ಜು.26ರಂದು ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡ ಉದ್ಘಾಟನೆ

Upayuktha
0


ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ (ಐಆರ್‌ಸಿಎಸ್) ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಶತಮಾನೋತ್ಸವ ಕಟ್ಟಡ'ದ ಉದ್ಘಾಟನಾ ಸಮಾರಂಭ ಜು.26ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.


ಕರ್ನಾಟಕದ ರಾಜ್ಯಪಾಲ ಹಾಗೂ ಐಆರ್‌ಸಿಎಸ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್.ಡಿ., ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಐಆರ್‌ಸಿಎಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ರಾವ್ ಐಪಿಎಸ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಐಆರ್‌ಸಿಎಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 


ಪ್ರೇರಣಾ ಸಭಾಂಗಣ:

ಸುಮಾರು 20 ಸಾವಿರ ಚದರ ಅಡಿಯ ಭವ್ಯ ಶತಮಾನೋತ್ಸವ ಕಟ್ಟಡ ತಳ ಅಂತಸ್ತು, ನೆಲ ಅಂತಸ್ತು ಸಹಿತ ಒಟ್ಟು 4 ಅಂತಸ್ತು ಹೊಂದಿದೆ. ನೆಲ ಅಂತಸ್ತಿನಲ್ಲಿ  ಕಚೇರಿ, ಸಂದರ್ಶಕರ ಕೊಠಡಿ, ಮೀಟಿಂಗ್ ಹಾಲ್, 1ನೇ ಅಂತಸ್ತಿನಲ್ಲಿ 300 ಆಸನಗಳ ‘ಪ್ರೇರಣಾ‘ ಹವಾ ನಿಯಂತ್ರಿತ ಸಭಾಂಗಣ, 2ನೇ ಅಂತಸ್ತಿನಲ್ಲಿ ಸುಮಾರು 500 ಮಂದಿ ಸಾಮರ್ಥ್ಯದ ‘ಸೀ ವ್ಯೂ’ಸಭಾಂಗಣವಿದೆ. ಸಾರ್ವಜನಿಕ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ನೂತನ ಕಟ್ಟಡ ನಿರ್ಮಾಣಗೊಂಡಿದೆ.


ದಶಕಗಳ ಹಿಂದೆ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧಿಕಾರಿ ಕಛೇರಿಯ ಒಂದು ಸಣ್ಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. 2007ರಲ್ಲಿ ಆಗಿನ ಜಿಲ್ಲಾಧಿಕಾರಿ ಯವರು ತಮ್ಮ ಕಚೇರಿ ಆವರಣದಲ್ಲಿಯೇ ರೆಡ್‌ಕ್ರಾಸ್‌ಗೆ ನಿವೇಶನ ನೀಡಿದ್ದು, 2011ರಲ್ಲಿ ಸ್ವಂತ ಕಟ್ಟಡ ಆ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಜಿಲ್ಲಾ ರೆಡ್‌ಕ್ರಾಸ್‌ನ  ಸೇವಾ ಚಟುವಟಿಕೆಗಳ ವ್ಯಾಪ್ತಿ ವಿಸ್ತಾರವಾಗಿದ್ದು, ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ 2021ರಲ್ಲಿ ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ಇದೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.


ರೆಡ್‌ಕ್ರಾಸ್ ರಕ್ತನಿಧಿ:

ಐಆರ್‌ಸಿಎಸ್ ದ.ಕ. ಜಿಲ್ಲಾ ಘಟಕ ಸುಮಾರು 7 ದಶಕದ ಇತಿಹಾಸ ಹೊಂದಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರಾಜ್ಯದ ಮುಂಚೂಣಿಯ ಘಟಕವಾಗಿ ಗುರುತಿಸಿಕೊಂಡಿದೆ. ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿ ಕಾರ್ಯ  ನಿರ್ವಹಿಸುತ್ತಿರುವ ರೆಡ್‌ಕ್ರಾಸ್‌ನ ರಕ್ತನಿಧಿ ಕೇಂದ್ರದಿಂದ ಪ್ರತಿ ತಿಂಗಳು ಸುಮಾರು 500 ಯುನಿಟ್ ರಕ್ತ ಉಚಿತವಾಗಿ ನೀಡಲಾಗುತ್ತಿದೆ. ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗುವ ಗರ್ಭಿಣಿಯರು, ಬಾಣಂತಿಯರು ಸಹಿತ ಅವಶ್ಯ  ಇರುವ ರೋಗಿಗಳಿಗೆ ರೆಡ್‌ಕ್ರಾಸ್‌ನಿಂದ ಉಚಿತವಾಗಿ ರಕ್ತ ನೀಡುತ್ತಿರುವುದು ಮಹತ್ವದ  ಸಾಧನೆಯಾಗಿದೆ ಎಂದು ಅವರು ತಿಳಿಸಿದರು.


ದ.ಕ ಜಿಲ್ಲಾ ರೆಡ್‌ಕ್ರಾಸ್ ಶತಮಾನೋತ್ಸವ ಭವನ ಒಂದು ಸೇವಾಕಾರ್ಯದ ಕ್ರಿಯಾಶೀಲ ಚಟುವಟಿಕೆಯ ಕೇಂದ್ರವಾಗಿ ಮೂಡಿ ಬರುವ ಆಶಯವಿದೆ. ಇದು ಜಿಲ್ಲೆಯ ಎಲ್ಲ ರೆಡ್‌ಕ್ರಾಸ್ ಸದಸ್ಯರ ಹೆಮ್ಮೆಯ ಪ್ರತೀಕವಾಗಲಿದೆ ಎಂದು ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದರು. ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡ ಸಮಿತಿ ಅಧ್ಯಕ್ಷ ಪುಷ್ಪರಾಜ್ ಜೈನ್, ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಜಿ ಮೋಹನ್ ಶೆಟ್ಟಿ.ಕೆ., ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಡಾ, ಸುಮನಾ ಬೋಳಾರ್, ಗುರುದತ್ ಎಂ.ನಾಯಕ್, ಎ.ವಿಠಲ, ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top