ಮಂಗಳೂರು: ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಜನಾನುರಾಗಿ ಶಿಕ್ಷಕ, ಸಜ್ಜನ- ಸ್ನೇಹಶೀಲ ವ್ಯಕ್ತಿತ್ವದ ವಿಶ್ವನಾಥ ಜೋಗಿ ಕದ್ರಿ (72) ಅವರು ಜುಲೈ 8ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಮೂರು ದಶಕಗಳಿಂದ ಮಂಗಳೂರು ತಾಲೂಕಿನ ಬಲ್ಮಠ, ಕಾವೂರು, ಮೊಂಟೆಪದವು ಗುರುಪುರ ಮೊದಲಾದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದ ಅವರು 2014ರಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದರು. ತಮ್ಮ ಸೇವಾವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ವಿದ್ಯಾರ್ಥಿಗಳ ಹಾಗೂ ಹೆತ್ತವರ ನೆಚ್ಚಿನ ಅಧ್ಯಾಪಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ನಿವೃತ್ತರಾದ ಬಳಿಕ ನಗರದ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.
ಕಳೆದ ಆರು ತಿಂಗಳಿಂದ ಅಸ್ವಸ್ಥರಾಗಿದ್ದ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರೂ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದರು. ಶಿಕ್ಷಕಿಯಾಗಿದ್ದ ಪತ್ನಿ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಏಕೈಕ ಪುತ್ರಿ- ಅಳಿಯ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಸಂತಾಪ: ಪ್ರೊ.ವಿಶ್ವನಾಥ್ ಕೆ. ಅವರ ನಿಧನಕ್ಕೆ ಗುರುಪುರದಲ್ಲಿ ಅವರ ಸಹೋದ್ಯೋಗಿಯಾಗಿದ್ದ ಲೇಖಕ- ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ, ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ, ಕಾಟಿಪಳ್ಳ ಪ.ಪೂ. ಕಾಲೇಜು ಪ್ರಾಚಾರ್ಯೆ ಅನುಸೂಯ ಕೆ.ಪಿ., ನಿವೃತ್ತ ಪ್ರಾಂಶುಪಾಲರುಗಳಾದ ಶ್ಯಾಮ ಮೊಯಿಲಿ, ಪದ್ಮನಾಭ ರೈ ಸಿದ್ಧಕಟ್ಟೆ ಹಾಗೂ ಜೋಗಿ ಸಮಾಜದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದು ತಮ್ಮ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ