ಪ್ರಾತಿನಿಧಿಕ ಚಿತ್ರ
’ಶ್ರೀಗಂಧ ಬೆಳೆಸಿ - ಕೋಟಿ ರೂಪಾಯಿಗಳಿಸಿ’ ಎಂದು ತಲೆಯ ಮೇಲೆ ಸೆರಗು - ಟೋಪಿ ಹಾಕಿಕೊಂಡವರು, ’ಹಗ್ ಎ ಸ್ಯಾಂಡಲ್ ಟ್ರೀ’ ಎಂಬುವರು ಭಾಷಣ- ವಿಡಿಯೋ - ಲೇಖನ ಮಾಡಿದ್ದೆ ಮಾಡಿದ್ದು. ಆದರೆ ವಾಸ್ತವ ಬೇರೆಯದೇ ಇದೆ.
ಶ್ರೀಗಂಧ ಜಗತ್ತಿನ ಅತ್ಯಂತ ಬೆಲೆ ಬಾಳುವ ಸಸ್ಯ. ಭಾರತ ಮತ್ತು ದಕ್ಷಿಣ ಏಷ್ಯಾ ಮೂಲದ ಅಮೂಲ್ಯ ಸಸ್ಯ ಜಾತಿ. ನಮ್ಮದು ಶ್ರೀಗಂಧದ ನಾಡು. ಸೂಕ್ಷ್ಮ ಕೆತ್ತನೆಗೆ, ಸುಗಂಧ ದ್ರವ್ಯಕ್ಕೆ, ಪೂಜಾ ಸಾಮಗ್ರಿಯಾಗಿ, ಮಾಲೆ ಇತ್ಯಾದಿಗೆ ಶತಮಾನಗಳಿಂದ ನಮ್ಮಲ್ಲಿ ಬಳಕೆಯಲ್ಲಿದೆ. ಬಹುಶಃ ಕಿಲೋಗ್ರಾಂ ಲೆಕ್ಕದಲ್ಲಿ ಮಾರಾಟವಾಗುವ ಏಕೈಕ ಮರ. ಒಣ ಪ್ರದೇಶಗಳಲ್ಲಿ ಯಾರೂ ನೀರು-ಗೊಬ್ಬರ ಕೊಡದೆ ನೈಸರ್ಗಿಕವಾಗಿ ಬೆಳೆಯುತ್ತದೆ. ಆದರೆ ಎಲ್ಲಿ ಹೆಚ್ಚು ಹಣವಿದೆಯೋ, ಅಲ್ಲಿ ಸಮಸ್ಯೆಗಳೂ ಅಧಿಕ. ಶ್ರೀಗಂಧದ ಗಿಡ ಬೆಳೆದು ಕೆಚ್ಚು - ತಿರುಳು (ಹಾರ್ಟ್ ವುಡ್) ತಯಾರಾಗುವ ಮೊದಲೇ ಕಳ್ಳರ ಪಾಲಾಗುತ್ತದೆ. ಬಿಗಿ ರಕ್ಷಣೆಯಿರುವ ಮಂತ್ರಿ - ಪೊಲೀಸ್ ಅಧಿಕಾರಿಗಳ ಮನೆಯ ಕಾಂಪೌಂಡ್, ಲಾಲ್ಬಾಗ್ ಹೀಗೆ ಎಲ್ಲೇ ಶ್ರೀಗಂಧದ ಮರವಿದ್ದರೂ ಒಂದು ದಿನ ಅದು ಕಳ್ಳರ ಪಾಲೇ! ಊರಲ್ಲಿ ನಮಗೆ ದೇವರ ಪೂಜೆಗೆ ಶ್ರೀಗಂಧದ ಕೊರಡು (ಒಣ ಕಟ್ಟಿಗೆ) ತೇಯುತ್ತೇವೆ. ಆದರೆ ನಮ್ಮೂರ ಬೆಟ್ಟ ಗುಡ್ಡಗಳಲ್ಲಿ ಶ್ರೀಗಂಧದ ಗಿಡವಿದ್ದರೂ ನಮಗೆ ಸಿಗುವುದಿಲ್ಲ. ಕಳ್ಳರು ಮರ ಕೊಯ್ದು ಕೊಂಡೊಯ್ದ ಮೇಲೆ ನಾವು ಬೇರನ್ನು ಅಗೆದು ತಂದು ಬಳಸುತ್ತೇವೆ. ಶ್ರೀಗಂಧ ನಮ್ಮಿಬ್ಬರ ’ಪಾಲಿನ’ ಬೆಳೆ!
ಪರಿಸ್ಥಿತಿ ಈಗ ಹಾಗಿಲ್ಲವಂತೆ
ಈಗ ಪರಿಸ್ಥಿತಿ ಹಾಗಿಲ್ಲವಂತೆ. ಇತ್ತೀಚೆಗೆ ಕರ್ನಾಟಕ ಸರ್ಕಾರ ಶ್ರೀಗಂಧದ ಮೇಲಿನ ಹಿಡಿತವನ್ನು ಸಡಿಲಿಸಿದೆ. ಹಾಗಾಗಿ ಯಾರು ಬೇಕಾದರೂ ತಮ್ಮ ಜಮೀನಿನಲ್ಲಿ ಶ್ರೀಗಂಧವನ್ನು ನೆಟ್ಟು ಬೆಳೆಸಿ ಮಾರಿ ಹಣ ಮಾಡಬಹುದು. ಅಲ್ಲಿಂದ ಖಾಸಗಿ - ಸರ್ಕಾರಿ ನರ್ಸರಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರತಿವರ್ಷವೂ ಶ್ರೀಗಂಧದ ಗಿಡ ಮಾಡಿ ಮಾರಾಟ ಮಾಡುತ್ತಿವೆ. ಇದರಲ್ಲಿ ನಿರ್ದಿಷ್ಠ – ಆಯ್ದ - ಸುಧಾರಿತ ತಳಿ ಎಂಬುದಿಲ್ಲವಾದರೂ ಒಂದಿಷ್ಟು ಉತ್ಪ್ರೇಕ್ಷೆ ಮಾಡಿ 100-150 ರೂಪಾಯಿಗೆಲ್ಲ ಗಿಡ ಮಾಡುತ್ತಿದ್ದಾರೆ. ಎಕರೆಗೆ ಕೋಟ್ಯಾಂತರ ರೂಪಾಯಿ ಗಳಿಸಬಹುದೆಂದು ಹೇಳುವ ನೂರಾರು ವಿಡಿಯೋಗಳು ಸಿಗುತ್ತವೆ. ನೀರು-ಗೊಬ್ಬರ ಕೊಟ್ಟು ಬೆಳೆಸಿದರೆ 10-12 ವರ್ಷಕ್ಕೆಲ್ಲ ಕಟಾವಿಗೆ ಸಿಗುತ್ತದೆ ಎನ್ನಲಾಗುತ್ತದೆ. ಇನ್ನು ಕಳ್ಳರ ಕಾಟ ತಡೆಯಲೂ ಹಲವಾರು ಉಪಾಯಗಳು ಬಂದಿವೆಯಂತೆ. ಚೈನ್ ಲಿಂಕ್ ಮೆಶ್ ಬೇಲಿ ಹಾಕುವುದು, ಸೋಲಾರ್ ವಿದ್ಯುತ್ ಬೇಲಿ, ಕಾವಲಿಗೆ ಸಿಸಿ ಕ್ಯಾಮೆರಾ, ನಾಲ್ಕಾರು ನಾಯಿಗಳು, ಕಳ್ಳ ಬಂದರೆ ನಿಮಗೆ ಸಂದೇಶ ಕಳಿಸಲು ಪ್ರತಿ ಮರಕ್ಕೆ ಎಲೆಕ್ಟ್ರಾನಿಕ್ ಚಿಪ್ ಇತ್ಯಾದಿಗಳು. ಕೆಲ ನರ್ಸರಿ - ಮಾರಾಟಗಾರರಂತೂ ನಿಮ್ಮ ಹೊಲದಲ್ಲಿ ಗಿಡ ನೆಟ್ಟು, ಪೋಷಿಸಿ, ಕ್ಯಾಮರಾ ಹಾಕಿ, ಅವರೇ ಕಾವಲಿಗೂ ವ್ಯವಸ್ಥೆ ಮಾಡುತ್ತಾರಂತೆ. ಎಂತಹ ಸದಾವಕಾಶ ನೋಡಿ! ನೀವು ಬೆಂಗಳೂರಲ್ಲೋ, ವಿದೇಶದಲ್ಲೋ ಇದ್ದರೂ, ನಿಮ್ಮ ಬರಡು ನೆಲದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಯ ಶ್ರೀಗಂಧ ಬೆಳೆಯುತ್ತದೆ. ಈಗ ನೀವು ಒಂದಿಷ್ಟು (ಅವರು ಹೇಳಿದಷ್ಟು!) ಹಣಕೊಟ್ಟರಾಯಿತು. ಮುಂದೇನಿದ್ದರೂ ಕೋಟ್ಯಂತರ ರೂಪಾಯಿ ಹಣ ಎಣಿಸುವುದೊಂದೇ ನಿಮ್ಮ ಕೆಲಸ.
ಸುಲಭಕ್ಕೆ ಬಲಿ ಬೀಳುವ ಟೆಕ್ಕಿಗಳು
ಮಾಹಿತಿಗೆ ಸಾಮಾಜಿಕ ಮಾಧ್ಯಮ ಅವಲಂಬಿಸುವ ಟೆಕ್ಕಿಗಳು ಮತ್ತು ಪಡ್ಡೆ ಹುಡುಗರು ಯೂಟ್ಯೂಬ್-ಫೇಸ್ ಬುಕ್ ವಿಡಿಯೋ ನೋಡಿ ಶ್ರೀಗಂಧ ನೆಟ್ಟಿದ್ದಾರೆ. ಸಾಂಪ್ರದಾಯಿಕ ಕೃಷಿಯಲ್ಲಿ ಹಣ ಗಳಿಸಲಾಗದೆ ಭ್ರಮನಿರಸನಗೊಂಡಿರುವ ಸಾಕಷ್ಟು ಸಂಖ್ಯೆಯ ಸಾಂಪ್ರದಾಯಿಕ ರೈತರೂ ಕೂಡ ಶ್ರೀಗಂಧ ಹಾಕಿದ್ದಾರೆ. ಇಂತವರು ಫಾರ್ಮ್ ಟಿವಿ ನೇರಪ್ರಸಾರಕ್ಕೆ ಕರೆ ಮಾಡಿದಾಗ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಚಡಪಡಿಸುತ್ತಾರೆ. ಮತ್ತೆ ಕೆಲವರು ತಾವು ಮೋಸ ಹೋದೆವೆಂದು ಅರ್ಥವಾಗಿ ಶ್ರೀಗಂಧದೊಡನೆ ಅಂತರ ಬೆಳೆಗೆ ಹುಡುಕುತ್ತಾರೆ. ಅಲ್ಲಿ ನಾನು ಕಾಳುಮೆಣಸು - ಕೋಕೋ ಹಾಕಿಸುತ್ತೇನೆ. ಕೆಲವರು ಅಡಿಕೆ ತೋಟ ಕೂಡ ಮಾಡಿದ್ದಾರೆ. ಶ್ರೀಗಂಧದ ಕೃಷಿಗೆ ಮತ್ತೆ ಇಳಿಯಬೇಡಿ; ಆದರೆ ನೆಟ್ಟಿದ್ದು ಕಡಿಯಬೇಡಿ; ಕಳ್ಳ ಕೂಡ ಅದನ್ನು ಭಾರತದಲ್ಲೇ ಮಾರುತ್ತಾನೆ; ನಿಮಗೆ ಸಿಗದಿದ್ದರೂ ದೇಶಕ್ಕೆ ಒಂದಿಷ್ಟು ಶ್ರೀಗಂಧ ಸಿಕ್ಕಂತಾಗುತ್ತದೆ ಎಂದು ನಾನು ಮತ್ತಷ್ಟು ಹೊಟ್ಟೆ ಉರಿಸುತ್ತೇನೆ. ಆದರೆ ಇದು ವಾಸ್ತವ.
ಶ್ರೀಗಂಧದ ಸಮಸ್ಯೆಯೇನು
ಹತ್ತು-ಹನ್ನೆರಡು ವರ್ಷಕ್ಕೆ ಬರಲಾರದು: ನೈಸರ್ಗಿಕವಾಗಿ ಶ್ರೀಗಂಧ ಒಣ ಭೂಮಿಯಲ್ಲಿ ತುಂಬಾ ನಿಧಾನವಾಗಿ ಬೆಳೆಯುವ ಗಿಡ. ಒಂದಡಿ ವ್ಯಾಸದ ಕಾಂಡ ಪಡೆಯಲು ಕನಿಷ್ಠ 25-30 ವರ್ಷ ಬೇಕು. ಹಾಗೆ ನಿಧಾನವಾಗಿ ಬೆಳೆದಾಗ ಒಳಗಡೆ ಕೆಚ್ಚು - ತಿರುಳು (ಹಾರ್ಟ್ ವುಡ್) ಬೆಳೆಯುತ್ತದೆ; ಮತ್ತೆ ಅದಕ್ಕೆ ಮಾತ್ರ ಬೇಡಿಕೆ – ಬೆಲೆ. ನೀವು ಕೆ.ಎಸ್.ಡಿ.ಎಲ್. ಗೆ ಮಾರಿದಾಗ ಕೂಡ ಹೊರ ಭಾಗದ ಬಿಳಿ ಮರವನ್ನು ಮುಲಾಜಿಲ್ಲದೆ ಕೆತ್ತಿ ಬಿಸಾಕುತ್ತಾರೆ. ನೀರು-ಗೊಬ್ಬರ ನೀಡಿ ಶ್ರೀಗಂಧ ಬೆಳೆಸಿದಾಗ ಗಿಡವೇನೋ ಬಹುಬೇಗ ದಪ್ಪದಾಗಿ, ಎತ್ತರದ ದೊಡ್ಡ ಮರವಾಗುತ್ತದೆ. ಆದರೆ ಒಳಗಡೆ ತಿರುಳು ಹೆಚ್ಚು ಬೆಳೆಯುವುದಿಲ್ಲ. ಹಾಗಾಗಿ 10 ವರ್ಷ ದೊಡ್ಡದಾಗಿ ಬೇಗ ಬೆಳೆಸಿ, ನಂತರ ನೀರು-ಗೊಬ್ಬರ ಬಂದ್ ಮಾಡಿ ಒಣಬಿಟ್ಟು, ತಿರುಳು ಬೆಳೆಯುವಂತೆ ಮಾಡುವ ಪ್ರಯತ್ನ ನಡೆದರೂ ಅಷ್ಟು ನೈಸರ್ಗಿಕ ಮತ್ತು ಯಶಸ್ವಿಯಲ್ಲ. ಹಾಗೆಂದು ತಿರುಳು ಬೆಳೆಯಲಿ ಎಂದು ಕನಿಷ್ಠ 25-30 ವರ್ಷ ಕಾಯುವ ತಾಳ್ಮೆ ಯಾರಿಗೂ ಇಲ್ಲ, ಆದಷ್ಟು ಬೇಗ ಕೋಟಿ ರೂಪಾಯಿ ಗಳಿಸಬೇಕು. ಇನ್ನೂ ನಿಮಗೆ ತಾಳ್ಮೆಯಿದ್ದರೂ, ರಾತ್ರಿ ಬಂದು ಕಡಿಯುವ ಕಳ್ಳನಿಗೆ ಇಲ್ಲ. 8 ವರ್ಷ ಕಳೆದ ಮರಕ್ಕೆ ಆಗಾಗ ಸಣ್ಣ ಗರಗಸ ಹಚ್ಚಿ ಕೆಚ್ಚು ಬೆಳೆದಿದೆಯೇ ಎಂದು ಪರೀಕ್ಷಿಸುತ್ತಿರುತ್ತಾನೆ. ಅದರಿಂದ ಮರದ ಬೆಳವಣಿಗೆಯೂ ಕುಂಠಿತವಾಗುತ್ತದೆ. ಹಾಗಾಗಿ 10-12 ವರ್ಷಕ್ಕೆಲ್ಲ ಶ್ರೀಗಂಧ ಬೆಳೆದು ಕಟಾವು ಮಾಡಿದ ಒಬ್ಬ ರೈತನೂ ನಿಮಗೆ ಸಿಗುವುದಿಲ್ಲ. ಅದೇನಿದ್ದರೂ ಗಿಡ ಮಾರುವವರು ಹುಟ್ಟಿಸಿದ ಸುಳ್ಳು ಸುದ್ದಿ.
ಶ್ರೀಗಂಧ ಕಳುವು
ಪ್ರಕರಣ-1: ಶಿವಮೊಗ್ಗ ಸಮೀಪದಲ್ಲಿ ಒಬ್ಬ ಹಿರಿಯ ರೈತರು (ಹೆಸರು ಬೇಡ). ಈಗ 20 ವರ್ಷದ ಹಿಂದೆಯೇ ಸುಮಾರು 20 ಎಕರೆ ಜಾಗದಲ್ಲಿ ಶ್ರೀಗಂಧ ನೆಟ್ಟರು. ಕಾವಲಿಗೆ ವ್ಯವಸ್ಥಿತ ಬೇಲಿ, ನಾಲ್ಕಾರು ಯಮ ಸ್ವರೂಪಿ ನಾಯಿಗಳು, ರಾತ್ರಿ 365 ದಿನ ಕಾಯಲು ಕಾವಲುಗಾರ, ಅವನ ಕೈಯಲ್ಲಿ ಒಂದು ಪರವಾನಿಗೆ ಇರುವ ಬಂದೂಕು ಇತ್ಯಾದಿಗಳ ವ್ಯವಸ್ಥೆ ಮಾಡಿದರು; ಅದೂ ನಿರಂತರ 15 ವರ್ಷಗಳ ಕಾಲ! ಗಂಧದ ಗಿಡದ ನಿಧಾನ ಬೆಳವಣಿಗೆ ನೋಡಿ ನಡುವೆ ಅಡಕೆ ಹಾಕಿ ನೀರು ಗೊಬ್ಬರ ಕೊಟ್ಟರು. ಗಂಧದ ಮರ ಬೆಳೆಯಿತು, ಆದರೆ ಒಳಗಡೆ ತಿರುಳು ಅಷ್ಟಾಗಿ ಬೆಳೆಯಲಿಲ್ಲ. ಒಂದಡಿ ಗಾತ್ರ ಮೀರಿದ ಮರಗಳಿಗೆ ಬುಡದ ಸುತ್ತ ಕಾಂಕ್ರೀಟ್ ಹಾಕಿ 10-15 ಅಡಿ ಎತ್ತರದವರೆಗೆ ಚೈನ್ ಲಿಂಕ್ ಮೆಶ್ ವೆಲ್ಡಿಂಗ್ ಮಾಡಿದ ರಕ್ಷಣಾ ಕವಚ ಸ್ಥಾಪಿಸಿದರು. ಇವೆಲ್ಲವನ್ನೂ ಮೀರಿ ಆಗಾಗ ಗಂಧದ ಮರದ ಕಳ್ಳತನ ನಡೆದೇ ಇತ್ತು. ಒಬ್ಬಿಬ್ಬರು ಕಳ್ಳರ ಮೇಲೆ ಗುಂಡು ಹಾರಿಸಿದರು. ಹತ್ತಾರು ಪೊಲೀಸ್ ಪ್ರಕರಣ ಹೂಡಿದರು. ಕಳ್ಳರು ಇವರ ತೋಟಕ್ಕೆ ಬಂದಿದ್ದಾರೆಂದು ತಿಳಿದು ಕೂಡಲೇ ಸ್ಥಳೀಯ ಪೊಲೀಸ್ ಮತ್ತು ಅರಣ್ಯ ಇಲಾಖೆಗಳನ್ನು ಸಂಪರ್ಕಿಸಿದರು. ಒಂದೋ ಇವರ ಕರೆ ಸ್ವೀಕರಿಸಲಿಲ್ಲ, ಅಥವಾ ಅವರು ಸ್ಥಳಕ್ಕೆ ಬರುವ ಕಷ್ಟ ತೆಗೆದುಕೊಳ್ಳಲಿಲ್ಲ. ಇವರು ಅಡಿಕೆ ವ್ಯಾಪಾರದ ದೊಡ್ಡ ಕುಳ. ಹಾಗಾಗಿ ಎಲ್ಲವನ್ನು ಎದುರಿಸಿ ಹೋರಾಡಿದರೂ ಹಂತ ಹಂತವಾಗಿ ಅರ್ಧಕ್ಕರ್ಧ ಮರಗಳು ನಾಪತ್ತೆಯಾದವು. ಕೊನೆಗೊಂದು ದಿನ (ಈಗ 2 ವರ್ಷದ ಹಿಂದೆ) ಇಲಾಖೆಗಳ ನಾನಾ ವಿಧಿ ವಿಧಾನಗಳನ್ನು ಪೂರೈಸಿ ಎಲ್ಲಾ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡಿದರು. ಕೊನೆಗೆ ಕೆ.ಎಸ್.ಡಿ.ಎಲ್. ಗೆ ಮಾರುವಾಗಲೂ ಇವರಿಗೆ ಎಲ್ಲಿಲ್ಲದ ಮೋಸವಾಯಿತು ಎಂದು ಆರೋಪಿಸುತ್ತಾರೆ. 20 ಎಕರೆಯಿಂದ 20 ವರ್ಷಗಳ ನಂತರ ಕನಿಷ್ಠ ಸುಮಾರು 25 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ಈ ರೈತರಿಗೆ ಕೇವಲ 32 ಲಕ್ಷ ರೂಪಾಯಿ ಸಿಕ್ಕಿದೆ. ಪೊಲೀಸು - ಕೋರ್ಟು ಕೇಸುಗಳು ಇನ್ನೂ ಚಾಲ್ತಿಯಲ್ಲಿವೆ!
ಪ್ರಕರಣ-2: ಹಾಸನದ ಒಬ್ಬ ರೈತರು ಮನೆ ಸುತ್ತಲೂ ಶ್ರೀಗಂಧ ನೆಟ್ಟು ಜೋಪಾನವಾಗಿ ಬೆಳೆಸಿ, ರಕ್ಷಣೆಗೆ ಒಂದು ಪರವಾನಿಗೆ ಇರುವ ಬಂದೂಕು ಪಡೆದಿದ್ದರು, ನೆನಪಿಡಿ, ಇವೆಲ್ಲ ಬೆಳೆ ರಕ್ಷಣೆಗೆಂದು ಗಾಳಿಯಲ್ಲಿ ಗುಂಡು ಹಾರಿಸಿ ಪ್ರಾಣಿಗಳನ್ನು ಬೆದರಿಸಲು ಇರುವ ಲೈಸೆನ್ಸ್. ಈಗ ಗಂಧ ಕಳ್ಳನಿಗೆ ಗುಂಡು ಹೊಡೆದು ಸಾಯಿಸಿದರೆ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗುತ್ತೀರಿ. ಒಮ್ಮೆ ಅಂವ ಸಾಯದಿದ್ದರೂ ಕೊಲೆ ಯತ್ನ ಪ್ರಕರಣವಂತೂ ನಿಶ್ಚಿತ. ಗಂಧದ ಮಾತು ಆಮೇಲೆ. ಈ ರೈತರು ಸರ್ಕಾರದಿಂದ ಆಯೋಜನೆಗೊಂಡ ಕೃಷಿ ಪ್ರವಾಸದ ನಿಮಿತ್ತ ಈಗ ನಾಲ್ಕು ವರ್ಷದ ಹಿಂದೆ ಚೀನಾಕ್ಕೆ ಹೋಗಿದ್ದರು. ಶ್ರೀಗಂಧದ ಮರಗಳಿರುವ ಕಡೆ ಫ್ಲಡ್ ಲೈಟ್ ವ್ಯವಸ್ಥೆ ಮಾಡಿದ್ದರು. ಮನೆಯಲ್ಲಿದ್ದವರು ಕಳ್ಳರು ಮರ ಕೊಯ್ಯುತ್ತಿರುವುದು ತಿಳಿದ ತಕ್ಷಣ ಫ್ಲಡ್ ಲೈಟ್ ಹಾಕಿ ಚೀನಾದಲ್ಲಿರುವ ಯಜಮಾನರಿಗೆ ಕರೆ ಮಾಡಿದರು. ಅವರು ಅಸಹಾಯಕರಾಗಿ ’ಸುಮ್ಮನಿದ್ದು ಬಿಡಿ, ನಿಮ್ಮ ಜೀವ ರಕ್ಷಣೆ ಮುಖ್ಯ. ಗಂಧ ಹೋದರೆ ಹೋಗಲಿ’ ಎಂದರು. ಕಳ್ಳರು ಫ್ಲಡ್ ಲೈಟ್ ಬೆಳಕಿನಲ್ಲಿ ನಿರಾತಂಕವಾಗಿ 14-15 ವರ್ಷ ಬೆಳೆದ ಮರಗಳನ್ನು ಕದ್ದೊಯ್ದರು. ಇಲ್ಲೇ ಪಕ್ಕದ ಊರಿನಲ್ಲಿ, ಮತ್ತೊಂದು ಪ್ರಕರಣದಲ್ಲಿ ನಾಲ್ಕಾರು ಯುವ ಕೃಷಿಕರು ದೊಣ್ಣೆ ಹಿಡಿದು ಗಂಧ ಕಳ್ಳರನ್ನು ಹಿಡಿಯಲು - ಬಡಿಯಲು ಹೋದರು. ಆದರೆ ಆ ಕತ್ತಲೆಯಲ್ಲಿ ಕಳ್ಳರು ಒಬ್ಬನ ತಲೆ ಒಡೆದು ಕದ್ದ ಮರದ ಜೊತೆ ಪರಾರಿಯಾದರು. ಇಂಥ ಸಾವಿರಾರು ಗಂಧ ಕಳುವು ಪ್ರಕರಣಗಳನ್ನು ನೋಡಬಹುದು.
ಗಂಧ ಕಳ್ಳರು
ಸಾಮಾನ್ಯವಾಗಿ ಸ್ಥಳೀಯವಾಗಿಯೇ ಗಂಧಕಳ್ಳರ ಜಾಲವಿರುತ್ತದೆ. ಅವರಿಗೆ ತೋಟದ ಯಜಮಾನರಿಗಿಂತ ಚೆನ್ನಾಗಿ ಅಲ್ಲಿರುವ ಗಂಧದ ಗಿಡಗಳ ಪರಿಚಯವಿರುತ್ತದೆ. ಈ ಕಳ್ಳರ ಜಾಲಕ್ಕೆ ಸ್ಥಳೀಯ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಖ್ಯವಿರುತ್ತದೆ ಎಂಬ ಆರೋಪವಿದೆ. ಏಕೆಂದರೆ ಗಂಧಕಳ್ಳರು ಬಂದಾಗ ಕರೆ ಮಾಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಇಲಾಖೆಗಳಿಂದ ಸರಿಯಾದ ಸಮಯಕ್ಕೆ ಸೂಕ್ತ ಸ್ಪಂದನೆ ಸಿಗುವುದಿಲ್ಲ. ಈ ಶ್ರೀಗಂಧ ಕಳ್ಳರು ನಟೋರಿಯಸ್; ಜೀವ ಬಿಡಲು - ತೆಗೆಯಲು ಹಿಂಜರಿಯುವವರಲ್ಲ. ಇನ್ನು ಕೆಲ ಗಂಧಕಳ್ಳರಲ್ಲಿ ನಾಡ ಪಿಸ್ತೂಲ್ ಇದ್ದು ನಮ್ಮಂತ ಜನಸಾಮಾನ್ಯರನ್ನು ಸುಲಭವಾಗಿ ಹೆದರಿಸಬಲ್ಲರು. ಕದ್ದ ಶ್ರೀಗಂಧವನ್ನು ಅವರು ಅಷ್ಟೇ ಗುಪ್ತವಾಗಿ ಮಾರಾಟ ಮಾಡಬಲ್ಲರು. ಅಂದರೆ ಅದಕ್ಕೆ ಭೂಗತ ಮಾರಾಟ ಜಾಲವೂ ಇದೆ ಅಂದಾಯ್ತು. ಇಂತಹ ಜಾಲವನ್ನು ಎದುರಿಸಿ ಶ್ರೀಗಂಧ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ.
ಈಗ ಹೇಳುವ ರಕ್ಷಣೆ ವ್ಯವಸ್ಥೆ
ಸಿಸಿ ಕ್ಯಾಮರಾ, ನೈಟ್ ವಿಷನ್ ಕ್ಯಾಮೆರಾ ಹಾಕಿದರೆ ಕಳ್ಳ ಬಂದಿರುವುದೇನೋ ತಿಳಿಯುತ್ತದೆ. ಆದರೆ ಪಿಸ್ತೂಲು ಹಿಡಿದು ಬಂದ ಅವನನ್ನು ನೀವು ಕೈಯಲ್ಲಿ ದೊಣ್ಣೆ ಹಿಡಿದು, ಬಾಯಿ ಬಡಿದುಕೊಂಡು ಹೇಗೆ ಎದುರಿಸುತ್ತೀರಿ? ಬೆಳಿಗ್ಗೆ ಊರ ಜನರನ್ನು ಸೇರಿಸುತ್ತೀರಿ ಎಂದಿಟ್ಟುಕೊಳ್ಳೋಣ. ಆದರೆ ಅಷ್ಟರೊಳಗೆ ಮರ ಕೊಯ್ದು ಕದ್ದೊಯ್ದಿರುತ್ತಾರೆ. ಇನ್ನು ಮರಕ್ಕೆ ಎಲೆಕ್ಟ್ರಾನಿಕ್ ಚಿಪ್ ಅಳವಡಿಸುವುದು. ಇದೊಂದು ಶುದ್ಧ ಭೋಗಸ್ ಕಥೆ. ಶ್ರೀಗಂಧದ ಮರ ಪೂರ್ತಿ ಬೆಳೆಯುವವರೆಗೆ 20-25 ವರ್ಷ ರಕ್ಷಣೆ ಬೇಕು. ಒಮ್ಮೆ ಅಂತದೊಂದು ಚಿಪ್ಪನ್ನು ಮರಕ್ಕೆ ಅಳವಡಿಸಿದ್ದೀರೆಂದರೂ ಅದು ಕೆಲಸ ಮಾಡಲು ಬ್ಯಾಟರಿ - ಚಾರ್ಜಿಂಗ್ ಹೇಗೆ ಮಾಡುತ್ತೀರಿ? ಪ್ರತಿ ಗಿಡಕ್ಕೆ ಅಳವಡಿಸಿದ ಚಿಪ್ಪಿನಿಂದ ಸಿಗ್ನಲ್ ಹೇಗೆ ಪಡೆಯುತ್ತೀರಿ? ಸಿಮ್ ಕಾರ್ಡ್ – ವೈಫೈ? ಅದೂ 24 ಗಂಟೆ, 365 ದಿನ, 20 ವರ್ಷ! ಆಯ್ತು, ಅದು ಹೇಗೋ ಕಳ್ಳ ಬಂದ ಸಿಗ್ನಲ್ ನಿಮಗೆ ಬಂತು ಎಂದಿಟ್ಟುಕೊಳ್ಳೋಣ. ಗಂಧಕಳ್ಳನ ಕೈಯಲ್ಲಿ ಲಾಂಗು, ಮಚ್ಚು, ಎಕೆ-47 ಇದೆ. ದೊಣ್ಣೆ ಹಿಡಿದಿರುವ ನೀವು ಅದು ಹೇಗೆ ಅವನನ್ನು ಓಡಿಸುತ್ತೀರಿ? ಉಪಗ್ರಹ ಆಧಾರಿತ ಪರಿವೀಕ್ಷಣೆ (ಸರ್ವೆಲೆನ್ಸ್) ವ್ಯವಸ್ಥೆ ಮಾಡಿದರೂ ಕೊನೆಗೆ ಈ ಗನ್ನು - ದೊಣ್ಣೆ ಪ್ರಶ್ನೆ ಹಾಗೆಯೇ ಇರುತ್ತದೆ. ಇನ್ನು ನಾಲ್ಕಾರು ನಾಯಿ ಸಾಕಿ, ಕಾವಲುಗಾರನನ್ನು ಇಡುವುದು. ಗಂಧಕಳ್ಳ ನಾಯಿಗೆ ಚಿಕನ್ – ಮಟನ್ - ಬಿಸ್ಕೆಟ್ ಹಾಕುತ್ತಾನೆ, ಅಥವಾ ಶೂಟ್ ಮಾಡುತ್ತಾನೆ. ಇನ್ನು ಕಾವಲುಗಾರನಿಗೂ ಒಂದಿಷ್ಟು ಹಣ ಕೊಟ್ಟು ಸಂಬಾಳಿಸುತ್ತಾನೆ ಅಥವಾ ಗನ್ ತೋರಿಸಿ ಹೆದರಿಸಿ ಓಡಿಸುತ್ತಾನೆ. ಅಂದರೆ ಈ ನರ್ಸರಿಯವರು, ’ಹಗ್ ಎ ಸ್ಯಾಂಡಲ್ ವುಡ್ ಟ್ರೀ’ ಎಂಬ ಕನ್ಸಲ್ಟೆಂಟ್ ಗಳು, ತಲೆಯ ಮೇಲೆ ಸೆರಗು - ಟೋಪಿ ಹಾಕಿಕೊಂಡವರು ಹೇಳುವುದೆಲ್ಲ ಶುದ್ಧ ಬೋಗಸ್ ಕಥೆಗಳು.
ಶ್ರೀಗಂಧದ ಮಾರಾಟ
ಸದ್ಯಕ್ಕಂತೂ ಶ್ರೀಗಂಧವನ್ನು ಎಲ್ಲೆಂದರಲ್ಲಿ ಮಾರುವಂತಿಲ್ಲ. ಕರ್ನಾಟಕದಲ್ಲಿ ನಮ್ಮ ರಾಜ್ಯ ಸರ್ಕಾರಿ ಸ್ವಾಮ್ಯದ ಕೆ.ಎಸ್.ಡಿ.ಎಲ್. (ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್) ಗೇ ಕೊಡಬೇಕು. ಅಲ್ಲಿನ ಅಧಿಕಾರಿಗಳ, ಹಿಂದಿನ ಅಧ್ಯಕ್ಷರ ಬ್ರಹ್ಮಾಂಡ ಭ್ರಷ್ಟಾಚಾರದ ಕಥೆಯನ್ನು ನೀವು ಪತ್ರಿಕೆಗಳಲ್ಲಿ ಓದಿರುತ್ತೀರಿ. ರಾತ್ರಿ ಬರುವ ಕಳ್ಳರಿಂದ ನೀವು ಗಂಧದ ಮರ ರಕ್ಷಿಸಿಕೊಂಡರೂ, ಈ ಹಗಲುಗಳ್ಳರಿಂದ ಬಚಾವ್ ಇಲ್ಲ. ಶಿವಮೊಗ್ಗದ ರೈತರ ಬಾಯಿ ತೆಗೆಸಿದರೆ ಕೆ.ಎಸ್.ಡಿ.ಎಲ್. ಗೆ ಗಂಧ ಮಾರಾಟ ಮಾಡುವ ಕಥೆ ಒಂದು ಉತ್ತಮ ಧಾರಾವಾಹಿಯಾಗುತ್ತದೆ. ಈ ಹಿಂದಿನ ಸರ್ಕಾರದಲ್ಲಿ ಶ್ರೀಗಂಧಕ್ಕೆ ಮುಕ್ತ ಮಾರುಕಟ್ಟೆ ಒದಗಿಸುವ ಪ್ರಸ್ತಾವನೆಗೆ ಜೀವ ಬಂದಿತ್ತು. ಅದೇಕೋ ಮುಂದುವರೆದಂತಿಲ್ಲ. ಹಾಗಾಗಿ ಕಷ್ಟಪಟ್ಟು ಶ್ರೀಗಂಧ ಬೆಳೆಸಿದರೂ ಪ್ರಾಮಾಣಿಕ ತೂಕ - ಬೆಲೆಗೆ ಮಾರಾಟ ಮಾಡುವುದು ಸುಲಭವಿಲ್ಲ. ಈ ಎಲ್ಲಾ ಕಾರಣಗಳಿಂದಲೇ ಫಾರ್ಮ್ ಟಿವಿ ಶ್ರೀಗಂಧ ಬೆಳೆಯನ್ನು ಉತ್ತೇಜಿಸುತ್ತಿಲ್ಲ. ಈಗೇನಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿನ ’ಪ್ರತಿಭಾವಂತ’ ಪ್ರಚಾರಕರಿಂದ ಪ್ರೇರಣೆ ಪಡೆದು ಅಮಾಯಕ ರೈತರು ಬಲಿ ಬೀಳುತ್ತಿದ್ದಾರೆ, ಅಷ್ಟೇ.
ದಾರಿ ಯಾವುದಯ್ಯ ಶ್ರೀಗಂಧಕ್ಕೆ
ಶ್ರೀಗಂಧಕ್ಕೆ ಜಾಗತಿಕವಾಗಿ ತುಂಬಾ ಬೇಡಿಕೆ - ಬೆಲೆ ಇದೆ. ನಮ್ಮಲ್ಲಿ ಅದನ್ನು ಬೆಳೆಯುವುದೂ ತುಂಬಾ ಸುಲಭ. ಬೆಳೆ ರಕ್ಷಣೆಗೆ ಒಂದು ಸರಿಯಾದ ಉಪಾಯ ಸಿಕ್ಕರೆ, ಮುಕ್ತ ಮಾರುಕಟ್ಟೆ ರೂಪಿಸಿದರೆ ನಿಜವಾಗಿಯೂ 25-30 ವರ್ಷ ಬೆಳೆಸಿದ ಒಂದು ಮರಕ್ಕೆ ಕನಿಷ್ಠ 5 ಲಕ್ಷ ರೂಪಾಯಿಯಂತೆ, ಎಕರೆಗೆ ಕೋಟ್ಯಂತರ ರೂಪಾಯಿ ಸಂಪಾದಿಸಬಹುದು. ’ಗಂಧ ಕಳ್ಳರಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ; ಇಲಾಖೆಗಳನ್ನು ಬಲಪಡಿಸುತ್ತೇವೆ’ ಎಂಬಂತ ಮಾತಿಗೆ ಭಾರತದಂತ ಭ್ರಷ್ಟ ಸಾಮಾಜಿಕ – ರಾಜಕೀಯ – ಅಧಿಕಾರಶಾಹಿಯ ಪ್ರಜಾಪ್ರಭುತ್ವ ದೇಶದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಕ್ಷಣೆಗೇನಿದ್ದರೂ ಸೂಕ್ತ ತಂತ್ರಜ್ಞಾನವೇ ಬರಬೇಕು. ನಮ್ಮ ಮಿತ್ರರೊಬ್ಬರು ಮೈಸೂರು ಸನಿಹದ ಮಿಲಿಟರಿ ಕ್ಯಾಂಪಸ್ಸಿಗೆ ಕೃಷಿ-ಅರಣ್ಯ ಸಲಹಾಕಾರರಾಗಿದ್ದರು. ಅಲ್ಲಿನ ಸುಮಾರು 200-300 ಎಕರೆ ವಿಸ್ತೀರ್ಣದ ಕಾಡಿನಲ್ಲಿ ಶ್ರೀಗಂಧ ಬೆಳೆಸಿ ರಕ್ಷಣೆಗೆ ಚಿರತೆಗಳನ್ನು ತಂದುಬಿಟ್ಟರು. ನಿಜವಾಗಿ ಬಿಟ್ಟರೋ ಅಥವಾ ಹಾಗೆಂದು ರೈಲು ಬಿಟ್ಟರೋ ಎಂಬುದು ಅವರಿಗೆ ಮಾತ್ರ ಗೊತ್ತು! ಆದರೆ ಒಂದಿಷ್ಟು ರಕ್ಷಣೆ ಆಗಿದ್ದಂತೂ ನಿಜ. ಹಾಗೆಂದು ಇಂಥ ಉಪಾಯಗಳು ಎಲ್ಲೆಡೆ ಸಾಧ್ಯವಿಲ್ಲ ಮತ್ತು ಬಹಳ ಕಾಲ ನಡೆಯುವುದಿಲ್ಲ. ನನ್ನ ಅಭಿಪ್ರಾಯದಲ್ಲಿ ಸಾಧ್ಯವಿರುವ ಎಲ್ಲಾ ಸರ್ಕಾರಿ - ಖಾಸಗಿ ಜಮೀನುಗಳಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಶ್ರೀಗಂಧ ಬೆಳೆಸಿಬಿಡಬೇಕು. ಉಳಿದಂತೆ ಈಗಿರುವ ಒಂದಿಷ್ಟು ರಕ್ಷಣೆ - ತಪಾಸಣೆ ಇತ್ಯಾದಿ ಮುಂದುವರೆಸಬೇಕು. ಕಠಿಣ ಕಾಯ್ದೆ ರೂಪಿಸಬೇಕು. ಗಂಧಕ್ಕೆ ಮುಕ್ತ - ಪೈಪೋಟಿ ಬೆಲೆಯ ಮಾರುಕಟ್ಟೆ ಒದಗಿಸಬೇಕು. ಕಳ್ಳರ ಸಂಖ್ಯೆ ಮತ್ತು ಸಾಮರ್ಥ್ಯಕ್ಕೂ ಒಂದು ಇತಿಮಿತಿ ಇರುವುದರಿಂದ ಒಂದಿಷ್ಟು ಶ್ರೀಗಂಧದ ಮರಗಳಾದರೂ ನೆಟ್ಟು ಬೆಳೆಸಿದವರ ಪಾಲಿಗೆ ಉಳಿಯಬಹುದು.
ಕೊನೆಯ ಮಾತು
ಸದ್ಯದ ಪರಿಸ್ಥಿತಿಯಲ್ಲಿ ಶ್ರೀಗಂಧ ಬೆಳೆಸುವುದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸುಲಭ ಉಪಾಯ. ಈ ನರ್ಸರಿಯವರು - ಸಲಹಾಕಾರರು ಹೇಳುವ ರಕ್ಷಣಾ ವ್ಯವಸ್ಥೆಗಳೆಲ್ಲ ಕಾಗಕ್ಕ - ಗುಬ್ಬಕ್ಕನ ಕಥೆಗಳು. ಕೋಟ್ಯಂತರ ರೂಪಾಯಿ ಆಸೆಗೆ 10-20 ವರ್ಷ ಭೂಮಿಯನ್ನು ಶ್ರೀಗಂಧಕ್ಕೆ ಮೀಸಲು - ಅಡ ಇಡುವ ಬದಲಿಗೆ, ಯಾವ ಅಪಾಯವಿಲ್ಲದೆ ಪ್ರತಿವರ್ಷ ಲಕ್ಷಗಳ ಆದಾಯ ಕೊಡುವ ಹಲವಾರು ಬೆಳೆಗಳಿವೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಣ್ಣಬಣ್ಣದ ಕಥೆ ಹೇಳುವ ಈ ’ಶ್ರೀಗಂಧದ ಹಗಲುಗಳ್ಳ’ರ ಮಾತು ನಂಬದಿರುವುದು ಕ್ಷೇಮ. ನಿಜವಾಗಿಯೂ ಶ್ರೀಗಂಧದ ರಕ್ಷಣೆಗೆ ಸೂಕ್ತ ಉಪಾಯ ಬರುವವರೆಗೆ ಶ್ರೀಗಂಧದ ಬೆಳೆಯಿಂದ ದೂರವಿರುವುದೇ ಸದ್ಯ ನಮಗಿರುವ ಆಯ್ಕೆ.
ಒಟ್ಟಾಗಿ ಬೆಳೆಯೋಣ. ನಮಸ್ಕಾರ.
- ಡಾ. ವೆಂಕಟ್ರಮಣ ಹೆಗಡೆ
(ಶ್ರಮಜೀವಿ ಕೃಷಿ | ಆಗಸ್ಟ್ 2025 | ಸಂಪಾದಕೀಯ |)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ