ಶಯನೈಕಾದಶೀ- ಪ್ರಥಮೈಕಾದಶೀ- ಆಷಾಢ ಏಕಾದಶಿ

Upayuktha
0


ನಾಳೆ ಅಂದರೆ ದಿನಾಂಕ 06-07-2025 ನೇ ಆದಿತ್ಯವಾರದಂದು “ಶಯನೈಕಾದಶೀ” ಯಾಗಿದೆ. ಇದನ್ನು “ಪ್ರಥಮೈಕಾದಶೀ” ಎಂತಲೂ ಕರೆಯುತ್ತಾರೆ. ಈ ದಿನದಂದು ಅಂದರೆ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಮಹಾವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಮಲಗಿ ಯೋಗನಿದ್ರೆಗೆ ತೊಡಗುತ್ತಾನೆ. ಸಂಸ್ಕೃತದಲ್ಲಿ ಮಲಗುವುದಕ್ಕೆ ‘ಶಯನಿಸುವುದು’ ಎನ್ನುತ್ತಾರೆ. ಆದ್ದರಿಂದ ಈ ಏಕಾದಶಿಯನ್ನು ‘ಶಯನೀ ಏಕಾದಶೀ’ ಎಂದು ಕರೆಯುತ್ತಾರೆ. ಇದು ಆಷಾಢ ಮಾಸದ ಪ್ರಥಮ ಏಕಾದಶಿಯಾಗಿರುವುದರಿಂದ ಇದನ್ನು ‘ಪ್ರಥಮ ಏಕಾದಶೀ’ ಎನ್ನಲಾಗಿದೆ. 


ಶಯನೈಕಾದಶಿಯ ದಿನದಂದು ವಿಷ್ಣುಭಕ್ತರು ಸಕಲ ಲೋಕ ಪರಿಪಾಲಕನಾದ ಶ್ರೀ ಮಹಾವಿಷ್ಣುವಿನ ‘ಶಯನೋತ್ಸವ’ವನ್ನು ಆಚರಿಸುತ್ತಾರೆ. ಸಂನ್ಯಾಸಿಗಳು ಚಾತುರ್ಮಾಸ್ಯ ವ್ರತದ ಸಂಕಲ್ಪ ಮಾಡುತ್ತಾರೆ. ಇದೇ ದಿನ ವೈಷ್ಣವರೆಲ್ಲರೂ ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುತ್ತಾರೆ.


ಶಯನೀ ಏಕಾದಶಿಯಂದು ಮಲಗಿದ ಮಹಾವಿಷ್ಣುವು ನಾಲ್ಕು ತಿಂಗಳ ನಿದ್ದೆಯ ನಂತರ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಎದ್ದೇಳುತ್ತಾನೆ. ಸಂಸ್ಕೃತದಲ್ಲಿ ಎದ್ದೇಳುವುದಕ್ಕೆ ‘ಉತ್ಥಾನ’ ಎನ್ನುತ್ತಾರೆ. ಹೀಗಾಗಿ ಆ ದಿನವನ್ನು ‘ಉತ್ಥಾನದ್ವಾದಶೀ’ ಎಂದು ಕರೆಯುತ್ತಾರೆ. ಕ್ಷೀರಾಬ್ಧಿಯಲ್ಲಿ ಮಲಗಿದ್ದ ಭಗವಂತನು ಎದ್ದೇಳುವ ಈ ದಿನವನ್ನೇ ನಮ್ಮಲ್ಲಿ ಕೆಲವರು “ಕ್ಷೀರಾಬ್ಧಿ” ಎಂದು ಕರೆಯುತ್ತಾರೆ. ಹೀಗೆ ಮಹಾವಿಷ್ಣುವು ನಿದ್ದೆಯಿಂದ ಎದ್ದೇಳುವ ದಿನವೇ ನಮ್ಮ ತುಳಸೀ ಪೂಜೆಯ ದಿನವಾಗಿದೆ. ಅಂದರೆ ತುಳಸಿಯೊಡನೆ ವಿಷ್ಣುವಿನ ವಿವಾಹ ನಡೆಸುವ ತುಳಸೀಕಲ್ಯಾಣದ ದಿನವಾಗಿದೆ. 


ಪತಿಯು ಎದ್ದೇಳುವ ಮುನ್ನವೇ ಪತ್ನಿಯು ಎದ್ದೇಳುವುದು ಸ್ವಾಭಾವಿಕ ಅಲ್ಲವೇ ? ಅಂತೆಯೇ ಮಹಾವಿಷ್ಣುವಿನ ಪತ್ನಿಯಾದ ಮಹಾಲಕ್ಷ್ಮಿಯು ಉತ್ಥಾನದ್ವಾದಶಿಗಿಂತ ಪೂರ್ವದಲ್ಲಿ ಬರುವ ಅಮಾವಾಸ್ಯೆ ಅಂದರೆ ದೀಪಾವಳಿಯ ದಿನದಂದೇ ಎದ್ದೇಳುತ್ತಾಳೆ ಎಂಬುದು ನಂಬಿಕೆ. ಹೀಗಾಗಿ ಅದೇ ದಿನದಂದು ಲಕ್ಷ್ಮಿಗೆ ಪೂಜೆ ಮಾಡುತ್ತೇವೆ. ಅದೇ ನಮ್ಮ ದೀಪಾವಳಿಯ ದಿನ ಅಥವಾ ಧನಲಕ್ಷ್ಮೀ ಪೂಜೆಯ ದಿನ. 


ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ದಶಮಿಯವರೆಗಿನ ಈ ನಾಲ್ಕು ತಿಂಗಳ ಅವಧಿಯು ‘ಚಾತುರ್ಮಾಸ್ಯ’ ಅಂತಲೇ ಪ್ರಸಿದ್ಧಿಯಾಗಿದೆ. ಈ ಅವಧಿಯಲ್ಲಿ ಸಾಂಪ್ರದಾಯಿಕ ಮಠಗಳಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಇರುತ್ತದೆ. ಶಯನೀ ಏಕಾದಶಿಯು ಚಾತುರ್ಮಾಸ್ಯ ವ್ರತದ ಆರಂಭದ ದಿನವಾದರೆ ಉತ್ಥಾನದ್ವಾದಶಿಯು ಚಾತುರ್ಮಾಸ್ಯದ ಕೊನೆಯ ಮಂಗಲಾಚರಣೆಯ ದಿನವಾಗಿರುತ್ತದೆ. ಈ ಅವಧಿಯಲ್ಲಿ ಸಂನ್ಯಾಸ ಪೀಠಾಲಂಕೃತ ಯತಿಗಳು ಯಾವುದಾದರೂ ಒಂದೇ ಸ್ಥಾನದಲ್ಲಿ ಇದ್ದು, ಅಲ್ಲಿ ಜಪತಪಾದಿ ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಶಿಷ್ಯವೃಂದವನ್ನು ಪೊರೆಯುವಲ್ಲಿ ನಿರತರಾಗಿರುತ್ತಾರೆ.


- ಹರಿಕೃಷ್ಣ ಹೊಳ್ಳ, ಬ್ರಹ್ಮಾವರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top