ಮಂಗಳೂರು: ತುಳುನಾಡಿನ ನಾಡಗೀತೆ ಪ್ರಕಟಣೆಗೊಂಡ ಆಟಿಯ 12ನೇ ದಿನದಂದು (28 ಜುಲೈ) ನಾಡಗೀತೆಯನ್ನು ಹಾಡುವ ಜೊತೆಗೆ ಮೋಹನಪ್ಪ ತಿಂಗಳಾಯರನ್ನು ಸ್ಮರಣೆ ಮಾಡುವ ಕಾರ್ಯವನ್ನು ಐತಿಹಾಸಿಕ ಶ್ರೀ ಜ್ಞಾನೋದಯ ಸಮಾಜ ಮಂದಿರದಲ್ಲಿ ಮಂಗಳೂರು ವಿ.ವಿ ಕಾಲೇಜಿನ ತುಳು ಎಂ.ಎ. ವಿದ್ಯಾರ್ಥಿಗಳು ಮಾಡಿದರು.
ಶ್ರೀ ಜ್ಞಾನೋದಯ ಸಮಾಜದ ಅಧ್ಯಕ್ಷ ಪ್ರೇಮಚಂದ್ರ ತಿಂಗಳಾಯ ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸುಧಾರಣೆಯ ಕಾರ್ಯಗಳನ್ನು ವಿವರಿಸಿದರು. ಪ್ರಫುಲ್ಲ ಚಂದ್ರ ತಿಂಗಳಾಯರು ಶುಭ ಹಾರೈಸಿದರು. ಕೃಷ್ಣ ಮೂರ್ತಿ ಚಿತ್ರಾಪುರ ಮಾತನಾಡಿ, ಸ್ವಾತಂತ್ರ್ಯ ಚಳುವಳಿ, ಏಕೀಕರಣ ಹೋರಾಟ, ನವೋದಯ ಕಾಲದ ಸಾಹಿತ್ಯ ರಚನೆಯ ಕಾಲಘಟ್ಟದ ಹಿನ್ನೆಲೆಯೊಂದಿಗೆ ತಿಂಗಳಾಯರು ಮತ್ತು ಇತರ ತುಳುನಾಡ ಸಾಹಿತಿಗಳ ಕಾರ್ಯ ಚಟುವಟಿಕೆಗಳನ್ನು ಅಧ್ಯಯನ ಮಾಡಬೇಕಾಗಿದೆ ಎಂದರು.
ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಮಾತನಾಡಿ, ಸಾಮಾಜಿಕ ಚಳುವಳಿಗಳಿಗೆ ರಂಗಭೂಮಿ ಯನ್ನು ಸಮರ್ಥವಾಗಿ ಬಳಕೆ ಮಾಡಲಾಗಿದ್ದು ತುಳುನಾಡ ರಂಗಭೂಮಿಯಲ್ಲಿ ಶ್ರೀ ಜ್ಞಾನೋದಯ ಸಮಾಜಕ್ಕೆ ಮಹತ್ವದ ಸ್ಥಾನ ನೀಡಬೇಕು ಎಂದರು. ತುಳು ವಿಭಾಗದ ಉಪನ್ಯಾಸಕ ಮಣಿ ಎಂ. ರೈ, ಗೀತಾ ಜೈನ್, ಜಯಲಕ್ಷ್ಮಿ ಆರ್. ಶೆಟ್ಟಿ ಮತ್ತು ವರ್ಷ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ತುಳು ಎಂ. ಎ. ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಶ್ರೀ ಜ್ಞಾನೋದಯ ಸರಕಾರಿ ಪ್ರಾಥಮಿಕ ಶಾಲೆಯನ್ನು ವೀಕ್ಷಿಸಲಾಯಿತು.
ಮೋಹನಪ್ಪ ತಿಂಗಳಾಯರು (21-9-1878 ರಿಂದ 9-4-1963) ಸ್ವಾತಂತ್ರ್ಯ ಹೋರಾಟ ಮತ್ತು ಸಾಮಾಜಿಕ ಸುಧಾರಣೆಗಾಗಿ ತಮ್ಮ ಬದುಕನ್ನು ಸಮರ್ಪಿಸಿದವರು. 1910 ನೇ ಸೌರಮಾನ ಯುಗಾದಿಯಂದು ಶ್ರೀ ಜ್ಞಾನೋದಯ ಸಮಾಜವನ್ನು ಸ್ಥಾಪಿಸಿದರು. 1919ರಂದು ಸಮಾಜದ ಚಟುವಟಿಕೆಗಳಿಗಾಗಿ ಶ್ರೀ ಜ್ಞಾನೋದಯ ಸಮಾಜದ ಸಭಾ ಮಂದಿರ ಸ್ಥಾಪನೆ ಆಯಿತು.
ಕೃಷ್ಣಪ್ಪ ತಿಂಗಳಾಯ, ಮಾಧವ ತಿಂಗಳಾಯ ಮೊದಲಾದವರು ನಾಟಕ, ಸಾಹಿತ್ಯ ರಚನೆ, ಸಾಮಾಜಿಕ ಚಟುವಟಿಕೆಗಳ ಮೂಲಕ ಸಕ್ರಿಯರಾಗಿದ್ದರು. ಮೋಹನಪ್ಪ ತಿಂಗಳಾಯರು ಬರೆದ ತುಳು ಭಜನೆಯ ಸಂಗ್ರಹ, ತುಳು ಪದ್ಯಾವಳಿ, 1930 ಇಸವಿ ಆಟಿ, 12 ನೇ ದಿನ ಬಿಡುಗಡೆಗೊಂಡಿತು. ತುಳುನಾಡ ಗೀತೆ ಈ ಸಂಕಲನದಲ್ಲಿದ್ದು ತುಳುನಾಡಿನ ಸಮಗ್ರ ವರ್ಣನೆಯ ನಾಡಗೀತೆ ಇದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ