ಭಾರತ್ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ, ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಕಬ್ಸ್ ಬುಲ್‌ಬುಲ್ಸ್, ಸ್ಕೌಟ್ಸ್ & ಗೈಡ್ಸ್ ಮಕ್ಕಳಿಗಾಗಿ ಸೋಪಾನ ಪರೀಕ್ಷೆ ಶಿಬಿರ
ಆಲೂರು: ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸ್ಕೌಟ್ಸ್ & ಗೈಡ್ಸ್ ವಿಧೇಯತೆ, ಪರಿಶುದ್ಧತೆ ಹಾಗೂ ಸೇವಾ ಮನೋಭಾವವನ್ನು ಬೆಳೆಸುವುದರ ಜೊತೆಗೆ ಸಾಮಾಜಿಕ ವಿಕಸನವನ್ನುಂಟು ಮಾಡುತ್ತದೆ ಎಂದು ಭೈರಾಪುರದ ಎಸ್.ವಿ. ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ಗಿರೀಶ್ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ, ಸ್ಥಳೀಯ ಸಂಸ್ಥೆ ಆಲೂರು ಸಹಯೋಗದಲ್ಲಿ ಭೈರಾಪುರದ ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ ಕಬ್ಸ್ & ಬುಲ್‌ಬುಲ್ಸ್ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಹಂತದ ಚತುರ್ಥ ಚರಣ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‌ಗಳಿಗೆ ತೃತೀಯ ಸೋಪಾನ ಪರೀಕ್ಷೆ ಶಿಬಿರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳಲ್ಲಿ ಸ್ವಯಂ ಶಿಸ್ತು, ಸಂಯಮ, ಸಹೋದರತೆ, ಹೃದಯ ವೈಶಾಲ್ಯತೆ, ಪ್ರಕೃತಿ ಪ್ರೇಮ, ಪ್ರಾಣಿಪ್ರಿಯತೆ ಮುಂತಾದ ಮಹತ್ತರ ಮಾನವೀಯ ಮೌಲ್ಯಗಳನ್ನು ಅಂತರ್ಗತಗೊಳಿಸುತ್ತದೆ. ಈ ಸಂಸ್ಥೆಯಲ್ಲಿ ಮಕ್ಕಳ ವಯೋಮಾನಕ್ಕೆ ತಕ್ಕಂತೆ ಆಯೋಜಿಸುವ ವಿವಿಧ ಹಂತದ ಪರೀಕ್ಷೆಗಳನ್ನು ಬರೆಯುವದರಿಂದ ಮಕ್ಕಳಲ್ಲಿನ ಸೃಜನಶೀಲತೆ ವೃದ್ಧಿಸುತ್ತದೆ ಎಂದರು.
ಜಿಲ್ಲಾ ಸ್ಕೌಟ್ ಆಯುಕ್ತರಾದ ಸ್ಟೀಫನ್ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಬೌದ್ಧಿಕ, ಸಮಾಜಿಕ, ಸಾಂಸ್ಕೃತಿಕ ವಿಕಸನಕ್ಕಾಗಿ, ಮಕ್ಕಳ ಸರ್ವಾಂಗೀಣ ಅಭ್ಯುದಯಕ್ಕಾಗಿ ಹುಟ್ಟಿಕೊಂಡ ಸ್ಕೌಟ್ಸ್ & ಗೈಡ್ಸ್ ಕೇವಲ ಭಾರತವಷ್ಟೇ ಅಲ್ಲದೇ ಜಾಗತಿಕವಾಗಿ ೨೦೦ ಕ್ಕೂ ಹೆಚ್ಚಿನ ದೇಶಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ. ನಿವೃತ್ತ ಸೇನಾಧಿಕಾರಿ ಬೇಡನ್ ಪೊವೆಲ್ ಅವರ ದೂರದೃಷ್ಠಿ ಇಂದು ಐದು ವರ್ಷದ ಮಕ್ಕಳಿಂದ ಪದವಿ ಹಂತದ ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್. ಎಂ. ಪ್ರಿಯಾಂಕ ಮಾತನಾಡಿ ಜಿಲ್ಲೆಯಲ್ಲಿ ಆಲೂರು ತಾಲ್ಲೂಕು ಚಿಕ್ಕದಾದರೂ ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದೆ. ಕಳೆದ ಮೂರು ತಿಂಗಳಲ್ಲಿ ಮೂಲ ತರಬೇತಿ ಶಿಬಿರ, ಸ್ಕೌಟ್ಸ್ ಗೈಡ್ಸ್ಗಳಿಗಾಗಿ ತೃತೀಯ ಸೋಪಾನ ಪರೀಕ್ಷಾ ಶಿಬಿರ, ಕಬ್ಸ್ ಬುಲ್‌ಬುಲ್ಸ್ ಮಕ್ಕಳಿಗಾಗಿ ಚತುರ್ಥ ಚರಣ್ & ತೃತೀಯ ಸೋಪಾನ ಪರೀಕ್ಷೆ ಶಿಬಿರ ಹೀಗೆ ಜಿಲ್ಲಾ ಹಂತದ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ ಎಂದರು.
ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ತಿಮ್ಮೇಗೌಡ, ಶಾಲಾ ಮುಖ್ಯ ಶಿಕ್ಷಕಿ ನಳಿನ ಗಿರೀಶ್ ಸೇರಿದಂತೆ ಹಲವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಕೆ.ಸಿ. ಗೀತಾ, ದೇವರಾಜ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ದೇವೇಂದ್ರ, ಜಿಲ್ಲಾ ಸಹಾಯಕ ಆಯುಕ್ತೆ ಪ್ರೇಮಾ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್. ಪಬ್ಲಿಕ್ ಶಾಲೆಯ ಸ್ಕೌಟ್ ಗೈಡ್ ಶಿಕ್ಷಕರಾದ ಕಬ್ ಮಾಸ್ಟರ್ ದೇವರಾಜ್, ಸತೀಶ್, ಪೃಥ್ವಿನಿ, ಸುಮಿತ್ರ, ಹರ್ಷಿತಾ, ನವ್ಯಶ್ರೀ, ರಂಜಿತಾ; ಆಲೂರಿನ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಕಬ್ ಮಾಸ್ಟರ್ ರಾಮಚಂದ್ರ; ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾನಿಯಾ, ರೇಣುಕಾ ಹಾಗೂ ಅಶ್ವಿನಿ ಉಪಸ್ಥಿತರಿದ್ದರು. ಪರೀಕ್ಷಾ ಶಿಬಿರದಲ್ಲಿ ಎಸ್.ವಿ. ಪಬ್ಲಿಕ್ ಶಾಲೆ ಭೈರಾಪುರ, ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆ ಆಲೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭೈರಾಪುರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳೂರು ಮಕ್ಕಳು ಭಾಗವಹಿಸಿದ್ದರು. ಗೈಡ್ ಕ್ಯಾಪ್ಟನ್ ಹರ್ಷಿತಾ ಸ್ವಾಗತಿಸಿದರು, ಸ್ಕೌಟ್ ಮಾಸ್ಟರ್ ಸತೀಶ್ ನಿರೂಪಿಸಿದರು, ಗೈಡ್ ಕ್ಯಾಪ್ಟನ್ ನವ್ಯಶ್ರೀ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ