿ ಕಡಿದು ಹೋದದ್ದು, ಕೈಯಲ್ಲಿದ್ದ ವಾಚು ಬಿದ್ದು ಹೋಗಿದ್ದು ಇದೆ. ಹೆಕ್ಕಿಕೊಳ್ಳುವಷ್ಟು ಸಮಯವಾಗಲಿ, ಪರಿಜ್ಞಾನವಾಗಲಿ ಯಾರಿಗೂ ಇರುವುದಿಲ್ಲ. ಹಾಗೆ ಹೆಕ್ಕಿಕೊಂಡು ಕೂತರು ನಾವು ನಮ್ಮ ಸ್ಟಾಪ್ ನಲ್ಲಿ ಇಳಿಯಲು ಸಾಧ್ಯವಿಲ್ಲ.


ಕೆಲವರಂತೂ ಇಳಿಯಲು ಜಾಗವನ್ನು ಬಿಡುವುದಿಲ್ಲ. ಏನೋ, ತಾವು ಮಾತ್ರ ನಿಂತರೆ ಸಾಕೆಂಬಂತೆ ಇತತರ ಬಗ್ಗೆ ಸ್ವಲ್ಪವೂ ಯೋಚಿಸದೆ ಕಲ್ಲು ಬಂಡೆಯಂತೆ ನಿಂತುಬಿಡುತ್ತಾರೆ. ಅವರನ್ನು ದೂಡಿಕೊಂಡು ಇಳಿಯುವುದು ಒಂದು ಬಗೆಯ ಸ್ಕಿಲ್ ಎಂದೆ ಪರಿಗಣಿಸಬಹುದೇನೋ. ಈ ಸ್ಕಿಲ್ ಇದ್ದವರು ಮಾತ್ರ ಸೇಫ್ ಆಗಿ ತಮ್ಮ ಸ್ಟಾಪ್ ನಲ್ಲಿ ತಾವು ಇಳಿಯುತ್ತಾರೆ. ಇಲ್ಲವಾದಲ್ಲಿ ಕಂಡಕ್ಟರ್ ನ, ಡ್ರೈವರ್ ನ ಬೈಗುಳ ದೊಂದಿಗೆ ಮುಂದಿನ ಸ್ಟಾಪೇ ಗತಿಯಾಗಿರುತ್ತದೆ. ಒಟ್ಟಿನಲ್ಲಿ ಅದೇನೇ ಆಗಲಿ ಮಧ್ಯಮ ವರ್ಗದವರ ಪಾಲಿಗೆ ಇಂತಹ ಸಣ್ಣಪುಟ್ಟ ಸವಾರಿಗಳು ಕೂಡ ಒಂದೊಳ್ಳೆ ತಪಸ್ಸಿನಂತೆ ಇರುತ್ತದೆ. ಅದರಲ್ಲೂ ಬಸ್ಸು ಪ್ರಯಾಣವೆಂದರೆ ಒಂದು ದೊಡ್ಡ ತಪಸ್ಸು ಎಂದೇ ಕರೆಯಬೇಕೆಂದು ಅನ್ನಿಸುತ್ತದೆ. ಒಟ್ಟಿನಲ್ಲಿ ಇದೊಂದು ಬೇರೆ ಬೇರೆ ವರ್ಗದ, ಬೇರೆ ಬೇರೆ ಮನಸ್ಥಿತಿಯ, ವಿಭಿನ್ನ ವ್ಯಕ್ತಿಗಳು, ವಿಭಿನ್ನ ಉದ್ದೇಶಗಳಿಂದ, ವಿಭಿನ್ನ ಗುರಿಗಳತ್ತ ಒಂದೇ ಮಾರ್ಗದಲ್ಲಿ ಒಟ್ಟಿಗೆ ಸಾಗುವ ವಿಭಿನ್ನ ಅನುಭವವಾಗಿದೆ. ಆದರೂ ನಮ್ಮ ಉದ್ದೇಶ, ಗುರಿ ಎಷ್ಟೇ ಭಿನ್ನವಾಗಿದ್ದರೂ ನಮ್ಮ ಪಕ್ಕದಲ್ಲಿರುವ ಸಹಚರರೊಂದಿಗೆ ಉತ್ತಮ ಭಾಂಧವ್ಯ ಕಾಯ್ದುಕೊಳ್ಳುವುದು, ಅವರಿಗೆ ಸಹಕರಿಸುವುದು ಒಂದು ಉತ್ತಮ ಮನಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ.


- ಪ್ರಿಯಾ ಶ್ರೀವಿಧಿ 

ದ್ವಿತೀಯ ಪತ್ರಿಕೋದ್ಯಮ ವಿಭಾಗ 

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top