ವಿಡಂಬನೆ | ಪೂರ್ಣ ಕುರುನಾಡು ಸಾಮ್ರಾಜ್ಯಕ್ಕೆ ನಾನೇ ದೊರೆ: ದುರ್ಯೋಧನ

Upayuktha
0
ನಾಯಕತ್ವ ಬದಲಾವಣೆ ಕಪೋಲಕಲ್ಪಿತ | ಈಗಿನ ಪೂರ್ಣಾವಧಿಗೆ ಮಾತ್ರ ಅಲ್ಲ, ಮುಂದಿನ ಅವಧಿಗಳಿಗೂ ನಾನೇ ದೊರೆ | ಅಧಿಕಾರ ಹಂಚಿಕೆ ಒಪ್ಪಂದ ಆಗಿಯೇ ಇಲ್ಲ ಮತ್ತೆ ದುರ್ಯೋಧನ ಸ್ಪಷ್ಟನೆ | ಹೇಳಿಕೆ ಬೆನ್ನಲ್ಲೇ ಪಾಂಡವ ಬೆಂಬಲಿಗರಲ್ಲಿ ಚಟುವಟಿಕೆ ಬಿರುಸು|



ಹಸ್ತಿನಾಪುರವಾಣಿ ಸುದ್ಧಿಲೋಕ- ಹಸ್ತಿನಾವತಿ: ಸುಮಾರು ಹನ್ನೆರಡು ಮುಕ್ಕಾಲು ವರ್ಷಗಳ ಹಿಂದೆ ನಡೆದ ರಣ ರೋಚಕ ಕ್ರೀಡಾಕೂಟ ಫಲಿತಾಂಶದ ಪರಿಣಾಮ, ಪಾಂಡವರು ಹನ್ನೆರಡು ವರ್ಷ ವನವಾಸ + ಒಂದು ವರ್ಷ ಅಜ್ಞಾತವಾಸ ಶರತ್ತು ಮುಗಿಯುತ್ತಾ ಬಂದಿದ್ದು, ಇನ್ನು 3-4 ತಿಂಗಳಲ್ಲಿ ಪಾಂಡವರು ಮರಳಿ ಬರಲಿದ್ದಾರೆ. ಪಾಂಡವರು ಮರಳಿ ಬರುವ ದಿನಗಳು ಹತ್ತಿರವಾಗುತ್ತಿದ್ದಂತೆ ಆರ್ಯಾವರ್ತದ ಪ್ರಜೆಗಳಲ್ಲಿ ಮಾತ್ರವಲ್ಲದ ಸಮಸ್ತ ಭೂ ಮಂಡಲದಲ್ಲಿ ಕುತೂಹಲದ ಸಂಚಲನ ಉಂಟಾಗುತ್ತಿದೆ. 


ಆಟದಲ್ಲಿ, 12 ವರ್ಷಗಳ ವನವಾಸದ ನಂತರ 1 ವರ್ಷದ ಅಜ್ಞಾತವಾಸವನ್ನು ಯಾವುದಾದರು ನಗರ ಪ್ರದೇಶದಲ್ಲೇ ಅಜ್ಞಾತವಾಗಿ ಕಳೆಯಬೇಕು ಎಂಬ ನಿಯಮದಂತೆ ಸೋತ ಪಾಂಡವರು ಹಸ್ತಿನೆಯ ಬೇಹುಗಾರರಿಗೂ ರಹಸ್ಯ ದೊರೆಯದಂತೆ, ಪಂಚಾಂಗದ ಲೆಕ್ಕದಲ್ಲಿ ಈಗಾಗಲೆ ಎಂಟು ತಿಂಗಳು ಕಳೆದಿದ್ದಾರೆ. ಇದನ್ನು ನಮ್ಮ ಬೇಹುಗಾರಿಕೆಯ ವೈಫಲ್ಯ ಎಂದೂ ಅರಮನೆಯ ಒಳಮನೆಗಳಲ್ಲಿ ಚರ್ಚೆ ನೆಡೆಯುತ್ತಿದೆ.


ಅಜ್ಞಾತವಾಸ ಮುಗಿಸಿ ಬಂದಾಗ, ದುರ್ಯೋಧನ ಪ್ರಭುಗಳು ಅರ್ಧ ರಾಜ್ಯವನ್ನು ಕೊಡುತ್ತಾರಾ? ಇನ್ನಿರುವ ಮೂರು ತಿಂಗಳ ಅಜ್ಞಾತವಾಸದಲ್ಲಿಯೇ ಪಾಂಡವರನ್ನು ಗುರುತು ಹಚ್ಚಿ ಮತ್ತೆ ಪಾಂಡವರಿಗೆ 12 ವರ್ಷ ವನವಾಸ, 1 ವರ್ಷ ಅಜ್ಞಾತವಾಸ ಅನುಭವಿಸುವಂತೆ ಪ್ರಕರಣ ತಿರುವು ಪಡೆಯಲಿದೆಯಾ? ಒಂದುವೇಳೆ ಅಜ್ಞಾತ ಮುಗಿಸಿ ಬಂದರೂ, ಅಧಿಕಾರ ಹಸ್ತಾಂತರ ಮಾಡದೆ ಇದ್ದರೆ ಪರಿಣಾಮ ಏನಾಗಬಹುದು? ಯುದ್ಧ ಏನಾದರು ಸಾಧ್ಯತೆ ಇದೆಯಾ?  ಪಾಂಡವ-ಕೌರವ ಪಕ್ಷಗಳ ನಡುವೆ ಯುದ್ಧವೇ ಆದರೆ ಕೌರವ ಪಕ್ಷದ ಈಗಿನ ವರಿಷ್ಠರಾದ ಭೀಷ್ಮ, ದ್ರೋಣರ ಮುಂದಿನ ನೆಡೆ ಏನು? ಮಹಾಯುದ್ಧವೇ ನಿಶ್ಚಯವಾದರೆ ಯಾವ ಯಾವ ರಾಷ್ಟ್ರಗಳು ಯಾರ ಪರ ನಿಲ್ಲಬಹುದು!!? ಇತ್ಯಾದಿ ಅಧಿಕಾರ ಕೇಂದ್ರೀಕೃತ ವಿಚಾರಗಳ ಮೇಲೇ ಆರ್ಯಾವರ್ತದ ಪ್ರಜೆಗಳಲ್ಲಿ ನೆಡೆಯುತ್ತಿರುವ ಚರ್ಚೆಗೆ ಒಂದು ಪೂರ್ಣ ವಿರಾಮ ಹಾಕುವ ಉದ್ದೇಶದಿಂದ ಹಸ್ತಿನಾಪುರದ ಅರಮನೆಯಲ್ಲಿ ಇಂದು ದುರ್ಯೋಧನ ಪ್ರಭುಗಳೇ ಜನ ಸಂಪರ್ಕ ಸಭೆ ಮತ್ತು ಜಂಟಿ ಪತ್ರಿಕಾಗೋಷ್ಠಿ ಕರೆದಿದ್ದರು.  


ಸಾರ್ವಜನಿಕರ ಮತ್ತು ಪತ್ರಕರ್ತರಿಂದ ಬಂದ ಅವ್ಯಾಹತ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರಿಸುತ್ತಿದ್ದ ದುರ್ಯೋಧನ ಪ್ರಭುಗಳು ಒಂದು ಹಂತದಲ್ಲಿ ಸ್ವಲ್ಪ ತಾಳ್ಮೆಯನ್ನು ಕಳೆದುಕೊಂಡು ಪತ್ರಕರ್ತರೊಬ್ಬರಿಗೆ ಕೈ ಎತ್ತುವ ಪ್ರಸಂಗವೂ ಜರುಗಿತ್ತು.


ಪಾಂಡವರಿಗೆ ಅಧಿಕಾರ ಹಸ್ತಾಂತರ ಆಗಲಿದೆಯಾ? ಎಂಬ ಪ್ರಶ್ನೆಯ ಬಾಣ ಬಂದಾಗ ದುರ್ಯೋಧನರು "ನಮಗೆ ಚಿಕ್ಕಪ್ಪ ಆಗಿದ್ದ ಪಾಂಡವರ ತಂದೆ ಪಾಂಡು ಮಹಾರಾಜರು ಅಧಿಕಾರವನ್ನು ತ್ಯಜಿಸಿ ಕಾಡಿಗೆ ಹೋಗಿದ್ದರಂತೆ, ಆ ರೀತಿ ಸನ್ಯಾಸಿ ಆಗವ ರಕ್ತವೇ ನಮ್ಮದಲ್ಲ, ಧೃತರಾಷ್ಟ್ರರ ಮಗ ನಾನು, ರಾಜಕೀಯ ಸನ್ಯಾಸ ಈ ಜನ್ಮಕ್ಕಿಲ್ಲ" ಎಂದರು.  


ಪಾಂಡವ ಕೌರವರಲ್ಲಿ ಹಿರಿಯರಾದ ಧರ್ಮರಾಯರಿಗೆ ಸಾಮ್ರಾಜ್ಯದ ಪೂರ್ಣ ಅಧಿಕಾರ ಹಸ್ತಾಂತರ ಆಗಲಿದೆ ಎಂದು ವರಿಷ್ಠರಾದ ಭೀಷ್ಮ ಮತ್ತು ಮಾಜಿ ಮಂತ್ರಿ ವಿದುರರ ನಡುವೆ ಚರ್ಚೆ ಆಗಿದೆಯಂತೆ ಹೌದಾ? ಎಂದು ಕೇಳಲಾದ ಪ್ರಶ್ನೆಗೆ "ನಾಯಕತ್ವ ಬದಲಾವಣೆ ಆಗಲಿದೆ ಎನ್ನುವುದು ಕಪೋಲಕಲ್ಪಿತ ಅಷ್ಟೆ.  ಅಂತಹ ಯಾವುದೇ ಚರ್ಚೆ ಅರಮನೆಯಲ್ಲೂ ನೆಡೆದಿಲ್ಲ, ವರಿಷ್ಠರಲ್ಲಿ ಆ ಭಾವನೆಗಳೂ ಇಲ್ಲ" ಎಂದು ದುರ್ಯೋಧನರು ಖಡಕ್ಕಾಗಿಯೇ ನುಡಿದರು.


ಪಾಂಡವರು ಅವಧಿ ಮುಗಿಸಿ ಬಂದ ಮೇಲೆ 'ಅಧಿಕಾರ ಹಂಚಿಕೆ ಹೇಗೆ?' ಎಂಬ ಪತ್ರಕರ್ತರ ಪ್ರಶ್ನೆಗೆ "ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಹಸ್ತಿನಾವತಿಯ ಪೂರ್ಣ ಸಾಮ್ರಾಜ್ಯದ ದೊರೆತನ ಕಳೆದ 12-13 ವರ್ಷಗಳಿಂದ ನನ್ನದೇ ಆಗಿರುತ್ತದೆ.  ಈಗಿನ ಪೂರ್ಣಾವಧಿಗೆ ಮಾತ್ರ ಅಲ್ಲ, ಮುಂದಿನ ಅವಧಿಗಳಿಗೂ ನಾನೇ ದೊರೆಯಾಗಿರುತ್ತೇನೆ.  ಪಾಂಡವರಿಗೆ ಯಾವುದೇ ಕಾರಣಕ್ಕೂ ಅರ್ಧ ರಾಜ್ಯ ಕೊಡುವ ಪ್ರಶ್ನೆ ಇರುವುದಿಲ್ಲ" ಎಂದರು. ಅಂದರೆ 13 ವರ್ಷಗಳ ಹಿಂದೆ ಆದ ಒಪ್ಪಂದವನ್ನು ಮುರಿಯುತ್ತೀರಾ!? ಎಂಬ ಪ್ರಶ್ನೆ ಪ್ರಜಾ ಸಮೂಹದಿಂದ ಬಂದಾಗ "ಅಧಿಕಾರ ಹಂಚಿಕೆ ಒಪ್ಪಂದ, ಅರ್ಧ ರಾಜ್ಯ ಕೊಡುವ ಒಪ್ಪಂದ ಯಾವುದೂ ಆಗಿಯೇ ಇಲ್ಲ. ಅವೆಲ್ಲ ಗಾಳಿ ಸುದ್ಧಿಗಳು" ಎಂದು ಹಲ್ಲಿನ ಮಧ್ಯ ಸಿಕ್ಕಿದ್ದ ವಸ್ತುವನ್ನು ಕಡ್ಡಿಯಿಂದ ತೆಗೆದು, ಆ ಕಡ್ಡಿಯನ್ನು ಮುರಿದು ಕೌರವರು ನುಡಿದರು!


ಪಾಂಡವರ ಮತ್ತು ಕೌರವರ ನಡುವೆ ಅರಮನೆಯಲ್ಲಿ ಮತ್ತೊಮ್ಮೆ ಒಳಾಂಗಣ ಪಗಡೆಯಾಟದ ಕ್ರೀಡಾಕೂಟ ನೆಡೆಯಬಹುದಾ? ಎಂಬ ಪ್ರಶ್ನೆ ಬಂದಾಗ "ಇಲ್ಲ, ನಮ್ಮ ಪಕ್ಷದ ವರಿಷ್ಠರ ಸಲಹೆಯಂತೆ ಪಗಡೆಯಾಟವನ್ನು ಜೂಜು ಎಂದು ಪರಿಗಣಿಸಿ, ಈಗಾಗಲೆ ನಿಷೇಧ ಹೇರಲಾಗಿದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಶಕುನಿಯವರ ಕಡೆ ನೋಡಿ ಕಿರುನೆಗೆ ನಗುತ್ತ ಕೌರವರು ನುಡಿದರು.


ಇದೇ ಸಂದರ್ಭದಲ್ಲಿ ಬೇಹುಗಾರಿಕೆ ವೈಫಲ್ಯ, ಆಯವ್ಯಯದಲ್ಲಿ ಸೈನ್ಯಕ್ಕೆ ಹೆಚ್ಚಿಸಿದ ದಾಖಲೆಯ ಅನುದಾನ, ವರಿಷ್ಠರು ಇತ್ತೀಚೆಗೆ ಮೌನವಾಗಿರುವುದಕ್ಕೆ ಕಾರಣ ಏನು? ದುಷ್ಟ ಚತುಷ್ಟೆಯರ ತುಷ್ಟೀಕರಣ ಮುಂತಾದ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡಿ, ಪತ್ರಿಕಾಗೋಷ್ಠಿ ಮತ್ತು ಜನಸ್ಪಂದನ ಕಾರ್ಯಕ್ರಮಕ್ಕೆ ಸ್ವತಃ ಪ್ರಭುಗಳೇ ಮುಕ್ತಾಯದ ಕೈ ಮುಗಿದು ವಂದನಾರ್ಪಣೆ ಮಾಡಿದರು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top