ಸ್ಯಾನಿಟರಿ ಪ್ಯಾಡ್: ಮತಗಳಿಕೆಯ ತಂತ್ರಕ್ಕೆ ಸೀಮಿತವಾಗದಿರಲಿ

Upayuktha
0


ಚಿತ ಸ್ಯಾನಿಟರಿ ಪ್ಯಾಡ್ ಯೋಜನೆ ಸ್ವಾಗತಾರ್ಹ. ಆದರೆ ಅದು ತಾತ್ಕಾಲಿಕ ಚುನಾವಣೆಯ ಮತಗಳಿಕೆಯ ತಂತ್ರಕ್ಕೆ ಸೀಮಿತವಾಗದಿರಲಿ.


ಉತ್ತರ ಭಾರತದ ರಾಜ್ಯ ಒಂದರ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ, ಚುನಾವಣೆ ಗೆಲ್ಲಲು ಎಲ್ಲ ಪಕ್ಷಗಳು, ಪಕ್ಷೇತರರು ಗಿಮಿಕ್‌ಗಳ ಕಸರತ್ತುಗಳೊಂದಿಗೆ ಪ್ರಚಾರಕ್ಕಿಳಿದಿದ್ದಾರಂತೆ.


'ಯುವರಾಜರ' ಚಿತ್ರವನ್ನು, ಹೆಸರನ್ನು ಇಡುವುದಕ್ಕೆ ಎಲ್ಲೂ ಜಾಗ ಇಲ್ಲದಷ್ಟು ಯುವರಾಜ ಮನೆತನದ ಮೂರು ತಲೆಮಾರಿನ ಚಕ್ರವರ್ತಿಗಳ ಹೆಸರುಗಳನ್ನು ಈಗಾಗಲೆ ಎಲ್ಲ ಕಡೆ ಇಡಲಾಗಿರುವುದರಿಂದ, ಕೊನೆಗೆ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ನಾಯಕರ ಚಿತ್ರ ಮುದ್ರಿಸಿ ಉಚಿತವಾಗಿ ಹಂಚಲಾಗುತ್ತಿದೆ ಎಂಬ ವರದಿ ನಿನ್ನೆ ಬಹುತೇಕ ಪತ್ರಿಕೆ, ಮಾಧ್ಯಮ, ಜಾಲತಾಣಗಳಲ್ಲಿ ಹರಿದಾಡಿ, ಇವತ್ತು ಅದು ಸುಳ್ಳು ಸುದ್ದಿ ಎಂದೂ ಪ್ರಕಟವಾಗಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಮೊದಲು ಯುವರಾಜ ಪಕ್ಷದವರು ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಹಂಚುತ್ತಿರುವುದು ಸತ್ಯವಾಗಿದ್ದು, ಅದನ್ನು ಪಕ್ಷ ಸಮರ್ಥಿಸಿ ಒಪ್ಪಿಕೊಂಡಿದೆಯಂತೆ.


ಚುನಾವಣಾ ನೀತಿ ಸಂಹಿತೆಗೆ ಮೊದಲು ಉಚಿತ ಹಂಚಿಕೆಗಳು ಕಾನೂನಿನ ಪ್ರಕಾರ ಅಪರಾಧವಲ್ಲ. ನೈತಿಕತೆಯ ವಿಚಾರದಲ್ಲಿ ಇದು ತಪ್ಪು. ಆದರೆ, ನೈತಿಕತೆ ಮತ್ತು ರಾಜಕಾರಣಕ್ಕೂ ಸಂಬಂಧ ಇಲ್ಲದೆ ದಶಕಗಳೇ ಕಳೆದು ಹೋಗಿವೆ!!!


ಈ ಹಿಂದೆ, ಚುನಾವಾಣೆ ಪೂರ್ವ ವರ್ಷದಲ್ಲಿ, ಒಂದು ಪಕ್ಷದ ಟಿಕೇಟ್ ಆಕಾಂಕ್ಷಿಯೊಬ್ಬರ, ನವರಾತ್ರಿ ಮತ್ತು ದೀಪಾವಳಿಗೆ ಶುಭಾಶಯ ಹೊತ್ತ ಪ್ಲಾಸ್ಟಿಕ್ ಬ್ಯಾನರ್‌ಗಳು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಾರಾಜಿಸುತ್ತಿದ್ದವು! ನಂತರ ಅವುಗಳು ಕಾಲಕ್ರಮೇಣ ಗಾಳಿಗೆ ಹರಿದು ಬಿದ್ದರೂ ಯಾರೂ ಅವುಗಳನ್ನು ತೆಗೆಲಿಲ್ಲ. ಹರಿದು ಬಿದ್ದ ಬ್ಯಾನರ್‌ನಲ್ಲಿದ್ದ ಅವರ ಫೋಟೋದ ಮೇಲೆ ನಾಯಿಗಳು ಉಚ್ಚೆ ಹುಯಿದಿದ್ದಕ್ಕಾ? ಅಥವಾ ಚಿರಂಡಿಯಲ್ಲಿ ಬಿದ್ದ ಬ್ಯಾನರ್ ಚಿತ್ರಕ್ಕೆ ಆದ 'ಸಮಸ್ತ ಅಭಿಷೇಕದ ಫಲದ ಪ್ರಾರಬ್ದ ಪರಿಣಾಮಕ್ಕೋ ಗೊತ್ತಿಲ್ಲ, ಆ ನಾಯಕರಿಗೆ ಟಿಕೇಟೂ ಸಿಗಲಿಲ್ಲ! ಆಮೇಲೆ ಎರಡು ನವರಾತ್ರಿ ದೀಪಾವಳಿ ಕಳೆದರೂ ಮತ್ತೆ ಆ ನಾಯಕರು ಚಿಕ್ಕಮಗಳೂರು ಜಿಲ್ಲೆಗೆ ಬಂದ ಸುದ್ದಿಯೂ ಇಲ್ಲ, ಶುಭಾಶಯ ಕೋರಲೂ ಇಲ್ಲ.  


ಇನ್ನು ಉಚಿತ ಸ್ಯಾನಿಟರಿ ಪ್ಯಾಡ್ ವ್ಯವಸ್ಥೆಗಳನ್ನು ಕಲ್ಪಿಸಲು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಕೆಲವು ದಿನಗಳ ಮೊದಲು ಮಾಡುತ್ತಿರುವುದು ಪಕ್ಷದ ಮತ್ತು ಫೋಟೋ ನಾಯಕರ 'ದೂರದೃಷ್ಟಿಯ ಚಿಂತನೆ'ಯನ್ನು ತೋರಿಸುತ್ತಿರಬಹುದು!!?


ಪಕ್ಷ ಮತ್ತು ಮೈತ್ರಿ ಕೂಟವು ಈಗಾಗಲೆ ಕೆಲವು ಕಡೆ ಅಧಿಕಾರದಲ್ಲಿದ್ದರೂ, ಅಲ್ಲಿ ಯಾವುದೇ ರೀತಿಯ ಸ್ಯಾನಿಟರಿ ಪ್ಯಾಡ್ ಉಚಿತ ಹಂಚಿಕೆಗೆ ಮುಂದಾಗದೆ, ಎಲೆಕ್ಷನ್ ನೆಡೆಯಲಿರುವ ರಾಜ್ಯದಲ್ಲಿ ಮಾತ್ರ ಸ್ಯಾನಿಟರಿ ಪ್ಯಾಡ್‌ನ ಹಂಚಿಕೆ ಮತ್ತು ಅದರ ಮೇಲೆ ನಾಯಕನ ಫೋಟೋ ಮುದ್ರಣ(?) ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಪಕ್ಷವು "ಇದು ಪ್ರಾಯೋಗಿಕ ಪ್ರಯತ್ನ, ಯಶಸ್ವಿಯಾದಲ್ಲಿ (ಚುನಾವಣಾ ತಂತ್ರ?) ಇಡೀ ದೇಶಕ್ಕೆ ಈ ಯೋಜನೆ ವಿಸ್ತಾರಗೊಳ್ಳಲಿದೆ" ಎಂದು ಪ್ರಚಾರ ಮಾಡಬಹುದು!!?


ಇನ್ನುಮುಂದೆ ಯುವರಾಜರು ಭಾಷಣ ಮಾಡುವಾಗ, ಪ್ರತಿಭಟನೆ ಮಾಡುವಾಗ ನೋಟ್ ಪುಸ್ತಕದ ಬದಲಿಗೆ, ಸ್ಯಾನಿಟರಿ ಪ್ಯಾಡ್‌‌ನ್ನು ಕಾರಿನ ವೈಪರ್‌ನಂತೆ ಆಡಿಸುತ್ತ ಮಾತಾಡಬಹುದು!!


ಮುಂದುವರೆದು, ಸಾರ್ವಜನಿಕ ಶೌಚಾಲಯಗಳ ಸಮೀಪ ಮಹಿಳೆಯರಿಗೆ, ಪುರುಷರಿಗೆ ಎಂದು ಪ್ರತ್ಯೇಕ ತೋರಿಸುವ, ನಾಯಕನ ತೋರು ಬೆರಳಿನ ದಿಕ್ಸೂಚಿಯ ಎರಡು ಪ್ರತಿಮೆಗಳನ್ನು ಸ್ಥಾಪಿಸಬಹುದು! ಹಾಗೆ ಮಾಡಿದಲ್ಲಿ, ಚುನಾವಣೆ ನೀತಿ ಸಂಹಿತೆ ಜಾರಿ ಆದಾಗ, ಪ್ರತಿಮೆಗಳ ದಿಕ್ಸೂಚಿ ಕೈಗಳನ್ನು ಮರೆಮಾಡದೆ, ಪ್ರತಿಮೆಯ ಮುಖಕ್ಕೆ ಮಾತ್ರ ಟೇಪ್ ಸುತ್ತಿ ಮರೆ ಮಾಚಬೇಕು!.


***


ಇಷ್ಟೆಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ, ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸುವ ಆ ಪಕ್ಷದ ನೆಡೆ ಒಂದು ಸ್ವಾಗತಾರ್ಹ ಬೆಳವಣಿಗೆಯೇ ಸರಿ.  ಇದನ್ನು ಪಕ್ಷವು ಚುನಾವಣೆಯ ಪ್ರಣಾಳಿಕೆಯಲ್ಲೂ ಸೇರಿಸಿ, ಚುನಾವಣೆಯಲ್ಲಿ ಗೆದ್ದರೆ, ಸ್ಯಾನಿಟರಿ ಪ್ಯಾಡ್‌ಗಳನ್ನು ಸರಕಾರದಿಂದ ಉಚಿತ ಹಂಚಿಕೆ ಮಾಡಲು ಪ್ರಯತ್ನಿಸಬಹುದು.


ಗೆದ್ದರೆ, ಅಧಿಕಾರಕ್ಕೆ ಬಂದರೆ, ಸ್ಪಷ್ಟ ಬಹುಮತದಿಂದ ಗೆದ್ದು ಬಂದರೆ, ಸಮ್ಮಿಶ್ರ ಸರಕಾರ ಆಗದಿದ್ದರೆ... ಇತ್ಯಾದಿ ಕತೆಗಳ 'ರೆ'ಕಾರಗಳನ್ನು ಹೇಳದೆ, ಈಗಾಗಲೆ ಬೇರೆ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಸದರಿ ಪಕ್ಷ, ಅಲ್ಲೆಲ್ಲ ಈ ಉಚಿತ ಸ್ಯಾನಿಟರಿ ಪ್ಯಾಡ್ ಯೋಜನೆಯನ್ನು ತಕ್ಷಣವೇ ಜಾರಿಗೆ ತರಲಿ.  ಮತ್ತು ಜಾರಿಗೆ ಬಂದು ಯಶಸ್ವಿಯಾದ ಉಚಿತ ಸ್ಯಾನಿಟರಿ ಪ್ಯಾಡ್ ಯೋಜನೆಯ ಹಿರಿಮೆ ಚುನಾವಣೆ ನೆಡೆಯುವ ರಾಜ್ಯಗಳಲ್ಲಿ ಪ್ರಚಾರದ ವಸ್ತುವಾಗಲಿ.


ಇದರ ಜೊತೆಗೆ, ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವ ಕ್ರಮಗಳನ್ನು ಸ್ಪಷ್ಟವಾಗಿ ಸಾರ್ವಜನಿಕರಿಗೆ ಜಾಗೃತಿ ಮಾಹಿತಿಯಾಗಿ ತಿಳಿಸುವ ಕ್ರಮವೂ ಪಕ್ಷದಿಂದ ಆಗಬೇಕು. ಅನೇಕ ಕಡೆ ಸ್ಯಾನಿಟರಿ ಪ್ಯಾಡ್‌ಗಳು, ಡೈಪರ್‌ಗಳು ಚಿರಂಡಿ, ರಸ್ತೆ ಬದಿ, ಕೆಲವು ಕಡೆ ಕುಡಿಯುವ ನೀರಿನ ಮೂಲ, ಕಾಡು, ಹಳ್ಳ, ಹೊಳೆಗಳಿಗೆ ಸೇರುತ್ತಿವೆ. ಬಳಕೆಯ ನಂತರ ಸ್ಯಾನಿಟರಿ ಪ್ಯಾಡ್ ಮತ್ತು ಮಕ್ಕಳ ಡೈಪರ್‌ಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಮಾಹಿತಿ ಸ್ಪಷ್ಟವಾಗಿ ಯಾರಲ್ಲೂ ಇಲ್ಲ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುಡಿಯುವ ನೀರಿನ ಮೂಲವಾದ ಹಿರಿಕೆರೆ ಎಂಬ ಕೆರೆಯ ಬಳಿಯ ಕಾಲುವೆಯಲ್ಲಿ, ಬಳಸಿದ ಸ್ಯಾನಿಟರಿ ಪ್ಯಾಡ್ ಮತ್ತು ಡೈಪರ್‌ಗಳ ರಾಶಿಯೇ ಬಿದ್ದಿರುತ್ತದೆ! ಬಳಸಿದವರೇ ವಾಕಿಂಗ್ ಹೋಗುವಾಗ, ಕೆಲವೊಮ್ಮೆ ಕಾರಿನಲ್ಲಿ, ಅಲ್ಲಿ ಎಸೆದು ಹೋಗುತ್ತಾರೆ. ಮಳೆ ಬಂದಾಗ ಸ್ಯಾನಿಟರಿ ಪ್ಯಾಡ್ ಮತ್ತು ಡೈಪರ್‌ಗಳ ಸಮೇತ ನೀರು ಕೆರೆ ಸೇರುತ್ತದೆ. ಆ ನೀರನ್ನು ಕೊಪ್ಪ ಪಟ್ಟಣದಲ್ಲಿ ಕುಡಿಯುವ ನೀರಾಗಿ ಬಳಸಲಾಗುತ್ತದೆ!!


ಅನೇಕ ಕಡೆ, ಈ ಬಳಸಿದ ಸ್ಯಾನಿಟರಿ ಪ್ಯಾಡ್ ಮತ್ತು ಡೈಪರ್‌ಗಳನ್ನು ಕಸದ ಗಾಡಿಗಳು ಕೊಂಡು ಹೋಗುವುದಿಲ್ಲ ಎಂಬ ಕಾರಣಕ್ಕೆ ಅನಿವಾರ್ಯವಾಗಿ ರಸ್ತೆ ಬದಿ ಬಿಸಾಕಲಾಗುತ್ತದೆ. ಬೀದಿ ನಾಯಿಗಳು ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಕಿತ್ತಾಡಿ ರಸ್ತೆಗೆ ಹಾಕುತ್ತವೆ.


ಬೀದಿ ನಾಯಿಗಳು ಅದರಲ್ಲಿರುವ ಆಹಾರವನ್ನು ತಿಂದು, ಉಳಿದ ಪ್ಲಾಸ್ಟಿಕ್ ಮಿಶ್ರಿತ ಹತ್ತಿಯ ತರಹದ ಡೈಪರ್ ಚೂರುಗಳನ್ನು ರಸ್ತೆಯಲ್ಲಿ ಹಾಕುತ್ತವೆ!  ಕೆಲವು ರಸ್ತೆಗಳಲ್ಲಿ ಚಾರ್ಲಿ 777 ಸಿನಿಮಾದಲ್ಲಿ, ಚಾರ್ಲಿ ನಾಯಿಯು ದಿಂಬು ತಡಿಗಳನ್ನು ಹರಿದು ಹಾಕಿದ ಹೀರೋ ರೂಮಿನಂತೆ ಕಾಣುತ್ತದೆ!


ಪ್ರಜ್ಞಾವಂತ, ದೂರದೃಷ್ಟಿ ಇರುವ, ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಕೊಡಬೇಕು ಎಂಬ ಕಾಳಜಿ ಇರುವ ಪಕ್ಷ ಮತ್ತು ಪಕ್ಷ ನಾಯಕರುಗಳು ಇದನ್ನೂ ಗಮನಿಸಲಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top