“ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ
ಕೃಪಾಕರೀ ಶಂಕರೀ |
ಶ್ರಿತಜನಪಾಲಿನೀ ಮಹಾಬಲಾದ್ರಿವಾಸಿನೀ
ಮಹಿಷಾಸುರಮರ್ದಿನೀ”
ಎಂದು ಮೈಸೂರು ವಾಸುದೇವಾಚಾರ್ಯರು ಶ್ರೀ ಚಾಮುಂಡಿ ದೇವಿಯನ್ನು ಸ್ತುತಿಸಿದ್ದಾರೆ. ಮೈಸೂರಿನ ಅಧಿದೇವತೆಯಾಗಿ ಮತ್ತು ಕರ್ನಾಟಕದ ನಾಡದೇವಿಯಾಗಿರುವ ಚಾಮುಂಡೇಶ್ವರಿ ದೇವಿಯು ಸಪ್ತ ಮಾತೃಕೆಯರಲ್ಲಿ ಏಳನೇಯವಳು. ದುಷ್ಟ ಮರ್ದನ ಮತ್ತು ಶಿಷ್ಟ ಪಾಲನೆಗಾಗಿಯೇ ಅವಳ ಅವತಾರ. ಮಾರ್ಕಂಡೇಯ ಪುರಾಣ, ಸ್ಕಂದ ಪುರಾಣ ಮತ್ತು ದೇವಿ ಮಹಾತ್ಮೆ ಇತ್ಯಾದಿ ಗ್ರಂಥಗಳಲ್ಲಿ ಚಾಮುಂಡಿಯ ಲೀಲೆಗಳು ಉಧೃತವಾಗಿವೆ.
ಶಕ್ತಿಯ ಉಪಾಸನೆ ಸನಾತನ ಧರ್ಮದಲ್ಲಿ ಎಂದೆಂದಿಗೂ ಪ್ರಸ್ತುತ. ಹರಿ ಹರ ಬ್ರಹ್ಮಾದಿಗಳಿಂದಲೂ ಶಕ್ತಿ ಸ್ವರೂಪಿಣಿಯು ಸರ್ವದಾ ವಂದ್ಯಳು. ಚಂಡ ಮುಂಡರನ್ನು ಸಂಹರಿಸಿ ಚಾಮುಂಡಿಯೆನಿಸಿಕೊಂಡವಳು ಅವಳು. ಮಾತೆಯು ತನ್ನನ್ನು ಆರಾಧಿಸುವ ಭಕುತರ ಮಮತೆಯ ಮೂರ್ತಿಯಾದರೂ ದುರುಳರ ನಿಗ್ರಹದಲ್ಲಿ ಭಯಂಕರೆ. ಪ್ರಸನ್ನ ವದನದ ಪುಷ್ಪಾಲಂಕಾರೆಯಾದ ದೇವಿಯು ದುಷ್ಟ ಶಿಕ್ಷಣದಲ್ಲಿ ಮಾತ್ರ, ಚಾಚಿದ ನಾಲಗೆಯ, ಕೆಂಗಣ್ಣಿನ, ರುದ್ರಮುಖಿ, ತ್ರಿಶೂಲಪಾಣಿ, ರುಂಡಮಾಲಾಧಾರಿಣಿ.
ದೇವಿ ಭಾಗವತದ ಮೇರೆಗೆ ಮಹಿಷನೆಂಬ ಅಸುರನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಾಗ, ಬ್ರಹ್ಮನು ಪ್ರತ್ಯಕ್ಷನಾಗುತ್ತಾನೆ.ಕೇವಲ ಸ್ತ್ರೀಯಿಂದ ಮಾತ್ರ ಮಹಿಷನಿಗೆ ಮರಣ ಎಂದು ವರ ನೀಡುತ್ತಾನೆ. ಈ ವರದಿಂದ ಉನ್ಮತ್ತನಾದ ಮಹಿಷನು ತಾನು ಅಜೇಯನೆಂದು ಭಾವಿಸಿ, ದೇವತೆಗಳಿಗೆ ಉಪಟಳವನ್ನು ಕೊಡಲಾರಂಭಿಸುತ್ತಾನೆ. ಆಗ ದೇವತೆಗಳು ಶ್ರೀಮನ್ನಾರಾಯಣನಿಗೆ ಮೊರೆ ಹೋಗುತ್ತಾರೆ. ಆ ಸಂದರ್ಭದಲ್ಲಿ ದೇವತೆಗಳು ತಮ್ಮಲ್ಲಿಯ ಒಂದೊಂದು ಅಂಶವನ್ನು ಆದಿಶಕ್ತಿಗೆ ಧಾರೆಯೆರೆಯುತ್ತಾರೆ. ದಿವ್ಯವಾದ ಆಯುಧಗಳು ಆದಿಶಕ್ತಿಯ ವಶವಾಗುತ್ತವೆ. ಆಗ ದೇವಿಯು ಸಿಂಹವಾಹಿನಿಯಾಗಿ ರೌದ್ರಾವತಾರದಿಂದ ಮಹಿಷನೊಡನೆ ಸೆಣಸುತ್ತಾಳೆ. ಮಹಿಷನ ಅನೇಕ ಯುದ್ಧತಂತ್ರಗಳನ್ನು ಮಣಿಸಿ, ಕೊನೆಗೆ ಅವನ ಸಂಹಾರ ಮಾಡುತ್ತಾಳೆ. ನಂತರದಲ್ಲಿ ಚಾಮುಂಡಿಯು ಮಹಿಷಾಸುರ ಮರ್ದಿನಿಯೆಂದು ಪ್ರಸಿದ್ಧಳಾಗುತ್ತಾಳೆ. ಈ ಯುದ್ಧವು ನಡೆದ ದಿನಗಳನ್ನು ನವರಾತ್ರಿ ಮತ್ತು ವಿಜಯದಶಮಿ ಎಂದು ಆಚರಿಸಲಾಗುತ್ತದೆ.
ಮಹಿಷನ ವಧೆಯ ನಂತರ ಚಾಮುಂಡೇಶ್ವರಿಯು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ವಿರಮಿಸುತ್ತಾಳೆ. ನಂಜುಂಡೇಶ್ವರನು ಅವಳಲ್ಲಿ ಮೋಹಗೊಳ್ಳುತ್ತಾನೆ. ಇದನ್ನರಿತ ಪಾರ್ವತಿಯು ಭರ್ತ್ಸನೆ ಮಾಡಿದಾಗ ಚಾಮುಂಡೇಶ್ವರಿಯು ಬೆಟ್ಟದ ಮೇಲೆ ವಾಸವಾಗುತ್ತಾಳೆ. ಅದುವರೆಗೆ ಗಂಗ ರಾಜವಂಶದ ನಿರ್ಮಾಣವಾಗಿದ್ದ ಪುರಾತನ ಮಾರ್ಬಲ ಅಥವಾ ಮಹಾಬಲನ ದೇವಾಲಯದಿಂದ ಮಹಾಬಲಾದ್ರಿ ಎಂದು ಖ್ಯಾತವಾಗಿದ್ದ ಬೆಟ್ಟದ ಮೇಲೆ ಚಾಮುಂಡಿಯು ನೆಲೆಸಿದಾಗ ಆ ಬೆಟ್ಟವು ಚಾಮುಂಡಿ ಬೆಟ್ಟ ಎಂದು ಹೆಸರುಗೊಳ್ಳುತ್ತದೆ.
“ಅಯಿ ಗಿರಿ ನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದನುತೇ
ಗಿರಿವರ ವಿಂಧ್ಯ ಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ
ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ” ಎಂಬುದು ಚಾಮುಂಡೇಶ್ವರಿ ದೇವಿಯ ಬಹು ಪ್ರಸಿದ್ಧ ಸ್ತೋತ್ರ.
ಚಾಮುಂಡೇಶ್ವರಿ ದೇವಿಯನ್ನು ಹೊಯ್ಸಳರು, ವಿಜಯನಗರದ ಅರಸರು ಪೂಜಿಸುತ್ತಿದ್ದರೆಂಬ ಐತಿಹ್ಯಗಳಿವೆ. ಮೈಸೂರಿನ ಒಡೆಯರಾದ ಯದುರಾಜರಿಗಂತೂ ಚಾಮುಂಡೇಶ್ವರಿಯೇ ಕುಲದೇವತೆ. ಮೈಸೂರಿಗೆ ಅನತಿ ದೂರದ ಬೆಟ್ಟದ ಮೇಲಿನ ದೇವಿಯ ಪುಟ್ಟ ದೇಗುಲವನ್ನು ಮೈಸೂರಿನ ರಾಜವಂಶಸ್ಥರು ಕಾಲಾನುಕಾಲಕ್ಕೆ ಜೀರ್ಣೋದ್ಧಾರ ಮಾಡಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಸುಮಾರು 1000 ಮೆಟ್ಟಿಲುಗಳನ್ನು ಒಂದನೇ ದೊಡ್ಡ ದೇವರಾಜ ಒಡೆಯರ್ ನಿರ್ಮಿಸಿದ್ದಾರೆ.ಮುಮ್ಮಡಿ ಕೃಷ್ಣರಾಜ ಒಡೆಯರ್ ದ್ವಾರಗೋಪುರವನ್ನು ಕಟ್ಟಿಸಿದ್ದಾರೆ. ಕಾಳಿ, ದುರ್ಗಾ ಸ್ವರೂಪಿಣಿ ದೇವಿಯ ಸುಂದರ ವಿಗ್ರಹವು ಅಭಿಷೇಕ, ಅಲಂಕಾರ, ನೈವೇದ್ಯ ಮುಂತಾಗಿ ನಿತ್ಯ ನಿರಂತರವಾಗಿ ಪೂಜೆಗೊಳ್ಳುತ್ತಿದೆ. ಚಾಮುಂಡಿಯ ವರದಿಂದ ಮೈಸೂರಿನ ಮಹಾರಾಜರು ಸಂತಾನ ಭಾಗ್ಯವನ್ನು ಪಡೆದರು ಎಂಬುದು ಪ್ರತೀತಿ. ನಂದಿಯ ಮತ್ತು ಮಹಿಷಾಸುರನ ಪ್ರತಿಮೆಗಳನ್ನು ಇಲ್ಲಿ ಕಾಣಬಹುದಾಗಿದೆ.
“ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು
ತಾಯಿ ಹೃದಯದಿಂದ ತುಂಬು ಮಮತೆಯಿಂದ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು.”
ಎಂಬ ಸುಪ್ರಸಿದ್ಧ ಗೀತೆಯಿಂದ ವಂದನೀಯಳಾಕೆ. ಆ ಮಹಾ ತಾಯಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವವನ್ನು ಆಷಾಢ ಮಾಸದ ಕೃಷ್ಣ ಸಪ್ತಮಿ ಅಥವಾ ಆಷಾಢ ಮಾಸದಲ್ಲಿಯ ರೇವತೀ ನಕ್ಷತ್ರವಿರುವ ದಿನದಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಬನ್ನಿ, ಮಾತೆಯ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾಗೋಣ.
- ಶ್ರೀಮತಿ ಜ್ಯೋತ್ಸ್ನಾ ರಾಜೇಂದ್ರ ಹೇರೂರು
ಭಾರತೀಯ ಜೀವವಿಮಾ ನಿಗಮ
ರಾಯಚೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ